Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಂಬೇಡ್ಕರ್‌ರವರು ಜೀವಂತವಾಗಿಲ್ಲದಿದ್ದರೂ ಅವರ ವೈಚಾರಿಕ ಚಿಂತನೆಗಳು ಇನ್ನೂ ಜೀವಂತವಾಗಿ ಇವೇ

"ಇಂದು ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನ" - ವಿಶೇಷ ಲೇಖನ

ಅಂಬೇಡ್ಕರ್‌ರವರು ಜೀವಂತವಾಗಿಲ್ಲದಿದ್ದರೂ ಅವರ ವೈಚಾರಿಕ ಚಿಂತನೆಗಳು ಇನ್ನೂ ಜೀವಂತವಾಗಿ ಇವೇ


‘ಅಸ್ಪೃಶ್ಯತೆಯು ಜಾತೀಯತೆಯ ಒಂದು ಶಾಖೆ. ಜಾತಿಪದ್ಧತಿ ತೊಲಗುವವರೆಗೆ ಅಸ್ಪೃಶ್ಯತೆ ಇದ್ದೇ ಇರುತ್ತದೆ’ 

– ಬಾಬಾಸಾಹೇಬ್ ಅಂಬೇಡ್ಕರ್

ಬಾಲ್ಯದಿಂದಲು ಬಡತನ ಅಸಮಾನತೆ ಅಪಮಾನಗಳಿಂದಲೇ ರೋಸಿಹೋಗಿದ್ದ ಅಂಬೇಡ್ಕರ್‌ರವರ ಅಂತರಂಗದಲ್ಲಿ ಅಗ್ನಿ ಪರ್ವತದ ಜ್ಜಾಲೆ ಹತ್ತಿ ಉರಿಯುತ್ತಿತ್ತು. ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವ ಭಾವನೆ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಸ್ಥಾನಮಾನ ಕಲ್ಪಿಸಿಕೊಟ್ಟರು. ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಡಾ. ಬಿ.ಆರ್. ಅಂಬೇಡ್ಕರ್. ಈ ಹೆಸರು ಹೇಳುತ್ತಿದ್ದಂತೆಯೇ ಮೈ ರೋಮಾಂಚನಗೊಳ್ಳುತ್ತದೆ.

“ಉನ್ನತ ಶಿಕ್ಷಣವನ್ನು ಪಡೆದು, ನಾನು ಗಳಿಸುವ ಜ್ಞಾನಕ್ಕೂ ಪರಿಣತಿಯನ್ನು ನಾನು ನನ್ನ ಸ್ವಾರ್ಥಕ್ಕಾಗಿ ಉಪಯೋಗಿಸುವುದಿಲ್ಲ. ನನ್ನ ಅಸ್ಪೃಶ್ಯ ಜನಾಂಗದ ಕಣ್ಣುತೆರೆಸಲು, ಅವರನ್ನು ಶೋಷಣೆಯಿಂದ ಮುಕ್ತಗೊಳಿಸಲು ನನ್ನ ಜ್ಞಾನ ಸಂಪಾದನೆಯನ್ನು ವಿನಿಯೋಗಿಸುತ್ತೇನೆ. ಅಸೃಶ್ಯರು ಸೇರಿದಂತೆ ಶೋಷಣೆಗೊಳಗಾದ ಎಲ್ಲ ಜನರ ಬಿಡುಗಡೆ ನನ್ನ ಜೀವನದ ಧ್ಯೇಯ" ಎಂದು ಅಂಬೇಡ್ಕರ್ ಹೇಳಿದ್ದು ತಮ್ಮ 22-23 ವರ್ಷದ ವಯಸ್ಸಿನಲ್ಲಿ.

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅದರ ಭಾಗವಾದ ಅಸ್ಪೃಶ್ಯತೆಯ ಪ್ರಶ್ನೆ ಮತ್ತೆ-ಮತ್ತೆ ಏಳುತ್ತಾ ಬಂದಿದೆ. ಇದರಲ್ಲಿ ಅಡಕವಾಗಿರುವ ಅಸಮಾನತೆ ಮತ್ತು ಶೋಷಣೆಯ ಅಂಶಗಳ ಮೇಲೆ ಚರ್ಚೆಗಳು, ಆಂದೋಲನಗಳು ನಡೆಯುತ್ತಾ ಬಂದಿವೆ. ಆಧುನಿಕ ಭಾರತದಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದ ಹೋರಾಟ ಇಂತವುಗಳಲ್ಲಿ ಪ್ರಮುಖವಾದದ್ದು. ಈ ಅವಿರತ ಹೋರಾಟಗಾರ ದಲಿತ ವಿಭಾಗಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದರು, ಮೇಲ್ಜಾತಿ ಆಪಾಢಭೂತಿತನಗಳನ್ನು ಬಯಲಿಗೆಳೆದರು, ಸ್ವಾತಂತ್ರ್ಯ ಹೋರಾಟ ಕಾಲದಲ್ಲೂ, ನಂತರವೂ ಕಾಂಗ್ರೆಸ್ ಮತ್ತು ಅದರ ಕುಟಿಲ ನೀತಿಗಳನ್ನು ಬಯಲಿಗೆಳೆದರು.

ಅವತ್ತಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಅಂಬೇಡ್ಕರರಿಗೆ ಚಿಕ್ಕಂದಿನಿಂದಲೇ ಓದಬೇಕು ಏನನ್ನಾದರೂ ಸಾಧಿಸಬೇಕು ಎಂಬ ಛಲ ಇತ್ತು. ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಇದರ ಜೊತೆಗೆ ಸಂಸ್ಕೃತ ಕಲಿಯಬೇಕೆಂಬ ಮಹದಾಸೆಯಿತ್ತು. ಆದರೆ ಇದಕ್ಕೆ ಕೀಳ್ಜಾತಿಯವರು ಇದನ್ನು ಓದಬಾರದೆಂದು ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ ಇವರು ಬಗ್ಗಲಿಲ್ಲ ಬದಲಿಗೆ ಹಠತೊಟ್ಟವರಂತೆ ಸಂಸ್ಕೃತ ಕಲಿತು, ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ, ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ಆಧುನಿಕ ಮನು ಎಂಬ ಕೀರ್ತಿಗೆ ಪಾತ್ರರಾದರು. ಇದನ್ನು ಮಾತ್ರ ಯಾರಿಂದಲೂ ತಡೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಹಠವಾದಿ ಅಂಬೇಡ್ಕರರ ಭೀಮಶಕ್ತಿ ಅಂಥಾದ್ದು!

ಪ್ರಾಥಮಿಕ ಶಿಕ್ಷಣವು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿನಲ್ಲಿ ಅನೇಕ ಕಹಿ ಘಟನೆಗಳ ಮಧ್ಯಯೇ 1907ರಲ್ಲಿ 10ನೇ ತರಗತಿ ಪಾಸಾಗುತ್ತಾರೆ. ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್ ಸ್ಟನ್ ಸೇರಿದ ಅಂಬೇಡ್ಕರ್‌ರವರು 1912 ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ. ನಂತರ 1913ರಲ್ಲಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂ ಎ ಹಾಗೂ ಎಂ ಎ, ಪಿಎಚ್ ಡಿ ಪದವಿ ಪಡೆದ ನಂತರ ಹೆಚ್ಚಿನ ಉನ್ನತ ವ್ಯಾಸಂಗವನ್ನು ಇಂಗ್ಲೆಂಡಿನಲ್ಲಿ ಮುಗಿಸಿದ ತದನಂತರ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿಗೆ ಸಹ ಪಡೆಯುವ ಮೂಲಕ ಭಾರತಕ್ಕೆ ಬಂದು ವಕೀಲ ವೃತ್ತಿಯನ್ನು ಪ್ರಾರಂಭಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇದೆ ಸಮಯದಲ್ಲಿ ಇವರನ್ನು 1927ರಲ್ಲಿ ಮುಂಬಯಿಯ ಶಾಸಕಾಂಗ ಸದಸ್ಯರಾಗಿ ಬ್ರಿಟಿಷ್ ಸರ್ಕಾರ ನೇಮಿಸುತ್ತದೆ. ಈ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. ಜೊತೆಗೆ 1927 ರಿಂದ 1932 ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ಮಾಡುವ ಮೂಲಕ ಸಮತಾವಾದದ ಸಮಾಜ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುತ್ತಾರೆ.

ದೇಶದ ಮೊದಲ ಕಾನೂನು ಮಂತ್ರಿಯಾಗಿ ಅನೇಕ ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿದ್ದಾರೆ, ಅದರಲ್ಲಿಯೂ ವಿಶೇಷವಾಗಿ ರಾಜಕೀಯ ಹಾಗೂ ಕಾನೂನು ರಂಗದಲ್ಲೂ ಅತ್ಯುತ್ತಮ ಕೆಲಸ ಮಾಡಿ ದೇಶದ ಜನಸಾಮಾನ್ಯರ ಪ್ರೀತಿ ಸ್ನೇಹ ಸಂಪಾದನೆ ಮಾಡಿರುತ್ತಾರೆ. ಹೀಗಾಗಿ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ, ಈ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯವನ್ನಾಗಿ ಬದಲಾಯಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವ ಭಾವನೆಗಳು ಸೇರಿ ಹತ್ತು ಹಲವಾರು ಸಮಾಜಿಕ ಮೌಲ್ಯಾಧಾರಿತ ವೈಜ್ಞಾನಿಕ ಅಭಿವೃದ್ಧಿ ಪರ ಚಿಂತನೆಗಳ ಸಿದ್ದಾಂತಗಳನ್ನು ದೇಶಕ್ಕೆ ನೀಡಿದ್ದಾರೆ. ಇವರ ತ್ಯಾಗ, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಕಚ್ಚೆದೇಯ ಮನೋಧರ್ಮಗಳ ನೈಜತೆ ವಿಚಾರಗಳು ಇಂದಿನ ಸಮಾಜಕ್ಕೆ ಪ್ರೇರಣೆ, ಮಾರ್ಗದರ್ಶನವಾಗಿದೆ.

1956ರ ಡಿಸೆಂಬರ್ 6ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರ್‌ರವರಿಗೆ ಮರಣೋತ್ತರವಾಗಿ ಭಾರತ ಸರ್ಕಾರವು 1991ರಲ್ಲಿ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬೇಡ್ಕರ್ ಇವತ್ತು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರು ತಾವು ಮಾಡಿದ ಮಹತ್ ಸಾಧನೆಯಿಂದ ನೆನಪಾಗುತ್ತಲೇ ಇರುತ್ತಾರೆ. ಅಧಿಕಾರ ಇರಲಿ, ಇಲ್ಲದಿರಲಿ ಅಂಬೇಡ್ಕರ್ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಅಸ್ಪೃಶ್ಯತೆ ನಿವಾರಣೆಗಾಗಿಯೇ ಅವರ ಹೃದಯ ತುಡಿಯುತ್ತಿತ್ತು. ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು. ಅಂಬೇಡ್ಕರ್ ಅವರು ಕಾನೂನು, ಭಾರತದ ಸಮಾಜಶಾಸ್ತ್ರ, ರಾಜಕೀಯ ಹಾಗೂ ಆರ್ಥಶಾಸ್ತ್ರದಲ್ಲಿ ಅವರ ಕೊಡುಗೆ ವ್ಯಾಪಕವಾದುದು. ಭಾರತದ ಆರ್ಥಿಕತೆಯ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ಅಂಬೇಡ್ಕರ್ ಅವರ ಅಭಿಪ್ರಾಯಗಳು ಹಾಗೂ  ಕೃಷಿ ಮತ್ತು ರೈತ, ಕಾರ್ಮಿಕರು, ನೀರಾವರಿ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅವರ ಚಿಂತನೆಗಳು ಇಂದಿಗೂ ಗಂಭೀರ ಚರ್ಚೆಗೆ ಅರ್ಹವಾಗಿದೆ ಎಂದರೆ ತಪ್ಪಾಗದು.‌

‘ಅಸ್ಪೃಶ್ಯತೆಯು ಜಾತೀಯತೆಯ ಒಂದು ಶಾಖೆ. ಜಾತಿಪದ್ಧತಿ ತೊಲಗುವವರೆಗೆ ಅಸ್ಪೃಶ್ಯತೆ ಇದ್ದೇ ಇರುತ್ತದೆ’ – ಎಂಬುದು ಅಂಬೇಡ್ಕರ್ ಅವರ ನಂಬಿಕೆಯಾಗಿತ್ತು. ಜಾತೀಯತೆಯನ್ನು ನಿರ್ಮೂಲಗೊಳಿಸಲು ರಾಜಕೀಯ ಅಧಿಕಾರ ಅತ್ಯವಶ್ಯ ಎಂದ ಅಂಬೇಡ್ಕರ್ ಮನುಷ್ಯರಿಗೆ ಧರ್ಮ ಬೇಕು ಎಂದು ನಂಬಿದ್ದರು. ಆದರೆ ಧರ್ಮದ ಹೆಸರಿನಲ್ಲಿ ಕೆಲವರು ತಮ್ಮ ಸಹಜೀವಿಗಳನ್ನು ಪ್ರಾಣಿಗಳಂತೆ ನೋಡುವುದರ ವಿರುದ್ಧ ಅವರು ಪ್ರತಿಭಟಿಸಿದರು. ಅಂಬೇಡ್ಕರ್ ಅವರನ್ನು ಹಲವರು ಟೀಕಿಸಿದರು. ಕೆಲವು ಪತ್ರಿಕೆಗಳು ಅವರ ವಿರುದ್ಧ ಬರೆದವು. ಹಲವು ಸಲ ಅವರ ಜೀವಕ್ಕೆ ಅಪಾಯ ಎದುರಾಗಿತ್ತು ಆದರೂ ಅಂಬೇಡ್ಕರ್ ಅಚಲವಾಗಿ ನಿಂತಿದ್ದರು.

ಅಂಬೇಡ್ಕರ್‌ರವರು ಜೀವಂತವಾಗಿಲ್ಲದಿದ್ದರೂ ಅವರ ವೈಚಾರಿಕ ಚಿಂತನೆಗಳು ಇನ್ನೂ ಜೀವಂತವಾಗಿ ಇವೇ ಅನ್ನುವದನ್ನು ಮರೆಯಬಾರದು. ಹಾಗಾಗಿ ಅವರ ವಿಚಾರಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕುವುದು ಒಳ್ಳೆಯದು ಹಾಗೆ ನಾಡಿಗೆ–ದೇಶಕ್ಕೆ ಮಾದರಿಯಾಗುವ ಮೂಲಕ ಪ್ರೇರಣೆ ಕೆಲಸ ಮಾಡಿ, ಅಂಬೇಡ್ಕರ್‌ರವರ ಗೌರವವನ್ನು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ಅವರ ಆಶಯದಂತೆ ಬದುಕುವುದನ್ನು ನಾವು ಕಲಿಯಬೇಕಿದೆ.

ಭಾರತದ ಸಂವಿಧಾನದ ರಚನಾಕಾರರಾಗಿ ಅಲ್ಲದೆ, ಅಸ್ಪೃಶ್ಯತೆಯ ವಿರುದ್ಧ ಅಂಬೇಡ್ಕರರು ಮಾಡಿದ ಅಹಿಂಸಾತ್ಮಕ ಹೋರಾಟಗಳು ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಅವರ ಪರವಾಗಿನ ಧ್ವನಿಯಾಗಿ ನಿಂತಿದ್ದು ಅವರ ಸಾಧನೆಯ ಮೈಲಿಗಲ್ಲು. ಅಭಿಮಾನಿಗಳಿಂದ "ಬಾಬಾ ಸಾಹೇಬ್" ಎಂದು ಕರೆಸಿಕೊಂಡ ಅಂಬೇಡ್ಕರ್‌ರನ್ನು  ಭಾರತೀಯರಾದ ನಾವೆಲ್ಲರೂ ನೆನೆಸಿಕೊಂಡು ಗೌರವಿಸೋಣ.

ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                     (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,