Ad Code

Responsive Advertisement

ಕಕ್ಕಬ್ಬೆ ಪ್ರೌಢಶಾಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ; ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ


ಕಕ್ಕಬ್ಬೆ  ಪ್ರೌಢಶಾಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ; ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ  

ಮಡಿಕೇರಿ ಮೇ.27; ಕುಡಿಯುವ ನೀರು, ಸಾರ್ವಜನಿಕ ರಸ್ತೆ, ಭೂ ದಾಖಲಾತಿಗಳು, ಪಟ್ಟೆದಾರರ ಸಮಸ್ಯೆ, ಆನೆ ಹಾವಳಿ ನಿಯಂತ್ರಣ, ವಿದ್ಯುತ್ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕೇಳಿಬಂದವು. 

ಕಕ್ಕಬ್ಬೆ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯಕ್ರಮವು ನಡೆಯಿತು. 

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಜೊತೆಗೆ  ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿರುವುದರಿಂದ ತಮ್ಮ ಸಮಸ್ಯೆಗಳನ್ನು ನೇರವಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೇಳಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ನಮ್ಮ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಬಹುದಾದರೆ ಈ ಹಂತದಲ್ಲಿಯೇ ಪರಿಹರಿಸಿಕೊಡಲಾಗುವುದು ಎಂದು ಅವರು ತಿಳಿಸಿದರು. 


ಸ್ಥಳೀಯ ರೈತರೊಬ್ಬರು ಮಾತನಾಡಿ ರೈತರಿಗೆ ವೈಯಕ್ತಿಕ ಭೂ ದಾಖಲಾತಿ ಇಲ್ಲದಿರುವುದು ಕೊಡಗಿನ ದೊಡ್ಡ ಸಮಸ್ಯೆಯಾಗಿದೆ. ಪಿತ್ರಾರ್ಜಿತ ಆಸ್ತಿ ಇದ್ದರೂ ಸಹ ನಮಗೆ ಭೂ ದಾಖಲಾತಿಗಳು ಇರುವುದಿಲ್ಲ. ಯಾವುದೇ ದಾಖಲಾತಿ ಇಲ್ಲದ ಕಾರಣ ನಮಗೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆ ಆಗುತ್ತಿದೆ ಎಂದರು. 

ಗ್ರಾಮದ ಕೆಲವು ಜನರಿಗೆ ಹಕ್ಕುಪತ್ರ ಸಿಕ್ಕಿದೆ. ಇನ್ನು ಕೆಲವರಿಗೆ ಹಕ್ಕು ಪತ್ರ ಸಿಕ್ಕಿರುವುದಿಲ್ಲ. ಅಂತವರಿಗೆ ಹಕ್ಕು ಪತ್ರ ನೀಡುವ ಕೆಲಸವಾಗಬೇಕು. ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಿಗೆ ಹೋಗುವ ರಸ್ತೆಯನ್ನು ಸರಿಪಡಿಸಿ ಕೊಡಬೇಕು ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಭೂದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್ ಅವರು ಮಾತನಾಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಕಂದಾಯ ಇಲಾಖೆ ವತಿಯಿಂದ ಪರಿಶೀಲನೆ ಮಾಡಿ ಆದಷ್ಟು ಬೇಗ ಪರಿಹರಿಸಿ ಕೊಡಲಾಗುವುದು ಎಂದು ಅವರು ಹೇಳಿದರು. 

ಜಿಲ್ಲಾಧಿಕಾರಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕಂದಾಯ ನಿಗದಿಗೆ ಬಹಳ ಬೇಡಿಕೆ ಇದೆ. ಸರ್ಕಾರದ ವತಿಯಿಂದ ಸರ್ವೆ ನಡೆಸಿ ಇದನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು.


ಈಗಾಗಲೇ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಅದನ್ನು ಅವರು ಕಳೆದುಕೊಂಡಿದ್ದರೆ ಅದರ ನಕಲಿ ಹಕ್ಕುಪತ್ರ ತಹಶೀಲ್ದಾರ್ ಕಚೇರಿಯಲ್ಲಿ ಇರುತ್ತದೆ. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. 

ಕಕ್ಕಬೇ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾತನಾಡಿ ಹಕ್ಕುಪತ್ರ ಇದ್ದರೂ ಸಹ ಫಲಾನುಭವಿಗಳಿಗೆ ಮನೆ ಇರುವುದಿಲ್ಲ. ಸೂಕ್ತ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮುಂತಾದ ದಾಖಲೆಗಳು ಇಲ್ಲದ ಕಾರಣ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. 

ಗ್ರಾಮಸ್ಥರಾದ ಮಾಚಯ್ಯನವರು ಮಾತನಾಡಿ ಕಂದಾಯ ನಿಗದಿಗೆ ನನ್ನ 6 ಎಕರೆ ಭೂಮಿಯನ್ನು ತರಲು 13 ವರ್ಷದಿಂದ ಕಚೇರಿಗಳಿಗೆ ಅಲೆದಾಡಿದರು ಸಹ ನನಗೆ ಇನ್ನೂ ಕೂಡ ದಾಖಲಾತಿಗಳು ಸಿಕ್ಕಿರುವುದಿಲ್ಲ ಎಂದರು. 

ಮರ ಕಡಿಯಲು ಅನುಮತಿ ನೀಡುವ ಅಧಿಕಾರ ಮತ್ತು ರಸ್ತೆಗಳ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಹೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಕೊಡಗು ಜಿಲ್ಲೆಯಲ್ಲಿ ಕಂದಾಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ, ರಸ್ತೆ ಕಾಮಗಾರಿ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲು ಆಗುವುದಿಲ್ಲ, ಗ್ರಾಮ ಪಂಚಾಯಿತಿಯೂ ಗ್ರಾಮಮಟ್ಟದಲ್ಲಿ ಕಾರ್ಯನಿರ್ವಹಿಸುವುದರಿಂದ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. 

ಭೂ ಕಂದಾಯ ಉಪನಿರ್ದೇಶಕರಾದ ಶ್ರೀನಿವಾಸ್ ಅವರ ಪ್ರತಿಕ್ರಿಯಿಸಿ ಏನಾದರೂ ಸಮಸ್ಯೆಗಳು ಇದ್ದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗ್ರಾಮಸ್ಥರೊಬ್ಬರು ಮಾತನಾಡಿ ಭೂ ದಾಖಲೆಯಲ್ಲಿ ಪಟ್ಟೇದಾರ ಸಮಸ್ಯೆಯು ರೈತರಿಗೆ ಒಂದು ದೊಡ್ಡ ತಲೆನೋವಾಗಿದೆ. ಬ್ಯಾಂಕ್ ಸಾಲ, ಕೃಷಿ ಸಾಲ, ಮುಂತಾದ ಸರ್ಕಾರಿ ಯೋಜನೆಗಳನ್ನು ಪಡೆಯಲು ನಮಗೆ ಕಷ್ಟಕರವಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. 

ತಹಶೀಲ್ದಾರ್ ಮಹೇಶ್ ಅವರು ಮಾತನಾಡಿ ಪಟ್ಟೇದಾರ ಹೆಸರು ತೆಗೆದು ವೈಯಕ್ತಿಕ ಆರ್‍ಟಿಸಿ ಮಾಡಿಕೊಡಲಾಗುತ್ತದೆ. ಸೂಕ್ತ ದಾಖಲೆಗಳೊಂದಿಗೆ ಕಚೇರಿಗೆ ಬಂದರೆ ಸಮಸ್ಯೆಯನ್ನು ಪರಿಹರಿಸಿ ಕೊಡಲಾಗುತ್ತದೆ. ಇದರಿಂದ ಸರ್ಕಾರಿ ಸೌಲಭ್ಯ, ಕೃಷಿ ಸಾಲ ಇನ್ನಿತರ ಸೌಲಭ್ಯಗಳನ್ನು ರೈತರು ಪಡೆಯಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಅವರು ಮಾತನಾಡಿ ಕೊಡಗಿನಲ್ಲಿ ಪೈಕಿ ಆರ್‍ಟಿಸಿಗಳ ಸಮಸ್ಯೆ ಬಹಳ ಇದೆ. ವೈಯಕ್ತಿಕ ಆರ್‍ಟಿಸಿ ನೀಡುವ ಕೆಲಸ ಆಗುತ್ತಿದೆ ಆದಷ್ಟು ಬೇಗ ನಿಮ್ಮ  ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು. 

ಗ್ರಾಮಸ್ಥರಾದ ಪುಟ್ಟಪ್ಪ ಅವರು ಮಾತನಾಡಿ ಪ್ರತಿ ಮನೆಗೆ ವಿದ್ಯುತ್, ರಸ್ತೆ, ಕುಡಿಯುವ ನೀರು, ಇನ್ನಿತರ ಸೌಲಭ್ಯಗಳಿದ್ದರೂ ಕೂಡ ನಮ್ಮ ಗ್ರಾಮದಲ್ಲಿ ಹಲವಾರು ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಇನ್ನೂ ಕೂಡ ಸಿಕ್ಕಿರುವುದಿಲ್ಲ. ವಿದ್ಯುತ್ ಸಮಸ್ಯೆಯೂ ಕೂಡ ಬಹಳ ಇದೆ ಈ ಕುರಿತು ಸಂಬಂಧಪಟ್ಟವರಿಗೆ ತಿಳಿಸಿದರು ಕೂಡ ಸ್ಪಂದಿಸುತ್ತಿಲ್ಲ ಎಂದರು. 

ಸೆಸ್ಕ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಶೋಕ್ ಅವರು ಮಾತನಾಡಿ ಈ ಭಾಗದ ವಿದ್ಯುತ್ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಡಲಾಗುವುದು ಎಂದು ಹೇಳಿದರು. 

ಜಿಲ್ಲಾಧಿಕಾರಿ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ 8 ಕಡೆ 66/11 ಕೆ.ವಿ. ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಪ್ರಸ್ತಾವನೆ  ಸಲ್ಲಿಸಲಾಗಿದೆ. ಈ ಕುರಿತು ಕಕ್ಕಬ್ಬೆಯಲ್ಲಿಯೂ ಒಂದು ಸ್ಥಾವರ ಸ್ಥಾಪನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. 

ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾದೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಎಂಟು ಸ್ಥಾವರಗಳ ಸ್ಥಾಪನೆಗೆ ಪ್ರಸ್ತಾವನೆ ಇದೆ ಅದರಲ್ಲಿ ಮೂರು ಕಡೆ ಈಗಾಗಲೇ ಕಾಮಗಾರಿ ನಡೆಯುತ್ತಿದೆ, ಮಡಿಕೇರಿಯಿಂದ ವಿರಾಜಪೇಟೆಗೆ 66/11 ಕೆ.ವಿ ವಿದ್ಯುತ್ ಕಾಮಗಾರಿ ನಡೆಯುತ್ತಿz. ಇದರಿಂದ ಈ ಭಾಗದ ಜನರಿಗೆ ವಿದ್ಯುತ್ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದರು.  

      ವಿದ್ಯುತ್ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಲೈನ್ ಮ್ಯಾನ್‍ಗೆ ಪರಿಹಾರ ನೀಡವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

      ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಅಶೋಕ್ ಅವರು ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಲೈನ್‍ಮೆನ್‍ಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

      ಗ್ರಾಮಸ್ಥರಾದ ದೇವಯ್ಯ ಅವರು ಮಾತನಾಡಿ ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬಹಳ ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿಕೊಡಬೇಕಾಗಿ ಕೇಳಿಕೊಂಡರು. 

      ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತನಾಡಿ ಜಲಜೀವನ್ ಯೋಜನೆಯಡಿ ಕುಂಜಿಲ ಜನವಸತಿ ಕೇಂದ್ರದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಒದಗಿಸಲಾಗುವುದು ಎಂದು ಅವರು ಹೇಳಿದರು.

      ಯವಕಪಾಡಿ ಗ್ರಾಮಕ್ಕೆ ಸ್ಥಳ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು. 

      ಸೌಖತ್ ಅಲಿ ಅವರು ಮಾತನಾಡಿ ಕುಂಜಿಲ ಮಸೀದಿಯ 2 ಕಿ,ಮೀ. ಉದ್ದದ ರಸ್ತೆಗೆ 2018 ರಲ್ಲಿ ಗುದ್ದಲಿ ಪೂಜೆ ನಡೆದಿದ್ದು, ಕೇವಲ 500 ಮೀ. ರಸ್ತೆಯನ್ನು ನಿರ್ಮಿಸಲಾಗಿದೆ. ಬಾಕಿ ಉಳಿದ ರಸ್ತೆಯನ್ನು ಮಳೆಗಾಲ ಪ್ರಾರಂಭದ ಮೊದಲೇ ಪೂರ್ಣಗೊಳಿಸುವಂತೆ ಅವರು ಕೋರಿದರು. 

      ಇದಕ್ಕೆ ಸಂಬಂಧಪಟ್ಟ ಪಿಡಬ್ಲ್ಯುಡಿ ಇಇ ನಾಗರಾಜು ಅವರು ಪ್ರತಿಕ್ರಿಯಿಸಿ ಟೆಂಡರ್‍ದಾರರು ಸರಿಯಾಗಿ ಕೆಲಸ ಮಾಡದ ಕಾರಣ ಅವರ ಟೆಂಡರ್‍ನ್ನು ರದ್ದುಪಡಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪ್ರಸ್ತಾವನೆ ಪೂರ್ಣಗೊಂಡ ನಂತರದಲ್ಲಿ ಹೊಸ ಟೆಂಡರ್ ಕರೆದು ಕುಂಜಿಲ ರಸ್ತೆ ಸರಿಪಡಿಸಿಕೊಡಲಾಗುವುದು ಎಂದು ಹೇಳಿದರು. 

      ಕುಂಜಿಲ ಗ್ರಾಮದ ನಾಣಯ್ಯ ಅವರು ಮಾತನಾಡಿ ಗ್ರಾಮದಲ್ಲಿ ಕಾಫಿ ತೋಟವಿದ್ದು, ತೋಟಕ್ಕೆ ಹೋಗಲು ರಸ್ತೆಯೇ ಇರುವುದಿಲ್ಲ. ತೋಟಕ್ಕೆ ಹೋಗುವ ದಾರಿಯಲ್ಲಿ ಪೈಸಾರಿ ಜಾಗವಿದ್ದು, ಜಾಗವನ್ನು ಸರ್ಕಾರ ಫಲಾನುಭವಿಗಳಿಗೆ ನೀಡಿದ್ದು, ಅಲ್ಲಿ ವಾಸಿಸುವ ಜನರು ನಮಗೆ ತೋಟಕ್ಕೆ ಹೋಗಲು ರಸ್ತೆ ಬಿಡುತ್ತಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿ ಅವರ ಗಮನಕ್ಕೆ ತಂದರು. 

      ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಅವರು ಪ್ರತಿಕ್ರಿಯಿಸಿ ಫಲಾನುಭವಿಗಳಿಗೆ  ಪೈಸಾರಿ ಜಾಗವನ್ನು ನೀಡುವಾಗ ರಸ್ತೆಗೆ ಜಾಗವನ್ನು ಬಿಡಲಾಗುವುದು. ಏನಾದರೂ ನಮ್ಮ ಗಮನಕ್ಕೆ ಬಾರದೆ ಆ ರೀತಿ ಆಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. 

      ಇದಕ್ಕೆ ಜಿಲ್ಲಾಧಿಕಾರಿ ಅವರು ರಸ್ತೆ ನಕಾಶೆ ಇದ್ದಲ್ಲಿ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

     


ಗ್ರಾಮಸ್ಥರಾದ ಕರುಂಬಯ್ಯ ಅವರು ಮಾತನಾಡಿ ಗ್ರಾಮದಲ್ಲಿ ಒಂದು ಸೇತುವೆ ಇದ್ದು, ಅದನ್ನು ದುರಸ್ತಿ ಪಡಿಸಿಕೊಡಬೇಕಾಗಿ ಮನವಿ ಮಾಡಿದರು.  ಗ್ರಾಮದ ರಸ್ತೆಯು ಹದಗೆಟ್ಟಿದ್ದು, ರಸ್ತೆಯನ್ನು ಸರಿಪಡಿಸಿಕೊಡಬೇಕಾಗಿ ಮನವಿ ಮಾಡಿದರು. 

      ಬೆಳಕು ಯೋಜನೆಯಡಿ ಫಲಾನುಭವಿಗಳಿಗೆ ಯಾವುದೇ ರೀತಿಯ ಸೌಲಭ್ಯಗಳು ದೊರಕುತ್ತಿಲ್ಲ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ತೋಟದ ಮೇಲೆ ಹಾದು ಹೋಗುವ ವಿದ್ಯುತ್ ಲೈನ್‍ನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. 

      ಇದಕ್ಕೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು. 

     ಸ್ಥಳೀಯರೊಬ್ಬರು ಮಾತನಾಡಿ ಗ್ರಾಮದಲ್ಲಿ ಹಲವು ಜನರ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಅವರಿಗೆ ಪಡಿತರ ಚೀಟಿಯನ್ನು ಒದಗಿಸುವಂತೆ ಮನವಿ ಮಾಡಿದರು. 

     ಗ್ರಾಮದಲ್ಲಿ ಆನೆ ಹಾವಳಿ ಹೆಚ್ಚಿದ್ದು, ಆನೆ ಹಾವಳಿಯನ್ನು ತಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ಮತ್ತು ಗ್ರಾಮದಲ್ಲಿ ವೈದ್ಯಕೀಯ ಸೇವೆ, ರೈತರಿಗೆ ರಸಗೊಬ್ಬರ ವಿತರಣೆ, ಪೌಷ್ಠಿಕ ಆಹಾರ, ಹೀಗೆ ಹತ್ತು ಹಲವು ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. 

     ಫಲಾನುಭವಿಗಳಿಗೆ ಸಾಗುವಳಿ ಚೀಟಿ ಮತ್ತು ಮಾಸಾಶನ ಪತ್ರ ವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮಸ್ಥರು ಇತರರು ಇದ್ದರು.