Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಹಕಾರ ಸಂಘ ಬಲಪಡಿಸಲು ಶ್ರಮಿಸಿ: ಸುಬ್ರಮಣಿ; ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಕುರಿತು ಶಿಕ್ಷಣ ಕಾರ್ಯಗಾರ

ಸಹಕಾರ ಸಂಘ ಬಲಪಡಿಸಲು ಶ್ರಮಿಸಿ: ಸುಬ್ರಮಣಿ; ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಕುರಿತು ಶಿಕ್ಷಣ ಕಾರ್ಯಗಾರ


ಮಡಿಕೇರಿ ಫೆ.22: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಸಹಕಾರ ದವಸ ಭಂಡಾರ, ಹಾಲು ಉತ್ಪಾದಕರ ಸಹಕಾರ ಸಂಘ, ಮಹಿಳಾ ಸಹಕಾರ ಸಂಘ ಮತ್ತು ಇತರೆ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಲೆಕ್ಕಪರಿಶೋಧನೆ, ಲೆಕ್ಕಪತ್ರ ನಿರ್ವಹಣೆ ಹಾಗೂ ಇತ್ತೀಚಿನ ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಕುರಿತು ಶಿಕ್ಷಣ ಕಾರ್ಯಗಾರವು ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಯಿತು. 

      ಸಹಕಾರ ಸಂಘಗಳನ್ನು ಬಲಪಡಿಸುವುದು ಆಡಳಿತ ಮಂಡಳಿ ಸದಸ್ಯರ ಮತ್ತು ಸಿಬ್ಬಂದಿಗಳ ಜವಾಬ್ದಾರಿಯೇ ಹೊರತು ನೆರವು ನೀಡುವ ಇತರ ಸಂಘ-ಸಂಸ್ಥೆಗಳದ್ದಲ್ಲ. ಜವಾಬ್ದಾರಿಯುತ ನಡೆಯೇ ಸಂಘವನ್ನು ಮುನ್ನಡೆಸಬಲ್ಲದು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಕೋಲತಂಡ ಸುಬ್ರಮಣಿ ಅವರು ಅಭಿಪ್ರಾಯಪಟ್ಟರು.

ಕನಿಷ್ಟ ಮಟ್ಟದ ವ್ಯವಹಾರಗಳನ್ನು ನಡೆಸುವ ಸಹಕಾರ ಸಂಘಗಳನ್ನು ಒಂದೆಡೆ ಸೇರಿಸಿ ತರಬೇತಿ ನೀಡುವ ಯೂನಿಯನ್ ಕಾರ್ಯ ಶ್ಲಾಘನೀಯ. ಲೆಕ್ಕಪತ್ರ ನಿರ್ವಹಣೆಯ ಅರಿವಿನ ಕೊರತೆ, ಉತ್ಸಾಹಭರಿತ ಯುವ ಜನತೆಯ ಕೊರತೆ, ಅಸಮರ್ಪಕ ಮರಣ ನಿಧಿಯ ನಿರ್ವಹಣೆಯನ್ನು ಕ್ರಮಬದ್ಧವಾಗಿ ಮಾಡಬೇಕು ಎಂದರು.   

       ಸಹಕಾರ ಸಂಘಗಳನ್ನು ಉಳಿಸಿಕೊಳ್ಳಲು ಯುವಜನತೆಯ ಸದಸ್ಯತ್ವ ಮಾಡಿಕೊಳ್ಳುವುದು, ಸಮರ್ಪಕ ಲೆಕ್ಕಪತ್ರ ನಿರ್ವಹಣೆ, ಹೊಸಬರನ್ನು ಆಕರ್ಷಿಸುವಂತೆ ಶಿಥಿಲಾವಸ್ಥೆಯ ಕಟ್ಟಡಗಳನ್ನು ನಿರ್ವಹಣೆ ಮಾಡುವುದು, ಜಾಮೀನು ಸಾಲ ನೀಡುವುದು, ಅಂತೆಯೇ ಮರಣನಿಧಿಗೆ ಬಡ್ಡಿ ಸೇರಿಸಿ ವೃದ್ಧಿ ಮಾಡಿ ವಿತರಿಸುವುದು ಮತ್ತಿತರ ಕಾರ್ಯಗಳಿಂದ ಸಂಘಗಳನ್ನು ಉಳಿಸಿ ಬೆಳೆಸಿಕೊಳ್ಳಬಹುದು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೇರಿದಂತೆ ಸಂಘ ಸಂಸ್ಥೆಗಳಿಂದ ನೀಡುವ ಕಟ್ಟಡ ನಿರ್ವಹಣೆ ಅನುದಾನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಸಂಘದ ಗೋದಾಮುಗಳನ್ನು ಉಪಯೋಗಿಸಿಕೊಂಡು ನ್ಯಾಯಬೆಲೆ ಅಂಗಡಿ ಅಥವಾ ರಸಗೊಬ್ಬರ ವ್ಯಾಪಾರ ಪ್ರಾರಂಭಿಸಿಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ ಅವರು ಕಾರ್ಯದರ್ಶಿಗಳು ಸಹಕಾರ ಸಂಘಗಳ ಬೆನ್ನಲುಬಾಗಿದ್ದಾರೆ.  ಅವರ ಸಮರ್ಪಕ ಕಾರ್ಯವೈಖರಿಯಿಂದ ಸಂಘವು ಬೆಳೆಯುತ್ತದೆ.  ಸಹಕಾರ ಕ್ಷೇತ್ರವನ್ನು ಬಲಿಷ್ಠಗೊಳಿಸಿ ಸಾಮಾಜಿಕ ನ್ಯಾಯ ನೀಡಲು ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭವಾಗಿದೆ ಎಂದು ತಿಳಿಸಿದರು. 

       ಇತ್ತೀಚಿನ ಕೇಂದ್ರ ಆಯವ್ಯಯದಲ್ಲಿ ಸಹಕಾರ ಕ್ಷೇತ್ರದ ತೆರಿಗೆಯನ್ನು ಶೇ.18 ರಿಂದ ಶೇ 15 ಕ್ಕೆ ಇಳಿಕೆ ಮಾಡಲಾಗಿದೆ. ಸಹಕಾರ ಕಾಯ್ದೆ ಕಾನೂನಿನ ಬದಲಾವಣೆಯು ಸೇರಿದಂತೆ ಇತ್ತೀಚಿನ ವಿದ್ಯಮಾನಗಳ ಕುರಿತಾಗಿ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪಯುಕ್ತವಾದ ಮಾಹಿತಿಯನ್ನು ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಸಾಮಾನ್ಯ ಸದಸ್ಯರಿಗೆ ಸಿಬ್ಬಂದಿಗಳು ನೀಡಬೇಕು. ಸಹಕಾರ ಸಂಘಗಳು ತಮ್ಮ ಕ್ರಿಯಾತ್ಮಕ ಯೋಜನೆಗಳೊಂದಿಗೆ ಬಂಡವಾಳ ಅಭಿವೃದ್ಧಿಗೆ ಶ್ರಮಿಸುವಂತಾಗಬೇಕೆಂದು ಹೇಳಿದರು.

ಸಹಕಾರ ಸಂಘಗಳ ಉಪ ನಿಬಂಧಕರಾದ ಬಿ.ಕೆ.ಸಲೀಂ ಅವರು ಇತ್ತೀಚಿನ ಕಾಯ್ದೆ ತಿದ್ದುಪಡಿ ಕುರಿತು ಹಾಗೂ ಸಹಕಾರ ಸಂಘಗಳ ಹಿರಿಯ ನಿವೃತ್ತ ಲೆಕ್ಕಪರಿಶೋಧಕರಾದ ಡಿ.ಎನ್.ಚಂದ್ರಶೇಖರ್ ಅವರು ಲೆಕ್ಕಪತ್ರ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾದ ಪಿ.ಸಿ.ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ, ಎನ್.ಎ. ರವಿ ಬಸಪ್ಪ, ಪ್ರೇಮ ಸೋಮಯ್ಯ, ಪಿ.ಬಿ. ಯತೀಶ್ ಅವರು ಉಪಸ್ಥಿತರಿದ್ದರು. 

ಯೂನಿಯನ್‍ನ ವ್ಯವಸ್ಥಾಪಕಿ ಆರ್.ಮಂಜುಳ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮವನ್ನು ಸಿಬ್ಬಂದಿಗಳಾದ ಬಿ.ಸಿ.ಅರುಣ್ ಕುಮಾರ್, ಸುರೇಶ್ ಅವರು ನಿರ್ವಹಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,