ಕಾಫಿಯಲ್ಲಿ ಮುಂಗಾರಿನ ನಂತರದ ಪೋಷಕಾಂಶಗಳ ನಿರ್ವಹಣೆ ಕುರಿತು ಸಲಹೆ
ಕಾಫಿ ಬೆಳೆಯುವ ಹೆಚ್ಚಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಕಾಫಿ ಗಿಡಗಳು ಮತ್ತು ಹಣ್ಣಿನ ಬೆಳವಣಿಗೆ ಉತ್ತಮವಾಗಿದೆ. ಮುಂಗಾರು ನಂತರದಲ್ಲಿ ರಸಗೊಬ್ಬರಗಳ ಬಳಕೆಯು ನಿರ್ಣಾಯಕವಾಗಿದೆ ಏಕೆಂದರೆ ಇದು ಹೊಸ ಚಿಗುರುಗಳು ಮತ್ತು ಬೇರುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಜೊತೆಗೆ ಎಲೆಗಳ ಉದುರುವಿಕೆ ತಡೆಯಲು, ಕಾಯಿ ಗಟ್ಟಿಯಾಗಲು ಮತ್ತು ಸಸ್ಯಗಳ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶಿಫಾರಸ್ಸು ಮಾಡಿದ ಪ್ರಮಾಣದ ಪ್ರಕಾರ ರಸಗೊಬ್ಬರಗಳನ್ನು ಬಳಸುವುದು ಅವಶ್ಯಕವಾಗಿರುತ್ತದೆ. Factomphos (ಫ್ಯಾಕ್ಟೊಂಫೋಸ್) ಗೊಬ್ಬರವನ್ನು (20:20:0: 13) ಮಳೆಗಾಲದ ನಂತರ ಬಳಸುವುದರಿಂದ (ಸೆಪ್ಟೆಂಬರ್ ಮೊದಲ ಹದಿನೈದು ದಿನಗಳು) ಮಣ್ಣಿನಲ್ಲಿನ ಗಂಧಕದ ಸ್ಥಿತಿಯನ್ನು ಸುಧಾರಿಸಲು ಮತ್ತು ಕಾಫಿಯ ರುಚಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ ಅವರು ತಿಳಿಸಿದ್ದಾರೆ.
ಇಳುವರಿ ಆಧರಿಸಿದ ಸಾಮಾನ್ಯ ಶಿಫಾರಸ್ಸು: ಅರೇಬಿಕಾ ಕಾಫಿಗೆ, ಪ್ರತಿ ಎಕರೆಗೆ ಸರಾಸರಿ 400 ಕೆಜಿ ಶುದ್ಧ ಕಾಫಿಯ ಇಳುವರಿಯನ್ನು ಪರಿಗಣಿಸಿ, ಪ್ರತಿ ಎಕರೆಗೆ 13 ಕೆಜಿ ಯೂರಿಯಾ, 120 ಕೆಜಿ ಫ್ಯಾಕ್ಟೊಂಪೋಸ್ (20:20:0:13) ಮತ್ತು 51 ಕೆಜಿ ಎಂಒಪಿ ನೀಡಬೇಕು. ಫ್ಯಾಕ್ಟಂಪೋಸ್ ಲಭ್ಯವಿಲ್ಲದಿದ್ದರೆ ಯಾವುದೇ ಸಂಕೀರ್ಣ ರಸಗೊಬ್ಬರಗಳನ್ನು 19:19:19 (158 ಕೆಜಿ) ಅಥವಾ 17:17:17 (177 ಕೆಜಿ) ಅಥವಾ 15:15:15 (200 ಕೆಜಿ) ಪ್ರತಿ ಎಕರೆಗೆ ಬಳಸಬಹುದು.
ರೊಬಸ್ಟಾ ಕಾಫಿಗೆ (ವಾರ್ಷಿಕ ಎರಡು ಕಂತುಗಳಲ್ಲಿ ನೀಡುವವರು), ಎಕರೆಗೆ ಸರಾಸರಿ 500 ಕೆಜಿ ಶುದ್ಧ ಕಾಫಿಯ (ಕಾಫಿ ಬೇಳೆ) ಇಳುವರಿಯನ್ನು ಪರಿಗಣಿಸಿ, 17 ಕೆಜಿ ಯೂರಿಯಾ, 138 ಕೆಜಿ ಫ್ಯಾಕ್ಟೊಂಪೋಸ್ (20:20:0:13) ಮತ್ತು 59 ಕೆಜಿ ಎಂಒಪಿ ಪ್ರತಿ ಎಕರೆಗೆ ಶಿಫಾರಸು ಮಾಡಲಾಗಿದೆ. ಪರ್ಯಾಯವಾಗಿ, ಎಕರೆಗೆ 19:19:19 (184 ಕೆಜಿ) ಅಥವಾ 17:17:17 (206 ಕೆಜಿ) ಅಥವಾ 15:15:15 (233 ಕೆಜಿ) ನಂತಹ ಯಾವುದೇ ಸಂಕೀರ್ಣ ರಸಗೊಬ್ಬರಗಳನ್ನು ಬಳಸಬಹುದು.
ರೊಬಸ್ಟಾ ಕಾಫಿಗೆ (3 ಕಂತುಗಳಲ್ಲಿ ಒದಗಿಸುವಾಗ), ಎಕರೆಗೆ ಸರಾಸರಿ 1000 ಕೆಜಿ ಶುದ್ಧ ಕಾಫಿಯ ಇಳುವರಿಯನ್ನು ಪರಿಗಣಿಸಿ, ಪ್ರತಿ ಎಕರೆಗೆ 21 ಕೆಜಿ ಯೂರಿಯಾ, 150 ಕೆಜಿ ಫ್ಯಾಕ್ಟೊಂಪೋಸ್ (20:20:0:13) ಮತ್ತು 67 ಕೆಜಿ ಎಂಒಪಿ ಬಳಸಬೇಕು. ಫ್ಯಾಕ್ಟೊಂಪೋಸಗೆ ಪರ್ಯಾಯವಾಗಿ, ಸಂಕೀರ್ಣ ರಸಗೊಬ್ಬರಗಳಲ್ಲಿ ಒಂದಾದ 19:19:19 (210 ಕೆಜಿ) ಅಥವಾ 17:17:17 (235 ಕೆಜಿ) ಅಥವಾ 15:15:15 (267 ಕೆಜಿ) ಪ್ರತಿ ಎಕರೆಗೆ ಹಾಕಬಹುದು.
ಸಣ್ಣ ಗಿಡಗಳಿಗೆ ರಸಗೊಬ್ಬರಗಳನ್ನು (20:20:0:13 ಅಥವಾ 19:19:19 ಅಥವಾ 17:17:17) ಅರಾಬಿಕಾಗೆ ಪ್ರತಿ ಗಿಡಕ್ಕೆ 50 ರಿಂದ 75 ಗ್ರಾಂ ಮತ್ತು ರೊಬಸ್ಟಾಗೆ 100 ರಿಂದ 125 ಗ್ರಾಂ ಅನ್ನು ಮಣ್ಣಿನ ತೇವಾಂಶದ ಸ್ಥಿತಿಯನ್ನು ಅವಲಂಬಿಸಿ ಮಳೆಗಾಲದ ನಂತರದ ಅವಧಿಯಲ್ಲಿ (ಸೆಪ್ಟೆಂಬರ್ ಮೊದಲ ಹದಿನೈದು ದಿನ) ನೀಡಬೇಕು.
ಯಾವುದೇ ರಸಗೊಬ್ಬರಗಳನ್ನು ಹಾಕುವ ಮೊದಲು, ಕಾಫಿ ಗಿಡಗಳ ಕೆಳಗೆ ಬಿದ್ದ ತರಗೆಲೆಗಳನ್ನು (Mulch) ಗುಡಿಸಿ ಮತ್ತು ಮುಖ್ಯ ಕಾಂಡದ ಸುತ್ತಲಿನ ಮಣ್ಣನ್ನು (ಕಾಂಡದಿಂದ ಒಂದೂವರೆ ಅಡಿ ದೂರದಲ್ಲಿ ಡ್ರಿಪ್ ವೃತ್ತದಲ್ಲಿ) ಸಡಿಲಿಸಿ ಕಾಂಡದ ಸುತ್ತಲೂ ಏಕರೂಪವಾಗಿ ಮತ್ತು ಸಮವಾಗಿ ರಸಗೊಬ್ಬರಗಳನ್ನು ಹಾಕಿ, ಮಣ್ಣು ಮತ್ತು ಹಸಿಗೊಬ್ಬರದಿಂದ ಮುಚ್ಚಿ. ಈ ವಿಧಾನವು ತುಂಬಾ ಪರಿಣಾಮಕಾರಿಯಾಗಿದ್ದು ಬೇರುಗಳು ಗೊಬ್ಬರವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೋಷಕಾಂಶಗಳು ಆವಿಯಾಗುವುದನ್ನು ಮತ್ತು ನಷ್ಟವಾಗುವುದನ್ನು ತಡೆಯುತ್ತದೆ.
ಕಾಫಿಗೆ ಎಲೆಗಳ ಮೇಲೆ ಪೋಷಕಾಂಶ ಸಿಂಪಡಣೆ; ಆಗಸ್ಟ್ ಕೊನೆಯ ವಾರದಲ್ಲಿ ಅಥವಾ ಸೆಪ್ಟೆಂಬರ್ 1 ನೇ ವಾರದಲ್ಲಿ, ಗಿಡಗಳ ಬೆಳೆವಣಿಗೆಯನ್ನು ಉತ್ತೇಜಿಸಲು ಹಾಗೂ ಹಣ್ಣುಗಳ ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಮುಂದಿನ ಬೆಳೆಗೆ ಹೊಸ ಹೂವಿನ ಮೊಗ್ಗುಗಳನ್ನು ಉತ್ತೇಜಿಸಲು ಕೆಳಗಿನ ಪೋಷಕಾಂಶಗಳ ಮಿಶ್ರಣ ಮತ್ತು ಹಾರ್ಮೋನ್ ಗಳ ಸಿಂಪಡಿಸಲು ಶಿಪಾರಸ್ಸು ಮಾಡಲಾಗಿದೆ.
ಇದಕ್ಕಾಗಿ ರಸಗೊಬ್ಬರಗಳ ಮಿಶ್ರಣವನ್ನು 1 ಕೆಜಿ 19:19:19 + 1 ಕೆಜಿ ಸೂಪರ್ ಫಾಸ್ಫೇಟ್ + 0.5 ಕೆಜಿ ಜಿಂಕ್ ಸಲ್ಫೇಟ್ + 100 ಗ್ರಾಂ ಬೋರಿಕ್ ಆಸಿಡ್ ಅಥವಾ 250 ಗ್ರಾಂ ಬೋರಾಕ್ಸ್ + 250 ಗ್ರಾಂ ಮೆಗ್ನೀಸಿಯಮ್ ಸಲ್ಫೇಟ್ + 50 ಗ್ರಾಂ ಅಮೋನಿಯಂ ಮಾಲಿಬ್ಡೇಟ್ + 50 ಪ್ಲಾನೋಫಿಕ್ಸ್ ಜೊತೆಗೆ ವೆಟ್ಟಿಂಗ್ ಏಜೆಂಟ್ 70 ಎಂ.ಎಲ್. ಅಪ್ಸಾ ಅಥವಾ 200 ಎಂ.ಎಲ್. ಸ್ಥಳೀಯ ವೆಟ್ಟಿಂಗ್ ಏಜೆಂಟ್ ಅನ್ನು 200 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬಹುದು.
ಕಾಫಿ ಕೊಳೆ ರೋಗದ ನಿಯಂತ್ರಣ ಕ್ರಮಗಳ ಬಗ್ಗೆ ಸಲಹೆ :
ರೋಗದ ಮತ್ತಷ್ಟು ಹರಡುವಿಕೆಯನ್ನು ತಡೆಗಟ್ಟಲು ರೋಗ ಪೀಡಿತ ಎಲೆಗಳು ಮತ್ತು ಹಣ್ಣುಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ. ಕಾಫಿ ಪೊದೆಗಳ ಮೇಲಿರುವ ನೆರಳಿನ ಮರಗಳಿಂದ ಉದುರಿದ ಎಲೆಗಳನ್ನು ಸಂಗ್ರಹಿಸಿ ಮತ್ತು ಬೇಡವಾದ ಚಿಗುರುಗಳನ್ನು ತೆಗೆದು ಸರಾಗವಾಗಿ ಗಾಳಿಯಾಡುವಂತೆ ಮಾಡಿ. ಒಪೆರಾ (Opera) @1ml/L CxÀªÁ Folicur 25.9 EC @1ml/L ರೋಗ ಪೀಡಿತ ಗಿಡಗಳು ಮತ್ತು ಸುತ್ತಲಿನ ಕಾಫಿ ಗಿಡಗಳಿಗೆ ಮಾತ್ರಸಿಂಪಡಣೆ ಮಾಡುವಂತೆ ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ ಅವರು ಕೋರಿದ್ದಾರೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network