Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ‘ಮುಂಗಾರು’ ಎದುರಿಸಲು ಅಗತ್ಯ ಸಿದ್ಧತೆ: ರಾಮದಾಸ್

 ಮಡಿಕೇರಿ ನಗರ ವ್ಯಾಪ್ತಿಯಲ್ಲಿ ‘ಮುಂಗಾರು’ ಎದುರಿಸಲು ಅಗತ್ಯ ಸಿದ್ಧತೆ: ರಾಮದಾಸ್


ಸದ್ಯದಲ್ಲಿಯೇ ಆರಂಭವಾಗುವ ‘ಮುಂಗಾರು’ ಎದುರಿಸುವಲ್ಲಿ ನಗರದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಹಾಗೂ ನಗರಸಭೆಯ ನೂತನ ಸದಸ್ಯರ ಉಪಸಿತ್ಥಿಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಜೂನ್ ಮೊದಲ ವಾರದಲ್ಲಿ ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದ್ದು, ಆ ದಿಸೆಯಲ್ಲಿ ಮಡಿಕೇರಿ ನಗರದಲ್ಲಿಯೂ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
2018 ರಲ್ಲಿ ಭಾರಿ ಮಳೆಯಿಂದಾಗಿ ಮಡಿಕೇರಿ ನಗರದಲ್ಲಿ ಸಂಕಷ್ಟ ಎದುರಿಸುವಂತಾಗಿತ್ತು. ಆ ದಿಸೆಯಲ್ಲಿ ನಗರದ ಚಾಮುಂಡೇಶ್ವರಿ ಮತ್ತು ಇಂದಿರಾ ನಗರದ ಜನರು ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಸದಸ್ಯರು ನಗರಸಭೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಈಗಾಗಲೇ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರದ 210 ಕುಟುಂಬಗಳಿಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಇವರಲ್ಲಿ 119 ಕುಟುಂಬಗಳಿಗೆ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. ಉಳಿದ ಕುಟುಂಬಗಳು ಮನೆ ನೀಡಿದ್ದರೂ ಸಹ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರದಿಂದ ಸ್ಥಳಾಂತರಗೊಂಡಿಲ್ಲ ಎಂದರು.
ಹಾಗೆಯೇ ಮನೆ ಖಾಲಿ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು, ಈಗಾಗಲೇ ಐದು ತಿಂಗಳು ಕಳೆದಿದ್ದರೂ ಸಹ ಮನೆ ಖಾಲಿ ಮಾಡಿಲ್ಲ, ಆದ್ದರಿಂದ ನಗರಸಭೆ ಸದಸ್ಯರು ಈ ಸಂಬಂಧ ಸಹಕರಿಸಬೇಕಿದೆ ಎಂದು ಪೌರಾಯುಕ್ತರು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಸದಸ್ಯರಾದ ಶ್ವೇತ ಅವರು ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರದಲ್ಲಿ ಕೆಲವರಿಗೆ ಮನೆ ಸಿಕ್ಕಿದೆ, ಇನ್ನೂ ಕೆಲವರಿಗೆ ಪುನರ್ವಸತಿ ದೊರೆತ್ತಿಲ್ಲ, ಪುನರ್ವಸತಿ ದೊರೆಯದಿರುವ ಕುಟುಂಬಗಳು ಎಲ್ಲಿ ಹೋಗಬೇಕು ಎಂದರು.
ಸದಸ್ಯರಾದ ಉಮೇಶ್ ಸುಬ್ರಮಣಿ ಅವರು ಪ್ರಾಕೃತಿಕ ವಿಕೋಪವನ್ನು ಎದುರಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಳೆಯಿಂದ ಆಗುವ ಹಾನಿ ತಪ್ಪಿಸುವ ಜೊತೆಗೆ, ನಗರದಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ ಸಮರ್ಪಕವಾಗಿ ಆಗಬೇಕು. ನಗರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರನ್ನು ನಿಯೋಸುವಂತೆ ಅವರು ಸಲಹೆ ಮಾಡಿದರು.
ಅರುಣ್ ಶೆಟ್ಟಿ ಅವರು ಮಾತನಾಡಿ ತೆರಿಗೆ ಪಾವತಿಸಲು ನಗರಸಭೆಯಲ್ಲಿ ಅವಕಾಶ ಮಾಡಬೇಕು ಎಂದು ಅವರು ಕೋರಿದರು. ಮನ್ಸೂರ್ ಅವರು ಮಾತನಾಡಿ ಮಡಿಕೇರಿ ನಗರದಲ್ಲಿ ವಿದ್ಯುತ್, ಕುಡಿಯುವ ನೀರು, ಕಸ ಸಂಗ್ರಹಣೆ ಹೀಗೆ ಹಲವು ಸಮಸ್ಯೆಗಳು ಜ್ವಲಂತವಾಗಿದೆ, ಇದನ್ನು ಪರಿಹರಿಸುವುದರ ಜೊತೆಗೆ ತಮ್ಮ ತಮ್ಮ ವಾರ್ಡ್ಗಳಲ್ಲಿ ಮಳೆ ಹಾನಿ ತಪ್ಪಿಸಲು ಶ್ರಮಿಸಬೇಕಿದೆ ಎಂದರು.
ಅಪ್ಪಣ್ಣ ಅವರು ಮಾತನಾಡಿ ಚಾಮುಂಡೇಶ್ವರಿ ಮತ್ತು ಇಂದಿರಾ ನಗರದ ಕುಟುಂಬಗಳಿಗೆ ಮನೆ ಖಾಲಿ ಮಾಡಲು ಮೂರು ತಿಂಗಳ ಕಾಲವಕಾಶ ನೀಡಿದ್ದರೂ ಸಹ ಏಕೆ ಖಾಲಿ ಮಾಡಿಸಿಲ್ಲ ಎಂದು ಪ್ರಶ್ನಿಸಿದರು. ಮಳೆಗಾಲ ಮುಂಚಿತವಾಗಿ ಮಡಿಕೇರಿ ನಗರದ ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದಾಗಬೇಕಿದೆ ಎಂದು ಅವರು ಸಲಹೆ ಮಾಡಿದರು.
ಸವಿತಾ ರಾಕೇಶ್ ಅವರು ಮಾತನಾಡಿ ಮಳೆಗಾಲದ ಸಂದರ್ಭದಲ್ಲಿ ನಗರದ ಹಲವು ವಾರ್ಡ್ಗಳಲ್ಲಿ ಸಮಸ್ಯೆ ಉಂಟಾಗಲಿದ್ದು, ಅಗತ್ಯ ಇರುವ ವಾರ್ಡ್ಗಳಲ್ಲಿ ಪರಿಹಾರ ಕೇಂದ್ರ ತೆರೆಯಬೇಕು, ಜೊತೆಗೆ ನಗರಸಭೆಯಲ್ಲಿ ಸಹಾಯವಾಣಿ ಕೇಂದ್ರವನ್ನು ತ್ವರಿತವಾಗಿ ಆರಂಭಿಸಬೇಕು. ಹಾಗೆಯೇ ಎಲ್ಲಾ ವಾರ್ಡ್ಗಳಲ್ಲಿ ಸ್ವಚ್ಚತೆ ಬಗ್ಗೆ ವಿಶೇಷ ಒತ್ತು ನೀಡಬೇಕು ಎಂದು ಅವರು ಸಲಹೆ ಮಾಡಿದರು.
ಮಹೇಶ್ ಜೈನಿ ಅವರು ಮಾತನಾಡಿ ಮಡಿಕೇರಿ ನಗರದ ಜನತೆ ಮಳೆಗಾಲದಲ್ಲಿ ಅನುಭವಿಸುವ ಸಂಕಷ್ಟ ಹೇಳತೀರದು, ಮಳೆಗಾಲದಲ್ಲಿ ಟಿ.ಜಾನ್ ಮತ್ತು ಕಾವೇರಿ ಬಡಾವಣೆಯಲ್ಲಿ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಚರಂಡಿಯಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಸತೀಶ್ ಅವರು ಮಾತನಾಡಿ ನಗರಸಭೆ ಸಿಬ್ಬಂಧಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ಸಾರ್ವಜನಿಕರು ನೀಡುವ ದಾಖಲಾತಿಗಳನ್ನು ಜತನ ಮಾಡಿಕೊಳ್ಳಬೇಕು. ದಾಖಲಾತಿ ನೀಡಿಲ್ಲ ಎಂದು ಪದೇ ಪದೇ ಪೀಡಿಸಬಾರದು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.
ಸದಸ್ಯರಾದ ರಮೇಶ್, ರಾಜೇಶ್ ಯಲ್ಲಪ್ಪ, ಅಮಿನ್ ಮೊಹಿಸಿನ್, ಕಲಾವತಿ, ಬಸೀರ್ ಇತರರು ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಸಲಹೆ ನೀಡಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network