Header Ads Widget

ಸರ್ಚ್ ಕೂರ್ಗ್ ಮೀಡಿಯ

ಪಲ್ಸ್ ಪೊಲಿಯೊ ಅಭಿಯಾನಕ್ಕೆ ಸಹಕರಿಸಿ; ಡಾ.ಆರ್.ವೆಂಕಟೇಶ್ ಮನವಿ

ಪಲ್ಸ್ ಪೊಲಿಯೊ ಅಭಿಯಾನಕ್ಕೆ ಸಹಕರಿಸಿ; ಡಾ.ಆರ್.ವೆಂಕಟೇಶ್ ಮನವಿ


ಮಡಿಕೇರಿ ಫೆ.25: ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮವು ಫೆಬ್ರವರಿ, 27 ರಿಂದ ಮಾರ್ಚ್ 2 ರ ವರೆಗೆ ನಡೆಯಲಿದ್ದು, ಆ ದಿಸೆಯಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡ್‍ನಲ್ಲಿ ಫೆಬ್ರವರಿ 27 ರಂದು ಬೆಳಗ್ಗೆ 8 ಗಂಟೆಗೆ ಚಾಲನೆ ದೊರೆಯಲಿದ್ದು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೊಲಿಯೊ ಹನಿ ಕೊಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಕೋರಿದ್ದಾರೆ.  

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಫೆಬ್ರವರಿ, 27 ರಂದು ಎಲ್ಲಾ ಬೂತ್ ಮಟ್ಟದಲ್ಲಿ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಪೊಲಿಯೊ ಹನಿ ಹಾಕಲಾಗುತ್ತಿದ್ದು, ಸಾಧ್ಯವಾದಷ್ಟು ಫೆಬ್ರವರಿ, 27 ರಂದೇ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲಿಯೋ ಹನಿ ಹಾಕಿಸಲು ಮುಂದಾಗುವಂತೆ ಡಾ.ಆರ್.ವೆಂಕಟೇಶ್ ಅವರು ಮನವಿ ಮಾಡಿದರು. 

ಫೆಬ್ರವರಿ, 27 ರಂದು ಪಲ್ಸ್ ಪೊಲಿಯೋ ಹನಿ ಹಾಕಿಸದಿರುವವರು, ಗ್ರಾಮೀಣ ಪ್ರದೇಶದಲ್ಲಿ ಫೆಬ್ರವರಿ, 28, ಮಾಚ್, 01 ರಂದು ಹಾಗೆಯೇ ನಗರ/ ಪಟ್ಟಣ ಪ್ರದೇಶಗಳಲ್ಲಿ ಫೆಬ್ರವರಿ, 28, ಮಾರ್ಚ್, 01 ಮತ್ತು 02 ರಂದು 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲಿಯೋ ಹನಿ ಹಾಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದರು.  

ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾತನಾಡಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೊಲಿಯೊ ಹನಿ ಹಾಕುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ಸುಗೊಳಿಸಲು ಮುಂದಾಗಲಾಗಿದೆ. ಗಿರಿಜನ ಹಾಡಿ ಪ್ರದೇಶಗಳು ಸೇರಿದಂತೆ ಲೈನ್‍ಮನೆಗಳು, ಎಲ್ಲಾ ಕಡೆಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲಿಯೋ ಹನಿ ನೀಡಲು ಮುಂದಾಗಲಾಗಿದೆ ಎಂದರು. 

ಹಾಗೆಯೇ ಪ್ಲಾಂಟರ್ ಅಸೋಷಿಯೇಷನ್, ರೋಟರಿ, ಲಯನ್ಸ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಕಾರದಿಂದ ಪಲ್ಸ್ ಪೊಲಿಯೋ ಹನಿ ಕಾರ್ಯಕ್ರಮ ಯಶಸ್ಸುಗೊಳಿಸಲಾಗುತ್ತದೆ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಎಲ್ಲರೂ ಸಹಕರಿಸುವಂತೆ ಡಾ.ಗೋಪಿನಾಥ್ ಅವರು ಕೋರಿದರು. 

ಇನ್ನಷ್ಟು ಮಾಹಿತಿ: ಕೊಡಗು ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳ ಒಟ್ಟು 42,375 ಗುರುತಿಸಿದ್ದು ,ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 37,975 ಮಕ್ಕಳು ಹಾಗೂ  ನಗರ ಪ್ರದೇಶದಲ್ಲಿ 4,400 ಮಕ್ಕಳನ್ನು ಗುರುತಿಸಲಾಗಿದೆ ಎಂದು ಡಿಎಚ್‍ಒ ಅವರು ತಿಳಿಸಿದರು. 

ಒಟ್ಟು ಜನಸಂಖ್ಯೆಯಲ್ಲಿ 645 ವಲಸೆ ಪ್ರದೇಶಗಳನ್ನು ಗುರುತಿಸಿದ್ದು, ಒಟ್ಟು ವಲಸಿಗರ ಜನಸಂಖ್ಯೆ 1,31,607 ಇದ್ದು, ಇವರಲ್ಲಿ ಐದು ವರ್ಷದೊಳಗಿನ ಒಟ್ಟು 9,337 ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳಿಗೆ  ಪಲ್ಸ್ ಪೊಲಿಯೊ ಹಾಕಲು ಒಟ್ಟಾರೆ 6 ಸಂಚಾರಿ ಲಸಿಕಾ ತಂಡ ರಚಿಸಲಾಗಿದೆ. ಇವರು ದುರ್ಗಮ ಪ್ರದೇಶಗಳಲ್ಲಿ 3 ದಿನಗಳೂ ಮಕ್ಕಳಿಗೆ ಲಸಿಕೆಯನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು. 

ಜಿಲ್ಲೆಯಲ್ಲಿ ಒಟ್ಟು 464 ಬೂತ್‍ಗಳನ್ನು ತೆರೆಯಲಾಗುತ್ತಿದ್ದು,  30 ಟ್ರಾನ್ಸಿಟ್ ಬೂತ್‍ಗಳು ಹಾಗೂ 06 ಸಂಚಾರಿ ತಂಡಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ತಲಾ 02 ಸಂಚಾರಿ ತಂಡ ರಚಿಸಲಾಗಿದೆ ಎಂದು ಡಾ.ಆರ್.ವೆಂಕಟೇಶ್ ಅವರು ಮಾಹಿತಿ ನೀಡಿದರು. 

ಜಿಲ್ಲೆಯಾದ್ಯಂತ ಲಸಿಕಾ ಬೂತ್‍ಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 1,928 ಲಸಿಕೆ ಹಾಕುವವರನ್ನು, 86 ಮಂದಿ ಮೇಲ್ವಿಚಾರಕರನ್ನು ನಿಯೋಜಿಲಾಗಿರುತ್ತದೆ. 2 ನೇ ಹಾಗೂ 3 ನೇ ದಿನದಂದು ಮನೆ-ಮನೆ ಭೇಟಿ ನೀಡಲು 924 ತಂಡ ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದರು. 

ಲಸಿಕೆ ನೀಡಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ನೀಡಲು ಅವಶ್ಯ ಇರುವ ಕಡೆಗಳಲ್ಲಿ ತರಬೇತಿಯಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದೆ ಎಂದರು. 

ಪ್ರವಾಸಿ ಸ್ಥಳಗಳು, ಜನ ಸಂದಣಿ ಹೆಚ್ಚು ಇರುವ ಕಡೆ ಟ್ರಾನ್ಸಿಟ್ ಬೂತ್‍ಗಳನ್ನು ತೆರೆಯಲಾಗುತ್ತದೆ. ಲಸಿಕಾ ಕಾರ್ಯಕರ್ತೆರು ಇಲ್ಲಿ ಕಂಡುಬರುವ ಮಕ್ಕಳಿಗೆ ಲಸಿಕೆ ನೀಡುವರು. ಎಲ್ಲಾ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಟ್ ಬೂತ್ ತೆರೆಯಲಾಗುವುದು. ಭಾನುವಾರದಂದು ಸಂತೆ ನಡೆಯುವ ಸ್ಥಳಗಳಲ್ಲಿ ಸಹ ಟ್ರಾನ್ಸಿಟ್ ಬೂತ್‍ಗಳನ್ನು ತೆರೆದು ಮಕ್ಕಳಿಗೆ ಪೊಲಿಯೊ ಹನಿ ಹಾಕಲಾಗುವುದು ಎಂದು ವಿವರಿಸಿದರು. 

ಕಾರ್ಮಿಕರು ಹೆಚ್ಚಾಗಿ ಇರುವ ತೋಟಗಳನ್ನು ಗುರಿಯಾಗಿಸಿ, ಮನೆ-ಮನೆಗೆ ಭೇಟಿ ಸಂದರ್ಭದಲ್ಲಿ ಇಂತಹ ಪ್ರದೇಶಗಳಲ್ಲಿ ಕಂಡುಬರುವ ಮಕ್ಕಳಿಗೆ ಲಸಿಕೆ ನೀಡಲು ಸೂಕ್ತ ಕ್ರಮಕೈಗೊಳ್ಳಲು ಎಲ್ಲಾ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು. 

ಸಾರ್ವಜನಿಕರು ರಾಷ್ಟ್ರೀಯ ಪಲ್ಸ್ ಪೊಲಿಯೊ ಕಾರ್ಯಕ್ರಮದ ಸದುಪಯೋಗ ಮಾಡಿಕೊಂಡು 5 ವರ್ಷದೊಳಗಿನ ಮಕ್ಕಳು ಇದ್ದಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಹಾಗೂ ತಮ್ಮ ಮನೆಯ ಸಮೀಪವಾಗಲಿ ಅಥವಾ ತಮ್ಮ ತೋಟದಲ್ಲಿ ಕಾರ್ಮಿಕರ ಮಕ್ಕಳೇ ಇರಲಿ ಹಾಗೂ ತಮ್ಮ ಗಮನಕ್ಕೆ ಬರುವ ಯಾವುದೇ ಮಗುವನ್ನು ಹತ್ತಿರದ ಲಸಿಕಾ ಬೂತ್‍ಗಳಲ್ಲಿ ಪೊಲಿಯೊ ಲಸಿಕೆ ಹಾಕಿಸಿಕೊಳ್ಳಲು ತಿಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಕೋರಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,