ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಂಯೋಜನೆಯೊಂದಿಗೆ ಉನ್ನತೀಕರಿಸಿದ ತಾಂತ್ರಿಕ ಕೇಂದ್ರದ ಉದ್ಘಾಟನೆ
ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು; ಅನಿತಾ ಪೂವಯ್ಯ
ಮಡಿಕೇರಿ ಜೂ.20: ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಕಠಿಣ ಶ್ರಮ ಮತ್ತು ಪರಿಶ್ರಮದಿಂದ ದುಡಿದು ಸ್ವಉದ್ಯೋಗಿಗಳಾಗಿ ಮತ್ತೊಬ್ಬರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಹೇಳಿದರು.
ನಗರದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಂಯೋಜನೆಯೊಂದಿಗೆ ಉನ್ನತೀಕರಿಸಿದ ತಾಂತ್ರಿಕ ಕೇಂದ್ರದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಂಯೋಜನೆಯೊಂದಿಗೆ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉನ್ನತೀಕರಿಸಿದ ತಾಂತ್ರಿಕ ಕೇಂದ್ರವನ್ನು ನಿರ್ಮಿಸಲಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಐಟಿಐ ವಿದ್ಯಾಭ್ಯಾಸ ಮಾಡಿದ ಬಹಳಷ್ಟು ಮಂದಿ ಕೈಗಾರಿಕೆಯಲ್ಲಿ ಉನ್ನತಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಬೆಳೆಯುವಂತಾಗಬೇಕು ಎಂದರು.
ಪ್ರಸ್ತುತ ದಿನದಲ್ಲಿ ವಿದ್ಯಾರ್ಥಿಗಳು ಕಲಿಯಲು ಬಹಳಷ್ಟು ವಿಷಯಗಳಿವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಕೈಗಾರಿಕ ತರಬೇತಿಗೆ ಸೇರಿದವರು ತಮ್ಮ ಪಠ್ಯ ಜೊತೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಕಲಿಯುವಂತಾಗಬೇಕು ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲೂ ಮುಂದಿರಬೇಕು. ಆ ನಿಟ್ಟಿನಲ್ಲಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವುದು ಅಗತ್ಯ ಎಂದರು.
ವಿದ್ಯಾರ್ಥಿಗಳು ಸ್ವ ಉದ್ಯೋಗ ಕೈಗೊಂಡು ಮತ್ತೊಬ್ಬರನ್ನು ಅವಲಂಬಿತರಾಗದೆ ಬೆಳೆಯಬೇಕು. ವಿದ್ಯಾರ್ಥಿಗಳು ತಾವು ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಕಲಿಸುತ್ತಾ, ಉದ್ಯೋಗಿಗಳಾಗಿ ಮತ್ತೊಬ್ಬರಿಗೆ ಉದ್ಯೋಗದಾತರಾಗಿ ಎಲ್ಲರೂ ಬೆಳೆಯುವಂತಾಗಬೇಕು ಎಂದು ಅವರು ಹೇಳಿದರು.
ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಪಂಡಿತಾರಾಧ್ಯ ಅವರು ಮಾತನಾಡಿ ಸಂಸ್ಥೆಯಲ್ಲಿ ಶೇ.65 ಷ್ಟು ಪ್ರಾಯೋಗಿಕ ಶಿಕ್ಷಣ ಹಾಗೂ ಉಳಿದ ಶೇ.35 ರಷ್ಟು ಪಠ್ಯ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೋಟಾರ್ ಟೆಕ್ನಿಕ್ ಕೌಶಲ್ಯಗಳನ್ನು ಕಲಿಸಲಾಗುವುದು. ಬೇಸಿಕ್ ವಾಹನ ತರಬೇತಿ ಹಲವಾರು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಲು ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದ್ದು, ಕೈಗಾರಿಕೆಗಳಲ್ಲಿ ದೈಹಿಕ ಸಾಮಥ್ರ್ಯವು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ನಗರಸಭೆ ಸದಸ್ಯರಾದ ಅರುಣ್ ಶೆಟ್ಟಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು. ಭಾವನಾ, ಸವಿತಾ, ಅನುಶ್ರೀ ಅವರು ಪ್ರಾರ್ಥಿಸಿದರು. ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಇಂದ್ರೇಶ್ ಸ್ವಾಗತಿಸಿದರು. ಅತಿಥಿ ಬೋಧಕರಾದ ರಂಜಿತಾ ನಿರೂಪಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network