Header Ads Widget

ಸರ್ಚ್ ಕೂರ್ಗ್ ಮೀಡಿಯ

ಭ್ರಷ್ಟ ಅಧಿಕಾರಿಯನ್ನು ಮತ್ತೆ ಕರೆತರಲು ಶಾಸಕರ ಪ್ರಯತ್ನ ಖಂಡನೀಯ: ಟಾಟು ಮೊಣ್ಣಪ್ಪ

ಭ್ರಷ್ಟ ಅಧಿಕಾರಿಯನ್ನು ಮತ್ತೆ ಕರೆತರಲು ಶಾಸಕರ ಪ್ರಯತ್ನ ಖಂಡನೀಯ

ಶಾಸಕರು ಜನ ವಿರೋಧವನ್ನು ಮೀರಿದರೆ ಕಾನೂನು ಹೋರಾಟ ಅನಿವಾರ್ಯ: ಟಾಟು ಮೊಣ್ಣಪ್ಪ

(ಟಾಟು ಮೊಣ್ಣಪ್ಪ)
 
ಪೊನ್ನಂಪೇಟೆ, ಜ.17: ಎಸಿಬಿ ಬಲೆಗೆ ಬಿದ್ದು ಅಮಾನತ್ತಾಗಿ ಜೈಲು ಸೇರಿದ್ದ ಅಧಿಕಾರಿಯೊಬ್ಬರನ್ನು ಮತ್ತೆ ಜಿಲ್ಲೆಗೆ ಕರೆತರಲು ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರಯತ್ನಿಸುತ್ತಿರುವುದು ತೀವ್ರ ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರರಾದ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ, ಭ್ರಷ್ಟ ಅಧಿಕಾರಿಗಳ ಸೇವೆ ಜಿಲ್ಲೆಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಜಿ. ಪಂ. ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿದ್ದ ಶ್ರೀಕಂಠಯ್ಯ ಅವರು ಕಳೆದ ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬರಿಂದ ರೂ. 4.75 ಲಕ್ಷ ಮೊತ್ತದ ಹಣ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು. ಈ ಕಾರಣದಿಂದ ಸೇವೆಯಿಂದ ಅಮಾನತ್ತಾಗಿ ಜೈಲು ಸೇರಿದ್ದರು. ಇದೇ ಅಧಿಕಾರಿ ಕೊಡಗು ಜಿಲ್ಲೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ ಸಂದರ್ಭದಲ್ಲಿ ಮಳೆಹಾನಿ ಪರಿಹಾರದ ಅನುದಾನ ದುರುಪಯೋಗಪಡಿಸಿದ ಹಿನ್ನೆಲೆಯಲ್ಲಿ ಹಿಂದೆಯೂ ಸೇವೆಯಿಂದ ಅಮಾನತ್ತಾಗಿದ್ದರು. ಇದರಿಂದ ಇವರು ಭ್ರಷ್ಟ ಅಧಿಕಾರಿ ಎಂಬುದು ಸಾಬೀತಾಗಿದೆ. ಆದರೂ ಈ ಅಧಿಕಾರಿಯನ್ನು ಜಿಲ್ಲೆಗೆ ಮತ್ತೆ ಕರೆತರಲು ಶಾಸಕರಾದ ಕೆ.ಜಿ. ಬೋಪಯ್ಯ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ರಾದ ಕೆ.ಎಸ್. ಈಶ್ವರಪ್ಪ ಅವರಿಗೆ ಪತ್ರ ಬರೆದಿರುವುದು ತೀವ್ರ ಆಶ್ಚರ್ಯ ಮೂಡಿಸಿದೆ. ಇದು ಜಿಲ್ಲೆಯಲ್ಲಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಮಳೆ ಹಾನಿ ಪರಿಹಾರ ಅನುದಾನವನ್ನು ದುರುಪಯೋಗಪಡಿಸಿದ ಕಾರಣದಿಂದ ಹಿಂದೆ ಅಮಾನತ್ತಾದ ಇದೇ ಅಧಿಕಾರಿ, ಶಾಸಕರ ಪ್ರಭಾವವನ್ನು ಬಳಸಿಕೊಂಡು ಮತ್ತೆ ಜಿಲ್ಲೆಗೆ ನಿಯೋಜನೆಗೊಂಡಿದ್ದರು.  ಈ ವೇಳೆ ಶಾಸಕರ ಕೃಪಾ ಕಟಾಕ್ಷದಿಂದಲೇ ವಿವಿಧ ಹೆಚ್ಚುವರಿ ಜವಾಬ್ದಾರಿಗಳು ಸೇರಿದಂತೆ ಒಟ್ಟು 4 ಹುದ್ದೆಯನ್ನು ಏಕಕಾಲದಲ್ಲಿ ನಿರ್ವಹಿಸುತ್ತಿದ್ದರು. ಇದು ಭ್ರಷ್ಟಾಚಾರ ನಡೆಸಲು ಈ ಅಧಿಕಾರಿಗೆ ಮತ್ತಷ್ಟು ಅವಕಾಶಗಳನ್ನು ಒದಗಿಸಿದಂತಿತ್ತು ಎಂದು ಆಪಾದಿಸಿರುವ ಟಾಟು ಮೊಣ್ಣಪ್ಪ, ಶಾಸಕರ ಶ್ರೀರಕ್ಷೆ ಯಿಂದಲೇ ಇದೆಲ್ಲವೂ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

ಶ್ರೀಕಂಠಯ್ಯ ಅವರು ಕೊಡಗಿನಲ್ಲಿ ಕಾರ್ಯಪಾಲಕ ಅಭಿಯಂತರರಾಗಿದ್ದ ಸಂದರ್ಭದಲ್ಲಿ ಯಾವುದೇ ಕಾಮಗಾರಿಗೂ ಗುತ್ತಿಗೆದಾರರಿಂದ  ಶೇ. 13%ರಷ್ಟು ಕಮಿಷನ್ ಅನ್ನು ನೇರವಾಗಿ ಪಡೆಯುತ್ತಿದ್ದರು. ಕಾಮಗಾರಿ ಆರಂಭಿಸುವ ಮುನ್ನ ಇಲಾಖೆ ಮತ್ತು ಗುತ್ತಿಗೆದಾರರ ನಡುವೆ ನಡೆಯುವ ಒಪ್ಪಂದದ ಸಂದರ್ಭದಲ್ಲೇ ಮುಂಗಡ ಕಮಿಷನ್ ಗಾಗಿ ಪೀಡಿಸುತ್ತಿದ್ದ ಶ್ರೀಕಂಠಯ್ಯ ಅವರ ಭ್ರಷ್ಟಾಚಾರ ಕೊಡಗಿನ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯುಂಟು ಮಾಡಿದೆ. ಇದನ್ನು ಕೊಡಗಿನ ಜನತೆ ಅರ್ಥಮಾಡಿಕೊಳ್ಳಬೇಕು. ಅದರಿಂದ, ಶ್ರೀಕಂಠಯ್ಯ ನಂತಹ ಅಧಿಕಾರಿ ಕೊಡಗಿಗೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಜನತೆಯ ಮೇಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಮಾಕುಟ್ಟ ಗಡಿಯ ತಪಾಸಣಾ ಗೇಟ್ ನಲ್ಲಿ ಕೆಲ ಇಲಾಖೆಯ ಸಿಬ್ಬಂದಿಗಳು ರೂ.1000 ಹಣ ಲಂಚ ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ ಕೆ. ಜಿ. ಬೋಪಯ್ಯ ಈ ಕುರಿತು ಗಂಭೀರ ಆರೋಪ ಮಾಡಿದ್ದರು. ಆದರೆ ರೂ 4.75 ಲಕ್ಷ ಬೃಹತ್ ಮೊತ್ತದ ಲಂಚವನ್ನು ಸ್ವೀಕರಿಸುವ ವೇಳೆ ಸಾಕ್ಷಿ ಸಹಿತ ಸಿಕ್ಕಿಬಿದ್ದ ಶ್ರೀಕಂಠಯ್ಯ ಅವರನ್ನು ಜಿಲ್ಲೆಗೆ ಮತ್ತೆ ಕರೆತರಲು ಶಾಸಕರು ನಡೆಸುತ್ತಿರುವ ಪ್ರಯತ್ನದ ಹಿಂದಿರುವ ರಹಸ್ಯವೇನು ಎಂಬುದು ಬಹಿರಂಗವಾಗಬೇಕಿದೆ. ಈ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದರೂ ಶಾಸಕರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿರುವ ಟಾಟು ಮೊಣ್ಣಪ್ಪ ಅವರು, ಘಟನೆಯ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಹೊಣೆಗಾರಿಕೆಯೂ ಶಾಸಕರ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಒತ್ತಿ ಹೇಳಿದರು.

ಭ್ರಷ್ಟಾಚಾರ ನಡೆಸಿ ಸಿಕ್ಕಿಬಿದ್ದ ಶ್ರೀಕಂಠಯ್ಯ ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಬೇಕಿದ್ದ ಶಾಸಕ ಕೆ. ಜಿ. ಬೋಪಯ್ಯ ಅವರು ಮತ್ತೆ ಅವರನ್ನು ಕೊಡಗಿಗೆ ಕರೆತರುವುದು ತೀವ್ರ ಹಾಸ್ಯಸ್ಪದವಾಗಿದೆ. ಇದು ಅವರಿಗೆ ಯಾವುದೇ ಕಾರಣಕ್ಕೂ ಶೋಭೆ ತರುವುದಿಲ್ಲ. ಶಾಸಕರು ತಮ್ಮ ಪ್ರಭಾವ ಬಳಸಿ ಮತ್ತೆ ಇವರನ್ನು ಕೊಡಗಿನಲ್ಲಿ ಕರ್ತವ್ಯಕ್ಕೆ ನಿಯೋಜಿಸಿದರೆ ಇದರಿಂದ ಅವರು ಜನತೆಗೆ ನೀಡುವ   ಸಂದೇಶವಾದರೂ ಏನು ಎಂದು ಟಾಟು ಮೊಣ್ಣಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ಕಳೆದ ಕೆಲವು ಸಮಯಗಳಿಂದ ಕಂದಾಯ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಹಗರಣಗಳು ನಡೆಯುತ್ತಿದೆ. ಈ ಕುರಿತು ಶಾಸಕರಿಗೆ ನಿರ್ದಿಷ್ಟವಾದ ಮಾಹಿತಿ ಇದ್ದರೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.  ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ವಿವಿಧ ಹಗರಣಗಳ ಸಂಪೂರ್ಣ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದುಕೊಂಡು ಸಂಬಂಧಿತರ  ವಿರುದ್ಧ ಹೊರಟ ರೂಪಿಸಲಿದೆ ಎಂದು ಮಾಹಿತಿ ನೀಡಿದ ಅವರು, ಜನರನ್ನು ಶೋಷಿಸುವ ಮೂಲಕ ಭ್ರಷ್ಟಾಚಾರ ನಡೆಸುವ ಅಧಿಕಾರಿಗಳನ್ನು ಕೊಡಗಿನಲ್ಲಿ  ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಶ್ರೀಕಂಠಯ್ಯ ಅವರನ್ನು  ಜಿಲ್ಲೆಗೆ ಕರೆತರುವ ಪ್ರಯತ್ನವನ್ನು ಶಾಸಕರು ಕೂಡಲೇ ಕೈಬಿಡಬೇಕು. ಯಾವುದೇ ಕಾರಣಕ್ಕೂ ಶ್ರೀಕಂಠಯ್ಯ ಅವರು ಮತ್ತೆ ಜಿಲ್ಲೆಗೆ ಬಂದು ಸೇವೆ ಸಲ್ಲಿಸುವುದು ಬೇಡ. ಒಂದು ವೇಳೆ ಶಾಸಕರು ಜನ ವಿರೋಧ ಲೆಕ್ಕಿಸದೆ ಹಣದಾಹಿ  ಶ್ರೀಕಂಠಯ್ಯ ಅವರನ್ನು ಮತ್ತೆ  ಜಿಲ್ಲೆಗೆ ಕರೆತರುವುದಾದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,