Ad Code

Responsive Advertisement

"ಮತದಾರರನ್ನು ಸಬಲೀಕರಣಗೊಳಿಸುವುದು, ಜಾಗರೂಕತೆ, ಸುರಕ್ಷಿತ ಮತ್ತು ಮಾಹಿತಿ ನೀಡುವುದು"

11ನೇ ರಾಷ್ಟ್ರೀಯ ಮತದಾರರ ದಿನದ ವಿಶೇಷ ಲೇಖನ:


ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಮುಖ್ಯ ಚುನಾವಣಾ ಆಯೋಗ ಜ 25 ರಂದು 11ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುತ್ತಿದ್ದು, 'ಮತದಾರರನ್ನು ಸಬಲೀಕರಣಗೊಳಿಸುವುದು, ಜಾಗರೂಕತೆ, ಸುರಕ್ಷಿತ ಮತ್ತು ಮಾಹಿತಿ ನೀಡುವುದು' ಈ ವರ್ಷದ ದಿನಾಚರಣೆಯ ಘೋಷವಾಕ್ಯವಾಗಿದೆ.

1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಮೊದಲ ಬಾರಿ 2011ರಲ್ಲಿ ಆಚರಿಸಲಾಗಿತ್ತು. ಬಳಿಕ ಪ್ರತಿ ವರ್ಷ ಆಚರಿಸುತ್ತಾ ಬರಲಾಗಿದೆ. ಭಾರತೀಯ ಚುನಾವಣಾ ಆಯೋಗವು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ. ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆಗಳು, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿ.

ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತಿದೆ. ವಿದ್ಯಾವಂತರು ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ನಿರ್ಲಕ್ಷ್ಯಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮತದಾನ ಜವಾಬ್ದಾರಿಯ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರಿಗೆ ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು, 18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಹಾಗೂ ಅವರಲ್ಲಿ ಮತದಾನದ ಹಕ್ಕು ಪಡೆಯುವಂತೆ ಸ್ಫೂರ್ತಿ ನೀಡುವುದು, ಆ ಹಕ್ಕಿನ ಕುರಿತು ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನದ ಉದ್ದೇಶವಾಗಿದೆ.

ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ. ಭಾಷಣ ಸ್ಪರ್ಧೆ, ಮತದಾನ ಜಾಗೃತಿ ಅಭಿಯಾನ, ಮತದಾರರ ಗುರುತಿನ ಚೀಟಿ ವಿತರಣೆ, ಛಾಯಾಚಿತ್ರ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದೂ, ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದೂ ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ. ಇದು ಮತದಾರರ ದಿನದಂದು ಸ್ವೀಕರಿಸಬೇಕಾದ ಪ್ರತಿಜ್ಞೆಯಾಗಿದೆ.