Header Ads Widget

Responsive Advertisement

12.25 ಲಕ್ಷ ರೂ. ಲಾಭದಲ್ಲಿ ಕೊಡಗು ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ


2019-20ರ ಸಾಲಿನಲ್ಲಿ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ ಪ್ರಸ್ತುತ ವರ್ಷ 12.25 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.

ಮಡಿಕೇರಿ ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಗಣೇಶ್ ಅವರು  ಕೋವಿಡ್ ಸಂಕಷ್ಟ ಮತ್ತು ಪ್ರಾಕೃತಿಕ ವಿಕೋಪದಿಂದಾಗಿ ಲಾಭಾಂಶ ಕಡಿಮೆಯಾಗಿದ್ದು, 2020 ಮಾ.31 ರ ಅಂತ್ಯಕ್ಕೆ ವಿವಿಧ ಠೇವಣಾತಿಗಳಿಂದ ರೂ.26,13,94,988 ಠೇವಣಾತಿ ಸಂಗ್ರಹಿಸಲಾಗಿದೆ ಮತ್ತು ರೂ.7,28,55,050 ವಿವಿಧ ಸಾಲ ನೀಡಲಾಗಿದೆ. ಪ್ರಸ್ತುತ ವರ್ಷ ಮಾ.31 ರ ಅಂತ್ಯಕ್ಕೆ 12,25,621.66 ಲಾಭಗಳಿಸಿದೆ ಎಂದು ಸ್ಪಷ್ಟಪಡಿಸಿದರು.

ಡಿ.22 ರಂದು ಗ್ರಾ.ಪಂ ಚುನಾವಣೆ ನಿಗಧಿಯಾಗಿರುವುದರಿಂದ ಡಿ.22 ರಂದು ನಡೆಯಬೇಕಿದ್ದ ಸಂಘದ 2019-20ನೇ ಸಾಲಿನ 19ನೇ ವಾರ್ಷಿಕ ಮಹಾಸಭೆ ಡಿ.24 ರಂದು ಪೂರ್ವಾಹ್ನ 11 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಕೊಹಿನೂರು ರಸ್ತೆಯಲ್ಲಿರುವ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ಕೆ.ಎಂ.ಗಣೇಶ್  ತಿಳಿಸಿದರು.

2002ರಲ್ಲಿ ಹಿರಿಯರಾದ ಜಿ.ರಾಜೇಂದ್ರ ಅವರು ಸ್ಥಾಪನೆ ಮಾಡಿದ ಸಂಘ ಸುಮಾರು 18 ವರ್ಷಗಳಿಂದ ತನ್ನ ಸ್ವಂತ ಬಂಡವಾಳದಿಂದ ವ್ಯವಹಾರ ನಡೆಸುತ್ತಾ ಬಂದಿದೆ. ಒಟ್ಟು 1875 ಸದಸ್ಯರಿದ್ದು, 70.91 ಲಕ್ಷ ರೂ. ಪಾಲು ಬಂಡವಾಳ ಸಂಗ್ರಹವಾಗಿದೆ.

ಸಂಘ 2006-07 ನೇ ಸಾಲಿನಿಂದ ಲಾಭದಲ್ಲಿ ಮುನ್ನಡೆಯುತ್ತಿದ್ದು, ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್‍ಡ್ರಾಪ್ಟ್ ಸಾಲ ಮತ್ತು ಸಿಬ್ಬಂದಿಗಳಿಗೆ ಆಸಾಮಿ ಸಾಲ ನೀಡಲಾಗುತ್ತಿದೆ ಎಂದು ಕೆ.ಎಂ.ಗಣೇಶ್ ತಿಳಿಸಿದ್ದಾರೆ.

2014-15 ನೇ ಸಾಲಿನಲ್ಲಿ ಇಲಾಖಾ ಅನುಮತಿ ಪಡೆದು ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ ಸಂಘಕ್ಕೆ ಒಂದು ಸಂಘದ ಸ್ವಂತ ಕಟ್ಟಡವನ್ನು ಖರೀದಿಸಲಾಗಿದೆ. ಅಲ್ಲದೆ 2016-17ನೇ ಸಾಲಿನಲ್ಲಿ ಸಂಘದ ಸದಸ್ಯರ ಸಹಕಾರದೊಂದಿಗೆ ಈ ಹಿಂದೆ ಇದ್ದ ಕಟ್ಟಡದ ಮೇಲೆ ಮತ್ತೊಂದು ಅಂತಸ್ತನ್ನು ನಿರ್ಮಾಣ ಮಾಡಲಾಗಿದ್ದು, ಸದಸ್ಯರಿಗೆ ಅನುಕೂಲವಾಗುವ ರೀತಿ ಸಭೆ, ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ ಎಂದು ಕೆ.ಎಂ.ಗಣೇಶ್ ತಿಳಿಸಿದ್ದಾರೆ.

2007 ಡಿಸೆಂಬರ್ ತಿಂಗಳಿನಲ್ಲಿ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ಹಾಗೂ 2012 ರಲ್ಲಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಸಂಘದ ಶಾಖೆಯನ್ನು ಪ್ರಾರಂಭಿಸಲಾಗಿದೆ. ಎರಡೂ ಶಾಖೆಗಳಲ್ಲಿ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಯುತ್ತಿದೆ.
ಸಂಘದಲ್ಲಿ ಒಟ್ಟು 23 ಜನ ಪಿಗ್ಮಿ ಸಂಗ್ರಹಗಾರರಿದ್ದು, ಜಿಲ್ಲೆಯ ಹಲವು ಕಡೆ ಪ್ರತಿದಿನ ಪಿಗ್ಮಿ ಠೇವಣಿ ಸಂಗ್ರಹಿಸುತ್ತಿದ್ದಾರೆ. ಸಂಘದಲ್ಲಿ ನಿರಖು ಠೇವಣಿಗಳಿಗೆ ಇತರ ಎಲ್ಲಾ ಬ್ಯಾಂಕ್‍ಗಳಿಗಿಂತಲೂ ಹೆಚ್ಚಿಗೆ ಬಡ್ಡಿ ದರವನ್ನು ನೀಡಲಾಗುತ್ತಿದೆ ಎಂದು ಕೆ.ಎಂ.ಗಣೇಶ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಸವಿತಾರೈ, ಕೆ.ಇ.ಮ್ಯಾಥ್ಯು, ಜಯಂತಿರಾವ್, ಮುನೀರ್ ಅಹಮ್ಮದ್ ಹಾಗೂ ಅನಿಲ್ ಉಪಸ್ಥಿತರಿದ್ದರು.

Search Coorg Media: Coorg's Largest Online Media Network