Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಡಾನೆ ಹಾವಳಿಗೆ ವೈಜ್ಞಾನಿಕ ಕಾರ್ಯಾಚರಣೆ ಅಗತ್ಯ; ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ರಕ್ಷಣೆ ನೀಡಲು ವಿಜು ಸುಬ್ರಮಣಿ ಒತ್ತಾಯ


ಕಾಡಾನೆ ಹಾವಳಿಗೆ ವೈಜ್ಞಾನಿಕ ಕಾರ್ಯಾಚರಣೆ  ಅಗತ್ಯ

ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ರಕ್ಷಣೆ ನೀಡಲು ವಿಜು ಸುಬ್ರಮಣಿ ಒತ್ತಾಯ

ಪೊನ್ನಂಪೇಟೆ: ಕೊಡಗಿನ ಹಲವೆಡೆ ಕಾಡಾನೆ ಮತ್ತು ಹುಲಿ ಸೇರಿದಂತೆ ವನ್ಯಜೀವಿಗಳ ಉಪಟಳ ದಿನೇದಿನೇ ಹೆಚ್ಚುತ್ತಿದೆ. ಕಾಡಾನೆಗಳ ದಾಳಿಯಿಂದ ಪ್ರಾಣ ಹಾನಿಯೂ ವ್ಯಾಪಕಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ಮುಖಂಡ ಮತ್ತು ಜಿ. ಪಂ. ಮಾಜಿ ಸದಸ್ಯರಾದ ಮುಕೋಂಡ ವಿಜು ಸುಬ್ರಮಣಿ, ವನ್ಯಪ್ರಾಣಿಗಳಿಂದ ಗಳಿಂದ ರೈತರ ಫಸಲು  ಉಳಿಸಿಕೊಳ್ಳುವುದು ಬೆಳೆಗಾರರಿಗೆ ಬಹುದೊಡ್ಡ ಸವಾಲಾಗಿದೆ. ಅಲ್ಲದೆ ಕೂಲಿ ಕಾರ್ಮಿಕರು ತೋಟಗಳಲ್ಲಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣವಿಲ್ಲ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನಿರಂತರ ಕಾಡಾನೆಗಳ ದಾಳಿಯಿಂದ ಕೊಡಗಿನಲ್ಲಿ ರೈತರು  ಕಂಗಾಲಾಗಿದ್ದಾರೆ. ಈಚೆಗಂತೂ ಕಾಡಾನೆಗಳ ದಾಳಿ ಮತ್ತಷ್ಟು ಹೆಚ್ಚಿರುವುದು ರೈತರ ಮತ್ತು ಕೂಲಿ ಕಾರ್ಮಿಕರ ನಿದ್ದೆಗೆಡಿಸಿದೆ. ಜೊತೆಗೆ  ಕೊಡಗಿನ ಅಲ್ಲಲ್ಲಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಬೀತಗೊಳಿಸುತ್ತಿದೆ. ಇತ್ತೀಚಿಗೆ ಮಂಗಗಳು ಕೂಡ ಕೊಡಗಿನ ಅಲ್ಲಲ್ಲಿ ಕಾಣಿಸಿಕೊಂಡು ರೈತರ ಬೆಳೆಗಳನ್ನು ನಾಶ ಪಡಿಸುತ್ತದೆ. ಆದ್ದರಿಂದ ಕೊಡಗಿನಲ್ಲಿ ಕಾಡಾನೆ, ಹುಲಿ ಸೇರಿದಂತೆ ವನ್ಯಪ್ರಾಣಿಗಳ ಹಾವಳಿಗೆ ವೈಜ್ಞಾನಿಕ ಕಾರ್ಯಾಚರಣೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಲು ಸರಕಾರ ಉನ್ನತಾಧಿಕಾರ ಸಮಿತಿಯನ್ನು ತುರ್ತಾಗಿ ರಚಿಸಬೇಕು ಎಂದು ವಿಜು ಸುಬ್ರಮಣಿ ಅವರು ಒತ್ತಾಯಿಸಿದ್ದಾರೆ.

ದಕ್ಷಿಣ ಕೊಡಗಿನ 50ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ವ್ಯಾಪಕವಾಗಿದೆ. ಶನಿವಾರದಂದು ಬೆಳಿಗ್ಗೆ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಮರಪಾಲದಲ್ಲಿ ಕಾಡಾನೆ ಬಲಿತೆಗೆದುಕೊಂಡಿದೆ. ಕಳೆದ ಶುಕ್ರವಾರ ಬೀರುಗ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ ಕಾಡಾನೆ ಮಾರಣಾಂತಿಕವಾಗಿ ಗಾಯಗೊಳಿಸಿದೆ. ವನ್ಯಜೀವಿಗಳ ಉಪಟಳವನ್ನು ಕೊಡಗಿನ ಜನತೆ ಇನ್ನೆಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರಲ್ಲದೆ, ಅರಣ್ಯ ಇಲಾಖೆ ಈ ಕುರಿತು ವಿಶೇಷ ಕಾಳಜಿ ವಹಿಸಿ ಕಾಡುಪ್ರಾಣಿಗಳ ಮಿತಿಮೀರಿದ ಉಪಟಳವನ್ನು ನಿಯಂತ್ರಿಸದಿದ್ದಲ್ಲಿ ಜನತೆ ಮುಂದೆ ಸಿಡಿದೇಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಎಚ್ಚರಿಸಿದ್ದಾರೆ.

ಕಾಡಾನೆ ಮತ್ತು ಹುಲಿ ದಾಳಿಯಿಂದ ಸಾವನ್ನಪ್ಪುವ ವ್ಯಕ್ತಿಗಳ ಕುಟುಂಬಕ್ಕೆ ಸರಕಾರ ಕನಿಷ್ಠ ರೂ.25 ಲಕ್ಷವಾದರೂ ಪರಿಹಾರ ಧನ ವಿತರಿಸಬೇಕು. ಕೇವಲ ರೂ. 7 ಲಕ್ಷ ರೂಪಾಯಿ  ಪರಿಹಾರ ನೀಡಿ ಇಲಾಖೆ ಕೈತೊಳೆದುಕೊಂಡರೆ ದಾಳಿಗೆ ಬಲಿಯಾದ ವ್ಯಕ್ತಿಯ ಸಾವಿಗೆ ನ್ಯಾಯ ದೊರೆಯುವುದಿಲ್ಲ.  ಬಹುತೇಕ ರೈತರು ರಾತ್ರಿ ನಿದ್ದೆಯಿಲ್ಲದೆ ಬೆಳೆಯನ್ನು ರಕ್ಷಿಸಬೇಕಾದ ಅನಿವಾರ್ಯತೆ ಬಂದಿದೆ. ಇದನ್ನು ಅರಣ್ಯ ಇಲಾಖೆ ಅರ್ಥೈಸಿಕೊಳ್ಳಬೇಕು ಎಂದು ಹೇಳಿರುವ ವಿಜು ಸುಬ್ರಮಣಿ ಅವರು, ಕಾಡುಪ್ರಾಣಿಗಳ ಉಪಟಳ ತಾಳಲಾರದೆ ಬಹುತೇಕ ಕೊಡಗಿನ ರೈತರು ಭತ್ತದ ಕೃಷಿ ಕೈಬಿಟ್ಟು, ನೂರಾರು ಎಕರೆ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಕೂಡ ಕಾಡಾನೆ ಸ್ಥಳಾಂತರದ ಪ್ರಯತ್ನ ಮಾಡುತ್ತಿಲ್ಲ. ಕೇವಲ ಪಟಾಕಿ, ಅಶ್ರುವಾಯು ಸಿಡಿಸಿ ಕಾಡಾನೆ ಓಡಿಸುವ ಪ್ರಯತ್ನ ನಡೆಸುತ್ತಿದೆಯಾದರೂ ಕಾಡಾನೆಗಳಿಗೆ ಅದರ ಶಬ್ದ ಮಾಮೂಲಿಯಾಗಿ ಬಿಟ್ಟಿದೆ. ಆದ್ದರಿಂದ ವೈಜ್ಞಾನಿಕ ರೂಪದ ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆ ಇನ್ನಾದರೂ ಗಂಭೀರ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಕೂಡಲೇ ಸರ್ಕಾರ ಮತ್ತು ಇದಕ್ಕೆ ಸಂಬಂಧಪಟ್ಟ ಸಚಿವರುಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ವೈಜ್ಞಾನಿಕವಾದ ಕಾರ್ಯಾಚರಣೆಯ ಮೂಲಕ  ಶಾಶ್ವತ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲು ವಿಶೇಷ ನೀತಿ ರೂಪಿಸಬೇಕು. ಅರಣ್ಯ ಇಲಾಖೆ ಕೊಡಗಿನ ಬೆಳೆಗಾರರ ತಾಳ್ಮೆಯನ್ನು ಪರೀಕ್ಷಿಸಲು ಮುಂದಾಗಬಾರದು. ಅಲ್ಲದೆ ಕೊಡಗಿನ ಬೆಳಗಾರರ ಸೌಜನ್ಯತೆಯನ್ನು ಅವರ ದೌರ್ಬಲ್ಯ ಎಂದು ಪರಿಗಣಿಸಬಾರದು ಎಂದು ಆಗ್ರಹಿಸಿರುವ ಅವರು,  ಸೇರಿದಂತೆ ವನ್ಯಜೀವಿಗಳ ಉಪಟಳದಿಂದ ಕೊಡಗನ್ನು ಮುಕ್ತಗೊಳಿಸಬೇಕು. ಜೊತೆಗೆ ಬೆಳಗಾರರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ವಿಜು ಸುಬ್ರಮಣಿ ಒತ್ತಾಯಿಸಿದ್ದಾರೆ.