Header Ads Widget

ಸರ್ಚ್ ಕೂರ್ಗ್ ಮೀಡಿಯ

‘ಅಂತ್ಯೋದಯ’ ಕುರಿತು ಕಲ್ಯಾಣ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ

‘ಅಂತ್ಯೋದಯ’ ಕುರಿತು ಕಲ್ಯಾಣ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ

ಹೆಚ್ಚುವರಿಯಾಗಿ 9 ಸಾವಿರ ಕೊಳವೆ ಬಾವಿ ಕೊರೆಸಲು ನಿರ್ಧಾರ; ಕೋಟ ಶ್ರೀನಿವಾಸ ಪೂಜಾರಿ 


ಮಡಿಕೇರಿ ಫೆ.28: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಬಡ ಕುಟುಂಬದವರಿಗೆ ಹೆಚ್ಚುವರಿಯಾಗಿ 9 ಸಾವಿರ ಕೊಳವೆ ಬಾವಿ ಕೊರೆಸಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ, ಪಟ್ಟಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಸೋಮವಾರ ‘ಅಂತ್ಯೋದಯ’ ಕುರಿತು ಕಲ್ಯಾಣ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಹೆಚ್ಚುವರಿ ಆಗಿ 9 ಸಾವಿರ ಕೊಳವೆ ಬಾವಿ ಕೊರೆಸುವಲ್ಲಿ ಒಂದು ತಿಂಗಳಲ್ಲಿ ಅನುಮತಿ ನೀಡಲಾಗುವುದು. ಜೊತೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಶ್ರೀನಿವಾಸ ಪೂಜಾರಿ ಅವರು ಹೇಳಿದರು. 

ಕಲ್ಯಾಣ ಇಲಾಖೆಯ ಸರ್ಕಾರದ ಯೋಜನೆಗಳನ್ನು ತಳ ಮಟ್ಟದ ಸಮಾಜಗಳಿಗೆ ತಲುಪಿಸುವ ನಿಟ್ಟಿನಲ್ಲಿ ‘ಅಂತ್ಯೋದಯ’ ಮೂಲಕ ಮಾಹಿತಿ ನೀಡುವ ಕಾರ್ಯಾಗಾರ ಏರ್ಪಡಿಸಿ, ಸ್ಥಳೀಯ ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು. 

ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದ ಜನರಿಗೆ ಇರುವ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ತಳಮಟ್ಟದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಲು ಪ್ರಯತ್ನಿಸಲಾಗಿದೆ ಎಂದು ಸಚಿವರು ನುಡಿದರು.  

ಜಿಲ್ಲೆಯಲ್ಲಿ 1300 ಕ್ಕೂ ಹೆಚ್ಚು ಸ್ಥಳೀಯ ಪ್ರತಿನಿಧಿಗಳಿಗೆ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಮುಂದಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಪಾರದರ್ಶಕವಾಗಿ ಜನ ಕಲ್ಯಾಣ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಂತಾಗಬೇಕು. ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಲು ಉದ್ದೇಶಿಸಲಾಗಿದೆ ಎಂದರು. 

ವಸತಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ), ವೈದ್ಯಕೀಯ ಪ್ರವೇಶ ಪಡೆದಿರುವುದು ವಿಶೇಷವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸು ಮಾಡುವಲ್ಲಿ, ಸಂವಿಧಾನದ ಆಶಯದಂತೆ ಸರ್ಕಾರ ಕಡು ಬಡವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಸಚಿವರು ನುಡಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಗಿರಿಜನ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್‍ಗಳು ಆಗಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. 

ಕಲ್ಯಾಣ ಇಲಾಖೆಯಲ್ಲಿನ ಕಾರ್ಯಕ್ರಮಗಳನ್ನು ಹೇಗೆ ಪಡೆಯಬೇಕು ಎಂಬುದೇ ತಿಳಿದಿರುವುದಿಲ್ಲ. ಆ ನಿಟ್ಟಿನಲ್ಲಿ ಸ್ಥಳೀಯ ಗ್ರಾ.ಪಂ.ಪ್ರತಿನಿಧಿಗಳಿಗೆ ಮಾಹಿತಿ ಅತೀ ಮುಖ್ಯ ಎಂದರು. 

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದವರನ್ನು ಮೇಲೆತ್ತಲು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಯತ್ನಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಪಂಚಾಯಿತಿ ಸದಸ್ಯರನ್ನು ಒಟ್ಟು ಗೂಡಿಸಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. 

ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂಲಕ ಶ್ರಮಿಸಲಾಗುತ್ತದೆ. ಪಂಚಾಯಿತಿಗಳಲ್ಲಿ ಒಳ್ಳೆಯ ಕೆಲಸ ಮಾಡಿದರೆ, ಉತ್ತಮ ಹೆಸರು ಪಡೆಯಬಹುದು. ಆ ನಿಟ್ಟಿನಲ್ಲಿ ಪಂಚಾಯಿತಿ ಪ್ರತಿನಿಧಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. 

ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಗ್ರಾ.ಪಂ.ಗಳನ್ನು ಬಲಪಡಿಸುವಲ್ಲಿ ‘ಗ್ರಾಮ ಸಭೆ’ಗೆ ಹೆಚ್ಚಿನ ಅಧಿಕಾರ ನೀಡಬೇಕು. ಗ್ರಾಮೀಣ ಜನರು ಸ್ವಾಭಿಮಾನಿ, ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಬೇಕು ಎಂದು ಪ್ರತಿಪಾದಿಸಿದರು.   

ಸರ್ಕಾರದ ಯೋಜನೆಗಳು ಸಾಕಷ್ಟು ಇದ್ದು, ಸರ್ಕಾರದಲ್ಲಿ ಜನಪ್ರತಿನಿಧಿಗಳ ಜೊತೆ ಅಧಿಕಾರಿಗಳು ಕೈಜೋಡಿಸಿದಾಗ ಮಾತ್ರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚು ಇರಬೇಕು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು. 

‘ಸರ್ಕಾರದ ಕಾರ್ಯಕ್ರಮಗಳನ್ನು ಬಡವರು ಪಡೆಯಲು ಒಂದಲ್ಲ ಒಂದು ತೊಡಕುಗಳನ್ನು ಎದುರಿಸುತ್ತಾರೆ. ಅದನ್ನು ನಿವಾರಿಸುವಲ್ಲಿ ಅಧಿಕಾರಿಗಳು ಮುಂದಾಗಬೇಕು. ಜನ ಸಾಮಾನ್ಯರಿಗೆ ಒಳಿತು ಮಾಡಬೇಕು ಎಂಬ ಮನೋಭಾವ ಅಧಿಕಾರಿಗಳಿಗೆ ಬರಬೇಕು. ನ್ಯೂನತೆಗಳನ್ನು ಸರಿಪಡಿಸುವ ಕೆಲಸ ಆಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು.’ 

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯು ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಮಲೆನಾಡು ಭಾಗದಲ್ಲಿ ರಸ್ತೆಗಳು ಆಗಬೇಕು. ಆದರೆ ಹೊಸ ಮಾರ್ಗಸೂಚಿಯಿಂದ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. 

ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಐಐಟಿ ಪ್ರವೇಶ ಪಡೆದಿರುವುದು ಸಂತಸ ತರುವ ಸಂಗತಿ. ಆ ದಿಸೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು.  

ಜಿಲ್ಲಾ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳಿಗೆ, ರಾಜ್ಯ ಮಟ್ಟದಲ್ಲಿ ಟೆಂಡರ್ ಆಹ್ವಾನಿಸುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪಂಚಾಯತ್ ರಾಜ್ ಕಾರ್ಯಕ್ರಮಗಳನ್ನು ಗ್ರಾ.ಪಂ.ಸದಸ್ಯರು ತಿಳಿದುಕೊಳ್ಳಬೇಕು. ಹೆಚ್ಚಿನ ತರಬೇತಿ ಕಾರ್ಯಕ್ರಮ ನೀಡಬೇಕು. ಗ್ರಾ.ಪಂ.ಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು. ಇದರಿಂದ ಪ್ರಧಾನಮಂತ್ರಿ ಅವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಸಾಧ್ಯ ಎಂದು ಅವರು ಹೇಳಿದರು. 

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದೆ. ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದರು. 

‘ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಜಯಪ್ರಕಾಶ್ ಹೆಗ್ಡೆ ಅವರು ಸಲಹೆ ಮಾಡಿದರು.’

ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಎಸ್.ರವಿ ಕುಶಾಲಪ್ಪ ಅವರು ಮಾತನಾಡಿ ಜಿಲ್ಲೆಯಲ್ಲಿನ ಆದಿವಾಸಿ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಂತಾಗಬೇಕು. ಎಲ್ಲಾ ಬಡ ಕುಟುಂಬಗಳಿಗೂ ವಸತಿ, ಕುಡಿಯುವ ನೀರು ಇತರ ಮೂಲ ಸೌಲಭ್ಯವನ್ನು ಕಲ್ಪಿಸಬೇಕು. ಸಾಮರಸ್ಯ ಹಾಗೂ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಕೆ.ಜಿ.ಬೋಪಯ್ಯ ಅವರ ಸಲಹೆ, ಮಾರ್ಗದರ್ಶನವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಪರಿಹರಿಸುವಂತಾಗಬೇಕು ಎಂದು ಕೋರಿದರು. 

 ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಮಹಿಳಾ ಪ್ರತಿನಿಧಿಗಳು, ಸಮಾಜಮುಖಿಯಾಗಿ ಕೆಲಸ ಮಾಡಿ ಯಶಸ್ಸು ಗಳಿಸಬೇಕು. ಜಿಲ್ಲೆಯಲ್ಲಿ ಕಪಾಳ ಜನಾಂಗವು ಸರ್ಕಾರದ ಸೌಲಭ್ಯದಿಂದ ವಂಚಿತವಾಗಿದ್ದು, ಅವರಿಗೆ ಸೌಲಭ್ಯ ತಲುಪಿಸಬೇಕಿದೆ ಎಂದು ಮನವಿ ಮಾಡಿದರು. 

ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ರಸ್ತೆ ಅಭಿವೃದ್ಧಿಯಾಗಬೇಕಾದರೆ ಗ್ರಾ.ಪಂ.ನಿಂದ ಆರಂಭವಾಗಬೇಕು. ಸರ್ಕಾರ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದರು. 

       ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಆಯುಕ್ತರಾದ ಕೆ.ಎ.ದಯಾನಂದ ಅವರು ಮಾತನಾಡಿ ಇಲಾಖೆಯಲ್ಲಿನ ಹಲವು ಯೋಜನೆಗಳನ್ನು ತಳಮಟ್ಟದವರಿಗೆ ತಲುಪಿಸುವುದು ಅಂತ್ಯೋದಯ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು. 

       ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಗಿರಿಜನ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 19 ಅಭಿವೃದ್ಧಿ ನಿಗಮಗಳಿದ್ದು, ಕಲ್ಯಾಣ ಇಲಾಖೆಗಳು ಹಾಗೂ ಅಭಿವೃದ್ಧಿ ನಿಗಮಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಪ್ರಯತ್ನಿಸಲಾಗಿದೆ ಎಂದರು.

       ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಸುಧಾರಣೆಯಾಗಬೇಕು. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕಾಗಿ ಬದಲಾವಣೆಯಾದರೆ ಸುಧಾರಣೆ ಸಾಧ್ಯ. ಆ ನಿಟ್ಟಿನಲ್ಲಿ ಸಮಾಜ ಮುಖಿಯಾಗಿ ಸರ್ಕಾರದ ಕಾರ್ಯಕ್ರಮಗಳು ತಲುಪಬೇಕು ಎಂದರು. 

       ಎಲ್ಲೆಡೆ ಸಾಮಾಜಿಕ ಸಹಭಾಗಿತ್ವದೊಂದಿಗೆ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗುತ್ತದೆ. ಸಮಾಜದ ಕಟ್ಟಕಡೆಯವರಿಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಇರಬೇಕು. ಅಂತ್ಯದಲ್ಲಿರುವವರಿಗೆ ಸೌಲಭ್ಯ ಕಲ್ಪಿಸಿ ಉದಯನ್ಮೋಖ ಮಾಡುವುದೇ ‘ಅಂತ್ಯೋದಯ’ ಕಾರ್ಯಕ್ರಮವಾಗಿದೆ. ಆ ನಿಟ್ಟಿನಲ್ಲಿ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಅವರು ತಿಳಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಅಭಿನಂದಿಸಿದರು. 

ಕಾನೂನು, ವೈದ್ಯಕೀಯ, ಎಂಜಿನಿಯರ್, ಸಂಶೋಧನಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಅಂತರ್‍ಜಾತಿ ವಿವಾಹಿತರಿಗೆ ಪ್ರೋತ್ಸಾಹ ಧನ ನೀಡಲಾಯಿತು. 

       ಹಾಗೆಯೇ ಅಂಬೇಡ್ಕರ್ ಅಭಿವೃದ್ಧಿ, ವಾಲ್ಮೀಕಿ ಅಭಿವೃದ್ಧಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಅರ್ಹರಿಗೆ ಆಟೋ, ಟ್ಯಾಕ್ಸಿ ಹಾಗೂ ಪಂಪ್‍ಸೆಟ್ ಉಪಕರಣಗಳನ್ನು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ವಿತರಿಸಿದರು.   

       ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಕುಮಾರ್, ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಚಂದ್ರನಾಯಕ್, ಡಿ.ದೇವರಾಜ ಅರಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರವಿ, ಪರಿಶಿಷ್ಟ ಪಂಗಡದ ಉಪ ನಿರ್ದೇಶಕರಾದ ರಾಜ್ ಕುಮಾರ್, ಆದಿಜಾಂಬವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಟಿ.ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿ ಶಂಭುಲಿಂಗಯ್ಯ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ರಮೇಶ್ ದೇಸಾಯಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಜು, ಗಿರಿಜನ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕರಾದ ರಾಜೇಶ್ ಜಿ.ಗೌಡ, ಭಾರತಿ ಇತರರು ಇದ್ದರು. 

     ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಬಾಲಕೃಷ್ಣ ರೈ, ಎಸ್‍ಸಿಪಿ/ ಟಿಎಸ್‍ಪಿ ಹಾಗೂ ವಿವಿಧ ನಿಗಮಗಳ ಕಾರ್ಯಕ್ರಮಗಳ ಬಗ್ಗೆ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರಾದ ನೀತಾ,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಕವಿತಾ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಹದೇವಿ ಅವರು ಮಾಹಿತಿ ನೀಡಿದರು.     

     ಅಂಬೇಡ್ಕರ್, ವಾಲ್ಮೀಕಿ ಮತ್ತು ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಸ್ವಾಗತಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನೀಯರು ಪ್ರಾರ್ಥಿಸಿದರು. ಮೈಸೂರಿನ ರಾಮಚಂದ್ರ ಹಡಪದ ಮತ್ತು ತಂಡದವರು ನಾಡಗೀತೆ ಹಾಡಿದರು. ಮಾದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,