Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಜಿಲ್ಲಾ ಮಟ್ಟದ ಶಿಶಿಕ್ಷು ಮೇಳಕ್ಕೆ ಚಾಲನೆ

ಕೌಶಲ್ಯವೇ ಬಲ; ವೃತ್ತಿ ಕೌಶಲ್ಯ ಹೆಚ್ಚಿಸಿಕೊಂಡು ಉನ್ನತ ಸ್ಥಾನ ಪಡೆಯಿರಿ: ಪಂಡಿತಾರಾಧ್ಯ 


ಮಡಿಕೇರಿ ಏ.21; ವಿದ್ಯಾರ್ಥಿಗಳು ವೃತ್ತಿಪರ ಕೌಶಲ್ಯ ಹೆಚ್ಚಿಸಿಕೊಂಡು ಉದ್ಯೋಗ ಪಡೆಯುವತ್ತ ಗಮನಹರಿಸುವಂತಾಗಬೇಕು ಎಂದು ನಗರದ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಚ್.ಎಂ.ಪಂಡಿತಾರಾಧ್ಯ ಅವರು ತಿಳಿಸಿದ್ದಾರೆ. 

ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ನಗರದ ಐಟಿಐ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಕೊಡಗು ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶಿಕ್ಷು ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಫಿಟ್ಟರ್, ಎಲೆಕ್ಟಿçಕಲ್, ಮೆಕಾನಿಕಲ್ ಹೀಗೆ ವೃತ್ತಿಪರ ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳು ಶಿಶಿಕ್ಷು(ಅಪ್ರೆಂಟಿಷ್) ತರಬೇತಿಯನ್ನು ಪಡೆದು ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗುವತ್ತ ಮುಂದಾಗಬೇಕು ಎಂದು ಪಂಡಿತಾರಾಧ್ಯ ಅವರು ಸಲಹೆ ಮಾಡಿದರು.  

ಕೌಶಲ್ಯವೇ ಬಲ ಎಂಬುದನ್ನು ಮರೆಯಬಾರದು. ರಾಷ್ಟçದ ಅಭಿವೃದ್ಧಿಗೆ ಕೃಷಿ ಜೊತೆಗೆ ಕೈಗಾರಿಕಾ ಬೆಳವಣಿಗೆಯೂ ಸಹ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಪ್ರಾಂಶುಪಾಲರು ನುಡಿದರು. 

ಐಟಿಐ ಉತ್ತೀರ್ಣರಾದವರು ಅಪ್ರೆಂಟಿಸ್ ತರಬೇತಿ ಪಡೆದು ಹೆಚ್ಚಿನ ಉದ್ಯೋಗಾವಕಾಶ ಪಡೆಯಬಹುದಾಗಿದೆ. ಅಪ್ರೆಂಟಿಷ್ ತರಬೇತಿ ಸಂದರ್ಭದಲ್ಲಿ ಪ್ರತೀ ತಿಂಗಳು ಏಳು ಸಾವಿರ ರೂ. ಶಿಷ್ಯವೇತನ ದೊರೆಯಲಿದೆ. ಆ ನಿಟ್ಟಿನಲ್ಲಿ ಮೇಳದಲ್ಲಿ ಹೆಸರು ನೋಂದಾಯಿಸುವಂತೆ ತಿಳಿಸಿದರು.  

ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ವೃತ್ತಿ ಕೌಶಲ್ಯ ಅಭಿವೃದ್ಧಿಗೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲಾಗುವುದು ಎಂದು ಪಂಡಿತಾರಾಧ್ಯ ಅವರು ಹೇಳಿದರು.  

ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ರಘು ಅವರು ಮಾತನಾಡಿ ಕೈಗಾರಿಕೆ ಇಲಾಖೆ ವತಿಯಿಂದ ಕೈಗಾರಿಕೆ ಸ್ಥಾಪನೆಗೆ ಉದ್ಯಮಶೀಲತಾ ತರಬೇತಿ ನೀಡುವುದರ ಜೊತೆಗೆ, ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಆ ನಿಟ್ಟಿನಲ್ಲಿ ಉದ್ಯಮಿಯಾಗುವುದರ ಜೊತೆಗೆ ಮತ್ತೊಬ್ಬರಿಗೆ ಉದ್ಯೋಗ ಕಲ್ಪಿಸುವಂತಾಗಬೇಕು ಎಂದರು.  

ಆಲೂರು ಸಿದ್ದಾಪುರ ಐಟಿಐ ತರಬೇತಿ ಕೇಂದ್ರದ ತರಬೇತಿ ಅಧಿಕಾರಿ ಗಂಗಾಧರ ಅವರು ಮಾತನಾಡಿ ಶ್ರದ್ಧೆ, ಕೌಶಲ್ಯ, ಇಚ್ಛಾಶಕ್ತಿ ಬೆಳೆಸಿಕೊಂಡಲ್ಲಿ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬಹುದು. ಆ ನಿಟ್ಟಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ನೀಡಲಾಗುವ ಶಿಶಿಕ್ಷು ಮೇಳದ ಪ್ರಯೋಜನ ಪಡೆಯುವಂತಾಗಬೇಕು ಎಂದು ಅವರು ಹೇಳಿದರು. 

ಪೊನ್ನಂಪೇಟೆ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಅವರು ಮಾತನಾಡಿ ವಿದ್ಯಾರ್ಥಿಗಳು ವೃತ್ತಿ ಕೌಶಲ್ಯ ಬೆಳೆಸಿಕೊಂಡು, ಅಭಿವೃದ್ಧಿಯತ್ತ ಸಾಗಬೇಕಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ನೀಡಲಾಗುವ  ಅಪ್ರೆಂಟಿಸ್ ತರಬೇತಿಯನ್ನು  ಸರಿಯಾಗಿ ಬಳಸಿಕೊಳ್ಳುವಂತೆ ಅವರು ಹೇಳಿದರು. 

ಭಾಗಮಂಡಲ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕಾಂತ್, ಉಪನ್ಯಾಸಕರಾದ ಇಂದ್ರೇಶ್, ದೀಪಾ ರಾಣಿ, ರಂಜಿತಾ, ಇತರರು ಇದ್ದರು. ೧೩೨ ಅಪ್ರೆಂಟಿಷ್ ತರಬೇತಿದಾರರು ಶಿಶಿಕ್ಷು ಮೇಳದಲ್ಲಿ ಹೆಸರು ನೋಂದಾಯಿಸಿದರು.