ಕೊಡಗಿನ ಕುಶಾಲನಗರದಲ್ಲಿ 67 ನೇ ವನ್ಯಜೀವಿ ಸಪ್ತಾಹ: ಕಾಡನ್ನು ಉಳಿಸಿ ವನ್ಯಜೀವಿಗಳ ಸಂರಕ್ಷಿಸಿ ಕುರಿತು ಮಕ್ಕಳಿಂದ ಅಂಚೆ ಕಾರ್ಡ್ ಅಭಿಯಾನ
ಕುಶಾಲನಗರ: ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಇಕೋ-ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ಸಹಯೋಗದಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ. ನಿಸರ್ಗ ಇಕೋ ಕ್ಲಬ್ ಆಶ್ರಯದಲ್ಲಿ 'ನಮ್ಮ ನಡೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ' ಎಂಬ ಘೋಷಣೆಯಡಿ
67ನೇ ವನ್ಯಜೀವಿ ಸಪ್ತಾಹ: 2021 ದ ಅಂಗವಾಗಿ ಪರಿಸರ ಜಾಗೃತಿ ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಹಮ್ಮಿಕೊಂಡಿರುವ ಅಂಚೆ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ವನ್ಯಜೀವಿಗಳ ಸಂರಕ್ಷಣೆಯ ಮಹತ್ವದೊಂದಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪರಿಸರ ಸಮತೋಲನ ಕಾಪಾಡಲು ಅರಣ್ಯ ಮತ್ತು ವನ್ಯಜೀವಿಗಳ ಪಾತ್ರ ಮಹತ್ವವಾಗಿದೆ ಎಂದರು.
ವನ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಈ ಸಪ್ತಾಹ ನಡೆಸುತ್ತಾ ಬಂದಿದ್ದೇವೆ. ಇದರಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ವನ್ಯಜೀವಿಗಳ ಸಂರಕ್ಷಣೆಗೆ ಪೂರಕವಾಗಿದೆ. ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕಿದೆ,'' ಎಂದರು.
ವಿದ್ಯಾರ್ಥಿಗಳು ಮತ್ತು ಜನರಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೊಡಗು ಜಿಲ್ಲೆಯ ಇಕೋ ಕ್ಲಬ್ ಮೂಲಕ ಶಾಲಾ ಮಕ್ಕಳು ಅಂಚೆ ಕಾರ್ಡ್ ನಿಂದ ತಮಗಿಷ್ಟವಾದ ವನ್ಯಪ್ರಾಣಿ/ ಪಕ್ಷಿಯೊಂದರ ಚಿತ್ರ ಹಾಗೂ ಸಂದೇಶಗಳನ್ನು ಬರೆದು ತಮ್ಮ ಸ್ನೇಹಿತರು, ಬಂಧುಗಳು, ಸರ್ಕಾರಿ ಪ್ರತಿನಿಧಿಗಳು/ ಅಧಿಕಾರಿಗಳು ಹಾಗೂ ನಾಗರಿಕರಿಗೆ ಕಳುಹಿಸಿಕೊಡಲು ಮನವಿ ಮಾಡಲಾಗಿದೆ ಎಂದು ವನ್ಯಜೀವಿ ಸಪ್ತಾಹದ ಸಂಚಾಲಕರೂ ಆದ ಪ್ರೇಮಕುಮಾರ್ ತಿಳಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ವೈ.ಎಸ್. ಪರಮೇಶ್ವರಪ್ಪ ಮಾತನಾಡಿ, ವನ್ಯಜೀವಿ ಸಪ್ತಾಹದ ಮೂಲಕ ಜನರಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ಸಾಧ್ಯ. ನಮ್ಮ ಶಾಲೆಯ 310 ವಿದ್ಯಾರ್ಥಿಗಳಿಂದ ಅಂಚೆ ಕಾರ್ಡ್ ಮೂಲಕ ವನ್ಯಜೀವಿಗಳ ಚಿತ್ರ ರಚನೆ ಮತ್ತು ಸಂದೇಶಗಳನ್ನು ಬರೆದು ಅಂಚೆ ಕಾರ್ಡ್ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್, ವಿದ್ಯಾರ್ಥಿಗಳು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಕೆ.ಎಸ್.ಅನಿತಾ , ಶಿಕ್ಷಕರಾದ ಎ.ಸಿ.ಮಂಜುನಾಥ್, ಟಿ.ಆರ್.ದಿನೇಶ್, ಹೇಮಲತಾ, ಎಂ.ಎಸ್.ಮಹೇಂದ್ರ ಸುಜಾತ,ಸಹ ಶಿಕ್ಷಕರು ಇದ್ದರು.
ಶಾಲಾ ವಿದ್ಯಾರ್ಥಿಗಳು ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ವಿವಿಧ ಘೋಷಣೆಗಳುಳ್ಳ ಭಿತ್ತಿಫಲಕಗಳನ್ನು ಹಿಡಿದು ಮುಂದಿನ ಪೀಳಿಗೆಗೂ ವನ್ಯಜೀವಿ ಹಾಗೂ ಕಾಡನ್ನು ಉಳಿಸಿ ಎಂಬ ಸಂದೇಶ ಸಾರಿದರು.
ಕಾಡನ್ನು ರಕ್ಷಿಸಿ, ವನ್ಯಜೀವಿಗಳನ್ನು ಸಂರಕ್ಷಿಸಿ, ವನ್ಯಜೀವಿಗಳ ಸುಸ್ಥಿತಿ: ದೇಶದ ಪ್ರಗತಿ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರಪಡಿಸಲಾಯಿತು. ಈ ನಡುವೆ ವಿದ್ಯಾರ್ಥಿಗಳು, ಕಾಡು ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ , 'ಕಾಡಿದ್ದರೆ ನಾಡು... ನಾಡಿದ್ದರೆ ನಾವು', 'ಕಾಡನ್ನು ಬೆಳೆಸಿ ನಾಡನ್ನು ಉಳಿಸಿ', 'ವನ್ಯ ಜೀವಿಗಳನ್ನು ಸಂರಕ್ಷಿಸಿ', 'ಜೀವ ಜಾತ್ರೆಯಲ್ಲಿ ನಾವೆಲ್ಲ ಒಂದೇ ಕುಲ', 'ಮುಂದಿನ ಮಕ್ಕಳಿಗೂ ಕಾಡನ್ನು ಉಳಿಸಿ' ಎಂಬ ಘೋಷಣೆಗಳನ್ನು ಕೂಗಿ ಅರಿವು ಮೂಡಿಸಿದರು.
ನಂತರ ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆ ಕುರಿತಾಗಿ ಚಿತ್ರಕಲೆ ಸ್ಪರ್ಧೆ, ಪ್ರಬಂಧ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network