Header Ads Widget

Responsive Advertisement

ಗ್ರಾ.ಪಂ.ಚುನಾವಣೆ; ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರ


ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಸಂಬಂಧ ನಗರದ ಸಂತ ಜೋಸೆಫರ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳು (ಪಿಆರ್ಒ) ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ(ಎಪಿಆರ್ಒ) ಗುರುವಾರ ತರಬೇತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಚುನಾವಣಾ ವೀಕ್ಷಕರಾದ ಎ.ದೇವರಾಜು ಅವರು ನಗರದ ಸಂತ ಜೋಸೆಫರ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಗ್ರಾ.ಪಂ.ಚುನಾವಣೆ ಸಂಬಂಧ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಗ್ರಾ.ಪಂ.ಸಾರ್ವತ್ರಿಕ ಚುನಾವಣೆಯು ಪಕ್ಷರಹಿತ ಚುನಾವಣೆಯಾಗಿದ್ದು, ಅದರಂತೆ ಕರ್ತವ್ಯ ನಿರ್ವಹಿಸಬೇಕು. ಮತಗಟ್ಟೆ ಕೇಂದ್ರಗಳಲ್ಲಿ ಮತದಾನದ ಮೇಲ್ವಿಚಾರಣೆ ಹಾಗೂ ಮತದಾನ ಯಾವುದೇ ಅಡೆತಡೆಯಿಲ್ಲದೆ ಸುಗಮ ಹಾಗೂ ಶಾಂತ ರೀತಿಯಲ್ಲಿ ಚುನಾವಣೆ ನಡೆಸಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯತ್ ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ಚುನಾವಣೆಗೆ ನಿಯೋಜಿಸಿರುವ ಪ್ರತೀ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಚುನಾವಣಾ ಕಾರ್ಯದಲ್ಲಿ ಲೋಪ ಕಂಡುಬರದಂತೆ ಎಚ್ಚರಿಕೆ ವಹಿಸಬೇಕು. ಆ ದಿಸೆಯಲ್ಲಿ ಗ್ರಾ.ಪಂ.ಚುನಾವಣೆ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅವರು ಕೋರಿದರು.
ಕೋವಿಡ್-19 ಹಿನ್ನೆಲೆ ಮಾಸ್ಕ್, ಕೈಗವಸು ಧರಿಸುವುದು, ಸ್ಯಾನಿಟೈಸರ್ ಬಳಸುವುದು. ಮಸ್ಟರಿಂಗ್ ದಿನದಂದು ಮುಂಚಿತವಾಗಿ ಆಗಮಿಸುವುದು, ತಂಡದ ಸದಸ್ಯರನ್ನು ಪರಿಚಯ ಮಾಡಿಕೊಳ್ಳುವುದು, ಚುನಾವಣಾ ಸಾಮಗ್ರಿ ಸರಿಯಾಗಿದೆಯೇ ಎಂದು ಖಾತರಿಪಡಿಸಿಕೊಳ್ಳುವುದು, ಗುರುತು ಮಾಡಲಾದ ಮತ್ತು ಇತರ ಮತದಾರರ ಪಟ್ಟಿ ಅಳಿಸಲಾದ ಶಾಯಿ, ಮತಪತ್ರಗಳು, ವಿಶೇಷ ಗುರುತಿನ ರಬ್ಬರ್ ಮೊಹರು, ನಮೂನೆಗಳ ಪುಸ್ತಕ, ಮತ್ತಿತರವನ್ನು ಪರಿಶೀಲಿಸಿಕೊಳ್ಳುವುದು. ಮತಗಟ್ಟೆಯಲ್ಲಿ ನಿಗದಿಯಾದ ಮತಗಟ್ಟೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು, ಮತಗಟ್ಟೆ ಹೊರಗೆ ಮತದಾರರಿಗೆ ಸಾಲು ನಿಲ್ಲಲು ಸಾಕಷ್ಟು ಸ್ಥಳಾವಕಾಶ ಇರುವಂತೆ ನೋಡಿಕೊಳ್ಳುವುದು. ಮಹಿಳಾ ಮತ್ತು ಪುರುಷ ಮತದಾರರಿಗೆ ಪ್ರತ್ಯೇಕ ಸಾಲು ಹೀಗೆ ಹಲವು ಕಾರ್ಯಗಳ ಬಗ್ಗೆ ಗಮನಹರಿಸಬೇಕು ಎಂದರು.
ಗ್ರಾ.ಪಂ.ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ತರಬೇತಿದಾರರಾದ ಕೆ.ಜೆ.ದಿವಾಕರ, ಕೆ.ಸಿ.ದಯಾನಂದ, ಪ್ರಶಾಂತ್, ವಿಲ್ಫ್ರೆಡ್ ಕ್ರಾಸ್ತಾ, ನಾರಾಯಣ ರೆಡ್ಡಿ ಇತರರು ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು, ಮತಗಟ್ಟೆ ಕೇಂದ್ರದಲ್ಲಿ ಮತದಾನಕ್ಕೂ ಮೊದಲು ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಮತ್ತಿತರ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಿದರು.

ಮಸ್ಟರಿಂಗ್ ದಿನದಂದು ಮತಗಟ್ಟೆಯ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ನಿಗಧಿತ ಸಮಯಕ್ಕೆ ಹಾಜರಾಗುವುದು. ಮಸ್ಟರಿಂಗ್ ಸ್ಥಳಕ್ಕೆ ಆಗಮಿಸಿದ ಕೂಡಲೇ ತಮ್ಮ ತಮ್ಮ ಮತಗಟ್ಟೆಗಳಿಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ಸೇರಿಕೊಂಡು ಪರಿಚಯ ಮಾಡಿಕೊಳ್ಳುವುದು. ಹಾಜರಿ ಪುಸ್ತಕದಲ್ಲಿ ಸಹಿ ಮಾಡುವುದು, ಮತಗಟ್ಟೆ ಪ್ರಿಸೈಡಿಂಗ್ ಅಧಿಕಾರಿ ಅಥವಾ ಇತರೆ ಸಿಬ್ಬಂದಿ ಗೈರು ಹಾಜರಿದ್ದಲ್ಲಿ ಸಹಾಯಕ ಚುನಾವಣಾಧಿಕಾರಿ ಅಥವಾ ತಹಶೀಲ್ದಾರ್ ಗಮನಕ್ಕೆ ತರುವುದು ಮತ್ತು ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು. ತಮ್ಮ ಮತಗಟ್ಟೆ ಬಗ್ಗೆ ಮಸ್ಟರಿಂಗ್ ಕೇಂದ್ರದಲ್ಲಿ ಪ್ರಚುರಪಡಿಸಿದ ಪಟ್ಟಿಯನ್ನು ನೋಡಿಕೊಳ್ಳುವುದು.
ನೋಡಲ್ ಅಧಿಕಾರಿಗಳಾದ ಪಿ.ಶ್ರೀನಿವಾಸ, ವಿರುಪಾಕ್ಷ, ತಹಶೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕರಾದ ವಿನು, ಚುನಾವಣಾ ವೀಕ್ಷಕರ ಸಂಪರ್ಕ ಅಧಿಕಾರಿ ಪ್ರಮೋದ್, ಕಂದಾಯಾಧಿಕಾರಿಗಳು, ಪಿಆರ್ಒ ಮತ್ತು ಎಪಿಆರ್ಒ ಮತ್ತಿತರರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.