Header Ads Widget

Responsive Advertisement

ಜಿಲ್ಲಾ ಕೌಶಲ್ಯ ಮಿಷನ್ ಯೋಜನೆ ಮಾಹಿತಿ ಕೈಪಿಡಿ ಬಿಡುಗಡೆ


ಸರ್ಕಾರದ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುವ ತರಬೇತಿ ಕಾರ್ಯಕ್ರಮಗಳ ಜಿಲ್ಲಾ ಕೌಶಲ್ಯ ಮಾಹಿತಿ ಕೈಪಿಡಿಯನ್ನು (District Skill Bulletin) ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ಬಿಡುಗಡೆ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೈಪಿಡಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಅವರು ಜಿಲ್ಲೆಯ ಕೌಶಲ್ಯ ಬೇಡಿಕೆಯನ್ನು ಅರಿತು ತರಬೇತಿ ಸಂಯೋಜನೆಗಳನ್ನು ಸೃಜಿಸುವಂತೆ ನಿರ್ದೇಶನ ನೀಡಿದರು.
ವಿವಿಧ ಇಲಾಖೆಗಳ ವೃತ್ತಿ ತರಬೇತಿ ಸಂಬಂಧಿಸಿದಂತೆ ಒಂದೇ ವೇದಿಕೆಯಡಿ ಯೋಜನೆ ರೂಪಿಸಲಾಗಿದ್ದು, www.kodagu.nic.in ವೆಬ್ಸೈಟ್ನಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದ್ದು, ವಿವಿಧ ತರಬೇತಿಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ವಿವಿಧ ಇಲಾಖೆಗೆ ವೃತ್ತಿ ಕೌಶಲ್ಯ ತರಬೇತಿ ಸಂಬಂಧಿಸಿದಂತೆ ನಿಖರ ಮಾಹಿತಿ ಇರಬೇಕು. ಸಮಾಜ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಒಳಗೊಂಡಂತೆ ಹಲವು ಇಲಾಖೆಗಳ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಸಲಹೆ ಮಾಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಜಿಲ್ಲಾ ಕೌಶಲ್ಯ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಪ್ರತಿಯೊಂದು ಇಲಾಖೆಯು ಶ್ರಮಿಸಬೇಕಿದೆ ಎಂದು ಅವರು ಹೇಳಿದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ವಿವಿಧ ಇಲಾಖೆಗಳಿಂದ ಆಯೋಜಿಸಲಾಗಿರುವ ತರಬೇತಿ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಒದಗಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯ ಮಿಷನ್ ಯೋಜನೆಯ ಅಧಿಕಾರಿ ಉಮಾ ಅವರು ಮಾಹಿತಿ ನೀಡಿ ಮಾಹಿತಿ ಕಾರ್ಯಾಗಾರ, ತರಬೇತಿ ಗುಣಮಟ್ಟ, ಕೈಗಾರಿಕೆಗಳ ಜೊತೆ ಸಮನ್ವಯ ಸಾಧಿಸುವುದು, ಸ್ವ ಉದ್ಯೋಗ, ಗ್ರಾ.ಪಂ.ಗಳ ಮೂಲಕ ಸಮನ್ವಯತೆ, ಸಣ್ಣ ಕೈಗಾರಿಕೆಗಳ ನಿರ್ವಹಣೆ, ಕೃಷಿ ಸಂಬಂಧಿಸಿದ ಉಪ ಸಮಿತಿ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಕೌಶಲ್ಯ ಬುಲೆಟಿನ್ನಲ್ಲಿ ಶೀಘ್ರದಲ್ಲಿ ಪ್ರಾರಂಭವಾಗಲಿರುವ ತರಬೇತಿ ಕಾರ್ಯಕ್ರಮಗಳ ಮಾಹಿತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತರಬೇತಿ ಕಾರ್ಯಕ್ರಮಗಳಿಗೆ ಅನುಗುಣವಾಗಿ ಮಾಹಿತಿಗಳನ್ನು ನವೀಕರಿಸಲಾಗುತ್ತದೆ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ವೀರೇಶ್ ಅವರು ವೃತ್ತಿ ತರಬೇತಿ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಮಾಹಿತಿ ಒಂದೇ ವೇದಿಕೆಯ ಮೂಲಕ ಜಿಲ್ಲೆಯ ಯುವಜನತೆಗೆ ಲಭ್ಯವಾಗಿ, ಗುಣಮಟ್ಟದ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಅಧಿಕೃತ ಜಿಲ್ಲಾ ವೆಬ್ಸೈಟ್ (www.kodagu.nic.in ಮೂಲಕ ಜಿಲ್ಲಾ ಕೌಶಲ್ಯ ಬುಲೆಟಿನ್ ನಲ್ಲಿ ಪ್ರಕಟಿಸಲಾಗುತ್ತಿದೆ ಎಂದರು.
ಸ್ಕಿಲ್ ಬುಲೆಟಿನ್ ನಲ್ಲಿ ಶೀಘ್ರದಲ್ಲಿ ಪ್ರಾರಂಭವಾಗಲಿರುವ ತರಬೇತಿ ಕಾರ್ಯಕ್ರಮಗಳ ಮಾಹಿತಿ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಇಲಾಖೆಗಳ ತರಬೇತಿ ಕಾರ್ಯಕ್ರಮಗಳಿಗೆ ಅನುಗುಣವಾಗಿ ನಿಯಮಿತವಾಗಿ ಮಾಹಿತಿಯನ್ನು ನವೀಕರಿಸಲಾಗುತ್ತದೆ.
ಆದ್ದರಿಂದ ಜಿಲ್ಲಾ ಸ್ಕಿಲ್ ಬುಲೆಟಿನ್ಗೆ ಅಗತ್ಯವಾದ ಮಾಹಿತಿಯನ್ನು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳು ಹಾಗೂ ತರಬೇತಿ ಸಂಸ್ಥೆಗಳು ತಮ್ಮ ಸಂಸ್ಥೆಗಳಿಂದ ಆಯೋಜಿಸಲಾಗಿರುವ ತರಬೇತಿ ಕಾರ್ಯಕ್ರಮಗಳ ಮಾಹಿತಿಯನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಜಾರಿಗೊಳಿಸಲಾಗುತ್ತಿರುವ ಕಾರ್ಯಕ್ರಮವು ಜಿಲ್ಲೆಯ ಯುವಜನತೆಗೆ, ರೈತರಿಗೆ, ಸ್ವ-ಸಹಾಯ ಸಂಘಗಳಿಗೆ ಹಾಗೂ ವೃತ್ತಿ ತರಬೇತಿ ಸಂಸ್ಥೆಗಳಿಗೆ ಸಹಕಾರಿಯಾಗಲಿದೆ ಎಂದು ವೀರೇಶ್ ಅವರು ತಿಳಿಸಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸುರೇಶ್, ರೋಟರಿ ಸಂಸ್ಥೆಯ ಧನಂಜಯ ಇತರರು ಜಿಲ್ಲಾ ಕೌಶಲ್ಯ ಮಿಷನ್ ಯೋಜನೆಯಡಿ ತರಬೇತಿ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಹಲವು ಸಲಹೆ ನೀಡಿದರು.
ಇನ್ನಷ್ಟು ಮಾಹಿತಿ:-ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ತರಬೇತಿ ಸಂಸ್ಥೆಗಳು ಸಾರ್ವಜನಿಕರಿಗೆ ವಿಶೇಷವಾಗಿ ಯುವ ಜನತೆಗೆ ಅನುಕೂಲವಾಗುವ ಹಲವು ರೀತಿಯ ತರಬೇತಿ ಕಾರ್ಯಕ್ರಮ ಆಯೋಜಿಸುತ್ತಿವೆ. ಅವುಗಳಲ್ಲಿ ಡಾಟಾ ಎಂಟ್ರಿ ಆಪರೇಟರ್, ಅಕೌಂಟ್ಸ್ ಎಕ್ಸಿಕ್ಯೂಟಿವ್, ಜೇನು ಸಾಕಾಣಿಕೆ, ಅಣಬೆ ಕೃಷಿ ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಕ್ರಮಗಳು ಸೇರಿದ್ದು, ಈ ತರಬೇತಿ ಕಾರ್ಯಕ್ರಮಗಳ ಮಾಹಿತಿಯನ್ನು ಜಿಲ್ಲೆಯಲ್ಲಿ ವಿನೂತನವಾಗಿ ಪ್ರಾರಂಭ ಮಾಡಲಾಗಿರುವ District Skill Bulletin ನಲ್ಲಿ ಪ್ರಕಟಿಸಲಾಗಿದೆ.
ಜಿಲ್ಲೆಯಲ್ಲಿ ಆಯೋಜಿಸಲಾಗುವ ತರಬೇತಿ ಕಾರ್ಯಕ್ರಮಗಳ ಮಾಹಿತಿಯನ್ನು ಜಿಲ್ಲಾ ವೆಬ್ಸೈಟ್ ಮೂಲಕ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯ ಯುವ ಜನತೆ ಗುಣಮಟ್ಟದ ತರಬೇತಿ ಪಡೆದು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳುವಲ್ಲಿ ಸಹಕಾರಿಯಾಗಲಿ ಎಂಬ ಆಶಯದೊಂದಿಗೆ ಜಿಲ್ಲಾ ಕೌಶಲ್ಯ ಬುಲೆಟಿನ್ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸಲಾಗುವ ಪ್ರಧಾನಮಂತ್ರಿ ಅವರ ಕೌಶಲ್ಯ ವಿಕಾಸ ಯೋಜನೆ 3.0 (ಪಿ.ಎಂ.ಕೆ.ವಿ.ವೈ 3.0) ಯೋಜನೆಯು ಪಿ.ಎಂ.ಕೆ.ವಿ.ವೈ 2.0 ನ ಮುಂದುವರೆದ ಭಾಗವಾಗಿದ್ದು, ಇದರಲ್ಲಿ ತರಬೇತಿ ಕಾರ್ಯಕ್ರಮ ಸಂಯೋಜನೆ, ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಜಿಲ್ಲಾ ಕೌಶಲ್ಯ ಮಿಷನ್ಗೆ ಹೆಚ್ಚಿನ ಹೊಣೆಗಾರಿಕೆ ನೀಡಿರುವುದರಿಂದ ನಮ್ಮ ಜಿಲ್ಲೆಗೆ ಅಗತ್ಯವಿರುವ ತರಬೇತಿ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲು ಅನುಕೂಲವಾಗುತ್ತದೆ ಎಂದು ಎಂಜಿಎನ್ಎಫ್ ಸಿಬ್ಬಂದಿ ಮಾಹಿತಿ ನೀಡಿದರು. ಜಿಲ್ಲಾ ಕೌಶಲ್ಯ ಉಪ ಸಮಿತಿಗಳನ್ನು ರಚಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.