Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರೋತ್ಸಾಹಧನ ಮತ್ತು ನಿರುದ್ಯೋಗಿಗಳಿಗೆ ಜೀವನ ಭತ್ಯೆಗೆ ಅರ್ಜಿ ಆಹ್ವಾನ

ಪ್ರೋತ್ಸಾಹಧನ ಮತ್ತು ನಿರುದ್ಯೋಗಿಗಳಿಗೆ ಜೀವನ ಭತ್ಯೆಗೆ ಅರ್ಜಿ ಆಹ್ವಾನ


ಮಡಿಕೇರಿ ನ.12: ಮೂಲನಿವಾಸಿ ಪರಿಶಿಷ್ಟ ಪಂಗಡದವರಾದ ಜೇನುಕುರುಬ ಹಾಗೂ ಕೊರಗ ಸಮುದಾಯದ ವಿದ್ಯಾವಂತ ಯುವಕ, ಯುವತಿಯರಿಗೆ 2021-22 ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನ ಮತ್ತು ನಿರುದ್ಯೋಗಿಗಳಿಗೆ ಜೀವನ ಭತ್ಯೆ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 

 ಅರ್ಜಿ ಸಲ್ಲಿಸಲು ನವೆಂಬರ್, 25 ಕೊನೆಯ ದಿನವಾಗಿದೆ. ಜೇನುಕುರುಬ ಮತ್ತು ಕೊರಗ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ: ಎಸ್‍ಎಸ್‍ಎಲ್‍ಸಿ ರೂ. 10 ಸಾವಿರ, ಪಿಯುಸಿ ಮತ್ತು ತತ್ಸಮಾನ ಕೋರ್ಸ್‍ಗಳು(ಪ್ರತಿ ವರ್ಷಕ್ಕೆ) ರೂ.12 ಸಾವಿರ, ಎಲ್ಲಾ ಪದವಿ ಕೋರ್ಸ್‍ಗಳು(ಪ್ರತಿ ವರ್ಷಕ್ಕೆ) ರೂ.15 ಸಾವಿರ, ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳು(ಪ್ರತಿ ವರ್ಷಕ್ಕೆ) ರೂ.18 ಸಾವಿರ ಆಗಿದೆ.

ಅಭ್ಯರ್ಥಿಗಳು 2021-22 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ಲಗತ್ತಿಸುವುದು. ಈ ಕೋರ್ಸ್‍ಗಳಲ್ಲಿ ಅಭ್ಯರ್ಥಿಗಳು ವ್ಯಾಸಂಗವನ್ನು ಮುಂದುವರಿಸದೇ ನಿಲ್ಲಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಧನವನ್ನು ರದ್ದುಪಡಿಸಲಾಗುವುದು. ಅಭ್ಯರ್ಥಿಗಳು ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರವನ್ನು ಸಲ್ಲಿಸಬೇಕು. 

ಜೇನುಕುರುಬ ಮತ್ತು ಕೊರಗ ವಿದ್ಯಾವಂತ ಯುವಕ, ಯುವತಿಯರಿಗೆ ನೀಡುವ ನಿರುದ್ಯೋಗಿ ಜೀವನ ಭತ್ಯೆ ವಿವರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ರೂ.2 ಸಾವಿರ, ಪಿಯುಸಿ ಮತ್ತು ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ರೂ.2,500, ಎಲ್ಲಾ ಪದವಿ ಕೋರ್ಸ್‍ಗಳಲ್ಲಿ ತೇರ್ಗಡೆಯಾದವರಿಗೆ ರೂ.3,500 ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ತೇರ್ಗಡೆ ಹೊಂದಿದವರಿಗೆ ರೂ.4,500 ಆಗಿದೆ. 

ನಿರುದ್ಯೋಗ ಜೀವನ ಭತ್ಯೆಗೆ ಗರಿಷ್ಠ ವಯೋಮಿತಿ 40 ವರ್ಷದ ಒಳಗಿರಬೇಕು. ನಿರುದ್ಯೋಗಿಯೆಂದು ನೋಟರಿಯಿಂದ ಅಫಿಡವಿಟ್‍ನ್ನು ಪಡೆದು ಬಯೋಡಾಟಾದೊಂದಿಗೆ ಸಲ್ಲಿಸಬೇಕು. ಜೀವನ ಭತ್ಯೆಯನ್ನು ಸರ್ಕಾರ, ಖಾಸಗಿ, ಸ್ವಯಂ ಉದ್ಯೋಗಗಳಡಿ ಉದ್ಯೋಗ ದೊರಕಿದ ಅಥವಾ ಮೂರು ವರ್ಷಗಳ ಅವಧಿಗೆ ಯಾವುದು ಮೊದಲು ಅಲ್ಲಿಯವರೆಗೆ ಮಾತ್ರ ಪಾವತಿಸಲಾಗುವುದು. ಈ ಜೀವನ ಭತ್ಯೆಯನ್ನು ಪಡೆಯುವ ಅಭ್ಯರ್ಥಿಗಳು ಕೌಶಲ್ಯಾಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ತರಬೇತಿ ಪಡೆಯಬೇಕು. ನಿರುದ್ಯೋಗಿ ಜೀವನ ಭತ್ಯೆ ಮಂಜೂರಾತಿಗೆ ಅಭ್ಯರ್ಥಿಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅಫಿಡವಿಟ್, ಬ್ಯಾಂಕ್ ಖಾತೆ ವಿವರದ ದಾಖಲಾತಿಗಳನ್ನು ಸಲ್ಲಿಸಬೇಕು. 

ಅರ್ಜಿಯನ್ನು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ-08274-261261, ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ-08272-223552 ಹಾಗೂ ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-08276-281115 ನ್ನು ಸಂಪರ್ಕಿಸಿ ಪಡೆಯಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,