Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಂತೂ ಭವಾನಿ ಮನೆಗೆ ಶೌಚಾಲಯ ಬಂದಿತು

ಅಂತೂ ಭವಾನಿ ಮನೆಗೆ ಶೌಚಾಲಯ ಬಂದಿತು


ಮನುಷ್ಯನ ಜೀವನದಲ್ಲಿ ನೈರ್ಮಲ್ಯ ಎಂಬುದು ಬಹಳ ಮುಖ್ಯವಾದ ವಿಚಾರ. ಅದರಲ್ಲಿಯೂ ಶೌಚಾಲಯ ಎಂಬುದು ಎಷ್ಟು ಮಹತ್ವದ ವಿಷಯಗಳು ಎಂದರೆ ಅವು ನಮ್ಮ ಜೀವನದ ಗುಣಮಟ್ಟವನ್ನು ನಿರ್ಧಾರ ಮಾಡುತ್ತವೆ.

ದೇಹಬಾಧೆ ತೀರಿಸಿಕೊಳ್ಳುವ ಟಾಯ್ಲೆಟ್, ಸ್ನಾನ ಮಾಡುವ ಸ್ನಾನಗೃಹ ಅಷ್ಟು ಮುಖ್ಯವಾ  ಅನಿಸುತ್ತಿರಬಹುದು. ಒಮ್ಮೆ ಗೋಡೆಗಳೆ ಇಲ್ಲದ ಸ್ನಾನದ ಮನೆಯಲ್ಲಿ ಸ್ನಾನ ಮಾಡಿದವರಿಗೆ ಗೊತ್ತಿರುತ್ತದೆ ಆ ರೀತಿ ಸ್ನಾನ ಮಾಡುವುದು ಹೇಗೆ ಜೀವ ಬಾಯಿಗೆ ಬರುವ ವಿಚಾರ ಎಂದು ಇನ್ನೂ ಕೊಡಗಿನಂತ ಗುಡ್ಡ ಗಾಡು ಪ್ರದೇಶದಲ್ಲಿ ಬಯಲು ಶೌಚ ಬಳಸುವವರಿಗೆ ಗೊತ್ತಿರುತ್ತದೆ ಅದರ ಹಿಂದಿರುವ ಆತಂಕಗಳು.

ಅಷ್ಟಕ್ಕೂ ಈ ಪೀಠಿಕೆಯ ಉದ್ದೇಶ ಇಷ್ಟೇ.   ಅಂದಹಾಗೆ ಹೆಗ್ಗಳದ ಸಾಧಕ ವಿದ್ಯಾರ್ಥಿನಿ ಭವಾನಿಯ ನಿಮಗೆಲ್ಲಾ ತಿಳಿದೇ ಇದೆ. ಕಿತ್ತು ತಿನ್ನುವ ಬಡತನದ ನಡುವೆ ಅರಳುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ. ಈಕೆಯ  ಗೂಡಿನಂತ ಮನೆಗೆ ಆಕೆ ಹುಟ್ಟಿದಂದಿನಿಂದ ವಿದ್ಯುತ್ ಇರಲಿಲ್ಲ, ಶೌಚಾಲಯ, ಸ್ನಾನದ ಮನೆ ಯಾವುದು ಇರಲಿಲ್ಲ. ಆಕೆಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಮಾಡಬೇಕು ಎಂದು ಖುದ್ದು ಅಂದಿನ ಜಿಲ್ಲಾಧಿಕಾರಿ ಆನಿಸ್ ಕಣ್ಮಣಿ ಜಾಯ್ ಆದೇಶ ಮಾಡಿದ್ದರು. ಸಂಬಂಧಪಟ್ಟವರು ಕೊಡಲಿಲ್ಲ. ಯಕಶ್ಚಿತ್ ಒಂದು ಶೌಚಾಲಯ ಕಟ್ಟಿಕೊಡಲು ಪಂಚಾಯಿತಿ ಮುಂದೆ ಬರಲಿಲ್ಲ.


ಆದರೆ, ಭವಾನಿ ಪದವಿಯಲ್ಲಿ ಡಿಸ್ಟಿಂಕ್ಷನ್ ಬಂದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ದುಬೈಯಲ್ಲಿ ನೆಲೆಸಿರುವ ವೀರಾಜಪೇಟೆ ನಿವಾಸಿ ಶಾಲಿ ಮರ್ಕರ್ ರವರು ಅಲ್ಲಿಂದ ತಮ್ಮ ಸೋದರನಿಗೇ ಹಣ ಕಳುಹಿಸಿ ಶೌಚಾಲಯ ಹಾಗೂ ಸ್ನಾನದ ಕೊಠಡಿಯನ್ನು ಕೇವಲ ಮೂರು ದಿನದಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ. ಇಂದು ಶಾಲಿ ಮರ್ ಕರ್ ಅವರ ಪರವಾಗಿ ಹಮೀದ್, ಅಗಸ್ಟೀನ್ ಬೆನ್ನಿ, ಸಲೀಮ್, ಸೈಜು, ತನ್ ಸೀನ್ ಭವಾನಿ ಮನೆಗೆ ತೆರಳಿ ಶುಭ ಹಾರೈಸಿ ಬಂದಿದ್ದಾರೆ.

ಎಷ್ಟೇ ವ್ಯವಸ್ಥೆಯನ್ನು ದೂಷಣೆ ಮಾಡಬಾರದು ಎಂದರು ನಮ್ಮ ಸರ್ಕಾರಿ ವ್ಯವಸ್ಥೆ ತುಂಬಾ ಸಣ್ಣದಾಗಿಯೆ ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ. ಆದರೆ ವ್ಯವಸ್ಥೆ ಗೆ ಹೊರತಾದ ಇಂಥ ಪುಣ್ಯಾತ್ಮರು ಭವಾನಿಯಂಥ  ಹೆಣ್ಣುಮಗಳಿಗೆ ಗೌರವದ ಬದುಕು ನಡೆಸಲು ಒಂದು ನೆರವಿನ ಹಸ್ತ ಚಾಚುವ ಮೂಲಕ ಬದುಕಿನ ಬಗ್ಗೆ, ಮನುಷ್ಯರು ಇನ್ನೂ ಇದ್ದಾರೆ ಎನ್ನುವ ಬಗೆಗೆ ಭರವಸೆ ಬಿತ್ತಿ ಬಂದಿದ್ದಾರೆ.

✍️....ಉಷಾ ಪ್ರೀತಮ್ - (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,