Header Ads Widget

Responsive Advertisement

ಕಾಪಾಳ ಸಮಾಜದವರಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ; ಜಯಪ್ರಕಾಶ ಹೆಗ್ಡೆ

ಕಾಪಾಳ ಸಮಾಜದವರಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ; ಜಯಪ್ರಕಾಶ ಹೆಗ್ಡೆ


ಮಡಿಕೇರಿ ಏ.06: ಜಿಲ್ಲೆಯ ನಾಲ್ಕು ನಾಡು ಅರಮನೆ ವ್ಯಾಪ್ತಿಯಲ್ಲಿ 32 ಮನೆಗಳಿದ್ದು, ಸುಮಾರು 150 ಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದಾರೆ. ಅವರು ವಾಸಿಸುತ್ತಿರುವ ಸ್ಥಳದಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರವನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪಕ್ರಾಶ ಹೆಗ್ಡೆ ಅವರು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗಂಗಾ ಕಲ್ಯಾಣ ಯೋಜನೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕಕ್ಕಬ್ಬೆ ಗ್ರಾ.ಪಂ.ವ್ಯಾಪ್ತಿಯ ನಾಲ್ಕು ನಾಡು ಅರಮನೆ ವ್ಯಾಪ್ತಿಯಲ್ಲಿ ಕಾಪಾಳ ಸಮಾಜದವರು ವಾಸಿಸುತ್ತಿದ್ದು, ಇವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷರು ಸೂಚನೆ ನೀಡಿದರು. 

ಕಾಪಾಳ ಜನಾಂಗದ ಪ್ರಮುಖರಾದ ಪೊನ್ನಪ್ಪ ಅವರು ಮಾತನಾಡಿ 60 ಎಕರೆ ಜಾಗದಲ್ಲಿ ಕಾಪಾಳ ಸಮಾಜದವರು ನೆಲೆಸಿದ್ದು, ತಾತ ಮುತ್ತಾತಂದಿರ ಹೆಸರಿನಲ್ಲಿ ಭೂಮಿ ಇದೆ. ಆದರೆ ಮಕ್ಕಳ ಹೆಸರಿಗೆ ಆರ್‍ಟಿಸಿ ಆಗಿಲ್ಲ. ಇದನ್ನು ಪರಿಶೀಲಿಸಿ ಆರ್‍ಟಿಸಿ ಮಾಡಿಕೊಡಬೇಕೆಂದು ಮನವಿ ಮಾಡಿದರು. 

ಕಾಪಾಳ ಜನಾಂಗದವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತುಂಬಾ ಹಿಂದೆ ಉಳಿದಿದ್ದು, ಕಾಪಾಳ ಜನಾಂಗಕ್ಕೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅವರು ಮಾಹಿತಿ ನೀಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಾತ ಮುತ್ತಾತಂದಿರ ಹೆಸರಿನಲ್ಲಿ ಇರುವ ಭೂಮಿಯನ್ನು ವಂಶಾವಳಿ ಪ್ರಕಾರ ಆರ್‍ಟಿಸಿಯಲ್ಲಿ ಕುಟುಂಬಸ್ಥರ ಹೆಸರನ್ನು ಸೇರಿಸಿ ಮಾರ್ಪಡಿಸಿ ಕೊಡಲಾಗುವುದು ಎಂದು ಅಧ್ಯಕ್ಷರ ಗಮನಕ್ಕೆ ತಂದರು. 

ಕುಟುಂಬದಲ್ಲಿ ತೀರಿಕೊಂಡವರ ಹೆಸರನ್ನು ತೆಗೆದುಹಾಕಿ ವಂಶಾವಳಿ ತಯಾರಿಸಿ ಕರಡು ಪ್ರತಿಯನ್ನು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿ ಆರ್‍ಟಿಸಿ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. 

ಕಾಪಾಳರ ಪ್ರಕಾಶ ಅವರು ಆಯೋಗದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಕಾಪಾಳ ಕಾಲೋನಿಗೆ ಹೋಗುವ ರಸ್ತೆಯನ್ನು ಗ್ರಾ.ಪಂ. ವತಿಯಿಂದ ದುರಸ್ತಿ ಪಡಿಸಿ, ವಿದ್ಯುತ್ ದೀಪ, ಕುಡಿಯುವ ನೀರು ಒದಗಿಸುವಂತಾಗಬೇಕು ಎಂದು ಅವರು ಕೋರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಕಾಪಾಳ ಜನಾಂಗದವರು ವಾಸಿಸುತ್ತಿರುವ ಕಾಲೋನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. 

ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರಗತಿಯ ಕುರಿತು ವರದಿ ತಯಾರಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಧ್ಯಕ್ಷರು ನಿರ್ದೇಶನ ನೀಡಿದರು. 

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಹದೇವಿ ಅವರು ಮಾತನಾಡಿ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 61 ಫಲಾನುಭವಿಗಳು ಇದ್ದು, 61 ಬೋರ್‍ವೆಲ್‍ಗಳನ್ನು ತೆಗೆಯಲಾಗಿದ್ದು, 11 ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 47 ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಉಳಿದಿದ್ದು, ಉಳಿದ 3 ಹೊಸದಾಗಿ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಸೆಸ್ಕ್ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವಿನಯ್ ಕುಮಾರ್ ಅವರು ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂಸ್ಥೆಯನ್ನು ಗುರುತಿಸಲಾಗಿದ್ದು, ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. 

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳ ಜಾಗಗಳನ್ನು ಪ್ರತ್ಯೇಕವಾಗಿ ವೀಕ್ಷಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರಿಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎನ್. ಮಂಜುನಾಥ್ ಅವರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 38 ವಿದ್ಯಾರ್ಥಿ ನಿಲಯಗಳಿದ್ದು, ಮಂಜೂರಾದ 2,655 ರಲ್ಲಿ 1,900 ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಜಿಲ್ಲೆಯ 38 ವಿದ್ಯಾರ್ಥಿ ನಿಲಯಗಳಲ್ಲಿ 28 ಸ್ವಂತ ಕಟ್ಟಡಗಳು, 6 ಬಾಡಿಗೆ ಕಟ್ಟಡಗಳು, 04 ಉಚಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು. 

ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ 2021-22 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮದಡಿ 270.88 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೇ.100 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಹಾಗೂ ವಕೀಲರ ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ವಾರ್ಷಿಕ 40 ಗುರಿಗಳಲ್ಲಿ 29 ಫಲಾನುಭವಿಗಳು ಸೌಲಭ್ಯವನ್ನು ಪಡೆಯುತ್ತಿದ್ದು, ಶೇ.72.50 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಸದಸ್ಯರಾದ ಎಚ್.ಎಸ್.ಕಲ್ಯಾಣ್ ಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ.ಸುವರ್ಣ, ಅರುಣ್ ಕುಮಾರ್, ಶಾರದ ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರರಾದ ಮಹೇಶ್, ಗೋವಿಂದರಾಜು, ಪ್ರಕಾಶ, ಯೋಗಾನಂದ, ಪ್ರಶಾಂತ್, ಬಿಸಿಎಂ ಇಲಾಖೆಯ ವ್ಯವಸ್ಥಾಪಕರಾದ ಕವಿತಾ, ಇತರರು ಇದ್ದರು.