Header Ads Widget

ಸರ್ಚ್ ಕೂರ್ಗ್ ಮೀಡಿಯ

ದಸರಾ ಉತ್ಸವ ಸರಳ ಮತ್ತು ಸಾಂಪ್ರದಾಯಿಕ ಆಚರಣೆ: ಡಿಸಿ ಆದೇಶ


ಜಿಲ್ಲೆಯ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ ಸೋಂಕಿನಿಂದಾಗಿ ಜಿಲ್ಲೆಯ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ದಸರಾ ಉತ್ಸವವನ್ನು ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಆಚರಣೆ ಮಾಡಬೇಕಾಗಿದೆ.
ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಹೆಚ್ಚಾಗಿ ಜನ ಸಂದಣಿ ಸೇರುವುದು ಉಚಿತವಾಗಿರುವುದಿಲ್ಲ. ಆದ್ದರಿಂದ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತಗೊಳಿಸುವುದು ಸೂಕ್ತವಾದ ಕಾರಣ ಹಾಗೂ ಸಾಂಪ್ರದಾಯಿಕ ಆಚರಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ಧಿಷ್ಟ ಆದೇಶವನ್ನು ಹೊರಡಿಸುವುದು ಸೂಕ್ತವೆಂದು ಕಂಡು ಬಂದ ಕಾರಣ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯುಲೇಶನ್ 2020 ರ ನಿಯಮ 12, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್-2005 ಕಲಂ.24(ಎ), (ಬಿ), 30(2), 33 ರಡಿ ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ.144, ಕರ್ನಾಟಕ ಮೋಟಾರು ವಾಹನಗಳ ನಿಯಮ 1988 ರ ಕಲಂ.115, ಕರ್ನಾಟಕ ಮೋಟಾರು ವಾಹನಗಳ ನಿಯಮ 1989 ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ(5) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ವಿಧಿ 31 ರಡಿಯಲ್ಲಿ ದತ್ತವಾದ ಅಧಿಕಾರದಂತೆ ಸರ್ಕಾರದ ಆದೇಶ/ ಮಾರ್ಗಸೂಚಿ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಅಕ್ಟೋಬರ್, 17 ರ ಬೆಳಗ್ಗೆ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್, 26 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಾರಿಯಲ್ಲಿರುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಕಾರ್ಯಕ್ರಮದಲ್ಲಿ ಸರಳ ಸಾಂಪ್ರದಾಯಿಕ, ಧಾರ್ಮಿಕ ಆಚರಣೆಯನ್ನು ಹೊರತುಪಡಿಸಿ ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಮತ್ತು ಜನ ಸಂದಣಿ ಸೇರುವಂತಹ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ.
ಅಕ್ಟೋಬರ್, 17 ಮತ್ತು 26 ರಂದು ರಾತ್ರಿ 10 ಗಂಟೆಯೊಳಗೆ ದಸರಾ ಸಂಬಂಧಿತ ಧಾರ್ಮಿಕ ವಿಧಿ ವಿಧಾನಗಳನ್ನು ಮುಗಿಸುವುದು. ತದನಂತರ ಯಾವುದೇ ಆಚರಣೆಗೆ ಅವಕಾಶ ಇರುವುದಿಲ್ಲ. ಹೆಚ್ಚುವರಿಯಾಗಿ ಯಾವುದೇ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲು ಅವಕಾಶ ಇರುವುದಿಲ್ಲ. ಸಂಬಂಧಪಟ್ಟ ನಗರಸಭೆ ಮತ್ತು ಗ್ರಾಮ ಪಂಚಾಯತಿಯು ಪ್ರಸ್ತುತ ಇರುವ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡುವುದು. ಸಾಂಪ್ರದಾಯಿಕ ಸರಳ ದಸರಾ ಆಚರಣೆಯನ್ನು ಸಾರ್ವಜನಿಕವಾಗಿ ಗುಂಪುಗುಂಪಾಗಿ ವೀಕ್ಷಿಸಲು ಅವಕಾಶ ಇರುವುದಿಲ್ಲ.
ಮಡಿಕೇರಿ ನಗರ ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು ಅಕ್ಟೋಬರ್, 26 ರಂದು ಪೂರ್ತಿ ದಿವಸ ಮುಚ್ಚಲ್ಪಡುವುದು. ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಯವರು ಈ ಕುರಿತು ನಿಗಾ ವಹಿಸಿ ದೃಢಪಡಿಸಿಕೊಳ್ಳುವುದು. ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ವೀಕ್ಷಿಸಲು ಅಥವಾ ರಸ್ತೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ಇರುವುದಿಲ್ಲ. ದಸರಾ ಸಮಿತಿಗಳಲ್ಲಿ, ಸಮಿತಿ ಮತ್ತು ಪೊಲೀಸ್ ಇಲಾಖೆಯಿಂದ ನಿಗಧಿಪಡಿಸಿರುವಷ್ಟು ಸಂಖ್ಯೆಯಲ್ಲಿ ಮಾತ್ರ ಸದಸ್ಯರಿರತಕ್ಕದ್ದು.
ಈ ಸದಸ್ಯರು 48 ಗಂಟೆಗಳ ಮುಂಚೆ ಆರ್.ಟಿ.ಪಿ.ಸಿ.ಆರ್ ಕೋವಿಡ್ ಪರೀಕ್ಷೆಗೆ ಒಳಗಾಗಿರತಕ್ಕದ್ದು ಮತ್ತು ನೆಗೆಟಿವ್ ವರದಿ ಇರುವ ದೃಢೀಕರಣವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಸಮಿತಿಗಳಲ್ಲಿನ ಎಲ್ಲಾ ಸದಸ್ಯರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿದ್ದು, ಇದರ ಪಾಲನೆಯು ದಸರಾ ಸಮಿತಿಯ ಜವಾಬ್ದಾರಿಯಾಗಿರುತ್ತದೆ.
ಯಾವುದೇ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಅಕ್ಟೋಬರ್, 26 ರಂದು ನಡೆಯುವ ಧಾರ್ಮಿಕ ವಿಧಿ ವಿಧಾನಗಳಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಿದಂತೆ ನಿಗಧಿಪಡಿಸಿದ ವಾಹನವನ್ನು ಮಾತ್ರ ಬಳಸುವುದು. ಹೊಸದಾಗಿ ಯಾವುದೇ ಅಂಗಡಿಗಳಿಗೆ ಅವಕಾಶವಿಲ್ಲ ಮತ್ತು ಹೊಸದಾಗಿ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ. ಹೋಂ ಸ್ಟೇ/ರೆಸಾರ್ಟ್/ಲಾಡ್ಜ್/ಹೊಟೇಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕಡ್ಡಾಯವಾಗಿ ಕೇಂದ್ರ/ರಾಜ್ಯ ಸರ್ಕಾರದಿಂದ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು. ತಪ್ಪಿದಲ್ಲಿ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು.
ದಸರಾ ಸಮಿತಿಯು ಕೇಂದ್ರ/ ರಾಜ್ಯ ಸರ್ಕಾರದಿಂದ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಲ್ಲಿ ಜವಾಬ್ದಾರಿ ಹೊಂದಿರುತ್ತದೆ ಯಾವುದೇ ತಪ್ಪುಗಳಿಗೆ ಸಮಿತಿಯವರು ಹೊಣೆಗಾರರಾಗಿರುತ್ತಾರೆ. ಜನಸಂದಣಿ ಸೇರುವಂತಹ ಯಾವುದೇ ಚಟುವಟಿಕೆಗಳನ್ನು ದಸರಾ ಸಮಿತಿಯು ನಡೆಸುವಂತಿಲ್ಲ. ಕಡ್ಡಾಯವಾಗಿ ಸರ್ಕಾರದ ಕೋವಿಡ್-19 ಕಾರ್ಯವಿಧಾನವನ್ನು (SOP) ಪಾಲಿಸಬೇಕು. ಈ ಆದೇಶದ ಉಲ್ಲಂಘನೆಯು ಐ.ಪಿ.ಸಿ ಸೆಕ್ಷನ್ 188 ರಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
Like
Comment
Share