Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಮ್ಮತ್ತಿ ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಲೋಕಾರ್ಪಣೆ

ಅಮ್ಮತ್ತಿ ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಲೋಕಾರ್ಪಣೆ

ರೂ.೨೫೦ ಕೋಟಿ ವೆಚ್ಚದ ಸುವಾಸಿತ ಹಾಲು ಘಟಕ ಆರಂಭ

ಹಾಸನ ಕೆ.ಎಂ.ಎಫ್. ನಿರ್ದೇಶಕ ಕೆ.ಕೆ.ಹೇಮಂತ್‌ಕುಮಾರ್ ಮಾಹಿತಿ


ಗೋಣಿಕೊಪ್ಪಲು,ಫೆ.24: ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಹಾಸನದ ಕೆ.ಎಂ.ಎಫ್. ಘಟಕದಲ್ಲಿ ನಂದಿನಿ ಬ್ರಾಂಡ್‌ನ ವಿವಿಧ ೧೨ ಸುವಾಸಿತ,ಸ್ವಾದಿಷ್ಟ ಹಾಲು ಉತ್ಪಾದನಾ ಘಟಕವನ್ನು ರೂ.೨೫೦ ಕೋಟಿ ವೆಚ್ಚದಲ್ಲಿ ಸ್ಥಾಪಿಸಿದ್ದು, ತಾ.೨೫ ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ಡೈರಿಗಳಿಂದ ದಿನನಿತ್ಯವೂ ಸುಮಾರು ೧೨ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಕೇವಲ ೨.೫೦ ಲಕ್ಷ ಲೀಟರ್ ಹಾಲು ಮಾತ್ರಾ ಮಾರಾಟವಾಗುತ್ತಿದೆ.ಉಳಿಕೆ ೯.೫೦ ಲಕ್ಷ ಲೀಟರ್ ಹಾಲಿನಿಂದ ಪ್ರತ್ಯೇಕ ಹಾಲು ಉತ್ಪನ್ನಗಳನ್ನು ತಯಾರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಹಾಲು ಒಕ್ಕೂಟದ ಹಾಸನ ಘಟಕದ ಅಧ್ಯಕ್ಷ ಹೆಚ್.ಡಿ.ರೇವಣ್ಣ ಅವರ ಮಹತ್ವಾಕಾಂಕ್ಷೆಯ ರೂ.೨೫೦ ಕೋಟಿ ವೆಚ್ಚದ ಸುವಾಸಿತ ಹಾಲು ಅತ್ಯಾಧುನಿಕ ತಂತ್ರಜ್ಞಾನದ ಉತ್ಪಾದನಾ ಘಟಕವನ್ನು ಜರ್ಮನಿಯಿಂದ ಖರೀದಿಸಿ ಅಳವಡಿಸಲಾಗಿದೆ.

ಆರೋಗ್ಯಕರ ಸುವಾಸಿತ ೧೨ ಮಾದರಿಯ ಸ್ವಾದಿಷ್ಟ ಹಾಲು ಉತ್ಪಾದನೆ ಆರಂಭಗೊAಡಲ್ಲಿ ವಿಶೇಷವಾದ ಬಾಟಲ್‌ಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು ಸುಮಾರು ೬ ತಿಂಗಳ ಕಾಲ ಕೆಡದಂತೆ ಇಡಬಹುದು. ಈಗಾಗಲೇ ಸುಮಾರು ರೂ.೧೦ ಲಕ್ಷ ಮೊತ್ತದ ಮಾರುಕಟ್ಟೆ ಸುವಾಸಿತ ಹಾಲಿನ ಬಾಟಲ್‌ಗೆ ಬೇಡಿಕೆ ಬಂದಿದೆ ಎಂದು ಹಾಸನ ಕೆ.ಎಂ.ಎಫ್.ನಿರ್ದೇಶಕ ಕೆ.ಕೆ.ಹೇಮಂತ್‌ಕುಮಾರ್ ಮಾಹಿತಿ ನೀಡಿದರು.

ಇಲ್ಲಿಗೆ ಸಮೀಪ ಹೊಸೂರುವಿನಲ್ಲಿ ಅಮ್ಮತ್ತಿ ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಎರಡು ಮೂರು ವರ್ಷ ಕೊರೊನಾ ಮಹಾಮಾರಿಯಿಂದಾಗಿ ಹಾಲು ಸಂಗ್ರಹ ಕೇಂದ್ರಗಳು ತೀವೃ ಸಂಕಷ್ಟಕ್ಕೀಡಾಗಿದ್ದವು. ಇದೀಗ ಎಲ್ಲೆಡೆ ಗುಣಮಟ್ಟದ ಹಾಲು ಖರೀದಿಗೆ ಒಕ್ಕೂಟ ಆಸಕ್ತಿವಹಿಸಿದೆ.ದಕ್ಷಿಣ ಕೊಡಗಿನ ಪ್ರಪ್ರಥಮ ಮಹಿಳಾ ಹಾಲು ಒಕ್ಕೂಟ ಇಂದು ಆರಂಭಗೊಂಡಿದ್ದು, ನಾಳೆಯಿಂದಲೇ ಹೊಸೂರುವಿಗೆ ಹಾಲು ಸಂಗ್ರಹಣೆಗಾಗಿ ಬೆಳಿಗ್ಗೆ ಮತ್ತು ಸಂಜೆ ಕೆ.ಎಂ.ಎಫ್.ವಾಹನಗಳು ಬರಲಿವೆ ಎಂದರು. ನಂದಿನಿ ಪಶು ಆಹಾರವನ್ನೇ ಬಳಸುವ ಮೂಲಕ ಗುಣಮಟ್ಟದ ಹಾಲು ಉತ್ಪಾದನೆ ಸಾಧ್ಯ.ಈ ನಿಟ್ಟಿನಲ್ಲಿ ಹೊಸೂರು ಡೈರಿಗೆ ನಂದಿನಿ ಫೀಡ್ಸ್ ಬರಲಿದೆ.ಯಾವದೇ ಸಾಗಾಟ ವೆಚ್ಚವನ್ನು ಫಲಾನುಭವಿಗಳು ಭರಿಸುವಂತಿಲ್ಲ ಎಂದು ಅಭಯ ನೀಡಿದರು.

ಹಾಸನ ಹಾಲು ಒಕ್ಕೂಟ ಹೊಸಾ ಹೊಸಾ ಯೋಜನೆಯನ್ನು ಜಾರಿಗೆ ತರುತ್ತಿದ್ದು ಪಶುಪಾಲನಾ ಯಂತ್ರೋಪಕರಣ(ವೀಡ್ ಕಟ್ಟರ್ ಇತ್ಯಾದಿ) ಇತ್ಯಾದಿಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಡೈರಿಗಳಿಗೆ ಗುಣಮಟ್ಟದ ಹಾಲು ಸರಬರಾಜು ಅಗತ್ಯ.ಭಾರತೀಯ ಸೇನೆಗೂ ಮುಂದಿನ ದಿನಗಳಲ್ಲಿ ಪೈಪೋಟಿ ದರದಲ್ಲಿ ಉತ್ಕೃಷ್ಟ ಹಾಲು ಸರಬರಾಜು ಮಾಡುವ ಉದ್ಧೇಶವಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೊಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರು, ಇದೀಗ ಮಹಿಳಾ ಹಾಲು ಸಹಕಾರ ಸಂಘ ಸ್ಥಾಪನೆಯಾಗಲು ನಬಾರ್ಡ್ನ ನಿವೃತ್ತ ಮಹಾ ಪ್ರಬಂಧಕ ಮುಂಡಂಡ ನಾಣಯ್ಯ ಹಾಗೂ ಹೊಸೂರುವಿನ ತುಷಾರ್ ಕುಲಕರ್ಣಿ ಸಹಕಾರವನ್ನು ಸ್ಮರಿಸಬೇಕಾಗಿದೆ. ಕಳೆದ ೩ ವರ್ಷಗಳಿಂದ ಹೈನುಗಾರಿಕೆಗೆ ಇಲ್ಲಿನ ಹಲವು ಗ್ರಾಮಸ್ಥರು ಶ್ರಮವಹಿಸಿದ್ದಾರೆ. ಸುಮಾರು ೫೦೦ ಲೀಟರ್‌ಗೂ ಅಧಿಕ ಹಾಲನ್ನು ನಂಜರಾಯಪಟ್ಟಣ

ಹಾಲು ಡೈರಿಗೆ ಸಾಗಾಟ ಮಾಡಬೇಕಾಗಿತ್ತು. ಹಾಲು ಸಾಗಾಟವೆಚ್ಚವನ್ನು ನಾವುಗಳೇ ಭರಿಸಬೇಕಾಗಿತ್ತು. ಇದೀಗ ಹಾಲು ಒಕ್ಕೂಟದ ವಾಹನ ತಾ.೨೪ ರಿಂದಲೇ ಹೊಸೂರುವಿನ ನೂತನ ಡೈರಿಗೆ ಬರುವದರಿಂದ ಇಲ್ಲಿನ ಹಾಲು ಉತ್ಪಾದಕರಿಗೆ ಲಾಭದಾಯಕವಾಗಿದೆ.ನಂಜರಾಯಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸೋಮೆಯಂಡ ಉದಯ್ ಅವರಿಂದಾಗಿ ಶಿಸ್ತು ಮತ್ತು ಗುಣಮಟ್ಟದ ಹಾಲು ಸಂಗ್ರಹದ ವಿಧಾನವನ್ನು ಕಲಿತೆವು. ಮುಂದಿನ ದಿನಗಳಲ್ಲಿ ಹೊಸೂರು,ಕಳತ್ಮಾಡು,ಅಮ್ಮತ್ತಿ, ಎಂಜಿಲಗೆರೆ ಮುಂತಾದ ಗ್ರಾಮಗಳ ಹಾಲು ಉತ್ಪಾದಕರು ನೇರವಾಗಿ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ನೀಡುವ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ನಂಜರಾಯಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸೋಮಯಂಡ ಉದಯ್ ಅವರು ಮಾತನಾಡಿ, ಈ ಹಿಂದೆ ಜಿಲ್ಲೆಯಲ್ಲಿ ಸುಮಾರು ೬೪ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು,ಇAದು ಎಲ್ಲವೂ ಕಣ್ಮರೆಯಾಗಿದೆ. ದಕ್ಷಿಣಕೊಡಗಿನಲ್ಲಿ ಇದೀಗ ಪ್ರಥಮ ಮಹಿಳಾ ಹಾಲು ಉತ್ಪಾದಕರ ಸಂಘ ಸ್ಥಾಪನೆಯಾಗಿದ್ದು, ಈ ಭಾಗದ ಉತ್ಪಾದಕರಿಗೆ ಲಾಭದಾಯಕವಾಗಲಿದೆ. ನಂದಿನಿ ಬ್ರಾಂಡ್ ಐಎಸ್‌ಐ ಮಾರ್ಕ್ನ ಹಸುವಿನ ಫೀಡ್ ಬಳಕೆ ಉತ್ತಮ ಎಂದು ಅಭಿಪ್ರಾಯಪಟ್ಟರು.

ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷೆ ಸುಭಾಷಿಣಿ ಅವರು ಮಾತನಾಡಿ, ಹಾಲಿಗೆ ಅಮೃತದ ಸ್ಥಾನವಿದೆ.ತಾಯಿಯ ಎದೆ ಹಾಲಿಗಿಂತಲೂ ಹಸುವಿನ ಹಾಲು ಕುಡಿದು ಬದುಕಿದವರೇ ಅಧಿಕ. ಹೈನುಗಾರಿಕೆಗೆ ಈ ಭಾಗದಲ್ಲಿ ಮಹಿಳೆಯರು ಹಾಗೂ ಪುರುಷರು ಪ್ರೋತ್ಸಾಹ ನೀಡುವ ಮೂಲಕ ತಮ್ಮ ಆರ್ಥಿಕ ವಹಿವಾಟನ್ನು ಹೆಚ್ಚಿಸಿಕೊಳ್ಳಬಹುದು.ಹಸುವಿನ ಹಾಲಿನಿಂದ ವಿವಿಧ ಉತ್ಪನ್ನಗಳು,ತಿಂಡಿಯನ್ನು ತಯಾರು ಮಾಡಬಹುದು. ಈ ಭಾಗದಲ್ಲಿ ಹಾಲು ಸಂಗ್ರಹ ಅಧಿಕಗೊಳ್ಳಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಹಸು ಸಾಕಾಣೆಯಿಂದ ಪರಿಸರದಲ್ಲಿ ರೋಗ ರುಜಿನಗಳಿಂದ ಮುಕ್ತಿ ಪಡೆಯಬಹುದು. ಸಹಕಾರ ಸಂಘ ಸ್ಥಾಪನೆಯಲ್ಲಿ ಕೊಲ್ಲೀರ ಗೋಪಿ ಚಿಣ್ಣಪ್ಪ ಹಾಗೂ ತುಷಾರ್ ಕುಲಕರ್ಣಿ ಅವರ ಸಹಕಾರವನ್ನು ಇದೇ ಸಂದರ್ಭ ಸ್ಮರಿಸಿದರು.

ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಹಾಲು ಸಂಗ್ರಹ ಹಾಗೂ ನಂಜರಾಯಪಟ್ಟಣ ಡೈರಿಗೆ ದಿನಂಪ್ರತಿ ಸಾಗಿಸಲು ಸಹಕಾರ ನೀಡಿದವರನ್ನು ಇದೇ ಸಂದರ್ಭ ಗುರುತಿಸಿ ಕಿರು ಉಡುಗೊರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹೊಸೂರು ಗ್ರಾ.ಪಂ.ಅಧ್ಯಕ್ಷೆ ಶಾಂತಿ ಸೋಮಯ್ಯ, ಮಾಜಿ ಜಿ.ಪಂ.ಸದಸ್ಯ ಕೊಲ್ಲೀರ ಧರ್ಮಜ, ಕೂಡಿಗೆ ಡೈರಿಯ ಸಹಾಯಕ ವ್ಯವಸ್ಥಾಪಕ ವೇಣುಗೋಪಾಲ್ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಕೂಡಿಗೆ ಡೈರಿ ವ್ಯವಸ್ಥಾಪಕ ಹೆಚ್.ಎನ್.ನಂದೀಶ್, ಗ್ರಾ.ಪಂ.ಉಪಾಧ್ಯಕ್ಷ ಕೊಲ್ಲೀರ ಧನು ಪೂಣಚ್ಚ,ಗ್ರಾ.ಪಂ.ಪಿಡಿಓ ಶ್ರೀನಿವಾಸ್, ಸಹಕಾರ ಸಂಘಕ್ಕೆ ಉದಾರವಾಗಿ ಮಳಿಗೆ ನೀಡಿದ ಪಟ್ಟಡ ಧನು ಉತ್ತಯ್ಯ ಉಪಸ್ಥಿತರಿದ್ದರು. ಅಧ್ಯಕ್ಷೆ ಸುಭಾಷಿಣಿ ಸ್ವಾಗತ ಹಾಗೂ ಸಂಘದ ಉಪಾಧ್ಯಕ್ಷೆ ಜ್ಯೋತಿ ಉತ್ತಯ್ಯ ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,