Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರಸಕ್ತ ಸಾಲಿನಲ್ಲಿ ಉಪ ಯೋಜನಾ ಕಾರ್ಯಕ್ರಮ ಸಮರ್ಪಕ ಅನುಷ್ಠಾನಕ್ಕೆ ಡಿಸಿ ಸೂಚನೆ

ಪ್ರಸಕ್ತ ಸಾಲಿನಲ್ಲಿ ಉಪ ಯೋಜನಾ ಕಾರ್ಯಕ್ರಮ ಸಮರ್ಪಕ ಅನುಷ್ಠಾನಕ್ಕೆ ಡಿಸಿ ಸೂಚನೆ


ಮಡಿಕೇರಿ ಏ.07: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನಾ ಕಾರ್ಯಕ್ರಮಗಳನ್ನು ಪ್ರಸಕ್ತ ಸಾಲಿನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿಸತೀಶ ಅವರು ನಿರ್ದೇಶನ ನೀಡಿದರು.      

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಸಮಿತಿ, ಎಸ್ಸಿಎಸ್ಪಿ ಕಾರ್ಯಕ್ರಮದ ಮಾಸಿಕ ಪ್ರಗತಿ ಪರಿಶೀಲನಾ ಹಾಗೂ ಮ್ಯಾನ್ಯುವಲ್ ಸ್ಕಾವೆಂಜರ್ಸ್‍ಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   

ಪರಿಶಿಷ್ಟ ಜಾತಿ ಉಪ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಡಿಪಿಎಂಎಸ್ ತಂತ್ರಾಂಶದಲ್ಲಿ ಸಂಬಂಧಪಟ್ಟ ಇಲಾಖೆಗಳು ಕಡ್ಡಾಯವಾಗಿ ಮಾಹಿತಿ ಅಪ್‍ಡೇಟ್ ಮಾಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.  

ಪರಿಶಿಷ್ಟ ಜಾತಿ ಉಪ ಯೋಜನೆಯ ಕಾರ್ಯಕ್ರಮದಡಿ ಫಲಾನುಭವಿಗಳನ್ನು ಗುರುತಿಸಿ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ವೈಯಕ್ತಿಕ ಫಲಾನುಭವಿಗಳು ಯೋಜನೆಯ ಉಪಯೋಗ ಪಡೆಯದೇ ಹೋದಲ್ಲಿ ಯೋಜನೆಯನ್ನು ಸಮುದಾಯಗಳು ಪಡೆಯುವಂತಾಗಲು ಅಗತ್ಯ ಮಾಹಿತಿ ನೀಡುವುದು ಮತ್ತು ಆರ್ಥಿಕ ಮತ್ತು ಭೌತಿಕ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದರು.   

ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಎಸ್‍ಸಿಎಸ್‍ಪಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಜಿ.ಪಂ.ವ್ಯಾಪ್ತಿಯಲ್ಲಿ ನಿಗಧಿಪಡಿಸಿರುವ ಉಪ ಯೋಜನೆಗೆ ಸಂಬಂಧಪಟ್ಟ ಮಾಹಿತಿ ನೀಡುವಂತೆ ಅವರು ಸೂಚಿಸಿದರು.  

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಭೌತಿಕ ಮತ್ತು ಆರ್ಥಿಕ ಗುರಿ ಸಾಧನೆ ಮತ್ತು ಮಾಸಿಕ ವರದಿಯ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್ ಅವರು ಮಾಹಿತಿ ನೀಡಿದರು.

ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಗ್ರಾಮದಲ್ಲಿನ ಸರ್ವೇ ನಂಬರ್ 96/6 ರಲ್ಲಿ 0.30 ಸೆಂಟ್ ಜಾಗದ ಆರ್‍ಟಿಸಿಯಲ್ಲಿರುವ ಪೈಸಾರಿ ಜಾಗವನ್ನು ಸಾರ್ವಜನಿಕ ಸ್ಮಶಾನ ಎಂದು ದಾಖಲಿಸಿ ಆರ್‍ಟಿಸಿಯನ್ನು ಗ್ರಾ.ಪಂ.ಗೆ ಹಸ್ತಾಂತರಿಸಿ ಸ್ಮಶಾನ ಭೂಮಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಗ್ರಾ.ಪಂ.ನ ನರೇಗಾ ಕಾರ್ಯಕ್ರಮದಡಿ ಅಭಿವೃದ್ಧಿ ಪಡಿಸಲು ಜಿಲ್ಲಾಧಿಕಾರಿ ಅವರು ಸೂಚಿಸಿದರು. 

ಸದಸ್ಯರಾದ ಪಳನಿ ಪ್ರಕಾಶ ಅವರು ಮಾತನಾಡಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೀನು ಪೇಟೆಯಲ್ಲಿರುವ ಸ್ಮಶಾನವನ್ನು ಸ್ಥಳಾಂತರಿಸುವಂತೆ ಈ ಹಿಂದೆಯೇ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಯೋಗಾನಂದ ಅವರು ಆರ್ಜಿ ಗ್ರಾಮದಲ್ಲಿ ಸ್ಮಶಾನ ಭೂಮಿ ಉದ್ದೇಶಕ್ಕೆ ಒಂದು ಎಕರೆ ಜಾಗ ಗುರುತಿಸಲಾಗಿದೆ ಎಂದರು. 

      ಸದಸ್ಯರಾದ ಮುತ್ತಪ್ಪ ಅವರು ಮಾತನಾಡಿ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಪಂಚಾಯತ್‍ನ ಕುಂಬೂರು ವಾರ್ಡ್ ನಂಬರ್ 01 ರ ಲಕ್ಕೇರಿ ಪೈಸಾರಿ ಜಾಗದಲ್ಲಿ ಸುಮಾರು 21 ಪರಿಶಿಷ್ಟ ಜಾತಿಯ ಕುಟುಂಬಗಳು ವಾಸಿಸುತ್ತಿದ್ದು, ಸ್ಮಶಾನ ಭೂಮಿ ಇರುವುದಿಲ್ಲ. ಹಾಗೂ ಗೋಣಿಮರೂರು ಗ್ರಾ.ಪಂ.ನ ಗಣಗೂರು ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 80 ಕುಟುಂಬಗಳು ವಾಸಿಸುತ್ತಿದ್ದು, ಇವರಿಗೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. 

       ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಈಗಾಗಲೇ ರುದ್ರಭೂಮಿಗಳಿಗೆ ಸಂಬಂಧಿಸಿದಂತೆ ಜಾಗ ಕಾಯ್ದಿರಿಸಲು ಕ್ರಮವಹಿಸಲಾಗಿದೆ. ಹಾಗೂ ಸಮುದಾಯ ಭವನಕ್ಕೆ ಸಂಬಂಧಿಸಿದಂತೆ ಸೂಕ್ತ ಜಾಗವನ್ನು ಗುರುತಿಸಿ ವರದಿ ಸಲ್ಲಿಸುವಂತೆ ಸೋಮವಾರಪೇಟೆ ತಹಶೀಲ್ದಾರರಿಗೆ ಸೂಚನೆ ನೀಡಿದರು. 

       ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ನಿವೃತ್ತಿ ಅಂಚಿನಲ್ಲಿರುವ ಪೌರ ಕಾರ್ಮಿಕರಿಗೆ ಆದ್ಯತೆ ಮೇಲೆ ಮನೆಯನ್ನು ಶೀಘ್ರದಲ್ಲಿ ನಿರ್ಮಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.  

       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ವಿಶಾಲ್‍ಕುಮಾರ್, ತಹಶೀಲ್ದಾರರಾದ ಮಹೇಶ್, ಗೋವಿಂದರಾಜು, ಯೋಗಾನಂದ, ಪ್ರಕಾಶ್, ಪ್ರಶಾಂತ್, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಪ.ಪಂ.ಮುಖ್ಯಾಧಿಕಾರಿ ನಾಚಪ್ಪ, ಕೃಷ್ಣಪ್ರಸಾದ್, ಇತರರು ಇದ್ದರು.