Header Ads Widget

Responsive Advertisement

ಕಾಫಿ ಬೆಳೆ ಹಾನಿ; ಜಿಲ್ಲಾಧಿಕಾರಿ ಅವರ ಜೊತೆ ವಿಡಿಯೊ ಸಂವಾದ

ಕಾಫಿ ಬೆಳೆ ಹಾನಿ; ಜಿಲ್ಲಾಧಿಕಾರಿ ಅವರ ಜೊತೆ ವಿಡಿಯೊ ಸಂವಾದ


ಮಡಿಕೇರಿ: ಕಾಫಿ ಬೆಳೆ ಹಾನಿ ಸಂಬಂಧಿಸಿದಂತೆ ಕಾಫಿ ಮಂಡಳಿ ಕಾರ್ಯದರ್ಶಿ ಹಾಗೂ ಸಿಇಒ ಡಾ.ಕೆ.ಜಿ.ಜಗದೀಶ್ ಅವರು ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿ ಅವರೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿದರು.
ಕಾಫಿ ಮಂಡಳಿ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್ ಅವರು ಕಾಫಿ ಬೆಳೆ ನಷ್ಟ ಸಂಬಂಧ ಒಟ್ಟು ಬೆಳೆ ಹಾನಿ ಪ್ರದೇಶ, ಕೃಷಿಕರ ಸಂಖ್ಯೆ, ಶೇಕಡಾವಾರು ಎಷ್ಟು ಕಾಫಿ ಬೆಳೆ ಹಾನಿಯಾಗಿದೆ. ಎನ್ಡಿಆರ್ಎಫ್ ಮಾರ್ಗದರ್ಶನದಂತೆ ಎಷ್ಟು ಹಣ ಬೇಕಿದೆ ಎಂಬ ಬಗ್ಗೆ ನಿಖರ ಮಾಹಿತಿ ಒದಗಿಸುವಂತೆ ಅವರು ಕಾಫಿ ಮಂಡಳಿ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಿದರು.

ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರ್ ಸ್ವಾಮಿ ಅವರು ಸೆಪ್ಟೆಂಬರ್ ಅಂತ್ಯದವರೆಗೆ ಶೇ.33 ಕ್ಕಿಂತ ಹೆಚ್ಚು ಕಾಫಿ ಬೆಳೆ ಹಾನಿಯಾದ 22 ಗ್ರಾಮಗಳನ್ನು ಗುರುತಿಸಲಾಗಿತ್ತು, ನಂತರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಕಾಫಿ ಬೆಳೆ ನಷ್ಟ ಸಂಬಂಧಿಸಿದಂತೆ ಕಾಫಿ ಮಂಡಳಿ, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ, ಕಾಫಿ ಬೆಳೆ ನಷ್ಟ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ಮಳೆಗೆ ಕಾಫಿ ಬೆಳೆ ಹಾನಿ ಸಂಬಂಧ ಮತ್ತೊಂದು ಬಾರಿ ಜಂಟಿ ಸಮೀಕ್ಷೆ ಮಾಡಿ ವರದಿ ನೀಡಲಾಗುವುದು ಎಂದರು.

ವಿವಿಧ ಇಲಾಖೆ ಅಧಿಕಾರಿಗಳ ಜತೆ ಸಭೆ: ಸೆಪ್ಟೆಂಬರ್ ಅಂತ್ಯ ಹಾಗೂ ಅಕ್ಟೋಬರ್ ನಂತರ ಸುರಿದ ಮಳೆಗೆ ಮೂಲ ಸೌಲಭ್ಯ ಹಾನಿ ಸಂಬಂಧಿಸಿದಂತೆ ತಕ್ಷಣವೇ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆ ಹಾನಿ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಸುರಿದ ಮಳೆಗೆ ಮೂಲ ಸೌಲಭ್ಯ ‘ನಷ್ಟ’ ಸಂಬಂಧಿಸಿದಂತೆ ಎರಡು ವರದಿಯನ್ನು ಒಟ್ಟುಗೂಡಿಸಿ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಲೋಕೋಪಯೋಗಿ, ಪಂಚಾಯತ್ ರಾಜ್, ನೀರಾವರಿ, ಸೆಸ್ಕ್, ಪಶುಪಾಲನೆ, ಮೀನುಗಾರಿಕೆ, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರಗಳು ಹೀಗೆ ವಿವಿಧ ಇಲಾಖೆ ವ್ಯಾಪ್ತಿಯ ಮಳೆ ಹಾನಿ ಸಂಬಂಧ ಮತ್ತೊಮ್ಮೆ ಸಮೀಕ್ಷೆ ಮಾಡಿ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಉಪ ನಿರ್ದೇಶಕರಾದ ಮುತ್ತುರಾಜ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ತಹಶೀಲ್ದಾರ್ ಮಹೇಶ್, ಗೋವಿಂದ ರಾಜು, ಪ್ರಕಾಶ್, ಶಿರಸ್ತೆದಾರ್ ಪ್ರವೀಣ್ ಕುಮಾರ್ ಇತರರು ವಿಡಿಯೋ ಸಂವಾದದಲ್ಲಿ ಇದ್ದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಪಿ.ಶ್ರೀನಿವಾಸ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅಶೋಕ್, ಲೋಕೋಪಯೋಗಿ ಇಲಾಖೆ ಎಇಇ ಶಿವರಾಮ್, ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಮಹದೇವು, ಪಿಎಂಜಿಎಸ್ವೈ ಎಂಜಿಯರ್ ಪೂವಯ್ಯ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಇತರರು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮಳೆ ಹಾನಿ ಬಗ್ಗೆ ಮಾಹಿತಿ ನೀಡಿದರು.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,