Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸೋಮವಾರಪೇಟೆ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ವಿಶ್ವ ಜಲ ದಿನಾಚರಣೆ

ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸೋಮವಾರಪೇಟೆ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ವಿಶ್ವ ಜಲ ದಿನಾಚರಣೆ


ಮಡಿಕೇರಿ ಮಾ.28: ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸೋಮವಾರಪೇಟೆ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಕಚೇರಿಯಲ್ಲಿ ಇತ್ತೀಚೆಗೆ ‘ವಿಶ್ವ ಜಲ ದಿನಾಚರಣೆ’ ನಡೆಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ ಅವರು ನೀರಿನ ವಿಷಯವಾಗಿ ಒಂದು ದಿನವನ್ನು ಆಚರಿಸುತ್ತಿರುವುದರ ಹಿಂದೆ ಒಂದು ಮಹತ್ವದ ಕಾರಣವಿದೆ. ಪುರಾತನ ಕಾಲದಲ್ಲಿ  ಭಗೀರಥ ತನ್ನ ಪೂರ್ವಜರ ಪಾಪ ನಾಶಕ್ಕಾಗಿ ಗಂಗೆಯನ್ನು ಧರೆಗೆ ತರುತ್ತಾನೆ. ಅಂದರೆ ಗಂಗೆಗೆ ಅಂತಹ ಮಹತ್ವವಿದೆ. ಆದರೆ ಇಂದಿನ ದಿನಗಳಲ್ಲಿ ನಾವು ಅಂತಹ ಮಹತ್ವ ಕೊಡುತ್ತಿಲ್ಲವಾದರೂ ಸಹ ಪವಿತ್ರ ನೀರಿನ ಮೂಲಗಳನ್ನು ಅಪವಿತ್ರಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. 

ಇಂತಹ ಕೆಲಸದಿಂದ ಜಲಮೂಲಗಳು ಕಣ್ಮರೆಯಾಗಿ ಶುದ್ಧ ಜಲ ಮರೀಚಿಕೆಯಾಗುತ್ತಿದೆ. ಈ ಕಾರಣಕ್ಕಾಗಿ ಜನ ಸಾಮಾನ್ಯರಲ್ಲಿ ನೀರಿನ ಬಗೆಗಿನ ಉದಾಸೀನತೆಯನ್ನು ಹೋಗಲಾಡಿಸಿ ನೀರಿನ ಪ್ರಾಮುಖ್ಯತೆಯನ್ನು ತಿಳಿಸುವ ಸಲುವಾಗಿ ವಿಶ್ವ ಜಲ  ದಿನದ ಆಚರಣೆ ಅನಿವಾರ್ಯವಾಗಿದೆ ಎಂದರು. 

ಪ್ರಸ್ತುತ ರಾಜ್ಯ ರಾಜ್ಯಗಳ ನಡುವೆ ನದಿ ನೀರಿನ ವಿವಾದಗಳು ಮತ್ತು ದೇಶ ದೇಶಗಳ ನಡುವೆ ಇರುವ ನದಿ ನೀರಿನ ವಿವಾದಗಳನ್ನು ನಾವು ನೋಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧ ಮಾಡುವ ಪರಿಸ್ಥಿತಿ ಎದುರಾದರೂ ಸಹ ಆಶ್ಚರ್ಯ ಪಡಬೇಕಾಗಿಲ್ಲ ಎಂದರು. 

ಹಾಗೆಯೇ ದೇವರು ಎಲ್ಲರಿಗೂ ಅಗತ್ಯವಿರುವ ನೀರು, ಗಾಳಿ, ಭೂಮಿ ಇತ್ಯಾದಿಗಳನ್ನು ನೀಡಿದ್ದಾನೆ. ಆದರೆ ಅವುಗಳನ್ನು ಮಲೀನಗೊಳಿಸಿದರೆ ದೇವರು ಕೂಡ ಸಹಿಸಲಾರ. ಆದರಿಂದ ಭೂ ಕುಸಿತ, ಪ್ರವಾಹ ಇತ್ಯಾದಿಗಳ ರೂಪದಲ್ಲಿ ತಕ್ಕ ಪಾಠ ಕಲಿಸುತ್ತಾನೆ. ನಾವು ನಮ್ಮ ಮುಂದಿನ ಪೀಳಿಗೆಗೆ ಆಸ್ತಿ, ಹಣ ಬದಲಾಗಿ ಶುದ್ಧ ಗಾಳಿ, ಕುಡಿಯುವ ನೀರು ಮತ್ತು ಮಾಲಿನ್ಯ ರಹಿತ ಪರಿಸರ ಕಾಪಾಡುವತ್ತ ಗಮನಹರಿಸಬೇಕಿದೆ ಎಂದರು.  

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ, ತಹಶೀಲ್ದಾರ್ ಗೋವಿಂದರಾಜು, ವಕೀಲರ ಸಂಘದ ಉಪಾಧ್ಯಕ್ಷರಾದ ಎಸ್.ಎಸ್.ಮನೋಹರ್ ಇತರರು ಇದ್ದರು.