Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೇಕೇರಿಯಲ್ಲಿ 09 ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರ


ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮ ದಿನದ (ಸುಶಾಸನ್ ದಿವಸ್) ಪ್ರಯುಕ್ತ  ಮೇಕೇರಿಯ ಸ್ವಾಗತ ಯುವಕ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 09 ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮಡಿಕೇರಿ ಸಮೀಪದ ಮೇಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ನಡೆಯಿತು. 

 ಕಾರ್ಯಕ್ರಮವನ್ನು ಮೇಕೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಉದ್ಘಾಟಿಸಿದರು. ನಂತರ ಮಾತನಾಡಿ ಅವರು ಮೇಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾಗತ ಯುವಕ ಸಂಘ ಮತ್ತು ಗ್ರಾಮದ ಯುವಕರು ಕೈಗೊಂಡಿರುವ ಕಾರ್ಯಕ್ರಮಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ತಂದಿದೆ. ಇಂತಹ ಸಮಾಜಮುಖಿ ಕಾರ್ಯಗಳು ಮತ್ತಷ್ಟು ನಡೆಸುವಂತಾಗಲಿ ಎಂದು ಶುಭಹಾರೈಸಿದರು. 

 ಜಿಲ್ಲಾ ರಕ್ತನಿಧಿ ಘಟಕದ ಡಾ. ಕರುಂಬಯ್ಯ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕಳೆದ 08 ವರ್ಷಗಳಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವ ಸ್ವಾಗತ ಯುವಕ ಸಂಘದ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ರಕ್ತದಾನದ ಮಹತ್ವದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಯುವಕರು ಹೆಚ್ಚಾಗಿ ರಕ್ತದಾನ ಮಾಡಲು ಮುಂದಾಗಬೇಕೆಂದು ಕರೆ ನೀಡಿದ ಅವರು ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಆಯೋಜನೆಗೊಳಿಸುವ ಮೂಲಕ ರಕ್ತದಾನದ ಅರಿವು ಮೂಡಿಸುತ್ತಿರುವ ಸ್ವಾಗತ ಯುವಕ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿದರು. 

  ಕಾರ್ಮಿಕ ಇಲಾಖೆಯ ಅಧಿಕಾರಿ ಯತ್ನಿಟ್ಟಾ ಮಾತನಾಡಿ ಕಾರ್ಮಿಕ ಇಲಾಖೆಯಿಂದ  ಕಾರ್ಮಿಕರಿಗೆ ದೊರಕುವ ವಿವಿಧ ಯೋಜನೆಗಳ ಮಾಹಿತಿ ನೀಡಿ ಕಾರ್ಮಿಕರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಮುಂದೆ ಬರುವಂತೆ ಕರೆ ನೀಡಿದರು. 

 ಹಾಕತ್ತೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಸ್ವಾಗತ  ಯುವಕ ಸಂಘದ ಗೌರವ ಸಲಹೆಗಾರರಾದ ಪಿ.ಯಂ. ದಾಮೋದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಸಂದೀಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ...ಇಡೀ ರಾಜ್ಯಕ್ಕೆ ಮಾದರಿಯೆನಿಸುವ ರೀತಿಯಲ್ಲಿ ಸರಕಾರದ ಯೋಜನೆಯೊಂದರ ಮೂಲಕ ಮೇಕೇರಿಯ ಸುಭಾಸ್ ನಗರದ ಅಂಗನವಾಡಿಯಲ್ಲಿ ಸುಂದರ ಉದ್ಯಾನವನ ನಿರ್ಮಿಸುವ ಮೂಲಕ ಸರಕಾರದ ಯೋಜನೆಯೊಂದನ್ನು ಎಷ್ಟು ಅಚ್ಚುಕಟ್ಟಾಗಿ ಮಾಡಬಹುದೆಂಬುವುದನ್ನು ಇಡೀ ರಾಜ್ಯಕ್ಕೆ ತೋರಿಸಿಕೊಟ್ಟ ಯುವಕ ಸಂಘದ ಕಾರ್ಯವು  ಸಮಾಜಕ್ಕೆ ಮಾದರಿಯಾಗಿದೆ ಎಂ ದರು.  


ವೇದಿಕೆಯಲ್ಲಿ ಮೇಕೇರಿ ಗ್ರಾಮ ಪಂಚಾಯತ್ ಸದಸ್ಯರಾದ ಕೀರ್ತನ್, ಶುಭ, ಸುಶೀಲಾ ಮಧು, ನಿವೃತ್ತ ಶುಶ್ರೂಷಕಿ ರಾಜಮ್ಮ, ಸ್ವಾಗತ ಯುವಕ ಸಂಘದ ಅಧ್ಯಕ್ಷ ಜೆ. ಹರೀಶ, ಮೇಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕುಸುಮಾವತಿ, ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರಫೀಕ್ ಯುವಕ ಸಂಘಗಳ ಪದಾಧಿಕಾರಿಗಳು ಇದ್ದರು. 

 ಸ್ವಯಂ ಪ್ರೇರಿತ ರಕ್ತದಾನದ ಶಿಬಿರ ಪ್ರಯುಕ್ತ ಮೇಕೇರಿ ಮತ್ತು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ  ಮಹಿಳೆಯರು, ಯುವಕರು ಸೇರಿದಂತೆ ಒಟ್ಟು ೫೦ ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು.


Search Coorg Media: Coorg's Largest Online Media Network