Header Ads Widget

Responsive Advertisement

‘ಸಖಿ ಒನ್ ಸ್ಟಾಪ್ ಕೇಂದ್ರ’ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿ: ಶ್ಯಾಮಲಾ ಎಸ್.ಕುಂದರ್


ಮಹಿಳೆಯರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಿಗೆ ಒಂದೇ ಸೂರಿನಡಿ ವೈದ್ಯಕೀಯ, ಮಾನಸಿಕ, ಕಾನೂನು ಸಮಾಲೋಚನೆ ಹಾಗೂ ತಾತ್ಕಾಲಿಕ ವಸತಿ ಸೇವೆಗಳನ್ನು ನೀಡುವುದು ‘ಸಖಿ ಒನ್ ಸ್ಟಾಪ್ ಕೇಂದ್ರ’ದ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ದಿನದ 24 ಗಂಟೆಯೂ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ ಎಸ್.ಕುಂದರ್ ಅವರು ನಿರ್ದೇಶನ ನೀಡಿದ್ದಾರೆ.

ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸಹಾಯ ಮತ್ತು ಬೆಂಬಲವನ್ನು ಒದಗಿಸುವ ನಿಟ್ಟಿನಲ್ಲಿ ಸಖಿ ಒನ್ ಕೇಂದ್ರವನ್ನು ಆರಂಭಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ತಿಳಿಸಿದ್ದಾರೆ.
ಮಹಿಳೆಯರಿಗೆ ಮೂಲಭೂತ ಸೌಲಭ್ಯಗಳು ಒದಗಬೇಕು. ಯಾವುದೇ ರೀತಿಯ ಸಮಸ್ಯೆಗಳು ಹೇಳಿ ಕೇಳಿ ಬರುವುದಿಲ್ಲ. ಆದ್ದರಿಂದ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಸದಾ ಎಚ್ಚರವಹಿಸಬೇಕು ಎಂದು ಅವರು ಸೂಚಿಸಿದರು.
ಹಲವು ಸಮಸ್ಯೆಗಳ ಬಗ್ಗೆ ನ್ಯಾಯ ಸಿಗುತ್ತದೆ ಎಂಬ ಭಾವನೆ ಮಹಿಳೆಯರಲ್ಲಿ ಬರಬೇಕು. ಅಂತಹ ವಾತಾವರಣವನ್ನು ಅಧಿಕಾರಿಗಳು ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.
ಮಹಿಳೆಯರು ಹಲವು ಸಮಸ್ಯೆಗಳಿಂದ ಮಹಿಳಾ ಕೇಂದ್ರಕ್ಕೆ ಬಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಸ್ಪಂದಿಸುವ ಕೆಲಸವಾಗಬೇಕು ಎಂದು ಶ್ಯಾಮಲಾ ಎಸ್. ಕುಂದರ್ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಯಾವುದೇ ರೀತಿಯ ಸೌಲಭ್ಯಗಳು ಬೇಕಿದ್ದಲ್ಲಿ ಮಾಹಿತಿ ಒದಗಿಸಬೇಕು. ಇದನ್ನು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.
ಕೌಟುಂಬಿಕ ಸಮಸ್ಯೆಗಳು, ವರದಕ್ಷಿಣೆ ಕಿರುಕುಳ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಕೌನ್ಸೆಲಿಂಗ್ ಮೂಲಕ ಇತ್ಯರ್ಥಪಡಿಸಬಹುದಾಗಿದೆ ಎಂದು ಅವರು ನುಡಿದರು.
ಆನ್ಲೈನ್ ಮೂಲಕ ವೆಬಿನಾರ್ ಕಾರ್ಯಕ್ರಮವನ್ನು ಏರ್ಪಡಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳಾ ಸ್ವಸಹಾಯ ಸಂಘಗಳ ಬಲವರ್ಧನೆಗೆ ಶ್ರಮಿಸಬೇಕು ಎಂದರು.
ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಪಡೆದವರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆಯೇ ಎಂಬುದನ್ನು ಗಮನಿಸಬೇಕು ಎಂದು ಶ್ಯಾಮಲಾ ಎಸ್.ಕುಂದರ್ ಅವರು ಸಲಹೆ ಮಾಡಿದರು.
ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಆಯಾಯ ಸಮಾಜದ ಮುಖಂಡರ ಜೊತೆ ಚರ್ಚಿಸಿ ಬಾಲ್ಯ ವಿವಾಹ ತಡೆಯುವಲ್ಲಿ ಚರ್ಚಿಸಬೇಕು. ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಶಿಕ್ಷಣ ಮತ್ತು ಆರೋಗ್ಯದ ಮಹತ್ವದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ, ಉಚಿತ ಕಾನೂನು ನೆರವು ನೀಡುವುದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆಶ್ರಯ ನೀಡುವುದು. ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಸಾಧಿಸಲು ನೆರವು ನೀಡುವ ನಿಟ್ಟಿನಲ್ಲಿ ಸಾಂತ್ವನ ಯೋಜನೆ ಇದ್ದು, ಈ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಮಹಿಳೆಯರಿಗೆ ತುರ್ತು ಸೇವೆಗಳ ಅಗತ್ಯವಿದ್ದರೆ ವೈದ್ಯಕೀಯ ನೆರವು ಹಾಗೂ ಸಮಾಲೋಚನೆ ನೀಡುವುದು. ವರ್ತಮಾನ ವರದಿ ಬಗ್ಗೆ ಮಾಹಿತಿ ಹಾಗೂ ಸಹಾಯ ಕಲ್ಪಿಸುವುದು. ಆಪ್ತ ಸಮಾಲೋಚನೆ ನಡೆಸುವುದು. ಕಾನೂನು ಸಲಹೆ ಹಾಗೂ ಸಮಾಲೋಚನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎಸ್.ಅರುಂಧತಿ ಅವರು ಮಾತನಾಡಿ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿ 61 ಪ್ರಕರಣಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ 10, ಮಹಿಳೆಯರ ಮೇಲಿನ ಅತ್ಯಾಚಾರ 8, ಮಹಿಳೆಯರ ಮೇಲಿನ ಕಿರುಕುಳ 3, ಕೌಟುಂಬಿಕ ದೌರ್ಜನ್ಯ 11, ಕಾಣೆಯಾದ ಪ್ರಕರಣಗಳು 4, ಇತರೆ 13 ಪ್ರಕರಣ ದಾಖಲಾಗಿದ್ದು, ಕೆಲವು ಪ್ರಕರಣಗಳು ಮುಕ್ತಾಯಗೊಂಡಿವೆ. ಕೆಲವು ಪ್ರಕರಣಗಳು ವಿಚಾರಣಾ ಹಂತದಲ್ಲಿದೆ ಎಂದರು.
ಜಿಲ್ಲೆಯಲ್ಲಿ ಸಾಂತ್ವನ ಕೌಟುಂಬಿಕ ಸಲಹಾ ಕೇಂದ್ರದ ಮೂಲಕ ನೊಂದ ಮಹಿಳೆಯರಿಗೆ ಸೇವಾ ಸೌಲಭ್ಯ ಒದಗಿಸಲಾಗಿದೆ. 2002-03 ರಿಂದ ಇದುವರೆಗೆ 3762 ಪ್ರಕರಣಗಳು ದಾಖಲಾಗಿದ್ದು, 3649 ಪ್ರಕರಣಗಳು ಇತ್ಯರ್ಥವಾಗಿವೆ. 335 ಮಂದಿ ಆಶ್ರಯ ಪಡೆದಿದ್ದು, 81 ಪ್ರಕರಣಗಳಿಗೆ ಕಾನೂನು ನೆರವು ಕಲ್ಪಿಸಲಾಗಿದೆ. 390 ಪ್ರಕರಣಗಳಿಗೆ ಕೌಟುಂಬಿಕ ಸಲಹೆ ನೀಡಲಾಗಿದೆ, 219 ಪ್ರಕರಣಗಳಿಗೆ ಆರ್ಥಿಕ ಪರಿಹಾರ ನೀಡಲಾಗಿದೆ, 337 ಪ್ರಕರಣಗಳಿಗೆ ವೃತ್ತಿ ತರಬೇತಿ ನೀಡಲಾಗಿದೆ. 43 ಮಂದಿಗೆ ವಿದ್ಯಾಭ್ಯಾಸ ನೀಡಲಾಗಿದೆ. 20 ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿರಾಜಪೇಟೆ ತಾಲ್ಲೂಕಿನ ಸ್ಫೂರ್ತಿ ಮಹಿಳಾ ಸಾಂತ್ವನ ಕೇಂದ್ರದ ಮೂಲಕ ನೊಂದ ಮಹಿಳೆಯರಿಗೆ ಸೇವಾ ಸೌಲಭ್ಯ ಕಲ್ಪಿಸಲಾಗಿದೆ. ಈ ಸ್ಪೂರ್ತಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ 2011-12 ರಿಂದ 2018-19ನೇ ಸಾಲಿನವರೆಗೆ ಸುಮಾರು 2,572 ಪ್ರಕರಣಗಳು ದಾಖಲಾಗಿದ್ದು, 2,570 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಗೆಳತಿ ವಿಶೇಷ ಚಿಕಿತ್ಸಾ ಘಟಕದಡಿ ಹಲವರಿಗೆ ಸೇವಾ ಸೌಲಭ್ಯ ಕಲ್ಪಿಸಬೇಕು ಎಂದರು.
ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 2012-2013 ರಿಂದ ಇಲ್ಲಿಯವರೆಗೆ 70 ದೂರುಗಳು ಸಲ್ಲಿಕೆಯಾಗಿದ್ದು, 66 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ ಎಂದರು.
ನಿರ್ಗತಿಕ ಮಕ್ಕಳ ಪಾಲನೆ ಪೋಷಣೆ, ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸಿ ಕೌಟುಂಬಿಕ ವಾತಾವರಣ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಜಿಲ್ಲಾ ಕೇಂದ್ರ ಆಡಳಿತಾಧಿಕಾರಿ ಪ್ರಭಾವತಿ ಅವರು ಕೊಡಗು ಜಿಲ್ಲಾ ಮಹಿಳಾ ಶಕ್ತಿ ಕೇಂದ್ರದ ಮೂಲಕ ಆಪ್ತ ಸಮಾಲೋಚನೆ, ಆಶ್ರಯ, ರಕ್ಷಣೆ, ಉದ್ಯೋಗ, ಮಾರ್ಗದರ್ಶನಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ವಿರಾಜಪೇಟೆ ತಾಲ್ಲೂಕು ಡಿವೈಎಸ್ಪಿ ಜಯಕುಮಾರ್ ಅವರು ಮಹಿಳೆಯರ ರಕ್ಷಣೆ ಸಂಬಂಧಿಸಿದಂತೆ ಹಲವು ಸಲಹೆ ನೀಡಿದರು. ವಿಕಲಚೇತನ ಅಧಿಕಾರಿ ಸಂಪತ್ ಕುಮಾರ್, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸ್ವಾಮಿ ಗೌಡ, ಪೊನ್ನಂಪೇಟೆ ಸಿಡಿಪಿಒ ಸೀತಾಲಕ್ಷ್ಮಿ ಇತರರು ಇದ್ದರು.