ಕೊಡಗು ಜಿ.ಪಂ.ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
ಮಡಿಕೇರಿ ಫೆ.24: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಕೇಂದ್ರಗಳನ್ನು ಆರಂಭಿಸಿ ‘ಗ್ರಾಮ ಒನ್’ ಸೇವೆಗಳನ್ನು ತಲುಪಿಸಲು ಶ್ರಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರಾದ ಪ್ರತಾಪ್ ಸಿಂಹ ಹಾಗೂ ಶಾಸಕರಾದ ಎಂ.ಪಿ.ಅಪ್ಪಚ್ಚರಂಜನ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದರು ಹಾಗೂ ಶಾಸಕರು ಮಾತನಾಡಿದರು.
ಸರ್ಕಾರ ಗ್ರಾ.ಪಂ.ಮಟ್ಟದಲ್ಲಿ ಗ್ರಾಮ ಒನ್ ಸೇವೆ ಸ್ಥಾಪಿಸಿದ್ದು, ಆ ನಿಟ್ಟಿನಲ್ಲಿ ಗ್ರಾ.ಪಂ.ಗಳಲ್ಲಿ ಪಂಚಾಯತ್ ಕೇಂದ್ರಗಳು ಕಡ್ಡಾಯವಾಗಿ ಇರಬೇಕು. ಗ್ರಾಮೀಣರಿಗೆ ಸರ್ಕಾರದ ಹಲವು ಸೇವೆಗಳನ್ನು ತಲುಪಿಸುವಂತೆ ಸಂಸದರಾದ ಪ್ರತಾಪ್ ಸಿಂಹ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಲ್ಲಿ ‘ಗ್ರಾಮಒನ್’ ಅನುಷ್ಠಾನಗೊಳಿಸಬೇಕು. ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗ್ರಾ.ಪಂ.ನಲ್ಲಿ ಪ್ರತ್ಯೇಕವಾಗಿ ಗ್ರಾಮಒನ್ ಕೇಂದ್ರ ತೆರೆದು ಸೇವೆಗಳನ್ನು ತಲುಪಿಸಲು ಮುಂದಾಗುವಂತೆ ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಬಾಪೂಜಿ ಸೇವಾ ಕೇಂದ್ರಗಳು ಇದ್ದು, ಹೋಬಳಿ ಕೇಂದ್ರಗಳಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರವು ಸಹ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಪ್ರತೀ ಗ್ರಾ.ಪಂ.ಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳಿದ್ದು, ಅದರಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ನಿರ್ವಹಿಸುತ್ತಿದ್ದು, ಗ್ರಾಮ ಒನ್ ಸೇವೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಚರಂಡಿ, ಸಿಸಿ ರಸ್ತೆ, ಕೆರೆ ಅಭಿವೃದ್ಧಿ, ಕಸ ವಿಲೇವಾರಿ ಘಟಕ ನಿರ್ಮಾಣ, ಕೃಷಿ ಹೊಂಡ ಹೀಗೆ ಹಲವು ಕಾರ್ಯಕ್ರಮಗಳನ್ನು ಇದುವರೆಗೆ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದ ಸಂಸದರು, ಈ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ‘ಪರಿಷ್ಕøತ ಕ್ರಿಯಾಯೋಜನೆ’ಯ ಅಂದಾಜು ಪಟ್ಟಿ ಸಲ್ಲಿಸುವಂತೆ ತಾ.ಪಂ.ಇಒಗಳಿಗೆ ನಿರ್ದೇಶನ ನೀಡಿದರು.
ಈ ಹಿಂದೆ ಪ್ರತೀ ಗ್ರಾ.ಪಂ.ಗೆ 30 ಲಕ್ಷ ರೂ. ನೀಡಲಾಗುತ್ತಿತ್ತು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 18 ಲಕ್ಷ ರೂ. ಇನ್ನೂ ಹೆಚ್ಚುವರಿಯಾಗಿ ನೀಡುತ್ತಿದ್ದು, ಇದನ್ನು ಬಳಸಿಕೊಂಡು ಗ್ರಾ.ಪಂ.ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಪ್ರತಾಪ್ ಸಿಂಹ ಅವರು ಹೇಳಿದರು. ತಾ.ಪಂ.ಇಒಗಳು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಪರಿಷ್ಕøತ ಕ್ರಿಯಾ ಯೋಜನೆಗೆ ಪ್ರಸ್ತಾಪವನ್ನು ಒಂದು ವಾರದಲ್ಲಿ ನೀಡುವಂತೆ ಸಂಸದರು ಸೂಚಿಸಿದರು.
ತಾ.ಪಂ.ಇಒಗಳಾದ ಶೇಖರ್(ಮಡಿಕೇರಿ), ಜಯಣ್ಣ(ಸೋಮವಾರಪೇಟೆ), ಅಪ್ಪಣ್ಣ(ಪೊನ್ನಂಪೇಟೆ) ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಬೇಸಿಗೆ ಕಾಲ ಹತ್ತಿರ ಬರುತ್ತಿದ್ದು, ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಇದುವರೆಗೆ ವಸತಿ ಯೋಜನೆ ತಲುಪದಿರುವ ಕುಟುಂಬಗಳಿಗೆ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಮನೆ ಇಲ್ಲದವರಿಗೆ ವಸತಿ ಯೋಜನೆ ಕಲ್ಪಿಸಲು ಮುಂದಾಗುವಂತೆ ಇಒಗಳಿಗೆ ನಿರ್ದೇಶನ ನೀಡಿದರು.
ಸ್ಮಶಾನ ಭೂಮಿ ಸಂಬಂಧಿಸಿದಂತೆ ಹೆಚ್ಚಿನ ಜನರು ವಾಸ ಮಾಡುವ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸಲು ಅಗತ್ಯ ಕ್ರಮವಹಿಸುವಂತೆ ಅಪ್ಪಚ್ಚುರಂಜನ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಅಮ್ಮತ್ತಿಯಲ್ಲಿ ಸ್ಮಶಾನ ಭೂಮಿ ನಿರ್ಮಾಣಕ್ಕೆ ಗಮನಹರಿಸುವಂತೆ ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತೀ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕು ಎಂದು ಸಂಸದರು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಒಂಟಿಯಂಗಡಿ, ಹಚ್ಚಿನಾಡು ಭಾಗದಲ್ಲಿ ತ್ವರಿತವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಸಲಹೆ ಮಾಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪ್ರತೀ ಗ್ರಾಮಕ್ಕೂ ಕುಡಿಯುವ ನೀರು ಒದಗಿಸಬೇಕು. ಜೊತೆಗೆ ಜಲಜೀವನ್ ಮಿಷನ್ ಯೋಜನೆಯನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಹಟ್ಟಿಹೊಳೆ, ಬೇತ್ರಿ ಮತ್ತಿತರ ಕಡೆ ಸ್ವಾಭಾವಿಕವಾಗಿ ದೊರೆಯುವ ಜಲ ಸಂಪನ್ಮೂಲ ಬಳಸಿಕೊಳುವಲ್ಲಿ ಅಗತ್ಯ ಕ್ರಮವಹಿಸಬೇಕಿದೆ ಎಂದು ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಳಪೆ ಕಾಮಗಾರಿ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ತ್ವರಿತವಾಗಿ ಕ್ರಮವಹಿಸುವಂತೆ ಸಂಸದರು ಸೂಚಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ನಾಕೂರು-ಶಿರಂಗಾಲದಲ್ಲಿ ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದು, ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
ಸ್ವಚ್ಛ ಭಾರತ ಅಭಿಯಾನದಡಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾಗಬೇಕು. ಪರಿಸರ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛ ಭಾರತ ಅಭಿಯಾನಕ್ಕೆ ಸರ್ಕಾರ ಹೆಚ್ಚಿನ ಹಣ ಒದಗಿಸುತ್ತಿದ್ದು, ಆ ನಿಟ್ಟಿನಲ್ಲಿ ಸಮರ್ಪಕವಾಗಿ ಬಳಸುವಂತೆ ಸಂಸದರು ಸೂಚಿಸಿದರು.
ಶ್ರೀರಂಗಪಟ್ಟಣದಿಂದ ಗುಡ್ಡೆ ಹೊಸೂರುವರೆಗೆ ಸುಮಾರು 82 ಕಿ.ಮೀ. ಹೆದ್ದಾರಿಯಲ್ಲಿ ವಿದ್ಯುತ್ ಮಾರ್ಗ ಸಂಬಂಧಿಸಿದಂತೆ ಅಗತ್ಯ ಕ್ರಮವಹಿಸುವಂತೆ ಸೆಸ್ಕ್ ಇಇಗೆ ಸಂಸದರು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಯಮುನಾ ಚಂಗಪ್ಪ ಅವರು ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿದೆ. ಆದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಅಗತ್ಯ ಕ್ರಮವಹಿಸಬೇಕಿದೆ ಎಂದು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಟಿ.ಶೆಟ್ಟಿಗೇರಿಯಲ್ಲಿ ವಿದ್ಯುತ್ ಘಟಕ ನಿರ್ಮಾಣಕ್ಕೆ ಕಳೆದ ಆರು ತಿಂಗಳಿನಿಂದ ಅಲ್ಲಿನ ಸಾರ್ವಜನಿಕರು ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ ಕೆಲಸ ಆಗಿಲ್ಲ ಎಂದು ಅವರು ಹೇಳಿದರು.
ಲಕ್ಷ್ಮಣ ತೀರ್ಥ ಪ್ರದೇಶದಲ್ಲಿ ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು ಎಂದು ಯಮುನಾ ಚಂಗಪ್ಪ ಅವರು ಕೋರಿದರು. ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‍ಗೆ ಸೂಚಿಸಲಾಗುವುದು ಎಂದು ಪ್ರತಾಪ್ ಸಿಂಹ ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ನಾಗರಾಜು ಅವರು ಕುಶಾಲನಗರ ದಿಂದ ಸಂಪಾಜೆ ವರೆಗೆ 22 ಕಡೆ ತಡೆಗೋಡೆ ಹಾಗೂ ಸೇತುವೆ ನಿರ್ಮಾಣ, ಜೊತೆಗೆ ಹೆಚ್ಚುವರಿಯಾಗಿ 6 ಕಡೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ ಎಂದರು. ಜೋಡುಪಾಲ ಬಳಿ 4 ಪಥ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸುವಂತೆ ಸಂಸದರು ಸೂಚಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದರು ಮಾಹಿತಿ ಪಡೆದರು.
ಈ ಬಗ್ಗೆ ಶಿಕ್ಷಣಾಧಿಕಾರಿ ಕಾಂತರಾಜು ಅವರು ವಿಷಯವಾರು ಕಾರ್ಯಾಗಾರ ಏರ್ಪಡಿಸಲಾಗಿದೆ. ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಏರ್ಪಡಿಸಲಾಗಿದೆ. ಪ್ರತೀ ತಾಲ್ಲೂಕಿನಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ವಿಷಯವಾರು ಕೈಪಿಡಿ ಮುದ್ರಿಸಿ ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಈಗಿಂದಲೇ ಅಗತ್ಯ ಶೈಕ್ಷಣಿಕ ತರಬೇತಿ ನೀಡುವಂತಾಗಬೇಕು ಎಂದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ನಿರ್ಮಾಣ ಮಾಡಲಾಗಿರುವ ಆಮ್ಲಜನಕ ಪ್ಲ್ಯಾಂಟ್‍ಗಳನ್ನು ಕ್ರೀಯಾಶೀಲವಾಗಿ ಇಟ್ಟುಕೊಳ್ಳಬೇಕು ಎಂದರು. ಸುಂಟಿಕೊಪ್ಪ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನಿಯೋಜಿಸುವಂತೆ ಶಾಸಕರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೋವಿಡ್ ನಿರೋಧಕ ಲಸಿಕೆ ಪ್ರಥಮ ಮತ್ತು ದ್ವಿತೀಯ ಡೋಸ್ ಶೇ.100 ರಷ್ಟು ಸಾಧನೆ ಮಾಡಲಾಗಿದೆ. ಕುಶಾಲನಗರ ತಾಲ್ಲೂಕು ಕೇಂದ್ರದಲ್ಲಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವಲ್ಲಿ ಜಾಗ ದೊರಕಿದೆ. ಜೊತೆಗೆ ಪೊನ್ನಂಪೇಟೆಯಲ್ಲಿ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಬೇಕಿದೆ ಎಂದು ಡಾ.ಆರ್.ವೆಂಕಟೇಶ್ ಅವರು ಸಭೆಯ ಗಮನಕ್ಕೆ ತಂದರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಭಿಯಾನದಡಿ ಗ್ರೇಟರ್ ರಾಜಸೀಟು ಯೋಜನಾ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರಾದ ಅಪ್ಪಚ್ಚುರಂಜನ್ ಅವರು ಸೂಚಿಸಿದರು.
ಎನ್‍ಡಿಆರ್‍ಎಫ್‍ನಿಂದ ಬೆಳೆಹಾನಿ ಪರಿಹಾರಕ್ಕೆ ಕಾಲ ಕಾಲಕ್ಕೆ ಹಣ ಬಿಡುಗಡೆಯಾಗುತ್ತಿದ್ದು, ರೈತರಿಗೆ ಬೆಳೆಹಾನಿ ಪರಿಹಾರ ತಲುಪಿಸುವಂತೆ ಸಂಸದರು ಸೂಚಿಸಿದರು.
ತಿತಿಮತಿ ಭಾಗದಲ್ಲಿ ಕಾಡಾನೆ ಹಾವಳಿ ನಿಯಂತ್ರಣ ಮಾಡುವಲ್ಲಿ ರೈಲ್ವೆ ಕಂಬಿ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ವಿಜಯ ಅವರು ಕಾಡಾನೆ ಹಾವಳಿ ನಿಯಂತ್ರಣಕ್ಕೆ ತುರ್ತಾಗಿ ರೈಲ್ವೆ ಕಂಬಿ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಬೇಕಿದೆ ಎಂದರು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಕಾರ್ಯಕ್ರಮಗಳ ಪ್ರಗತಿಗೆ ಶಾಸಕರು ಸೂಚಿಸಿದರು.
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಹೆಚ್ಚಿನ ಜನರಿಗೆ ಸೌಲಭ್ಯ ಕಲ್ಪಿಸುವಂತೆ ಸಂಸದರಾದ ಪ್ರತಾಪ್ ಸಿಂಹ ಅವರು ಕೃಷಿ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ಕುಶಾಲನಗರ ಬಳಿ 30 ಹಾಸಿಗೆಯ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಕನಿಷ್ಠ 4 ಎಕರೆ ಭೂಮಿ ಬೇಕಿದೆ. ಅದನ್ನು ಗುರುತಿಸುವಂತೆ ಸಂಸದರಾದ ಪ್ರತಾಪ್ ಸಿಂಹ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್ ಅವರು ಕುಶಾಲನಗರದಲ್ಲಿ ಇಎಸ್‍ಐ ಆಸ್ಪತ್ರೆ ನಿರ್ಮಾಣ ಸಂಬಂಧ ಜಾಗ ಗುರುತಿಸಲಾಗಿದ್ದು, ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಗಾಳಿಬೀಡು-ಕಡಮಕಲ್ಲು ರಸ್ತೆ, ಡಬ್ಬಡ್ಕ ಸೇತುವೆ, ಕೂಟಿಯಾಲ ರಸ್ತೆ ಸಂಬಂಧ ಕೂಡಲೇ ಸರ್ವೇ ಮಾಡಿ ನಿಯಮಾನುಸಾರ ಕ್ರಮವಹಿಸುವಂತೆ ಸೂಚಿಸಿದರು.
ಅರಣ್ಯ, ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾನೂನು ಪ್ರಕಾರವೇ ಕೆಲಸ ಮಾಡುವಂತೆ ರವಿ ಕುಶಾಲಪ್ಪ ಅವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸಂಬಂಧಪಟ್ಟ ಇಲಾಖೆಗಳು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ನಾಮನಿರ್ದೇಶಿತ ಸದಸ್ಯರಾದ ಚಂದ್ರಕಲಾ, ಗಿರೀಶ್ ಬೋಪಣ್ಣ, ಎಂ.ಅಯ್ಯಪ್ಪ, ಚೆಲುವರಾಜು, ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಇತರರು ಇದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network