"ದೇಶದ ಎಲ್ಲ ರಾಮ ಭಕ್ತರನ್ನು ಒಗ್ಗೂಡಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ರಾಮ ಭಕ್ತರಿಂದಲೇ ನಿಧಿ ಸಂಗ್ರಹಿಸಲು ಮುಂದಾಗಿದ್ದೇವೆ" ಎಂದು ವಿಶ್ವಹಿಂದೂ ಪರಿಷತ್ ತಿಳಿಸಿದೆ.
'₹ 10ರಿಂದ ಎಷ್ಟು ಬೇಕಾದರೂ ಹಣವನ್ನು ಸಮರ್ಪಣಾ ಮನೋಭಾವದಿಂದ ನೀಡಬಹುದು. ಮುಂದೊಂದು ದಿನ ಇಂತಹ ಭವ್ಯ ಮಂದಿರ ನಿರ್ಮಿಸಲು ನಾನೂ ಹಣ ನೀಡಿದ್ದೆ ಎಂಬುದಾಗಿ ಸಾಮಾನ್ಯ ರಾಮ ಭಕ್ತನೂ ಹೆಮ್ಮೆ ಪಡಬಹುದು. ಇದು ಮಂದಿರ ನಿರ್ಮಾಣದ ಉದ್ದೇಶ ಮಾತ್ರ ಹೊಂದಿಲ್ಲ. ಹಿಂದೂಗಳನ್ನು ಒಗ್ಗೂಡಿಸುವ ಉದ್ದೇಶವನ್ನು ಹೊಂದಿದೆ' ಎಂದು ವಿಶ್ವಹಿಂದೂ ಪರಿಷತ್ ತಿಳಿಸಿದೆ.
'ದೇಶದಲ್ಲಿ 43 ದಿನ ಈ ಅಭಿಯಾನ ನಡೆಯಲಿದೆ. ಆದರೆ, ರಾಜ್ಯದಲ್ಲಿ 2021ರ ಜನವರಿ 15ರಿಂದ ಫೆಬ್ರುವರಿ 5 ರ ವರೆಗೆ 23 ದಿನ ನಡೆಸಲಿದ್ದೇವೆ. ಹಿಂದೂಗಳಲ್ಲಿ ಜಾಗೃತಿ ಮೂಡಿಸಿ, ಜಾಗೃತ ಹಿಂದೂ ಧರ್ಮದ ಶಕ್ತಿಯನ್ನು ಬಡಿದೆಬ್ಬಿಸುವ ಅಭಿಯಾನವೂ ಇದಾಗಲಿದೆ' ಎಂದು ವಿಶ್ವಹಿಂದೂ ಪರಿಷತ್ ತಿಳಿಸಿದೆ.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರದ ಪುನರ್ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 2020ರ ಆಗಸ್ಟ್ 5 ರಂದು ಶಿಲಾನ್ಯಾಸ ಮಾಡಿದ ಬಳಿಕ ನಿರ್ಮಾಣದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ರಾಷ್ಟ್ರೀಯ ಅಸ್ಮಿತೆಯ ಸಂಕೇತವಾದ ಶ್ರೀರಾಮಮಂದಿರ ನಿರ್ಮಾಣದ ಈ ಪುಣ್ಯಕಾರ್ಯದಲ್ಲಿ ದೇಶದ ಎಲ್ಲ ಪ್ರಜೆಗಳೂ ಭಾಗಿಯಾಗುವ ಅವಕಾಶ ಒದಗಿಸುವ ದೃಷ್ಟಿಯಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಇದೀಗ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನವನ್ನು ಹಮ್ಮಿಕೊಂಡಿದೆ. ಎಂದು ವಿಶ್ವಹಿಂದೂ ಪರಿಷತ್ ತಿಳಿಸಿದೆ.