Header Ads Widget

Responsive Advertisement

ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತು ಕಾರ್ಯಕ್ರಮ

ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತು ಕಾರ್ಯಕ್ರಮ

ಸಹಕಾರ ಸಂಘಗಳ ಕಾಯ್ದೆ ಕಾನೂನು ತಿಳಿಯಿರಿ: ಮನುಮುತ್ತಪ್ಪ


ಮಡಿಕೇರಿ ಜ.01: ಸಹಕಾರ ಸಂಘಗಳ ಚುನಾವಣೆಗಳು ಸಕಾಲಿಕ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕಾನೂನು ಕಾಯ್ದೆಗಳು ರಚಿತವಾಗಿದ್ದು, ಅದರಲ್ಲಿರುವ ಅಂಶಗಳನ್ನು ಪ್ರತಿಯೊಬ್ಬ ಸಹಕಾರಿಯು ತಿಳಿಯುವುದು ಅವಶ್ಯಕ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ  ತಿಳಿಸಿದರು.  

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತು ಏರ್ಪಡಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ತತ್ವಗಳಲ್ಲಿ ಪ್ರಜಾಸತ್ತಾತ್ಮಕ ಸದಸ್ಯ ನಿಯಂತ್ರಣ ಎಂಬುದು ಸದಸ್ಯರು ಸದಸ್ಯರಿಗಾಗಿ ಇರುವುದೆಂಬುದನ್ನು ನಿರೂಪಿಸುತ್ತದೆ. ಸಹಕಾರ ಸಂಘಗಳಲ್ಲಿ ಅಂತಿಮ ಅಧಿಕಾರ ವಾರ್ಷಿಕ ಮಹಾಸಭೆಯಲ್ಲಿ ನೆಲೆಸಿರುತ್ತದೆ. ಸಹಕಾರ ಸಂಘಗಳ ನೀತಿ ರೂಪಿಸುವಲ್ಲಿ ಮತ್ತು ನಿರ್ಣಯ ಮಾಡುವ  ಪ್ರಕ್ರಿಯೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಸಂಘದ ಉದ್ದೇಶಗಳು ಸಫಲವಾಗುತ್ತವೆ ಎಂದರು. 

ಸಹಕಾರ ಸಂಘದ ಉದ್ದೇಶಗಳ ಸಾಧನೆಗಾಗಿ ಅಗತ್ಯ ನಿರ್ದೇಶನ ನೀಡುವುದಕ್ಕಾಗಿ ನಿರ್ದಿಷ್ಟ ಸಂಖ್ಯೆಯ ನಿರ್ದೇಶಕರನ್ನು ಹೊಂದಿರಲು ಸಹಕಾರ ಕಾಯ್ದೆ ಮತ್ತು ನಿಯಮಗಳು ಮತ್ತು ಉಪ ವಿಧಿಗಳಲ್ಲಿ ಅವಕಾಶ ನೀಡಲಾಗಿದೆ. ಚುನಾವಣೆಗಳು ನಿಯಮಾನುಸಾರ ನಡೆದಲ್ಲಿ ಮಾತ್ರ ಸಿಂಧುವಾಗುತ್ತದೆ ಎಂದು ಅವರು ನುಡಿದರು. 

ಸಹಕಾರ ಚುನಾವಣೆಗಳು ಪ್ರಾರಂಭಿಕ ಹಂತದಿಂದ ಕೊನೆಯ ಹಂತದವರೆಗೆ ಪರಿಶುದ್ಧತೆಯಿಂದ ನಿಖರವಾಗಿ ಪಾರದರ್ಶಕವಾಗಿ ಮತ್ತು ಸಕಾಲಿಕವಾಗಿ ನಡೆಯಬೇಕೆಂಬುದು ಕಾನೂನಿನ ಆಶಯವಾಗಿದೆ ಎಂದರು.  

ಸಂಘದ ಮುಖ್ಯ ಕಾರ್ಯ ನಿರ್ವಾಹಕರು ಕಾಯ್ದೆ ಮತ್ತು ನಿಯಮಗಳು ಆಗುವ ಬದಲಾವಣೆಗಳ ಕುರಿತು ಆಡಳಿತ ಮಂಡಳಿಯವರಿಗೆ ಮಾಹಿತಿಯನ್ನು ತಲುಪಿಸಿದಲ್ಲಿ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಎ.ಕೆ.ಮನುಮುತ್ತಪ್ಪ ಅವರು ನುಡಿದರು.  

ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ ಅವರು ಸಹಕಾರ ಚುನಾವಣಾ ಪ್ರಕ್ರಿಯೆ ನಡೆಸುವ ಕುರಿತು ಉಪನ್ಯಾಸ ನೀಡಿದರು. ಯೂನಿಯನ್ ನಿರ್ದೇಶಕರಾದ ರವಿಬಸಪ್ಪ, ಕನ್ನಂಡ ಸಂಪತ್, ಕೆ.ಎಂ.ತಮ್ಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಈ.ಮೋಹನ್ ಇತರರು ಇದ್ದರು. ವ್ಯವಸ್ಥಾಪಕಿ ಆರ್.ಮಂಜುಳಾ ಪ್ರಾರ್ಥಿಸಿದರು. ಸಿಇಒ ಯೋಗೇಂದ್ರ ನಾಯಕ್ ಅವರು ಸ್ವಾಗತಿಸಿದರು, ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,