Header Ads Widget

Responsive Advertisement

ಕಾಫಿ ಗಿಡದ ಎಲೆಗಳಿಂದ ಪಾನೀಯ ತಯಾರಿ ; ತಂತ್ರಜ್ಞಾನ ಮಾರಾಟಕ್ಕೆ ಸಿದ್ದ‌

ಕಾಫಿ ಗಿಡದ ಎಲೆಗಳಿಂದ ಪಾನೀಯ ತಯಾರಿ; ತಂತ್ರಜ್ಞಾನ  ಮಾರಾಟಕ್ಕೆ ಸಿದ್ದ‌


ಮೈಸೂರು: ದಿನೇ ದಿನೇ ಏರುತ್ತಿರುವ ಉತ್ಪಾದನಾ ವೆಚ್ಚ, ಪ್ರತಿಕೂಲ ಹವಾಮಾನ, ಕೋವಿಡ್ ಲಾಕ್‌ಡೌನ್ ಹಾಗೂ ದರ ಕುಸಿತದ ಕಾರಣದಿಂದ  ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಒಂದಷ್ಟು  ಸಂತಸ ನೀಡುವ ಸುದ್ದಿಯೊಂದನ್ನು  ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾಲಯ ನೀಡಿದೆ.  ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾಲಯದ ( CFTRI) ವಿಜ್ಞಾನಿಯೊಬ್ಬರು ಕಾಫಿ ಬೆಳೆಗಾರರು ತಮ್ಮ ತೋಟಗಳಿಂದ ಹೆಚ್ಚಿನ ಆದಾಯ ಗಳಿಸುವ ಸಂಶೋಧನೆಯೊಂದನ್ನು ಮಾಡಿ ಯಶಸ್ವಿಯಾಗಿದ್ದು ಇದೀಗ ಈ ತಂತ್ರಜ್ಞಾನವನ್ನು ಮಾರಾಟಕ್ಕೆ ಇಡಲಾಗಿದೆ.

ಕೇಂದ್ರೀಯ ಆಹಾರ ಸಂಶೋಧನಾಲಯದ  ಟೆಕ್ನಾಲಜಿ ಟ್ರಾನ್ಸ್‌ಫರ್‌ ಮತ್ತು ಬಿಸಿನೆಸ್‌ ಡೆವಲಪ್‌ಮೆಂಟ್‌ (TTBD) ವಿಭಾಗವು  ಈ ಮಾರಾಟದ ಉಸ್ತುವಾರಿ ಹೊಂದಿದ್ದು  ಈ ತಂತ್ರಜ್ಞಾನವನ್ನು ಪಡೆಯಬಯಸುವವರು  ಒಂದು ಲಕ್ಷ ರೂಪಾಯಿ ಮತ್ತು ಶೇಕಡಾ 18 ರಷ್ಟು ಜಿಎಸ್‌ಟಿ ನೀಡಿ  ಅನುಮತಿ ಪಡೆಯಬಹುದಾಗಿದೆ. ನಂತರ ಈ ಒಣಗಿದ ಕಾಫಿ ಎಲೆಯ ಪುಡಿಯನ್ನು ಮಾರಾಟ ಮತ್ತು ಪಡಿಯಿಂದ ತಯಾರಿಸಿದ  ಪಾನೀಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದಾಗಿದೆ. ಈ ಕುರಿತು ಮಾಹಿತಿ ನೀಡಿದ ಟಿಟಿಬಿಡಿ ಅಧಿಕಾರಿಗಳು ಈಗಾಗಲೇ ಸಾಕಷ್ಟು ವಿಚಾರಣೆಗಳು ಬರಲಾರಂಬಿಸಿದ್ದು ಇದು ಮಾರಾಟಕ್ಕೆ ಮುಕ್ತವಾಗಿದ್ದು  ವ್ಯಕ್ತಿ ಅಥವಾ ಸಂಸ್ಥೆ ಯಾರು ಬೇಕಾದರೂ ಖರೀದಿಸಬಹುದಾಗಿದೆ ಎಂದು ತಿಳಿಸಿದರು.

ಒಣಗಿದ ಕಾಫಿ ಎಲೆಗಳಿಂದಲೂ ಪಾನೀಯ ತಯಾರು ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಮೈಸೂರು ಸಂಶೋಧನಾಲಯದ ಪ್ರಧಾನ ವಿಜ್ಞಾನಿ ಪುಷ್ಪಾ ಎಸ್. ಮೂರ್ತಿ ಅವರು ಇದರಿಂದ ಮನುಷ್ಯನ ಆರೋಗ್ಯಕ್ಕೂ ಉಪಯುಕ್ತವಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು  ಮಾತನಾಡಿದ ಅವರು, ಕಾಫಿ ಎಲೆಗಳಿಂದ ಪಾನೀಯ ತಯಾರು ಮಾಡುವುದರಿಂದ ಬೆಳೆಗಾರರಿಗೆ ವರ್ಷವಿಡೀ ಆದಾಯ ಲಭಿಸಲಿದೆ.  2019 ರಿಂದಲೇ ತಾವು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತಿದ್ದು ಇದಕ್ಕೆ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದಿಂದ ಅನುದಾನವನ್ನು ಪಡೆದುಕೊಳ್ಳಲಾಗಿದೆ ಎಂದರು. ಪುಷ್ಪಾ ಅವರ ಪ್ರಕಾರ ಒಣಗಿದ ಎಲೆಯ ಪುಡಿಯ  ಸಾರವು ಕಾಫಿಯ ರುಚಿಗಿಂತ ಭಿನ್ನವಾಗಿದೆ. “ಕಾಫಿ ಅಥವಾ ಚಹಾಕ್ಕೆ ಹೋಲಿಸಿದರೆ ಇದು ಕಡಿಮೆ ‘ಕೆಫಿನ್’ ಅಂಶ ಹೊಂದಿದೆ. ಕಾಫಿ ಎಲೆಗಳಲ್ಲಿ ಫಿನಾಲಿಕ್ ಆಮ್ಲ ಸಮೃದ್ಧವಾಗಿದೆ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಒಂದು ಕಾಫಿ ಎಲೆಯು ಹಸಿರು ಚಹಾಕ್ಕಿಂತ ಸುಮಾರು 17 ಪ್ರತಿಶತ ಹೆಚ್ಚು ಉತ್ಕೃಷ್ಟ ನಿರೋಧಕಗಳನ್ನುಹೊಂದಿರುತ್ತದೆ. ಪಾನೀಯವನ್ನು ಸರಳವಾಗಿ ಸೇವಿಸಬೇಕು. ಪಾನೀಯವು ‘ಕ್ಲೋರೊಜೆನಿಕ್ ಆಮ್ಲ’ ಮತ್ತು ‘ಮ್ಯಾಂಗಿಫೆರಿನ್’ನಂತಹ ಆರೋಗ್ಯ-ಉತ್ತೇಜಿಸುವ ‘ಪಾಲಿಫಿನಾಲ್’ಗಳನ್ನು ಹೊಂದಿದ್ದು, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟ, ಉರಿಯೂತ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು. ಕಾಫಿ ಬೀಜದ ಬೆಳವಣಿಗೆಗೆ ಅಡ್ಡಿಯಾಗದಂತೆ ರೈತರು ಹಿಂಗಾರು ಹಂಗಾಮಿನ ಸಮಯದಲ್ಲಿ ಬಲಿತ ಕಾಫಿ ಎಲೆಗಳನ್ನು ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ಕಾಫಿ ಎಲೆಗಳು ನಿರುಪಯುಕ್ತ ವಸ್ತು ಎಂದು ಭಾವಿಸಲಾಗುತ್ತದೆ. ಆದರೆ ಕಾಫಿ ಬೆಳೆಯುವ ದೇಶವೇ ಆಗಿರುವ ಇಂಡೋನೇಷ್ಯಾ ಮತ್ತು ಇಥಿಯೋಪಿಯಾದಲ್ಲಿ ಕಾಫಿ ಎಲೆಯಿಂದ ಪಾನೀಯವನ್ನು ತಯಾರಿಸಿ ಯಶಸ್ವಿಯಾಗಿದೆ. ಅಲ್ಲಿ ಇದನ್ನು ಹಿಂದಿ ಪಾನೀಯ ತಯಾರಿಸುತಿದ್ದು ಇದನ್ನು “ಕುಟಿ ಟೀ” ಮತ್ತು ಪಶ್ಚಿಮ ಸುಮಾತ್ರಾ ಮತ್ತು ಇಂಡೋನೇಷ್ಯಾದಲ್ಲಿ “ಕಹ್ವಾ ಡಾನ್” ಎಂದು ಕರೆಯಲಾಗುತ್ತದೆ. ಆದರೆ, ಈ ಪ್ರದೇಶಗಳಲ್ಲಿನ ಪಾನೀಯ ಕೇಂದ್ರೀಯ ಆಹಾರ ಸಂಶೋಧನಾಲಯ ಅಭಿವೃದ್ಧಿಪಡಿಸಿದ ಪಾನೀಯಕ್ಕಿಂತ ಭಿನ್ನವಾಗಿದೆ. ಪುಷ್ಪಾ ಅವರು ಅಭಿವೃದ್ಧಿಪಡಿಸಿರುವ ಪಾನೀಯವನ್ನು ನೀರಿನಿಂದ ತಯಾರಿಸಬಹುದು, ಕೆಲವು ನಿಮಿಷಗಳ ಕಾಲ ಫಿಲ್ಟರ್ ಮಾಡಿಯೂ ಸೇವಿಸಬಹುದಾಗಿದೆ. ಈ ಪಾನೀಯದ ರುಚಿ ಜನಪ್ರಿಯವಾದರೆ  ಹೆಚ್ಚು  ಉದ್ಯೋಗ ಸೃಷ್ಟಿಯ ಜತೆಗೇ ಬೆಳೆಗಾರರಿಗೂ ಆದಾಯ ಲಭಿಸಲಿದೆ. ಹೆಚ್ಚಿನ ವಿವರಗಳಿಗೆ: 0821-2514534 , ಈ ಮೇಲ್‌ ಐಡಿ: ttbd@cftri.res.in

✍️....ಕೋವರ್‌ ಕೊಲ್ಲಿ ಇಂದ್ರೇಶ್‌ 

             ( ಪತ್ರಕರ್ತರು )

( ಕೋವರ್‌ ಕೊಲ್ಲಿ ಇಂದ್ರೇಶ್‌ )       
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,