Header Ads Widget

ಸರ್ಚ್ ಕೂರ್ಗ್ ಮೀಡಿಯ

23ನೇ ವರ್ಷದ ಗೌಡ ‘ಕುಟುಂಬ’ ಕ್ರಿಕೆಟ್ ಹಬ್ಬ ಏ.25ರಿಂದ ಮೇ.6ರವರೆಗೆ ಮಡಿಕೇರಿಯಲ್ಲಿ

23ನೇ ವರ್ಷದ ಗೌಡ ‘ಕುಟುಂಬ’ ಕ್ರಿಕೆಟ್ ಹಬ್ಬ ಏ.25ರಿಂದ ಮೇ.6ರವರೆಗೆ ಮಡಿಕೇರಿಯಲ್ಲಿ


ಮಡಿಕೇರಿ: ಗೌಡ ಜನಾಂಗದ ಒಗ್ಗಟ್ಟು ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ ‘ಕುಟುಂಬ – 2’ ಇದೇ ಏ.25ರಿಂದ ಮೇ.6ರವರೆಗೆ ಜ.ತಿಮ್ಮಯ್ಯ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆಯಲಿದೆ.

ಕಳೆದ 22 ವರ್ಷಗಳಿಂದ ಗೌಡ ಕುಟುಂಬಗಳ ಸಹಭಾಗಿತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಕುಟುಂಬವಾರು ಕ್ರಿಕೆಟ್ ಹಬ್ಬ 23ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಕೃತಿ ವಿಕೋಪ ಹಾಗೂ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಪಂದ್ಯಾವಳಿಯನ್ನು ಕಳೆದ ವರ್ಷದಿಂದ ಯುವ ವೇದಿಕೆ ವತಿಯಿಂದ ‘ಕುಟುಂಬ’ ಎಂಬ ಹೆಸರಿನಲ್ಲಿ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ’ಕುಟುಂಬ-2’ ಹಬ್ಬ ನಡೆಸುವಂತೆ ಇಂದು ನಡೆದ ಯುವ ವೇದಿಕೆಯ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊದಲು ನೋಂದಾಯಿಸಿಕೊಳ್ಳುವ 100 ಕುಟುಂಬಗಳಿಗೆ ಸೀಮಿತವಾಗಿ ಪಂದ್ಯಾವಳಿ ಆಯೋಜಿಸುವಂತೆ ತೀರ್ಮಾನಿಸಲಾಯಿತು. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಏ.15ರ ಒಳಗಡೆ ನೋಂದಾಯಿಸಿಕೊಳ್ಳಬೇಕಿದೆ. ಪಾಲ್ಗೊಳ್ಳುವ ಆಟಗಾರರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕಿದೆ.

ನೋಂದಾವಣೆಗಾಗಿ ಅಚ್ಚಲ್ಪಾಡಿ ಪ್ರಸಾದ್(9481770780) ಇವರನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಕಟ್ಟೆಮನೆ ರೋಶನ್(9449361933), ಕುಟ್ಟನ ಪ್ರಶಾಂತ್(7019671130) ಇವರುಗಳನ್ನು ಸಂಪರ್ಕಿಸಬಹುದಾಗಿದೆ. ವಿಜೇತರಾಗುವ ತಂಟಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ಹಾಗೂ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯುವ ತಂಡಗಳಿಗೂ ನೆನಪಿನ ಕಾಣಿಕೆಯೊಂದಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವದು ಎಂದು ವೇದಿಕೆಯ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

ಸಭೆಯಲ್ಲಿ ವೇದಿಕೆಯ ಕಾರ್ಯದರ್ಶಿ ಕಟ್ಟೆಮನೆ ರೋಶನ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ನಿರ್ದೇಶಕರುಗಳಾದ ಪುದಿಯನೆರವನ ರಿಷಿತ್ ಮಾದಯ್ಯ, ಕುಟ್ಟನ ಪ್ರಶಾಂತ್, ಕುಂಡ್ಯನ ಚರಣ್, ತೋಟಂಬೈಲು ಅನಂತ್‌ಕುಮಾರ್ ಪಾಲ್ಗೊಂಡಿದ್ದರೆಂದು ಅವರು ತಿಳಿಸಿದ್ದಾರೆ.