ಮಡಿಕೇರಿ ನಗರಸಭೆಯ 23 ವಾರ್ಡ್‍ಗಳಿಗೆ ಎ.27 ರಂದು ಮತದಾನ ನಡೆಯುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿದಂತೆ ಒಟ್ಟು 109 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ನಗರಸಭೆಯ 23 ವಾರ್ಡ್‍ಗಳಿಗೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಸ್.ಡಿ.ಪಿ.ಐ ಪಕ್ಷ 9, ಆಮ್ ಆದ್ಮಿ ಪಾರ್ಟಿ 4 ಮತ್ತು ಕರ್ನಾಟಕ ರಾಷ್ಟ್ರ ಸಂಘ ಪಕ್ಷ 1 ವಾರ್ಡ್‍ಗೆ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿವೆ. ವಿವಿಧ ಪಕ್ಷಗಳಿಂದ ಒಟ್ಟು 82 ಮಂದಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರೆ, 27 ಮಂದಿ ಪಕ್ಷೇತರರು ಕೂಡ ಚುನಾವಣಾ ಅಖಾಡದಲ್ಲಿದ್ದಾರೆ.
ಕೆಲವು ವಾರ್ಡ್‍ಗಳಲ್ಲಿ ನೇರಾ ನೇರ ಮತ್ತೆ ಕೆಲವು ಕಡೆ ತ್ರಿಕೋನ ಸ್ಪರ್ಧೆ ಮತ್ತು ಬಂಡಾಯ ಅಭ್ಯರ್ಥಿಗಳು ಕೂಡ ಪ್ರಭಲ ಸ್ಪರ್ಧೆ ನೀಡಲಿದ್ದಾರೆ. ಯಾವುದೇ ವಾರ್ಡ್‍ಗಳಲ್ಲೂ ಬಹುಮತದಿಂದ ವಿಜಯ ಸಾಧಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ 27 ಅಭ್ಯರ್ಥಿಗಳು ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಿರುವುದು ವಿಶೇಷ. ಯಾರಿಗೂ ಕಮ್ಮಿ ಇಲ್ಲ ಎಂಬಂತೆ ತಮ್ಮ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದ್ದಾರೆ. ಪಕ್ಷದ ಮುಖಂಡರು ಬಹುತೇಕ ಪಕ್ಷೇತರರನ್ನು ಸಮಾಧಾನಪಡಿಸಲು ಪ್ರಯತ್ನ ನಡೆಸಿದ್ದರೂ ಕೊನೆ ಕ್ಷಣದವರೆಗೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರು ಕೂಡ ನಗರಸಭೆ ಚುನಾವಣಾ ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಮತಗಳನ್ನು ವಿಭಜಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 21 ನೇ ವಾರ್ಡ್‍ನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಮಂಗಳಮುಖಿ ದೀಕ್ಷಾ ಅವರು ಕೂಡ ಚುನಾವಣಾ ಕಣದಲ್ಲಿ ಗಮನ ಸೆಳೆದಿದ್ದಾರೆ.
ಏ.27ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಏ.30ರಂದು ಮತ ಎಣಿಕೆ ಕಾರ್ಯ ಮಡಿಕೇರಿಯಲ್ಲಿ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲಾ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬಹಿರಂಗವಾಗಲಿದೆ.
ಕೋವಿಡ್-19 ಪಾಸಿಟಿವ್ ಕಂಡು ಬಂದಿರುವ ಮತದಾರರು ಮತಹಕ್ಕು ಚಲಾಯಿಸುವಂತಾಗಲು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಮತದಾನದಂದು ಸಂಜೆ 4 ರಿಂದ 5 ಗಂಟೆ ಅವಧಿಯಲ್ಲಿ ಮತ ಹಕ್ಕು ಚಲಾಯಿಸಬಹುದಾಗಿದೆ ಎಂದು ಮಡಿಕೇರಿ ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 26,619 ಮತದಾರರಿದ್ದು, ಇವರಲ್ಲಿ 13,011 ಪುರುಷ ಮತದಾರರು ಮತ್ತು 13,606 ಮಹಿಳಾ ಮತದಾರರು ಇದ್ದಾರೆ. ಇತರೆ 2 ಮತದಾರರು ಇದ್ದಾರೆ.
Search Coorg Media
Coorg's Largest Online Media Network