ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಶಿಕ್ಷಣ ಇಲಾಖೆ ಹಾಗೂ ನಗರದ ರೋಟರಿ ಮಿಸ್ಟಿ ಹಿಲ್ಸ್ ನ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶನಿವಾರ ನಡೆದ ಕೊಡಗು ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿ, ಯುವ ವಿಜ್ಞಾನಿ ಎನ್.ಎನ್.ನಿರುತ್ ಗೆ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಪ್ರಶಸ್ತಿ ಲಭಿಸಿದೆ.
ಮಾರ್ಗದರ್ಶಿ ಶಿಕ್ಷಕಿ ಪಿ.ಎಸ್. ಪೊನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಂಬ " ಔಷಧಿ ಸಲುವಾಗಿ ಜಿಗಣೆ ಸಾಕಣೆ "( Pink Rehabilitation leech forming ) ಎಂಬ ವಿಷಯದ ಕುರಿತು ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ನಿರುತ್, ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಮಾರ್ಗದರ್ಶಿ ಶಿಕ್ಷಕ ಎ.ಎಸ್. ಕಿರಣ್ ಕುಮಾರ್ ಮಾರ್ಗದರ್ಶನದಲ್ಲಿ " ನೀರಿನಲ್ಲಿ ಮುಳುಗಿರುವ ಮೃತದೇಹಗಳ ಪತ್ತೆಗಾಗಿ ಕಾಲ್ಪನಿಕ ವಿಧಾನ ಮತ್ತು ವನ್ಯಜೀವಿಗಳಿಂದ ಬೆಳೆಗಳನ್ನು ರಕ್ಷಿಸುವ ವಿಧಾನ " ಎಂಬ ವಿಷಯ ಕುರಿತು ವೈಜ್ಞಾನಿಕ ಪ್ರಬಂಧ ಮಂಡಿಸಿದ ಶನಿವಾರಸಂತೆಯ ಸೆಕ್ರೆಡ್ ಹಾರ್ಟ್ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ, ಯುವ ವಿಜ್ಞಾನಿ ಎ.ಕೆ.ಹರ್ಷಿತ್ ದ್ವಿತೀಯ ಸ್ಥಾನ ಗಳಿಸಿದ್ದಾನೆ.
ಪ್ರಥಮ ಸ್ಥಾನ ಪಡೆದ ನಿರುತ್ ಗೆ ರೂ.5 ಸಾವಿರ ನಗದು ಬಹುಮಾನ ಮತ್ತು ದ್ವಿತೀಯ ಸ್ಥಾನ ಪಡೆದ ಹರ್ಷಿತ್ ಗೆ.ರೂ.3 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಯುವ ವಿಜ್ಞಾನಿ ಎನ್.ಎನ್.ನಿರುತ್, ನಗರದ ಜಿಲ್ಲಾಸ್ಪತ್ರೆಯ ಸರ್ಜನ್ ನೆರೆಯನ ಎಸ್.ನವೀನ್ ಹಾಗೂ ಜಿಲ್ಲಾಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಿ.ಕೆ. ರಾಜೇಶ್ವರಿ ದಂಪತಿಯ ಪುತ್ರ.
ವಿದ್ಯಾರ್ಥಿ ಎ.ಕೆ.ಹರ್ಷಿತ್, ಸೋಮವಾರಪೇಟೆ ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮದ ಅಮ್ಮಾಜೀರ ಎಸ್. ಕಿರಣ್ ಕುಮಾರ್ ಮತ್ತು ಕೆ.ಕೆ.ಸವಿತಾ ದಂಪತಿಯ ಪುತ್ರ.
ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ : ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ವಿದ್ಯಾರ್ಥಿಗಳು ಇಂದಿನ ಸ್ಪರ್ಧಾ ಜಗತ್ತಿನಲ್ಲಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಿಕೊಂಡು ವೈಜ್ಞಾನಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಶಿಕ್ಷಣ ಇಲಾಖೆ ಮೂಲಕ ಹಮ್ಮಿಕೊಳ್ಳುತ್ತಿರುವ ಉತ್ತಮ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಜ್ಞಾನ ಹೊಂದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ಟ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ.ಬೇಬಿಮಾಥ್ಯೂ ಮಾತನಾಡಿ, ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಸಂಘಟಿಸಲಾಗುತ್ತಿರುವ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ಕೊಡಗಿನ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕೊಡಗು ಜಿಲ್ಲೆಗೆ ಕೀರ್ತಿ ತರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಸಂಘಟಕರೂ ಆದ ವಿಜ್ಞಾನ ಪರಿಷತ್ತಿನ ಕೇಂದ್ರ ಸಮಿತಿಯ ಮಾಜಿ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿಜ್ಞಾನ ಪರಿಷತ್ತಿನಿಂದ ಜಿಲ್ಲೆಯಲ್ಲಿ ವೈಜ್ಞಾನಿಕ ಹಾಗೂ ಪರಿಸರ ಚಟುವಟಿಕೆಗಳನ್ನು ಸಂಘಟಿಸಲಾಗುತ್ತಿದೆ ಎಂದರು.
ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ಶಿಕ್ಷಕ ಜಿ.ಶ್ರೀನಾಥ್, ವಿದ್ಯಾರ್ಥಿಗಳು ಉತ್ತಮ ವೈಜ್ಞಾನಿಕ ಯೋಜನೆಗಳನ್ನು ಹೇಗೆ ಸಂಶೋಧನಾತ್ಮಕವಾಗಿ ತಯಾರಿಸಿ ಮಂಡಿಸಬೇಕು ಎಂಬ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಎಸ್.ಟಿ.ವೆಂಕಟೇಶ್ ಹಾಗೂ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಕಮೀಷನರ್ ಜಿಮ್ಮಿ ಸಿಕ್ವೇರಾ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು.
ಸ್ಪರ್ಧಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ಸೋಮವಾರಪೇಟೆ ತಾಲ್ಲೂಕು ಸರ್ಕಾರಿ ನಿರ್ದೇಶಕ ಕೆ.ಎಸ್. ಪ್ರಸನ್ನಕುಮಾರ್, ವಿಜ್ಞಾನ ಕಾರ್ಯಕರ್ತ ಸಾಗರ್ ತೊರೆನೂರು, ಮಾರ್ಗದರ್ಶಿ ಶಿಕ್ಷಕರಾದ ಪಿ.ಎಸ್.ಪೊನ್ನಮ್ಮ, ಎ.ಎಸ್.ಕಿರಣ್ ಕುಮಾರ್ ಇದ್ದರು.
ಸುದ್ದಿ-ಚಿತ್ರ: ಟಿ.ಜಿ.ಪ್ರೇಮಕುಮಾರ್
Search Coorg Media: Coorg's Largest Online Media Network