Header Ads Widget

ಸರ್ಚ್ ಕೂರ್ಗ್ ಮೀಡಿಯ

ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭ

ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭ

‘ಜಿಲ್ಲಾ ವಿಜ್ಞಾನ ಕೇಂದ್ರ’ ನಿರ್ಮಾಣಕ್ಕೆ ಅಗತ್ಯ ಸಹಕಾರ; ಡಾ.ಬಿ.ಸಿ.ಸತೀಶ


ಮಡಿಕೇರಿ ಫೆ.17: ಕೊಡಗು ಜಿಲ್ಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಜ್ಞಾನ ಚಟುವಟಿಕೆ ಕೈಗೊಳ್ಳಲು ಪೂರಕವಾಗಿ ‘ಜಿಲ್ಲಾ ವಿಜ್ಞಾನ ಕೇಂದ್ರ’ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.  

        ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಮತ್ತು ನಗರಸಭೆ ಸಹಕಾರದಲ್ಲಿ ಗುರುವಾರ ನಡೆದ  ಕೊಡಗು ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು. 

        ವಿಜ್ಞಾನ ಭವನಕ್ಕೆ ಕನಿಷ್ಠ 3 ರಿಂದ 5 ಎಕರೆ ಜಾಗ ಬೇಕಿದೆ. ಜಾಗ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

        ಪ್ರತೀ ನಿತ್ಯದ ದೈನಂದಿನ ಬದುಕಿನಲ್ಲಿ ವಿಜ್ಞಾನವಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದರ ಜೊತೆಗೆ, ಒಳ್ಳೆಯ ನಾಗರಿಕರಾಗಿ ಸಾರ್ಥಕ ಬದುಕು ನಡೆಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.  

       ವಿದ್ಯಾರ್ಥಿಗಳು ಭಾರತೀಯ ವಿಜ್ಞಾನಿಗಳು ಆವಿಷ್ಕರಿಸಿರುವ ಸಂಶೋಧನೆ ಹಾಗೂ ಅವರ ಸಾಧನೆಗಳನ್ನು ಹೆಚ್ಚು ಅಧ್ಯಯನ ಮಾಡುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

        ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಮಾತನಾಡಿ ಭವ್ಯ ಭವಿಷ್ಯ ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಯುವ ವಿಜ್ಞಾನಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಜ್ಞಾನ ಪರಿಷತ್ತು ಶ್ರಮಿಸುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು ಎಂದರು. 

        ಜಿಲ್ಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ಪರಿಸರ ಪೂರಕ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.

       ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಅವರು ಮಾತನಾಡಿ ಜಿಲ್ಲೆಯಲ್ಲಿ ಯುವ ವಿಜ್ಞಾನಿಗಳನ್ನು ರೂಪಿಸುವಲ್ಲಿ ವಿಜ್ಞಾನ ಪರಿಷತ್ತು ಉತ್ತಮ ಕೆಲಸ ಮಾಡುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶವಿದ್ದು, ಯುವ ವಿಜ್ಞಾನಿಗಳು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.        

        ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷರೂ ಆದ ವಿಜ್ಞಾನ ವಿಷಯ ಪರಿವೀಕ್ಷಕ ಟಿ.ಜಿ.ಪ್ರೇಮಕುಮಾರ್ ಮತ್ತು ಸಂಗಡಿಗರು ಶಿಕ್ಷಣ ಮತ್ತಿತರ ಇಲಾಖೆಯ ಜತೆಗೂಡಿ ಉತ್ತಮವಾಗಿ ವಿಜ್ಞಾನ ಚಟುವಟಿಕೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. 

     “ವಿಶ್ವದ ಅಗ್ರಮಾನ್ಯ ಅಭಿವೃದ್ಧಿ ಶೀಲ ರಾಷ್ಟ್ರವಾಗುವ ದಿಕ್ಕಿನತ್ತ ಭಾರತ ದಾಪುಗಾಲು ಹಾಕಲು ಯುವ ಜನಾಂಗ ಸೃಜನಶೀಲತೆ ಮತ್ತು ಕ್ರಿಯಾತ್ಮಕತೆ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು. 

      ವಿಜ್ಞಾನ ಪರಿಷತ್ತು ವತಿಯಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ಹಾಗೂ ಮೂಲ ವಿಜ್ಞಾನ ಕಲಿಕೆಗೆ ಹೆಚ್ಚಿನ ಒತ್ತು ನೀಡಲು ಇಂತಹ ಹಲವು ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದರು.

     ಭಾರತೀಯ ಇತಿಹಾಸದಲ್ಲಿ ಖ್ಯಾತ ವಿಜ್ಞಾನಿಗಳಾದ ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ, ನಾಗಾರ್ಜುನ, ಸುಶ್ರುತ, ಚರಕ ಅವರಂತಹ ವಿಜ್ಞಾನಿಗಳು ಖಗೋಳ ವಿಜ್ಞಾನ, ಆಹಾರ ವಿಜ್ಞಾನ, ವೇದವಿಜ್ಞಾನ, ಔಷಧ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆ ಮಾಡಲು ಭದ್ರಬುನಾದಿ ಹಾಕಿದ್ದಾರೆ ಎಂದು ನುಡಿದರು. 

      ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಕಳೆದ ಒಂದು ದಶಕದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಅದೇ ಮಾದರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

     ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು, ಕೂಡಿಗೆ ಡಯಟ್ ಪ್ರಾಂಶುಪಾಲ ಜಿ.ರಂಗನಾಥಸ್ವಾಮಿ, ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಪಿ.ಕೆ.ಉಮಾಶಂಕರ್, ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಡಿ.ಕೃಷ್ಣಚೈತನ್ಯ, ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ.ಮೊಯಿದ್ದೀನ್, ಸದಸ್ಯರಾದ ಸಿ.ಎಸ್.ಸುರೇಶ್, ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡಿ.ಎಂ.ರೇವತಿ, ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,