Ad Code

Responsive Advertisement

"ನಮ್ಮ ಜೀವನದಲ್ಲಿ ಸೂರ್ಯ ಮರೆಯಾದನೆಂದು ನೀವು ಅತ್ತರೆ, ಹೊಳೆಯುವ ನಕ್ಷತ್ರಗಳು ಕಾಣಿಸಲು ಕಣ್ಣೀರು ಅಡ್ಡಿಯಾಗುತ್ತದೆ"

"ಯಾವಾಗ ಎಲ್ಲರೂ ಸತ್ಯ ಹೇಳಲು ಅಂಜಿ ಬಾಯಿ ಮುಚ್ಚಿಕೊಂಡಿರುತ್ತಾರೊ, ಆಗ ನೀನು ಒಂಟಿಯಾದರೂ ಸರಿ ಬಾಯಿತೆರೆದು ಮಾತಾಡು"

- ಗುರುದೇವ್‌ ರವೀಂದ್ರನಾಥ ಠಾಗೋರ್‌ನಮ್ಮ ರಾಷ್ಟ್ರಗೀತೆ “ಜನಗಣಮನ”ದ ಜನಕ ಠಾಗೋರ್ ಅಪ್ಪಟ ದೇಶಾಭಿಮಾನಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದುದಲ್ಲದೆ ದೇಶದ ಘನತೆಗೆ ಧಕ್ಕೆ ಬಂದಾಗ ತನಗೆ ದೊರಕಿದ ಅತ್ಯುನ್ನತ ಪ್ರಶಸ್ತಿಯನ್ನೇ ಹಿಂದಿರುಗಿಸಿದ ಮಹಾನ್ ಸ್ವಾಭಿಮಾನಿ.

ಮೂಲತಃ ಬಂಗಾಳದವರಾದ ರವೀಂದ್ರನಾಥ ಠಾಗೋರ್‌ 1861ರ ಮೇ 7ರಂದು ಕೊಲ್ಕತ್ತಾದ ಜೊರಸಂಕೊ ಭವನದಲ್ಲಿ ಜನಿಸಿದರು. ಇವರ ತಂದೆ ದೇವೇಂದ್ರನಾಥ ಠಾಗೋರ್‌, ತಾಯಿ ಶಾರದಾದೇವಿ.

ರವೀಂದ್ರನಾಥ ಠಾಗೋರ್‌ ಅವರಿಗೆ ಶಾಲೆಯಲ್ಲಿ ಕಲಿಸಲಾಗುವ ಯಾಂತ್ರಿಕ ಶಿಕ್ಷಣದ ಪರಿಪಾಠ ಇಷ್ಟವಾಗಲಿಲ್ಲ. ಯಾಂತ್ರಿಕ ಶಿಕ್ಷಣವನ್ನು ಹೊರತುಪಡಿಸಿ ಅವರು ನಿಸರ್ಗ, ಸೃಷ್ಟಿ ಹಾಗೂ ಅಧ್ಯಾತ್ಮದತ್ತ ತೆರಳಿದರು. ಈ ಕುರಿತ ಸೆಳೆತವೇ ಮುಂದೆ ಅವರನ್ನು ಸೂಕ್ಷ್ಮ ಸಂವೇದನೆಯುಳ್ಳ ಕಾವ್ಯ ರಚನೆಗೆ ದಾರಿ ಮಾಡಿತು. ಠಾಗೋರ್‌ ಅವರು ತಮ್ಮ ಬದುಕಿನುದ್ದಕ್ಕೂ ಕೇವಲ ಸಾಹಿತ್ಯ ರಚನೆ ಮಾತ್ರ ಮಾಡಲಿಲ್ಲ, ಇದನ್ನು ಹೊರತಾಗಿ ಸಾಮಾಜಿಕ ಕ್ರಾಂತಿಗೂ ಕರೆ ಕೊಟ್ಟರು. ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಬೇಕೆಂದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಗಾಂಧಿ ಪ್ರೇರಿತ ಅಹಿಂಸಾ ಹೋರಾಟದಲ್ಲಿ ಪಾಲ್ಗೊಂಡು, ಗಾಂಧಿಗೆ ಮಹಾತ್ಮ ಎಂದು ಕರೆದಿದ್ದು ಕೂಡ ಠಾಗೋರರೇ.

ಸ್ವಾತಂತ್ರ್ಯ ಹೋರಾಟದ ಜತೆ ಜತೆಗೆ ಅವರು ಸಮಾಜದಲ್ಲಿನ ಅನಿಷ್ಟಗಳ ವಿರುದ್ಧ ಹೋರಾಟ ಮಾಡಿದ ಫ‌ಲವಾಗಿ ಕೇರಳದ ಗುರುವಾಯೂರಿನಲ್ಲಿ ದಲಿತರ ದೇಗುಲ ಪ್ರವೇಶಕ್ಕೆ ನಾಂದಿಯಾಯಿತು. ಕನ್ನಡದ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಪು.ತಿ.ನ.ರಂತೆ ಶ್ರೇಷ್ಠ ಸಾಹಿತಿಗಳಿಗೆ ಠಾಗೋರ್‌ ಅವರ‌ ಬದುಕು ಹಾಗೂ ಬರಹ ಸ್ಫೂರ್ತಿಯಾಯಿತು.

ಭಾರತೀಯ ಲೇಖಕರಲ್ಲಿ ಯಾಕೆ ರವೀಂದ್ರನಾಥ ಟ್ಯಾಗೋರ್‌ ಮತ್ತೆ ಮತ್ತೆ ನೆನಪಾಗುತ್ತಾರೆ? ಅವರ ಕಥೆ, ಕಾದಂಬರಿ, ಕವನಗಳಿಂದ? ಶಾಂತಿನಿಕೇತನದ ಪ್ರಯೋಗದಿಂದ? ಗಾಂಧಿ ಜತೆ ಮಾಡಿದ ನಿಷ್ಠುರ ವಾಗ್ವಾದದಿಂದ? ರಾಷ್ಟ್ರಗೀತೆ ರಚಿಸಿದ್ದರಿಂದ ಅಥವಾ ನೊಬೆಲ್ ಪ್ರಶಸ್ತಿಯಿಂದ? ಬಹುಶಃ ನೊಬೆಲ್, ಅವರ ಮಹತ್ವ ಮನಗಾಣಿಸುವಲ್ಲಿ ಅತ್ಯಂತ ಸಣ್ಣಸಂಗತಿ. ಟ್ಯಾಗೋರರು ಮಹತ್ವದವರಾಗಿರುವುದು ಅವರು ತಮ್ಮ ಸಾಹಿತ್ಯ ಮತ್ತು ಕೃತಿಗಳ ಮೂಲಕ ಮುಂದಿಟ್ಟ ಆದರ್ಶ ವ್ಯಕ್ತಿಯ, ಮಾನವೀಯ ಸಮಾಜದ ಹಾಗೂ ಘನತೆವೆತ್ತ ದೇಶದ ಪರಿಕಲ್ಪನೆಗಳಿಂದ.

1901ರಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಸಮ್ಮಿಲನದ ವಿಭಿನ್ನ ಶಾಲೆಯನ್ನು ಶಾಂತಿನಿಕೇತನದಲ್ಲಿ ರವೀಂದ್ರರು ಆರಂಭಿಸುತ್ತಾರೆ. ಶಾಶ್ವತವಾಗಿ ಅಲ್ಲೇ ನೆಲೆ ನಿಲ್ಲುತ್ತಾರೆ ರವೀಂದ್ರನಾಥ್. ಮುಂದೆ ಇದೇ ಶಾಲೆ 1921 ರಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾಲಯವಾಗಿ ಜಗತ್ಪ್ರಸಿದ್ಧಗೊಂಡು ಜಗತ್ತಿನ ಶ್ರೇಷ್ಠ ವಿಶ್ವ ವಿದ್ಯಾಲಯಗಳಲ್ಲೊಂದಾಗುತ್ತದೆ. ಇದೇ ಸಂದರ್ಭ ಪತ್ನಿ ಮತ್ತು ಇಬ್ಬರು ಮಕ್ಕಳ ಸಾವು ಅವರನ್ನು ಕಂಗೆಡಿಸುತ್ತದೆ. ಅವರ ಕವಿತೆಗಳಲ್ಲಿ ಇದರ ದಟ್ಟ ಪ್ರಭಾವ ಕಂಡು ಬರುತ್ತದೆ. “ಗೀತಾಂಜಲಿ” ಈ ಹೊತ್ತಿನಲ್ಲೆ ಪ್ರಕಟಗೊಳ್ಳುತ್ತದೆ. ಅದ್ಭುತ ಕವನಗಳ ಸಂಗ್ರಹದ ಈ ಕವನ ಸಂಕಲನಕ್ಕೆ 1913 ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ದೊರೆಯುತ್ತದೆ. ಈ ಪ್ರಶಸ್ತಿ ಪಡೆದ ಪ್ರಥಮ ನಾನ್ ಯುರೋಪಿಯನ್ ಆದ ರವೀಂದ್ರನಾಥ್ ಠಾಗೋರ್ ಗೆ ಇಂಗ್ಲೆಂಡ್ ಸರ್ಕಾರ ನೈಟ್ ಹುಡ್ ಪದವಿ ನೀಡುತ್ತದೆ. ವಿಶ್ವ ಮಟ್ಟದಲ್ಲಿ ರವೀಂದ್ರನಾಥ್ ಠಾಗೋರ್ ಗುರುತಿಸಲ್ಪಡುತ್ತಾರೆ. ಆದರೆ ಜಲಿಯಾನವಾಲಭಾಗ್ ಘಟನೆಯನ್ನು ಕಂಡು ರೊಚ್ಚಿಗೆದ್ದ ಅಪ್ಪಟ ದೇಶಾಭಿಮಾನಿ ರವೀಂದ್ರರು ನೈಟ್ ಹುಡ್ ಪದವಿಯನ್ನು ಹಿಂದಿರುಗಿಸಿ ದೇಶಪ್ರೇಮ ಮೆರೆಯುತ್ತಾರೆ. 

1912ರ ನಂತರ ವಿದೇಶಗಳಲ್ಲೇ ಹೆಚ್ಚಿಗೆ ಕಳೆದ ರವೀಂದ್ರನಾಥ್ ಠಾಗೋರ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದರು. ಇಂಗ್ಲೀಷ್ಗೂ ಅನುವಾದಗೊಂಡ ಇವರ ಕವನ ಸಂಕಲನಗಳು ಜನ-ಮನ ಗೆದ್ದವು. 60 ವರ್ಷದ ನಂತರ ಪೇಂಟಿಂಗ್ ಅಭ್ಯಸಿಸುವ ರವೀಂದ್ರರು ಸಮಕಾಲೀನ ಕಲಾವಿದರೊಂದಿಗೆ ಗುರುತಿಸಿಕೊಳ್ಳುತ್ತಾರೆ.

ರವೀಂದ್ರನಾಥ ಠಾಗೋರ್‌ ಅವರ ಸಾಹಿತ್ಯ ಕೃತಿಗಳ ಮೂಲಕ ಸಾಮಾಜಿಕ ಕ್ರಾಂತಿ, ಸೂಕ್ಷ್ಮ ಸಂವೇದನೆ ಹಾಗೂ ವಿಶೇಷ ಜೀವನ ಪ್ರೀತಿಯನ್ನು ನೋಡಬಹುದಾಗಿದೆ. ಅವರ ಸೂಕ್ಷ್ಮ ಸಂವೇದನೆ ಹಾಗೂ ನವ ನವೀನ ಸುಂದರ ಪದ್ಯಗಳ ಸಂಕಲನವಾದ ಗೀತಾಂಜಲಿ 1913ರಲ್ಲಿ ಪ್ರತಿಷ್ಠಿತ ನೋಬೆಲ್‌ ಸಾಹಿತ್ಯ ಪ್ರಶಸ್ತಿಯನ್ನು ದೊರೆಕಿಸಿಕೊಟ್ಟಿತು. ಅಲ್ಲದೇ ಭಾರತದ ರಾಷ್ಟ್ರ ಗೀತೆಯಾದ ಜನಗಣಮನ ಗೀತೆಯನ್ನು ರಚಿಸಿದವರು ಕೂಡ ರವೀಂದ್ರನಾಥ ಠಾಗೋರ್‌. ಇವರ ಕೃತಿಗಳಲ್ಲಿ ಪ್ರಮುಖವಾದವು ಎಂದರೆ, ಚತುರಂಗ, ಶೇಶರ್‌ ಕೋಬಿತ, ಘರ್‌ಬೈರೆ, ವಾಲ್ಮೀಕಿ ಪ್ರತಿಭಾ ಸಹಿತ ಇನ್ನೂ ಹಲ ವಾರು ಕೃತಿಗಳನ್ನು ರಚಿಸಿದ್ದಾರೆ.

ಇನ್ನು ರವೀಂದ್ರನಾಥ ಠಾಗೋರ್‌ ಅವರ ಬರಹದಲ್ಲಿ ವ್ಯಕ್ತವಾಗುವುದು ಜೀವನ ಪ್ರೀತಿ ಹಾಗೂ ಮಾನವೀಯ ಮೌಲ್ಯಗಳು. ಇದರಿಂದ ಸಮಾಜದಲ್ಲಿ ಸಮಾನತೆ ಹಾಗೂ ನೈತಿಕತೆ ಸೃಷ್ಟಿಸಬೇಕು ಎಂದು ಕೊಂಡಿದ್ದರು ಅವರು.

ದೇಶಕ್ಕೆ ಬಿಡುಗಡೆ ಸಿಗುವ ಮೊದಲೇ, ನಮ್ಮ ದಾರ್ಶನಿಕ ಕವಿಗಳು ಭವಿಷ್ಯದ ಭಾರತ ಹೇಗಿರಬೇಕೆಂಬ ಕನಸನ್ನು ಕಂಡರು. ಅವರ ಕನಸಿನಲ್ಲಿ ಸ್ವತಂತ್ರಗೊಂಡ ದೇಶದಲ್ಲಿ ನೆಲೆಗೊಳ್ಳಬೇಕಾದ ಡೆಮಾಕ್ರಸಿಯು ಹೇಗಿರಬೇಕೆಂಬ ನೋಟವೂ ಇತ್ತು. ಪ್ರಜ್ಞಾವಂತರಾದವರು ಹೊಸ ಸಮಾಜ ಕಟ್ಟುವ ಹಾದಿಯಲ್ಲಿ ತಮ್ಮ ದನಿಗೆ ಯಾರೂ ಕಿವಿಗೊಡದಿದ್ದರೂ ಚಿಂತೆಯಿಲ್ಲ, ಒಬ್ಬರೇ ನಡೆಯುವ ಹಠ ಮಾಡಬೇಕು ಎಂದು ಟ್ಯಾಗೋರರು ಹೇಳುತ್ತಿದ್ದರು. ಈ ಸಂದೇಶವು ಅವರ ಸುಪ್ರಸಿದ್ಧವಾದ ‘ಎಕಲ ಚಲೋರೆ’ (1905) ಹಾಡಿನಲ್ಲಿದೆ. ಅದರಲ್ಲಿ ಯಾವಾಗ ಎಲ್ಲರೂ ಸತ್ಯ ಹೇಳಲು ಅಂಜಿ ಬಾಯಿ ಮುಚ್ಚಿಕೊಂಡಿರುತ್ತಾರೊ, ಆಗ ನೀನು ಒಂಟಿಯಾದರೂ ಸರಿ ಬಾಯಿತೆರೆದು ಮಾತಾಡು’ ಎಂಬ ಮಾತೂ ಇದೆ. ಬ್ರಿಟಿಷ್‌ ಪ್ರಭುತ್ವದ ಎದುರು ಜನರಲ್ಲಿ ಧೈರ್ಯ, ಸ್ಫೂರ್ತಿ ತುಂಬಲೆಂದೇ ಅವರು ಇದನ್ನು ಬರೆದಂತಿದೆ. ಬದುಕಿನಲ್ಲಿ ದಿಟ್ಟತನವು ಎಷ್ಟು ಮುಖ್ಯವೊ ಕಡೆಗಣಿತರ ಬಗ್ಗೆ ತೋರುವ ಕಾಳಜಿಯೂ ಅಷ್ಟೇ ಮುಖ್ಯ.

ಸಮಾಜದಲ್ಲಿ ಅರಿವು ಎಂಬ ಜ್ಞಾನ ಇರದಿದ್ದರೆ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಆದರ್ಶದ ಸಮಾಜ ನಿರ್ಮಿಸಲು ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ರವೀಂದ್ರನಾಥ ಠಾಗೋರ್‌ ಹೇಳುವುದು ಹೀಗೆ... ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳ ಸೆರೆಮನೆಯಾಗುತ್ತದೆ.

ಅಧರ್ಮದ ನಡೆಗಳು ಇಂದು ತಾಂಡವವಾಡುತ್ತಿರುವ ಈ ಕಾಲದಲ್ಲಿ ಮನುಷ್ಯನ ಅರಿವಿಗೆ ಕೇಡು ಬಂದಿದೆ. ಜೀವನ ಪ್ರೀತಿಗಿಂತ ಸ್ವಾರ್ಥ ಪ್ರೀತಿ ಹೆಚ್ಚುತ್ತಿದೆ ಎಂಬುದನ್ನು ಠಾಗೋರ್‌ ವಿವರಿಸುವುದು ಹೀಗೆ... ನಾವು ನಮ್ಮ ಮನುಸ್ಸುಗಳಿಗೆ ಮೊದಲು ಅರಿವು ಎಂಬ ಮದ್ದು ಹಾಕಿ ಜ್ಞಾನದ ಕಡೆ ಹೋಗಬೇಕಿದೆ.

ಟ್ಯಾಗೋರರು ಕೇವಲ ಆದರ್ಶಗಳನ್ನು ತಮ್ಮ ಬರೆಹಗಳಲ್ಲಿ ಸಂದೇಶಗಳಂತೆ ಸಾರಿದವರಲ್ಲ; ಅದನ್ನು ಭಾರತೀಯರ, ಜನಸಾಮಾನ್ಯರ ಬದುಕಿನಲ್ಲಿ ಶೋಧಿಸಿದವರು; ತಮ್ಮ ಸಮಕಾಲೀನರ ಜತೆ ವಾಗ್ವಾದ ಮಾಡಿದವರು. ಅವರು ಸ್ವರಾಜ್ಯ ಪರಿಕಲ್ಪನೆ ಕುರಿತು ಗಾಂಧಿಯವರ ಜತೆ ಮಾಡಿದ ಚಾರಿತ್ರಿಕ ಮಹತ್ವದ ವಾಗ್ವಾದವನ್ನು ನೆನೆಯಬೇಕು. ಗಾಂಧಿ-ಅಂಬೇಡ್ಕರ್ ನಡುವೆ ನಡೆದ ವಾಗ್ವಾದವನ್ನೂ ಸ್ಮರಿಸಬೇಕು. ಸಾತ್ವಿಕ ಆಕ್ರೋಶ ತುಂಬಿದ ಸೈದ್ಧಾಂತಿಕ ಕದನಗಳಿವು. ಪರಸ್ಪರ ವ್ಯಕ್ತಿಗೌರವ ಇಟ್ಟುಕೊಂಡೇ ದೇಶದ ಮತ್ತು ಸಮಾಜದ ಹಿತಕ್ಕಾಗಿ ಹರಿತವಾದ ಭಿನ್ನಮತಗಳನ್ನು ಹಂಚಿಕೊಳ್ಳುವ ಮೂಲಕ, ನಮ್ಮೀ ಹಿರೀಕರು ಆಧುನಿಕ ಭಾರತಕ್ಕೆ ಭದ್ರವಾದ ಬುನಾದಿ ಹಾಕಿದರು. 

ಇಂದಿನ ಶಿಕ್ಷಣ ಎಂದರೆ, ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಔಪಚಾರಿಕ ಕ್ರಮವಾಗಿದೆ. ಇದರಲ್ಲಿ ಸಣ್ತೀಪೂರಿತ, ಸೃಜನಶೀಲ ಶಿಕ್ಷಣ ಇರದೇ ಕೇವಲ ಔಷಚಾರಿಕ ಪಠ್ಯಕ್ಕೆ ಮಾತ್ರ ಸೀಮಿತವಾಗಿದೆ. ಮಕ್ಕಳ ಮೇಲೆ ಪಾಲಕರು ಹಾಗೂ ಶಿಕ್ಷಕರು ಪಠ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಅವರಿಗೆ ಪ್ರಪಂಚದ ಜ್ಞಾನ ನೀಡದಂತೆ ಮಾಡುತ್ತಿದ್ದಾರೆ. ಆ ಮಕ್ಕಳಿಗೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಬಗೆಗಿನ ವಿಶೇಷ ಚಿಂತನೆಗಳು ಮಾಡಿಸುವ ಕೆಲಸ ಕೂಡ ಆಗುತ್ತಿಲ್ಲ. ಈ ಕುರಿತು ಠಾಗೋರ್‌ ಅವರು ನೀಡಿರುವ ಸಲಹೆ ಆಧುನಿಕ ಶಿಕ್ಷಣಕ್ಕೆ ಆದರ್ಶವಾಗುತ್ತದೆ.


"ಕಲಿಕೆಯ ಮಿತಿಯನ್ನು ಮಕ್ಕಳ ಮೇಲೆ ಹೇರಬೇಡಿ, ಅವರೂ ಹುಟ್ಟಿರುವುದೂ ಬೇರೆ ಕಾಲದಲ್ಲಿ. ಓಡುವ ಕಾಲಕ್ಕೆ ಹೇಗೆ ಮಿತಿಯಿಲ್ಲವೋ ಅದರಂತೆ, ಕಲಿಕೆಗೆ ಮಿತಿಯ ಗೋಡೆಯ ಕಟ್ಟಬೇಡಿ" ಎನ್ನುತ್ತಾರೆ.


ಮನುಷ್ಯನು ಅವಕಾಶ ಸಿಕ್ಕಿತು ಎಂದರೆ, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಮಹತ್ವಾ ಕಾಂಕ್ಷೆಯಲ್ಲಿರುತ್ತಾನೆ. ಆದರೆ ಆಕಸ್ಮಾತ್‌ ಕೈ ತಪ್ಪಿತೆಂದರೆ ಅವರು ಪಡುವ ನೋವು, ಸಂಕಟ, ಯಾತನೆ ಅಷ್ಟಿಷ್ಟಲ್ಲ. ಇನ್ನೇನೂ ಜೀವನ ಮುಗಿಯಿತು ಎಂಬ ಆಲೋಚನೆಯೇ ಮನದಲ್ಲಿ ತುಂಬಿ ಹೋಗುತ್ತದೆ. ಆದರೆ, ಅವನಿಗೆ ತಿಳಿದಿಲ್ಲ, ಅವಕಾಶಗಳೆಂಬ ಸೂರ್ಯ ಮುಳುಗಿರಬಹುದು. ಆದರೆ ಆತ್ಮಸ್ಥೆರ್ಯ ಎಂಬ ನಕ್ಷತ್ರಗಳು ರಾತ್ರಿಯಲ್ಲಿ ಕಾಣುತ್ತವೆ ಎಂಬ ಕನಿಷ್ಠ ಚಿಂತನೆ ಮಾಡುವುದಿಲ್ಲ.


ಅದಕ್ಕೆ ರವೀಂದ್ರ ನಾಥ ಠಾಗೋರ್‌ ಹೇಳುವುದು ಹೀಗೆ...

"ನಮ್ಮ ಜೀವನದಲ್ಲಿ ಸೂರ್ಯ ಮರೆಯಾದನೆಂದು ನೀವು ಅತ್ತರೆ, ಹೊಳೆಯುವ ನಕ್ಷತ್ರಗಳು ಕಾಣಿಸಲು ಕಣ್ಣೀರು ಅಡ್ಡಿಯಾಗುತ್ತದೆ". ಅದಕ್ಕೆ  ತಾಳ್ಮೆಯ ಫ‌ಲದಿಂದ ಜೀವನ ನಡೆಸಿ, ಅವಕಾಶಗಳ ಯಶಸ್ವಿಗೆ ಕಾಲ ಕೂಡಿ ಬರುತ್ತದೆ.ಲೇಖಕರು : ಅರುಣ್‌ ಕೂರ್ಗ್Search Coorg Media

Coorg's Largest Online Media Network