Header Ads Widget

ಸರ್ಚ್ ಕೂರ್ಗ್ ಮೀಡಿಯ

ಪಿಎಂ ಕಿಸಾನ್‌ ಸಮ್ಮಾನ್ ‌ನಿಧಿಗೆ ಸುಳ್ಳು ಮಾಹಿತಿ ನೀಡಿದ್ದ ರೈತರಿಗೆ ಹಣ ಹಿಂದಿರುಗಿಸಲು ನೋಟಿಸ್


ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಸಹಾಯಧನಕ್ಕೆ ರಾಜ್ಯದಲ್ಲಿ ಈವರೆಗೆ 56,74,940 ರೈತರು ಹೆಸರು ನೋಂದಾಯಿಸಿದ್ದಾರೆ. ವಿವಿಧ ಹಂತದ ಪರಿಶೀಲನೆ ನಂತರ 52,68,327 ರೈತರಿಗೆ ಸಹಾಯಧನ ಬಿಡುಗಡೆಯಾಗಿದೆ. ಸಹಾಯಧನ ಪಡೆದಿರುವ ರೈತರ ಪೈಕಿ 85,208 ಮಂದಿ ಆದಾಯ ತೆರಿಗೆ ಪಾವತಿಸುತ್ತಿರುವ ಸಂಗತಿ ಪರಿಶೀಲನೆ ಯಿಂದ ಗೊತ್ತಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಪಡೆಯಲು ಸುಳ್ಳು ಮಾಹಿತಿ ನೀಡಿದ್ದ ರೈತರಿಗೆ ರಾಜ್ಯ ಕೃಷಿ ಇಲಾಖೆ ಶಾಕ್‌ ನೀಡಿದೆ. ಸುಳ್ಳು ಮಾಹಿತಿ ನೀಡಿ ಯೋಜನೆಯ ಹಣ ಪಡೆದಿರುವ ರಾಜ್ಯದ 85 ಸಾವಿರಕ್ಕೂ ಹೆಚ್ಚು ರೈತರಿಗೆ ಹಣ ಹಿಂತಿರುಗಿಸುವಂತೆ ನೋಟಿಸ್ ನೀಡಲಾಗುತ್ತಿದೆ.

ಆದಾಯ ತೆರಿಗೆ ಪಾವತಿಯ ಸಂಗತಿಯನ್ನು ಮರೆಮಾಚಿ ಸಹಾಯಧನ ಪಡೆದ ರಾಜ್ಯದ 85 ಸಾವಿರಕ್ಕೂ ಹೆಚ್ಚು ರೈತರನ್ನು ಕೇಂದ್ರ ಕೃಷಿ ಸಚಿವಾಲಯ ಪರಿಶೀಲನೆ ವೇಳೆ ಪತ್ತೆ ಹಚ್ಚಿದೆ. ಈ ರೈತರ ಪಟ್ಟಿಯನ್ನು ಕೇಂದ್ರ ಸಚಿವಾಲಯ ಈಗಾಗಲೇ ರಾಜ್ಯ ಸರ್ಕಾರಕ್ಕೆ ರವಾನಿಸಿದೆ. ರಾಜ್ಯ ಕೃಷಿ ಇಲಾಖೆಯು ಸಹಾಯಧನ ಪಡೆದ ರೈತರಿಗೆ ಹಣ ಹಿಂದಿರುಗಿಸಲು ನೋಟಿಸ್ ಸಹ ಜಾರಿ ಮಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರದ ಎರಡು ಕಂತುಗಳು ರೈತರ ಖಾತೆಗೆ ಜಮೆಯಾಗಿದೆ. ಇನ್ನೇನು ನವೆಂಬರ್ ತಿಂಗಳಲ್ಲಿ ಮೂರನೇ ಕಂತು ಜಮೆಯಾಗುವಷ್ಠರಲ್ಲಿಯೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆಯ ನಿಯಮಾವಳಿಯ ಪ್ರಕಾರ ಸರ್ಕಾರಿ ನೌಕರಿಯಲ್ಲಿರುವವರು ಈ ಯೋಜನೆಯ ಸಹಾಯ ಧನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.ಅಲ್ಲದೇ, ಬೇರೆ ಯಾವುದಾದರೂ ಉದ್ಯಮ ಹೊಂದಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತವರು ಅರ್ಹರಾಗುವುದಿಲ್ಲ. ಕೃಷಿ ಇಲಾಖೆ ಕೂಡ ಈ ಬಗ್ಗೆ ವಿಶೇಷವಾಗಿ ಪರಿಶೀಲಿಸದೇ ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆಯ ಅಡಿಯಲ್ಲಿ ಪರಿಗಣಿಸಿತ್ತು. ಆದರೆ, ಮಾರ್ಚ್ ಅಂತ್ಯದ ವೇಳೆ ಆದಾಯ ತೆರಿಗೆ ತುಂಬಿದವರೂ ಈ ಯೋಜನೆಯಲ್ಲಿ ಫಲಾನುಭವಿಗಳಾದ ಅಂಶ ಬೆಳಕಿಗೆ ಬಂದಿದೆ.

ಕೇಂದ್ರ ಕೃಷಿ ಸಚಿವಾಲಯವು ಫಲಾನುಭವಿಗಳ ಆಧಾರ್‌ ಕಾರ್ಡ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆ ವಿವರ ಪರಿಶೀಲಿಸಿದಾಗ ಸಾಕಷ್ಟು ರೈತರು ಆದಾಯ ತೆರಿಗೆ ಪಾವತಿದಾರರಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಸಚಿವಾಲಯ ಇಂತಹ ರೈತರ ಪಟ್ಟಿಯನ್ನು ಕೃಷಿ ಇಲಾಖೆಗೆ ರವಾನಿಸಿದೆ. ಕೃಷಿ ಇಲಾಖೆ ಆಯುಕ್ತರು ಈ ರೈತರಿಂದ ಸಹಾಯಧನ ಹಿಂಪಡೆಯುವಂತೆ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಜಿಲ್ಲಾರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ರೈತರಿಂದ ಸಹಾಯಧನ ವಸೂಲು ಮಾಡಲು ಮುಂದಾಗಿದ್ದಾರೆ. ಡಿಮಾಂಡ್‌ ಡ್ರಾಫ್ಟ್‌ (ಡಿ.ಡಿ) ಮೂಲಕ ಸಹಾಯಕ ನಿರ್ದೇಶಕರ ಕಚೇರಿಗೆ ಸಹಾಯಧನ ಹಿಂದಿರುಗಿಸುವಂತೆ ರೈತರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಒಂದು ವೇಳೆ ಸಹಾಯಧನ ಹಿಂದಿರುಗಿಸದಿದ್ದರೆ ಇಲಾಖೆಯಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ತಡೆ ಹಿಡಿಯುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.