ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ಕೊಡಗಿನ ಪ್ರಜ್ಞಾವಂತ ನಾಗರಿಕರಲ್ಲಿ ಒಂದು ವಿನಂತಿ....
ದಿನಕಳೆದಂತೆ ಕೊಡಗಿನ ಮೂಲಸ್ವರೂಪ ಬದಲಾಗುತ್ತಿದೆ, ಈಗಾಗಲೇ ಮೂಲನಿವಾಸಿಗಳು ಮೂಲೆಗುಂಪಾಗಿ, ಇವರ ಜೊತೆಜೊತೆಗಗೆ ಇಲ್ಲಿ ನೂರಾರು ವರ್ಷಗಳಿಂದ ಬದುಕುಕಟ್ಟಿಕೊಂಡು ಕೊಡಗಿನ ನೆಲಜಲವನ್ನು ಪ್ರೀತಿಸುವ ಮಂದಿ ಕೂಡ ಪರದೆಯ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹಿರಿಯರ ಕಾಲದ ಪರಿಸ್ಥಿತಿ ನಮ್ಮ ತಂದೆಯ ಕಾಲದಲ್ಲಿ ಇಲ್ಲ, ನಮ್ಮ ತಂದೆಯ ಕಾಲದ ಪರಿಸ್ಥಿತಿ ನಮ್ಮ ಕಾಲದಲ್ಲಿ ಇಲ್ಲ ಎಂಬಂತಾಗಿದೆ. ಅಷ್ಟೇಕೆ ನಾವು ಕಳೆದ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನೋಡಿದ ಕೊಡಗು ಇಂದು ಸಂಪೂರ್ಣ ಬದಲಾಗಿದೆ.
ಹೌದು ಜಗತ್ತು ಬದಲಾಗುತ್ತಿದೆ, ಅದರೊಂದಿಗೆ ನಾವು ಬದಲಾಗಬೇಕಾದದ್ದು ಅನಿವಾರ್ಯ. ಆದರೆ ಇಷ್ಟೊಂದು ಬದಲಾವಣೆ ನಮ್ಮ ಮುಂದಿನ ಅವನತಿಗೆ ಕಾರಣವಾಗಬಹುದಾ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಒಂದು ಮುಂಬೈಯನ್ನು ಅಥವಾ ಒಂದು ಗೋವಾವನ್ನು ಇಂದಲ್ಲಾ ನಾಳೇ ಬೇಕಾದರೂ ಸೃಷ್ಟಿ ಮಾಡಬಹುದು. ಆದರೆ ಒಂದು ಸುಂದರ ಪರಿಸರವನ್ನು, ಆ ಸುಂದರ ಪರಿಸರದೊಂದಿಗೆ ಒಂದು ಸುಂದರ ಹಾಗೂ ಸುಸಂಸ್ಕೃತ ಜನಾಂಗವನ್ನು, ಅವರ ಸುಂದರವಾದ ಪದ್ದತಿ ಸಂಸ್ಕೃತಿಯೊಂದಿಗೆ ನೋಡಲು ಹಾಗೂ ಇದನ್ನು ಮತ್ತೊಂದು ಜಾಗದಲ್ಲಿ ಹುಟ್ಟುಹಾಕಲು ಯಾವತ್ತಿಗೂ ಸಾದ್ಯವಿಲ್ಲ. ಅಂತಹ ಸುಂದರ ನಾಡು ಈ ಕೊಡಗು. ಇಲ್ಲಿನ ನೆಲ-ಜಲ, ನದಿ-ತೊರೆ, ಬೆಟ್ಟ-ಗುಡ್ಡಗಳು ಮಾತ್ರವಲ್ಲಾ ಇಲ್ಲಿನ ಜನರ ಜೀವನ ಶೈಲಿ, ಇಲ್ಲಿನ ಜನರ ಆಹಾರ ಪದ್ದತಿ ಮಾತ್ರವಲ್ಲ, ಇಲ್ಲಿನ ಜನರೇ ಒಂದು ವಿಶಿಷ್ಟ ಹಾಗೂ ವಿಭಿನ್ನ ಎಂದರೆ ತಪ್ಪಲ್ಲ. ಆದರೆ ಇದೆಲ್ಲಾವು ಕಲ್ಪನೆ ಎಂಬ ಲೋಕಕ್ಕೆ ಸರಿದು ಹೋಗುತ್ತಾ ಎಂಬ ಭಯ ಒಂದಷ್ಟು ವರ್ಷಗಳಿಂದ ನನ್ನನ್ನು ಕಾಡುತ್ತಿದೆ. ಕಾರಣ ಅಂದು ಕವಿ ಪಂಜೆ ಮಂಗೇಶರಾಯರು ಇಲ್ಲಿನ ಜನಾಂಗ ಹಾಗೂ ಇಲ್ಲಿನ ಪರಿಸರವನ್ನು ನೋಡಿ "#ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೇ ಬಂದಳೋ" ಎಂದು ಹಾಡಿ ಹೊಗಳಿದ ಪರಿ ಕೇಳಿದ್ದಾಗ ಹಾಗೂ ಓದಿದಾಗ ನಾವು ಇಂದು ಕಲ್ಪನಾ ಲೋಕದಲ್ಲಿ ಕಲ್ಪನೆ ಮಾಡಬೇಕಾದದ್ದು ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೇ ಮುಂದೊಂದು ದಿವಸ ಅಳಿದು ಉಳಿದಿರುವ ಈ ಕೊಡಗು ಕೂಡ ಅದೇ ಕಲ್ಪನಾ ಲೋಕದಲ್ಲಿ ಸರಿದು ಹೋಗಲಿದೇಯಾ ಎಂದು ಚಿಂತಿಸುವ ಕಾಲ ಬಂದಿದೆ.
ಮಾನವನ ದುರಾಸೆಗೆ ಇಂದು ಅದೆಷ್ಟೋ ಬೆಟ್ಟಗುಡ್ಡಗಳು ಸಮತಟ್ಟವಾಗಿದೆ, ಅದೆಷ್ಟೋ ಜಲತೊರೆಗಳು ಬತ್ತಿಹೋಗಿದೆ, ಅದೆಷ್ಟೋ ಕಾಡುಗಳು ನಾಶವಾಗಿದೆ, ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳೆದಂತೇ ಕೊಡಗು ಮತ್ತೊಂದು ಗೋವಾ ಅಥವಾ ಮತ್ತೊಂದು ಮುಂಬೈ ಆಗಿಬಿಡುತ್ತಾ ಎಂಬ ಭಯ ದಿನದಿಂದ ದಿನಕ್ಕೇ ಕಾಡುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ಈ ಸುಂದರ ಕೊಡಗನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮ ಕರ್ತವ್ಯ ಹಾಗೂ ಅನಿವಾರ್ಯ ಕೂಡ. ಮಾನವನ ದುರಾಸೆ ಎಷ್ಟಿದೆ ಎಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚುವ ಬದಲು ಹಾಸಿಗೆಯ ಆಚೆ ಗೊಡೆಯನ್ನು ಕೊರೆದು ಕಾಲು ಚಾಚಲು ನೋಡುತ್ತಿದ್ದಾನೆ. ತನಗೆ ತನ್ನ ಮಕ್ಕಳಿಗಲ್ಲದೆ ಅವರ ಮೂರು ತಲೆಮಾರಿಗೂ ಸಂಪಾದನೆ ಮಾಡಲು ಕೆಲವರು ಈ ಪ್ರಕೃತಿ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಕೆಲವೆಡೆ ಪ್ರವಾಸೋದ್ಯಮ ಹೆಸರಿನಲ್ಲಿ ದಂದೆಗಳು, ಬೇಡದ ಅನಾಚಾರಗಳು ನಡೆಯುತ್ತಿದೆ ಇವೆಲ್ಲಾದ್ದಕ್ಕೂ ಒಂದಷ್ಟು ಕಡಿವಾಣ ಹಾಕಬೇಕಾದದ್ದು ಅನಿವಾರ್ಯ. ಇಲ್ಲಿಯತನಕ ಆಗುವುದು ಆಗಿಹೋಗಿದೆ, ಅದನ್ನು ಚಿಂತಿಸುತ್ತಾ ಕುಳಿತರೆ ಆಗುವುದಿಲ್ಲ. ಇನ್ನೂ ಮುಂದೆ ಆಗದಂತೆ ಎಚ್ಚರ ವಹಿಸಬೇಕಾಗಿದೆ ಮಾತ್ರವಲ್ಲ ಆಗಿರುವುದು ಕೂಡ ಹಾದಿ ತಪ್ಪುತಿದೆಯಾ ಎಂದು ಎಚ್ಚರವಹಿಸಬೇಕಾಗಿರುವುದು ಕೊಡಗಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸದ್ಯಕ್ಕೆ ನನ್ನ ಮನೆಯಲ್ಲಿ ಎಲ್ಲಾರು ಕ್ಷೇಮವಾಗಿದ್ದಾರೆ ಪಕ್ಕದ ಮನೆಯ ಚಿಂತೆ ನನಗೇಕೆ ಎಂದು ಕುಳಿತರೆ ನಾಳೇ ನಮ್ಮ ಮುಂದಿನ ಪೀಳಿಗೆ ಇದೇ ಮಣ್ಣಿನಲ್ಲಿ ಬದುಕಬೇಕು. ಒಂದು ನೆನಪಿರಲಿ ಇದು ಕಂಪ್ಯೂಟರ್ ಯುಗ. ನಮ್ಮ ಅಜ್ಜಂದಿರ ದೈರ್ಯ ತಾಕತ್ತು ನಮ್ಮ ತಂದೆಯರ ಕಾಲಕ್ಕೆ ಬರಲಿಲ್ಲ, ತಂದೆ ತಾಯಿಯರ ಕಾರದ ಎದೆಗಾರಿಕೆ ನಮಗೆ ಬಂದಿಲ್ಲ, ಇನ್ನೂ ನಮ್ಮ ಮಕ್ಕಳು ಕೇವಲ ಪುಸ್ತಕದೊಳಗಿನ ಹುಳುಗಳಾಗಿ ಫೋನ್ ಕಂಪ್ಯೂಟರ್ ಮಾತ್ರ ಸೀಮಿತರಾಗುತ್ತಿದ್ದಾರೆ. ಅವರ ಬದುಕು ಹೇಗೆ ಎಂದು ಯೋಚಿಸಿ. ಹಣವೊಂದೇ ಬದುಕಲ್ಲಾ. ಹಣದಾಚೇಗೂ ಬದುಕು ಎಂಬುದಿದೆ. ಒಂದಷ್ಟು ಮಾರ್ಮಿಕವಾಗಿ ಹೇಳಬೇಕಾದರೆ ತನ್ನ ಹೊಟ್ಟೆಯ ಹಸಿವು ನೀಗಿಸಲು ಅಥವಾ ಐಶಾರಾಮಿ ಬದುಕು ಸಾಗಿಸಲು ಇವತ್ತು ಪಟ್ಟಣದ ಕೆಲವೆಡೆ ನೂರು ಐನೂರಕ್ಕೆ, ಸಾವಿರ , ಲಕ್ಷಕ್ಕೆ ತನ್ನ ಮೈಮಾರಿಕೊಳ್ಳುವವರು ಕೂಡ ಬದುಕುತ್ತಿದ್ದಾರೆ. ಅದು ಸಾರ್ಥಕತೆ ಅನಿಸಿಕೊಳ್ಳುವುದಿಲ್ಲ ಹಾಗೂ ಅದು ಕೆಲವರಿಗೆ ಅನಿವಾರ್ಯ ಇರಬಹುದು. ಆದರೆ ಕೊಡಗಿನವರಿಗೆ ಯಾವುದೂ ಅನಿವಾರ್ಯ ಎಂದು ಚಿಂತಿಸುವ ಕಾಲ ಬಂದಿದೆ. ಹಾಸಿಗೆಯನ್ನು ಹೊದ್ದು ಮಲಗಿ ಹೊರತು, ಹಾಸಿಗೆಯ ಹೊರಗೆ ಕಾಲು ಚಾಚಲು ಹೋಗಿ ಮನೆಯ ಗೊಡೆಯನ್ನು ಕೊರೆದು ಕಾಲು ಚಾಚಲು ಪ್ರಯತ್ನಿಸಬೇಡಿ, ಮನೆ ನಿನ್ನ ಮೇಲೆ ಬೀಳುವ ಕಾಲ ದೂರವಿಲ್ಲ. ಈ ಕೊನೆಯ ಸಾಲಿನ ಆಯ್ಕೆ ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವ ರೀತಿ ನಿಮಗೆ ಬಿಟ್ಟದ್ದು. ಅಮ್ಮೆ ಹರಸಿದ ಸೀಮೆ ನಮ್ಮದು ಇರಲಿ ಮುಂದಿನ ಪೀಳಿಗೆಗೆ ನಮ್ಮಲ್ಲೇ.
✍️....ಚಮ್ಮಟೀರ ಪ್ರವೀಣ್ ಉತ್ತಪ್ಪ
( ಪತ್ರಕರ್ತರು )
ಸಂಪಾದಕರು: ಕೊಡಗು ವಾರ್ತೆ
ಮೊ: 9880967573
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network