ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ನಡೆದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ
ಗ್ರಾಮೀಣ ಬಡ ಜನರ ಏಳಿಗೆಗೆ ಸಹಕಾರ ಸಂಘಗಳ ಪಾತ್ರ ಮಹತ್ತರ: ಸುಜಾ ಕುಶಾಲಪ್ಪ
ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಬಡ ವರ್ಗದ ಜನರ ಅಭಿವೃದ್ಧಿಗಾಗಿ ಸಹಕಾರ ಸಂಘಗಳು ಸಾಲ ಸೌಲಭ್ಯ ನೀಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕೆಂಬ ಚಿಂತನೆ ಇಟ್ಟುಕೊಳ್ಳಲಾಗಿತ್ತು, ಆ ನಿಟ್ಟಿನಲ್ಲಿ ಗ್ರಾಮೀಣ ಜನರ ಅಭಿವೃದ್ಧಿಗಾಗಿ ಸಹಕಾರಿ ಸಂಘಗಳು ಹುಟ್ಟಿಕೊಂಡಿದೆ. ವಿದ್ಯಾರ್ಥಿಗಳಿಗೆ ಸಹಕಾರಿ ಸಂಘಗಳ ಮೂಲಕ ವಿದ್ಯಾಭ್ಯಾಸಕ್ಕಾಗಿ ಸಾಲಗಳನ್ನು ನೀಡುವುದರ ಜೊತೆಗೆ ಅವರ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಸಹಕಾರಿ ಸಂಘಗಳು ದೇಶದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 320 ಸಹಕಾರಿ ಸಂಘಗಳಿದ್ದರೂ ಕೂಡ ಅದರಲ್ಲಿ ಕೇವಲ ಶೇ.75 ರಷ್ಟು ಸಹಕಾರಿ ಸಂಘಗಳು ಲಾಭದಲ್ಲಿದೆ. ಉಳಿದ ಶೇ.25 ರಷ್ಟು ಸಹಕಾರಿ ಸಂಘಗಳು ನಷ್ಟದಲ್ಲಿದೆ ಎಂದು ಎಂ.ಪಿ.ಸುಜಾ ಕುಶಾಲಪ್ಪ ಅವರು ತಿಳಿಸಿದರು.
ಸಹಕಾರಿ ಸಂಘಗಳು ಇದ್ದರೆ ಮಾತ್ರ ರೈತರಿಗೆ ಸಹಕಾರಿಯಾಗಲಿದೆ. ಕೊಡಗಿನಲ್ಲಿ ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಸಹಕಾರಿ ಸಂಘಗಳ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಅವರು ನುಡಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರಾದ ಎ.ಕೆ.ಮನುಮುತ್ತಪ್ಪ ಅವರು ಮಾತನಾಡಿ ಜಿಲ್ಲೆಯಲ್ಲಿ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು ವರ್ಷಕ್ಕೆ ಒಂದು ಬಾರಿ ನಡೆಸಲು ಅವಕಾಶವಿದೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ಲಾಭದಲ್ಲಿ ನಡೆಯುವಂತಹ ಸಂಸ್ಥೆಗಳು ಮತ್ತು ಅದರ ಅಧ್ಯಕ್ಷರುಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ಸಹಕಾರಿ ಸಂಘದವರು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕೊರೊನಾ ಹಿನ್ನೆಲೆ ಕಳೆದ 2-3 ವರ್ಷಗಳಿಂದ ಸಹಕಾರ ಸಪ್ತಾಹ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಆ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಸಲಾಗುವುದು. ಸಹಕಾರಿ ಕ್ಷೇತ್ರದಲ್ಲಿ ಶ್ರಮಿಸಿದವರಿಗೆ ಸಹಾಯಕ ರತ್ನ ಪ್ರಶಸ್ತಿಯನ್ನು ಪಾರದರ್ಶಕವಾಗಿ ನೀಡಲಾಗುವುದು ಎಂದು ಮನುಮುತ್ತಪ್ಪ ಹೇಳಿದರು.
ಜಿಲ್ಲಾ ಯೂನಿಯನ್ ವತಿಯಿಂದ ಸಹಕಾರ ಆಂದೋಲನ ಪತ್ರಿಕೆಯನ್ನು ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ ಸಹಕಾರಿ ಸಂಘಗಳಿಗೆ ಸಹಾಯವಾಗುವಂತಹ ಹಲವಾರು ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ಆದರೂ ಕೂಡ ಕೆಲವೇ ಕೆಲವು ಸಹಕಾರಿ ಸಂಘಗಳು ಈ ಪತ್ರಿಕೆಯನ್ನು ಪಡೆದುಕೊಳ್ಳುತ್ತ್ತಿದೆ. ಆದ್ದರಿಂದ ಎಲ್ಲಾ ಸಹಕಾರಿ ಸಂಘಗಳು ಸಹಕಾರಿ ಆಂದೋಲನ ಪತ್ರಿಕೆಯನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಹಕಾರ ಸಂಘಗಳ ಅಪರ ನಿಬಂಧಕರು ಹಾಗೂ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ಸದಸ್ಯರಾದ ಡಾ.ಗುರುಸ್ವಾಮಿ ಅವರು ಸಂಘಗಳ ಉತ್ತಮ ನಿರ್ವಹಣೆಗಾಗಿ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ತಿದ್ದುಪಡಿ ಕುರಿತು ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ನಾರಾಯಣ ರೆಡ್ಡಿ ಅವರು ಸಹಕಾರ ಸಂಘದ ಅಧ್ಯಕ್ಷರುಗಳಿಗೆ ಫ್ರೂಟ್ಸ್ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷರಾದ ಪಿ.ಸಿ.ಮನುರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ, ಎನ್.ಎ.ರವಿ ಬಸಪ್ಪ, ಎಂ.ಪ್ರೇಮ ಸೋಮಯ್ಯ, ಕೆ.ಎಸ್.ಗಣಪತಿ, ಕೆ.ಎಂ.ತಮ್ಮಯ್ಯ, ಪಿ.ಸಿ.ಅಚ್ಚಯ್ಯ, ಎನ್.ಎಂ.ಉಮೇಶ್ ಉತ್ತಪ್ಪ, ಪಿ.ವಿ.ಭರತ್, ಪಿ.ಬಿ.ಯತೀಶ್, ಕನ್ನಂಡ ಸಂಪತ್ ಇತರರು ಇದ್ದರು.
ಕೋಡೀರ ಎಂ.ತಮ್ಮಯ್ಯ ಸ್ವಾಗತಿಸಿದರು. ಆರ್.ಮಂಜುಳ ಪ್ರಾರ್ಥಿಸಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸಿಇಒ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network