Header Ads Widget

ಸರ್ಚ್ ಕೂರ್ಗ್ ಮೀಡಿಯ

ಜಿಲ್ಲೆಯಲ್ಲಿ ಕೋರೊನ ಸೋಂಕು ಸ್ಪೋಟಗೊಳ್ಳಲು ಜಿಲ್ಲಾಡಳಿತವೇ ಅವಕಾಶ ಮಾಡಿಕೊಡುತ್ತಿದೆಯಾ..?!

ಜಿಲ್ಲೆಯಲ್ಲಿ ಕೋರೊನ ಸೋಂಕು ಸ್ಪೋಟಗೊಳ್ಳಲು ಜಿಲ್ಲಾಡಳಿತವೇ ಅವಕಾಶ ಮಾಡಿಕೊಡುತ್ತಿದೆಯಾ..?!


ಕೋರೊನ ಕೋರೊನ  ಎನ್ನುತ್ತಾ ಮಳೆಗಾಲದ ಪೂರ್ವ ತಯಾರಿಯನ್ನು ಮರೆತು ಬಿಟ್ಟಿತೇ ಜಿಲ್ಲಾಡಳಿತ... ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಸಮಾಧಾನ



ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋರೊನ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಸಾವು ನೋವುಗಳು ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದನ್ನು ಹತೋಟಿಗೆ ತರಬೇಕಾದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ದಿವಸಕ್ಕೊಂದು ಮಾತ್ರವಲ್ಲ ಗಂಟೆಗೊಂದು ನಿಯಮಗಳನ್ನು ಜಾರಿಗೆ ತರುತ್ತಿದ್ದು, ಈಗಾಗಲೇ ಕೊಡಗು ಜಿಲ್ಲೆ ಕೋರೊನ ಹರಡುವಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನು ಕೋರೊನ ನೆಗೆಟಿವ್ ಮುಕ್ತ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂದಿನ ಪರಿಸ್ಥಿತಿಯನ್ನು ನೋಡಿದ್ದಾಗ ಜಿಲ್ಲಾಡಳಿತವೇ ಸೋಂಕು ಅಧಿಕ ಮಾಡಲು ಹೊರಟಿದೆಯಾ ಎಂದು ಸಂಶಯ ಮೂಡುತ್ತಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಮ್ಮ ಆಸಮದಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿದ್ದು, ಕೂಡಲೇ ಎಲ್ಲಾವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಅವರು ಎಚ್ಚರಿಸಿದರು.

ಕೋರೊನ ಮುಕ್ತವಾಗಿ ಶಾಂತವಾಗಿದ್ದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿ ಸೋಂಕು ಹರಡಲು ಅವಕಾಶ ಮಾಡಿಕೊಡಲಾಯಿತು. ನಂತರದ ದಿನಗಳಲ್ಲಿ ನಡೆದ ಮದುವೆಯ ಕಾರ್ಯಕ್ರಮಗಳು ಹಾಗೂ ಹಬ್ಬಗಳು ಈ ಸೋಂಕು ಇನ್ನಷ್ಟು ಅಧಿಕವಾಗುವಂತೆ ಮಾಡಿತು. ಇದೀಗ ಲಾಕ್ ಡೌನ್ ಕರ್ಫ್ಯೂ ನೆಪದಲ್ಲಿ ಜಿಲ್ಲೆಗೆ ವಿಭಿನ್ನವಾದ ಕಾನೂನನ್ನು ತಂದು ಪಟ್ಟಣದಲ್ಲಿ ಜನಜಂಗುಳಿ ಏರ್ಪಡುವಂತೆ ಮಾಡಿದ್ದು ಇದು ಮತ್ತಷ್ಟು ಸೋಂಕು ಹರಡಲು ಕಾರಣವಾಗಿದೆ ಎಂದರೆ ತಪ್ಪಲ್ಲ. ಎಸಿ ರೂಮಿನಲ್ಲಿ ಕುಳಿತು ಉಪದೇಶ ಕೊಡುವವರಿಂದ ಉಪದೇಶ ಪಡೆದು ಕೊಡಗನ್ನು ಈ ರೀತಿ ಮಾಡಿದಂತೆ ಕಾಣುತ್ತಿದೆ. ಒಮ್ಮೆ ಮಂಗಳವಾರ ಶುಕ್ರವಾರ ಎನ್ನುವ ಹೇಳಿಕೆ ನೀಡುವ ಜಿಲ್ಲಾಡಳಿತ ಕೆಲವೇ ಗಂಟೆಗಳಲ್ಲಿ ಆ ಆದೇಶವನ್ನು ಬದಲು ಮಾಡಿ ಸೋಮವಾರ ಮತ್ತು ಶುಕ್ರವಾರ ಎಂಬ ಹೇಳಿಕೆ ನೀಡುತ್ತದೆ. ಸಾರ್ವಜನಿಕರ ವಾಹನಗಳನ್ನು ಪಟ್ಟಣದಿಂದ ಸುಮಾರು ಒಂದುವರೆ ಎರಡು ಕಿ.ಮಿ ದೂರ ನಿಲ್ಲಿಸಿ ಕಾಲು ನಡಿಗೆಯಲ್ಲಿ ಹೋಗಲು ಸೂಚಿಸಿದ್ದು, ಸೋಮವಾರ ಜಿಲ್ಲೆಯಾದ್ಯಂತ ಪಟ್ಟಣಗಳಲ್ಲಿ ದಸರಾ ಜಂಬೂ ಸವಾರಿ ವೀಕ್ಷಣೆಗೆ ಹೋಗುತ್ತಿರುವವರಂತೆ ಜನರು ಕಾಣುತ್ತಿದ್ದರು. ತಮ್ಮ ಗ್ರಹಬಳಕೆಯ ಸಾಮಾನುಗಳನ್ನು ಮಾಡಿಕೊಂಡು ಬರುವಾಗ, ಪಾಪ ಕತ್ತೆಗಳ ಮೇಲೆ ಭಾರವನ್ನು ಹೊರಿಸಿ ಕಳುಹಿಸಿದಂತೆ ತಲೆಯಲ್ಲಿ ಕೈಯಲ್ಲಿ ಸೊಂಟದಲ್ಲಿ ಅಗತ್ಯ ವಸ್ತುಗಳನ್ನು ತರುವುದು ನೋಡಿದ್ದಾಗ ಅಯ್ಯೋ ಎನಿಸುತ್ತಿತ್ತು. 

ಜನರಿಂದ ಜನರಿಗೋಸ್ಕರ ಇರುವ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಜನರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ಕೆಲವು ಮನೆಗಳಲ್ಲಿ ಕೇವಲ ವಯೋ ವೃದ್ಧರೇ ಇರುತ್ತಾರೆ, ಮತ್ತೆ ಕೆಲವೆಡೆ ಹೆಂಗಸರು ಮಾತ್ರ ಇರುತ್ತಾರೆ, ಇನ್ನು ಕೆಲವು ಮನೆಗಳಲ್ಲಿ ಅಂಗವಿಕಲರು ಹಾಗೂ ವಯಸ್ಸಿಗೆ ಬಂದಿರುವ ಹೆಣ್ಣುಮಕ್ಕಳು ಮಾತ್ರ ಇರುತ್ತಾರೆ, ಇವರ ಪರಿಸ್ಥಿತಿ ಏನೂ ಎಂಬ ಬಗ್ಗೆ ಚಿಂತಿಸಬೇಕಿದೆ. ವಯಸ್ಸಾದವರು ಈ ಬಾರವನ್ನು ಹೊತ್ತು ಕಿ.ಮಿ ದೂರ ಹೇಗೆ ಸಾಗುತ್ತಾರೆ, ಹೆಂಗಸರ ತೊಂದರೆಗಳು ಹಲವಾರು ಇರುತ್ತೆ, ಮುಟ್ಟಿನ ಸಮಯವಿರಲಿ ಅಥವಾ ಗರ್ಭಿಣಿಯಾದವರ ಪತಿ ಹೊರ ಜಿಲ್ಲೆಯಲ್ಲಿದ್ದರೆ ಇವರು ಏನೂ ಮಾಡಬೇಕು ಎಂಬ ಕನಿಷ್ಠ ಜ್ಞಾನ ಜಿಲ್ಲಾಡಳಿತಕ್ಕೆ ಇಲ್ಲದೆ ಹೋಗಿರುವುದು ದುರಾದೃಷ್ಟ. ಇದೆಲ್ಲಾದರ ನಡುವೆ ಮಳೆ ಬಂದರೆ ಏನೂ ಗತಿ ಎಂಬ ಚಿಂತೆಯಿಲ್ಲದೆ ಆದೇಶ ಹೊರಡಿಸುವ ಬದಲು ಸಾಧಕ ಬಾಧಕಗಳ ಬಗ್ಗೆ ಚಿಂತಿಸಬೇಕಿದೆ ಎಂದು ಪ್ರವೀಣ್ ಉತ್ತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಕೂಡಲೇ ಈ ಆದೇಶವನ್ನು ಜಿಲ್ಲಾಡಳಿತ ಹಿಂಪಡೆದು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಹಾಗೂ ಸೋಂಕು ಹರಡದಂತೆ ನೋಡಿಕೊಳ್ಳಬೇಕಿದೆ. ಒಂದೋ ರಾಜ್ಯಾದ್ಯಂತ ಇರುವ ಕಾನೂನನ್ನು ಜಿಲ್ಲೆಗೂ ವಿಸ್ತರಿಸಿ. ಇಲ್ಲವೆಂದರೆ ವಾರದಲ್ಲಿ ಎರಡು ದಿವಸ ಸಂಪೂರ್ಣ ಸಡಿಲಿಕೆ ಮಾಡಿ ಬೆಳಿಗ್ಗೆ 6ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯಲು ಅವಕಾಶ ಕೊಡಿ ಇದರಿಂದ ಜನಜಂಗುಳಿ ಏರ್ಪಡುವುದಿಲ್ಲ. ಇಲ್ಲವೇ  ವಾರದಲ್ಲಿ ಕೇವಲ ಒಂದೇ ದಿವಸ ಬೆಳಿಗ್ಗೆ6ರಿಂದ ಸಂಜೆ 6ಗಂಟೆಯವರೆಗೆ ಅವಕಾಶ ಕಲ್ಪಿಸಿ. ಪಟ್ಟಣಕ್ಕೆ ಸೇರುವ ಒಂದೊಂದು ರಸ್ತೆಯ ಭಾಗಕ್ಕೆ ಒಂದು ಸಮಯವನ್ನು ಗೊತ್ತುಪಡಿಸಿ ರಸ್ತೆಯನ್ನು ಬಂದ್ ಮಾಡಿ, ತುರ್ತು ಸಂದರ್ಭದಲ್ಲಿ ಮಾತ್ರ ಬಿಡುವ ವ್ಯವಸ್ಥೆ ಆಗಲಿ ಹಾಗೂ ಬಾಡಿಗೆ ವಾಹನಗಳ ಸಂಚಾರಕ್ಕೆ ಆ ಸಮಯದಲ್ಲಿ ಅನುವು ಮಾಡಿಕೊಡಿ ಇಲ್ಲವೆಂದರೆ ವಾಹನವಿಲ್ಲದವರು ಓಡಾಡುವುದಾದರೂ ಹೇಗೆ. ಇರುವ ಅಂಗಡಿಗಳು ಇರುವ ಜಾಗದಲ್ಲಿಯೇ ಇರಲಿ ಜನರ ವಾಹನ ಓಡಾಡಡಲು ಮುಕ್ತ ಅವಕಾಶ ಕೊಡಿ ಸುಮ್ಮನೆ ಪದೇ ಪದೆ ಓಡಾಡುವ ವಾಹನಗಳನ್ನು ಮೊದಲು ಎಚ್ಚರಿಕೆ ನೀಡಿ ನಂತರ ವಶಕ್ಕೆ ಪಡೆಯಿರಿ.  ಅದು ಬಿಟ್ಟು ಈ ರೀತಿ ಅವೈಜ್ಞಾನಿಕ ವ್ಯವಸ್ಥೆ ಮಾಡಿ ಸೋಂಕು ಹರಡಲು ಜಿಲ್ಲಾಡಳಿತವೇ ಸಹಾಯ ಮಾಡಿ ಕೊಡಬೇಡಿ.

ಹಾಗೇ ರೈತರಿಗೆ ಗೊಬ್ಬರ ಸೇರಿದಂತೆ ಇತರ ಪರಿಕರ ಕೊಂಡೊಯ್ಯಲು ಹಾಗೂ ಜಿಲ್ಲೆಯೊಳಗೆ ಆಳುಗಳನ್ನು ಕರೆದೊಯ್ಯಲು ಮುಕ್ತ ಅವಕಾಶ ನೀಡಿ ಅವರಿಗೆ ಯಾವುದೇ ತೊಂದರೆ ಕೊಡುವುದು ಬೇಡ. ಇದೀಗ ಬೆಳೆಗಾರನ ಒಂದು ವರ್ಷದ ಬದುಕು ಕಟ್ಟಿಕೊಳ್ಳುವ ಸಮಯವಾಗಿದೆ. ಹಾಗೇ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಅಗತ್ಯವಾಗಿದೆ. ಕೆಲವರು ಬೆಳಿಗಿನ ಜಾವ ಹಾಗೂ ಇತರ ಸಮಯಗಳಲ್ಲಿ ತಮ್ಮ ಪ್ರಭಾವ ಬಳಸಿ ಮತ್ತು ಗೇಟುಗಳಲ್ಲಿ ಕಣ್ಣು ತಪ್ಪಿಸಿ ಬಂದು ಹೋಗುತ್ತಿದ್ದು, ಇವರಿಂದ ಕೂಡ ಸೋಂಕು ಹರಡುತ್ತಿದೆ ಇದನೆಲ್ಲಾ ಸರಿ ಮಾಡುವುದು ಬಿಟ್ಟು ಅವೈಜ್ಞಾನಿಕ ವ್ಯವಸ್ಥೆ ಮಾಡುವುದು ಸರಿಯಲ್ಲ.

ಹಾಗೆ ಕೇವಲ ಕೋರೊನವೆಂದೇ ಅದರ ಹಿಂದೆ ಬಿದ್ದಿರುವ ಜಿಲ್ಲಾಡಳಿತ ಕೇವಲ ಕೆಲವೇ ದಿನಗಳಲ್ಲಿ ಬರುವ ಮಳೆಗಾಲವನ್ನು ಮರೆತಂತ್ತಿದೆ. ಕೋಟೆ ಕೊಳ್ಳೆ ಹೋದಮೇಲೆ ದಿಡ್ಡಿ ಭಾಗಿಲು ಹಾಕಿದ್ದರಂತೆ ಎಂದಾಗಬಾರದು. ಕೂಡಲೇ ಮಳೆಗಾಲದ ತಯಾರಿ ಮಾಡಿಕೊಳ್ಳಬೇಕಾಗಿದೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳನ್ನು ಜನಸಾಮಾನ್ಯರು ಎದುರಿಸುತ್ತಿದ್ದು, ಈ ವರ್ಷ ಎಲ್ಲಿ ಏನಾಗಲಿದೆ ಎಂಬ ಭಯ ಎಲ್ಲಾರನ್ನು ಕಾಡುತ್ತಿದೆ. ಇದರ ಯಾವುದೇ ಪೂರ್ವ ತಯಾರಿಯನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮಾಡಿಕೊಂಡಂತೆ ಕಾಣುತ್ತಿಲ್ಲ ಕೋರೊನ ಮುನ್ನೆಚ್ಚರಿಕೆಯ ಜೊತೆಗೆ ಮಳೆಗಾಲದ ತಯಾರಿಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network