Header Ads Widget

ಸರ್ಚ್ ಕೂರ್ಗ್ ಮೀಡಿಯ

ನಮ್ಮ ಸರ್ಕಾರ ಮತ್ತು ನಮ್ಮ ಕಾನೂನುಗಳು ಖಾಸಗಿತನವನ್ನು ವ್ಯಾಖ್ಯಾನಿಸಬೇಕೇ ಹೊರತು ವಾಟ್ಸ್‌ಆ್ಯಪ್‌ನಂತಹ ಸಂಸ್ಥೆಗಳಲ್ಲ

ನಮ್ಮ ಸರ್ಕಾರ ಮತ್ತು ನಮ್ಮ ಕಾನೂನುಗಳು ಖಾಸಗಿತನವನ್ನು ವ್ಯಾಖ್ಯಾನಿಸಬೇಕೇ ಹೊರತು ವಾಟ್ಸ್‌ಆ್ಯಪ್‌ನಂತಹ ಸಂಸ್ಥೆಗಳಲ್ಲ


ವಿದೇಶದಲ್ಲಿ ಮಾಡುವಂತೆ ವಾಟ್ಸಾಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್‌ಗೆ ಭಾರತದಲ್ಲಿನ ಹೊಸ ಐಟಿ ನಿಯಮಗಳನ್ನು ಪಾಲಿಸಲು ಏನಪ್ಪಾ ಕಷ್ಟ?

    ಭಾರತ ಸರಕಾರ ಕಳೆದ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿ ನೀತಿ ಸಂಹಿತೆಯನ್ನು ರೂಪಿಸಿತ್ತು. ಅದರ ಜಾರಿಗೆ ಮೂರು ತಿಂಗಳಿನ ಗಡುವು ನೀಡಿತ್ತು. ಇದೀಗ ಗಡುವು ಮುಕ್ತಾಯವಾಗಿದ್ದು, ನಿಯಮಗಳನ್ನು ಪಾಲಿಸದಿದ್ದರೆ, ಭಾರತದಲ್ಲಿ ಅಂಥ ಸಂಸ್ಥೆಗಳ ಮಾನ್ಯತೆ ರದ್ದು ಮಾಡಲು ಭಾರತ ಸರಕಾರ ಮುಂದೆ ಬಂದಿದೆ.

    ಸಾಮಾಜಿಕ ಮಾಧ್ಯಮ ವೇದಿಕೆಗಳ ವ್ಯಾಪಕ ದುರ್ಬಳಕೆಯ ದೂರುಗಳ ಕಾರಣಕ್ಕೆ ಸರ್ಕಾರವು "ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್‌ ನೀತಿ ಸಂಹಿತೆ) ನಿಯಮಗಳು 2021" ಅನ್ನು 2021ರ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿತ್ತು. ಆ ನಿಯಮಗಳನ್ನು ಪಾಲಿಸಲು ಮೂರು ತಿಂಗಳ ಗಡುವು ನೀಡಲಾಗಿತ್ತು.

    ಹೊಸ ಐಟಿ ನಿಯಮಗಳ ವಿರುದ್ಧ ವಾಟ್ಸಾಪ್ ಸಂಸ್ಥೆ ದಿಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದ್ದು, ವಾಟ್ಸಾಪ್‌ ಗ್ರಾಹಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವ ಉದ್ದೇಶವಿಲ್ಲ ಎಂದು ಸರ್ಕಾರ ಹೇಳಿದೆ. ಹೊಸ ಐಟಿ ನಿಯಮಗಳು ವಾಟ್ಸಾಪ್‌ನ ಕಾರ್ಯನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಬಳಕೆದಾರರ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. 

    ಹೀಗಿರುವಾಗ ಹೊಸ ಈಟಿ ನೀತಿಯು ವಾಟ್ಸಾಪ್‌ನ ಗೌಪ್ಯತಾ ನೀತಿ (end-to-end encryption)ಯನ್ನು ಉಲ್ಲಂಘಿಸುತ್ತದೆ ಎಂದು ವಾಟ್ಸಾಪ್ ಆರೋಪಿಸಿದೆ. ಈ ಕುರಿತು ವಾಟ್ಸಾಪ್‌ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ್ದು, ವಾಟ್ಸಾಪ್‌ ಸಂದೇಶಗಳನ್ನು ಟ್ರೇಸ್‌ ಮಾಡಲು ಅವಕಾಶ ಕೇಳಿರುವುದು, ಪ್ರತಿಯೊಬ್ಬರ ಫಿಂಗರ್‌ ಪ್ರಿಂಟ್‌ಗಳನ್ನು (ಬೆರಳಚ್ಚು) ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಸಮ. ಇದು ಜನತೆಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾಟ್ಸಾಪ್‌ನ ಆರೋಪ. ನಮ್ಮ ಗ್ರಾಹಕರ ಗೌಪ್ಯತೆಯ ಉಲ್ಲಂಘನೆ ವಿರುದ್ಧ ಹೋರಾಡಲು ಜಾಗತಿಕ ಮಟ್ಟದಲ್ಲಿ ತಜ್ಞರ ತಂಡವನ್ನೇ ಹೊಂದಿದ್ದೇವೆ. ಅಲ್ಲದೆ ಜನರ ಸುರಕ್ಷತೆ ಕಾಪಾಡಲು ಭಾರತ ಸರಕಾರದೊಂದಿಗೂ ಕೈಜೋಡಿಸಿದ್ದೇವೆ. ಸರಕಾರದ ಕಾನೂನಾತ್ಮಕ ವಿನಂತಿಗಳಿಗೆ ನಾವು ಸ್ಪಂದಿಸಿದ್ದೇವೆ ಎಂದು ವಾಟ್ಸಾಪ್‌ ವಕ್ತಾರರು ದ್ವಂದ್ವ ನಿಲುವನ್ನು ತಾಳಿದ್ದಾರೆ.

    ವಾಟ್ಸಾಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್‌ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸಲು ಬಯಸಿದರೆ, ಅವರು ನಮ್ಮ ಕಾನೂನುಗಳ ಪ್ರಕಾರ ಕಾರ್ಯನಿರ್ವಹಿಸಬೇಕು. ಅವರು ಇಲ್ಲಿ ಬಂದು ಕಾನೂನುಗಳನ್ನು ರೂಪಿಸುವುದಲ್ಲ. ಸಾರ್ವಭೌಮತ್ವದ ವಿಷಯಗಳು ಬಂದಾಗ ನಮ್ಮ ಮಾನದಂಡಗಳಿಗೆ, ನಮ್ಮ ಮೌಲ್ಯಗಳಿಗೆ, ಯಾವುದು ಸೂಕ್ತವೆಂದು ಭಾರತ ನಿರ್ಧರಿಸಬೇಕೆ ಹೊರತು ವಾಟ್ಸಾಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್‌ ನಮಗೆ ನಿಯಮಗಳನ್ನು ನಿರ್ದೇಶಿಸುವುದನ್ನು ಯಾವುದೇ ದೇಶಭಕ್ತ ಭಾರತೀಯನ ಒಪ್ಪುವಂತದಲ್ಲ.

    "ಒಂದು ನಿರ್ದಿಷ್ಟ ಸಂದೇಶ ಎಲ್ಲಿಂದ ಉಗಮವಾಗಿದೆ ಎಂಬುದನ್ನು ಬಹಿರಂಗಪಡಿಸಬೇಕಾದ ಅಗತ್ಯ ಬಂದಾಗ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಸಂಬಂಧಿಸಿದ ಅತ್ಯಂತ ಗಂಭೀರ ಅಪರಾಧಗಳ ತಡೆಗಟ್ಟುವಿಕೆ, ತನಿಖೆ ಅಥವಾ ಶಿಕ್ಷೆಗಾಗಿ ಅಗತ್ಯವಿದ್ದಾಗ ಮಾತ್ರ ಸಂದೇಶದ ಮೂಲ ಹುಡುಕಬೇಕಾಗುತ್ತದೆ. ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗಿನ ಸ್ನೇಹ ಸಂಬಂಧಗಳು, ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ್ದರೆ. ಅಥವಾ ಅತ್ಯಾಚಾರ, ಲೈಂಗಿಕತೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧಕ್ಕೆ ಪ್ರಚೋದನೆಗೆ ಸಂಬಂಧಿಸಿದ ವಿಚಾರದಲ್ಲಿ ನಿರ್ದಿಷ್ಟ ಸಂದೇಶದ ಮೂಲ ಪತ್ತೆ ಮಾಡಬೇಕಾಗುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಗೌಪ್ಯತೆಯ ಹಕ್ಕು ಸೇರಿದಂತೆ ಯಾವುದೇ ಮೂಲಭೂತ ಹಕ್ಕುಗಳು ಸಂಪೂರ್ಣವಲ್ಲ. ಈ ಹಕ್ಕುಗಳು "ನ್ಯಾಯಸಮ್ಮತ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ" ಎಂದು ಸರ್ಕಾರ ಹೇಳಿದೆ.

    ೨೦೧೭ರ ಜಸ್ಟೀಸ್ ಕೆ ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದ ತೀರ್ಪನ್ನು ವಾಟ್ಸಾಪ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದ ತೀರ್ಪು ನೀಡುವಾಗ ಸುಪ್ರಿಂಕೋರ್ಟ್ ಖಾಸಗಿತನ ಮೂಲಭೂತ ಹಕ್ಕು ಎಂದು ಪರಿಗಣಿಸಿತ್ತು. ಯಾವುದೇ ಮೂಲವನ್ನು ಪತ್ತೆ ಹಚ್ಚುವುದು ಸಂವಿಧಾನ ಬಾಹಿರವಾದ ಕೆಲಸ ಎಂದು ಹೇಳಿತ್ತು. ಈ ತೀರ್ಪಿನ ಆಧಾರದ ಮೇಲೆ ಈಗ ವಾಟ್ಸಾಪ್ ವಾದ ಮಂಡಿಸಲು ಬಂದಿರುವುದು. “ಪ್ರಪಂಚದಾದ್ಯಂತ ಖಾಸಗಿತನಕ್ಕೆ ಒತ್ತು ನಿಡುವ ಸಂಸ್ಥೆಗಳೊಂದಿಗೆ ನಾವು ಭಾಗಿಯಾಗಿದ್ದೇವೆ. ಇದರೊಂದಿಗೆ, ಈಗ ಭಾರತದಲ್ಲಿ ಎದುರಾಗಿರುವ ಸಮಸ್ಯೆಗೆ ಪ್ರಾಯೋಗಿಕವಾದ ಪರಿಹಾರ ಪಡೆಯಲು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ. ಇದರೊಂದಿಗೆ ಅಗತ್ಯವಿರುವ ಕಾನೂನಾತ್ಮ ದಾಖಲೆಗಳನ್ನು ಕೂಡಾ ಒದಗಿಸುತ್ತೇವೆ,” ಎಂದು ವಾಟ್ಸ್‌ಆ್ಯಪ್‌ ಹೇಳಿರುವ ದ್ವಂದ್ವ ನಿಲುವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. 

    ವಾಟ್ಸ್‌ಆ್ಯಪ್‌ ರಾಷ್ಟ್ರದ ಆಂತರಿಕ ನಿಯಮಗಳ ಕುರಿತಾಗಿ ಖಾಸಗಿತನದ ಹಕ್ಕನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನ ನಡೆಸಿದೆ. ಖಾಸಗಿತನ ಮೂಲಭೂತ ಹಕ್ಕು ಎಂಬುದನ್ನು ಕೇಂದ್ರವು ಪರಿಗಣಿಸಿದೆ. ಅದಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟನೆ ನೀಡುತ್ತೇವೆ. ಆದರೆ ಇದೇ ವೇಳೆಯಲ್ಲಿ ರಾಷ್ಟ್ರದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಭಾರತ ಸರ್ಕಾರದ ಕರ್ತವ್ಯವಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ವಿವರಿಸಿದೆ.

    ಹೊಸ ನಿಯಮಾವಳಿಗಳಿಂದ ವಾಟ್ಸ್‌ಆ್ಯಪ್‌ ಕಾರ್ಯಾಚರಿಸಲು ಯಾವುದೇ ತೊಡಕುಗಳು ಇಲ್ಲ. ಬಳಕೆದಾರರಿಗೂ ಯಾವುದೇ ಅಡ್ಡಿ ಆತಂಕಗಳಿಲ್ಲ. ಬಳಕೆದಾರನ ಖಾಸಗಿ ಮಾಹಿತಿಯನ್ನು ಒದಗಿಸದೆ ಇರುವ ವಾಟ್ಸ್‌ಆ್ಯಪ್‌ನ ನಿರ್ಧಾರದ ಬಗ್ಗೆ ಗೌರವವಿದೆ. ಖಾಸಗಿತನದ ಹಕ್ಕನ್ನು ಉಲ್ಲಂಘಿಸುವ ಇಚ್ಛೆ ಸರಕಾರಕ್ಕಿಲ್ಲ. ಆದರೆ ನಿಯಮಾವಳಿಗಳು ನಿರ್ದಿಷ್ಟ ಪ್ರಕರಣಗಳಿಗೆ ಸೀಮಿತವಾಗಿವೆ. ಗಂಭೀರ ಪ್ರಕರಣಗಳಲ್ಲಿ ಪ್ರಮುಖವಾಗಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಅಥವಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ತನಿಖೆ ನಡೆಸಲು, ಪ್ರತಿಬಂಧಕ ವಿಧಿಸಲು ಅಥವಾ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಅಂತಹ ಮಾಹಿತಿಗಳನ್ನು ವಾಟ್ಸ್‌ಆ್ಯಪ್‌ ನೀಡಬೇಕಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ಸಚಿವ ರವಿಶಂಕರ್‌ ಪ್ರಸಾದ್‌ ವಿವರಿಸಿದ್ದಾರೆ.

    ಖಾಸಗಿತನದ ಹಕ್ಕು ಎಂದು ತಮ್ಮ ವಾದವನ್ನು ಮಂಡಿಸುತ್ತಾ ಭಾರತದ ಕೆಲವೊಂದು ಕಾನೂನುಗಳನ್ನು ತಮ್ಮ ಸ್ವ ಹಿತಾಸಕ್ತಿಗೆ ದುರುಪಯೋಗ ಪಡಿಸಿಕೊಳ್ಳುವಲ್ಲಿ ವಾಟ್ಸಾಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್‌ ಹೆಜ್ಜೆಯಿಟ್ಟಿರುವುದು ಭಾರತದ ಸಾರ್ವಭೌಮತ್ವಕ್ಕೆ ಅಪಾಯ ತಂದೊಡ್ಡಲಿದೇಯೇ ಎಂಬುದು ಪ್ರಶ್ನೆ?

    ವಾಟ್ಸ್‌ಆ್ಯಪ್‌ ಕಂಪನಿಯ ನಡೆಯನ್ನು ದ್ವಿಮುಖ ನೀತಿ ಎಂದು ಐ.ಟಿ. ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಟೀಕಿಸಿದ್ದಾರೆ. ಸರ್ಕಾರವು ಮೂಲ ಸಂದೇಶವನ್ನು ಹುಡುಕಿಕೊಡಿ ಎಂದು ಹೇಳಿದೆ. ಇದು ಖಾಸಗಿತನದ ಉಲ್ಲಂಘನೆ ಎಂದು ವಾಟ್ಸ್‌ಆ್ಯಪ್ ವಾದಿಸಿದೆ. ‘ಕೋಟ್ಯಂತರ ಜನರು ಬಳಕೆ ಮಾಡುತ್ತಿರುವ ಕಾರಣ ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ತಾಣಗಳಾಗಿ ಮಾರ್ಪಟ್ಟಿವೆ. ನಮ್ಮ ದತ್ತಾಂಶಗಳು ಸುರಕ್ಷಿತವಾಗಿಲ್ಲ. ಈ ಕಂಪನಿಗಳು ಅಮೆರಿಕದ ಕಾನೂನಿಗೆ ಬದ್ಧವಾಗಿವೆ. ಅಲ್ಲಿನ ಭದ್ರತಾ ಸಂಸ್ಥೆಗಳು ನಮ್ಮ ದತ್ತಾಂಶಗಳನ್ನು ಖಂಡಿತವಾಗಿ ನೋಡಬಹುದು. ಖಾಸಗಿತನ ಎಂಬುದು ಎಲ್ಲಿದೆ? ನಮ್ಮ ಸರ್ಕಾರ ಮತ್ತು ನಮ್ಮ ಕಾನೂನುಗಳು ಖಾಸಗಿತನವನ್ನು ವ್ಯಾಖ್ಯಾನಿಸಬೇಕೇ ಹೊರತು ವಾಟ್ಸ್‌ಆ್ಯಪ್‌ನಂತಹ ಸಂಸ್ಥೆಗಳಲ್ಲ’ ಎಂದು ವಾಟ್ಸ್‌ಆ್ಯಪ್‌ ಕಂಪನಿಯ ದ್ವಂದ್ವ ನಿಲುವಿಗೆ ಮೋಹನ್‌ದಾಸ್ ಪೈ ಟೀಕೆ ಮಾಡಿದ್ದಾರೆ.

    ಶತಮಾನಗಳ ಹಿಂದೆ ಈಸ್ಟ್‌ ಇಂಡಿಯಾ ಕಂಪೆನಿ ವ್ಯಾಪಾರ ಮಾಡುವ ಉದ್ದೇಶದಿಂದ ಭಾರತಕ್ಕೆ ಬಂದು ಭಾರತವನ್ನೇ ತಮ್ಮ ವಶಕ್ಕೆ ಪಡೆದು ದಬ್ಭಾಳಿಕೆ ನಡೆಸಿದ್ದು ಮರೆಯಲಾಗದ ಚರಿತ್ರೆಯಾಗಿದೆ. ಹೀಗಿರುವಾಗ ನಾವು ಮತ್ತೋಮ್ಮೆ ಪರಕೀಯರ ದಾಸ್ಯದ ಬಲೆಗೆ ಬೀಳುವಂತಾಗುತ್ತಿದ್ದೇಯೆ ಎಂಬುದು ವಾಟ್ಸಾಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್‌ ಇವರುಗಳ ನಡೆಯಿಂದ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಡಿಜಿಟಲ್ ಕಾಯ್ದೆಗಳನ್ನು ಪ್ರಶ್ನಿಸಿ ವಾಟ್ಸ್‌ಆ್ಯಪ್ ಕಂಪನಿಯು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ  ಭಾರತದ ಕಾನುನೂಗಳ ವಿರುದ್ಧ ನ್ಯಾಯಾಲಯಗಳಲ್ಲಿ ಸರಕಾರವನ್ನೇ ಪ್ರಶ್ನಿಸಲು ಮುಂದಾಗಿರುವುದು ಈ ದೇಶದ ದೊಡ್ಡ ದುರಂತ.


✍️.... ಅರುಣ್‌ ಕೂರ್ಗ್‌ 

            (ಪತ್ರಕರ್ತರು)


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,