Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿನಾಕಾರಣ ಪೊಲೀಸರು ದಂಡ ವಸೂಲಾತಿಯ ನೆಪದಲ್ಲಿ ಕಿರುಕುಳ ನೀಡಿದರೆ ಜೆಡಿಎಸ್ ವತಿಯಿಂದ ಹೋರಾಟ; ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಎಚ್ಚರಿಕೆ


ವಿನಾಕಾರಣ ಪೊಲೀಸರು ದಂಡ ವಸೂಲಾತಿಯ ನೆಪದಲ್ಲಿ ಕಿರುಕುಳ ನೀಡಿದರೆ ಜೆಡಿಎಸ್ ವತಿಯಿಂದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು 
ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ದಂಡ ವಸೂಲಿಗಾಗಿ ಟಾರ್ಗೆಟ್ ನೀಡಿರುವ ಕಾರಣ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪೊಲೀಸರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮಾಸ್ಕ್ ಮಾತ್ರವಲ್ಲದೆ ಸೀಟ್ ಬೆಲ್ಟ್ ಸೇರಿದಂತೆ ಇತರ ಕಾರಣಗಳಿಗೂ ವಾಹನ ಚಾಲಕರನ್ನು ತಡೆದು ದಂಡ ಹಾಕಲಾಗುತ್ತಿದೆ.  ಕೋವಿಡ್ ವ್ಯಾಪಿಸುತ್ತಿದೆ ಎನ್ನುವ ಕಾರಣ ನೀಡಿ ಮಾಸ್ಕ್ ಧರಿಸದ ಸಾರ್ವಜನಿಕರು ಹಾಗೂ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುವ ನೆಪದಲ್ಲಿ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.

ಪೊಲೀಸರು ಸರ್ಕಾರದ ನಿಯಮ ಪಾಲಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಅಸಮರ್ಪಕ ರೀತಿಯಲ್ಲಿ ದಂಡ ವಸೂಲಿ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಸಿಕ್ಕ ಸಿಕ್ಕ ವಾಹನ ಸವಾರರನ್ನು ತಡೆದು ದಂಡ ವಿಧಿಸುತ್ತಿರುವ ಪ್ರಕರಣಗಳು ಕುಶಾಲನಗರ ಭಾಗದಲ್ಲಿ ಹೆಚ್ಚಾಗಿ ಕಂಡು ಬಂದಿದೆ. 

ಮೊದಲೇ ಜಿಲ್ಲೆಯ ಜನ ಅತಿವೃಷ್ಟಿ ಹಾನಿ ಮತ್ತು ಕೋವಿಡ್ ಕಾರಣದಿಂದ ಸಾಕಷ್ಟು ಕಷ್ಟ, ನಷ್ಟ ಅನುಭವಿಸುತ್ತಿದ್ದಾರೆ. ಆರ್ಥಿಕ ಹಿನ್ನಡೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಈ ಪರಿಸ್ಥಿತಿಯ ನಡುವೆಯೂ ದಂಡ ವಸೂಲಿಯ ನೆಪದಲ್ಲಿ ಖಾಲಿಯಾಗಿರುವ ಖಜಾನೆ ಭರ್ತಿ ಮಾಡುವ ಕಾರ್ಯದಲ್ಲಿ ರಾಜ್ಯ ಸರ್ಕಾರ ತೊಡಗಿದೆ ಎಂದು ಗಣೇಶ್ ಆರೋಪಿಸಿದ್ದಾರೆ. ಸಾರ್ವಜನಿಕರ ಹಿತ ಕಾಯಬೇಕಾದ ಸರ್ಕಾರ ಪೊಲೀಸರನ್ನು ಬಿಟ್ಟು ವಸೂಲಾತಿಯಲ್ಲಿ ಸಕ್ರಿಯವಾಗಿದೆ ಎಂದು ಟೀಕಿಸಿದ್ದಾರೆ.

Search Coorg Media