Header Ads Widget

Responsive Advertisement

ಕೈ ಕಾಲು, ಬಾಯಿ ರೋಗ ನಿಯಂತ್ರಿಸಲು ಅಗತ್ಯ ಮುನ್ನೆಚ್ಚರ: ಡಾ.ಆರ್.ವೆಂಕಟೇಶ್


ಕೈ ಕಾಲು, ಬಾಯಿ ರೋಗ ನಿಯಂತ್ರಿಸಲು ಅಗತ್ಯ ಮುನ್ನೆಚ್ಚರ: ಡಾ.ಆರ್.ವೆಂಕಟೇಶ್

ಮಡಿಕೇರಿ ಜು.28: ಜಿಲ್ಲೆಯಲ್ಲಿ ಕೈ, ಕಾಲು, ಬಾಯಿ ರೋಗವನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ.   

ಕೈ, ಕಾಲು, ಬಾಯಿ ರೋಗ ವೈರಸ್‍ನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದೆ. ಕಾಕ್ಸ್‍ಸಾಕಿ ವೈರಸ್‍ಗಳಿಂದ ಈ ರೋಗ ಬರುತ್ತದೆ. 

ರೋಗದ ಲಕ್ಷಣಗಳು: ಒಂದು ಅಥವಾ ಎರಡು ದಿನದ ಜ್ವರದಿಂದ ಈ ಕಾಯಿಲೆ ಪ್ರಾರಂಭವಾಗುತ್ತದೆ. ನಂತರ ದದ್ದುಗಳು ಮತ್ತು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಕೈ, ಬಾಯಿ ಹಾಗೂ ಕಾಲುಗಳಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ಇವುಗಳು ಕುಂಡಿಯವರೆಗೂ ತಲುಪುತ್ತವೆ. ಬಾಯಿಗಳಲ್ಲಿ ಹುಣ್ಣಾಗಿ ಮಕ್ಕಳು ಊಟ ಮಾಡಲು ಕಷ್ಟವಾಗುತ್ತದೆ. ಆದರೆ ಕೈ ಹಾಗೂ ಕಾಲುಗಳಲ್ಲಿನ ಗುಳ್ಳೆಗಳಿಂದಾಗಿ ಸ್ವಲ ಪ್ರಮಾಣದ ನೋವು ಉಂಟಾಗಿ ಕಿರಿಕಿರಿ ಉಂಟಾಗುತ್ತದೆ. 

ಯಾವ ವಯಸ್ಸಿನವರಲ್ಲಿ ಈ ರೋಗ ಕಂಡುಬರುತ್ತದೆ: ಸಾಮಾನ್ಯವಾಗಿ 16 ಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪ್ರೌಢ ವಯಸ್ಸಿನ ಮಕ್ಕಳಲ್ಲಿಯೂ ಈ ರೋಗ ಬರುತ್ತದೆ. ಅಪರೂಪಕ್ಕೊಬ್ಬರಿಗೆ ವಯಸ್ಕರಲ್ಲಿಯೂ ಈ ರೋಗ ಬರುತ್ತದೆ. 

ಗುಣಪಡಿಸಲು ಬೇಕಾಗುವ ಅವಧಿ: ಕೈ, ಕಾಲು ಹಾಗೂ ಬಾಯಿ ರೋಗಗಳು ಸಾಮಾನ್ಯವಾಗಿ 5 ರಿಂದ 7 ದಿನಗಳೊಳಗೆ ಗುಣವಾಗುತ್ತವೆ. ಅದರಷ್ಟಕ್ಕೆ ಅದೇ ಈ ರೋಗಗಳು ಹೋಗುತ್ತವೆ. ಚಿಕಿತ್ಸೆ ಇಲ್ಲದೆಯೂ ಕೂಡಾ ಒಂದು ವಾರದೊಳಗೆ ಈ ರೋಗದಿಂದ ಮುಕ್ತಿಯಾಗಬಹುದು. ಯಾವುದೇ ಕಲೆ ಇಲ್ಲದೆ ಎರಡು ವಾರಗಳ ನಂತರವೂ ಗುಳ್ಳೆಗಳು ಮಾಯವಾಗುತ್ತವೆ. 

ಮುಂಜಾಗ್ರತಾ ಕ್ರಮಗಳು: ಮೂಗಿನ ಸ್ರವಿಸುವಿಕೆ, ಮಲ ಅಥವಾ ಗುಳ್ಳೆಗಳಿಂದ ದ್ರವದಂತಹ ದೈಹಿಕ ವಿಸರ್ಜನೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. 

ಈ ಸೋಂಕು ಕಾಣಿಸಿಕೊಂಡಂತಹ ಮಕ್ಕಳನ್ನು ಒಂದು ವಾರಗಳ ಕಾಲ ಮನೆಯಲ್ಲಿಯೇ ಇಡುವುದರಿಂದ ಮತ್ತೊಬ್ಬರಿಗೆ ಈ ಸೋಂಕು ಹರಡದಂತೆ ತಡೆಗಟ್ಟಬಹುದು. ಕೆಲ ಪ್ರಕರಣಗಳಲ್ಲಿ 11 ವಾರಗಳ ಕಾಲ ಈ ಸೋಂಕು ಮುಂದುವರೆಯಬಹುದು. ಅಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬಾರದು. 

ಪ್ರತಿನಿತ್ಯ ಸಾಬೂನಿನಿಂದ ಕೈ ತೊಳೆಯುವಂತೆ ಹಾಗೂ ಕೈಗಳನ್ನು ಶುದ್ಧವಾಗಿಟ್ಟುಕೊಳ್ಳುವಂತೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಟ್ರಾಲಿ, ಟಾಯ್ಸ್‍ಗಳನ್ನು ಮುಟ್ಟಿದ್ದ ಸೋಂಕಿತ ಮಕ್ಕಳಿಂದ ಈ ರೋಗ ಹರಡಿರುವ ಬಗ್ಗೆ ವರದಿಯಾಗಿದೆ. ಆದ್ದರಿಂದ ಇಂತಹ ಸಂದರ್ಭಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ಅಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕರು ತಿಳಿಸಿದ್ದಾರೆ. 

ಚಿಕಿತ್ಸೆ: ಸಾಮಾನ್ಯವಾಗಿ ಇಂತಹ ರೋಗಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದಿಲ್ಲ. ಜ್ವರ ಹಾಗೂ ನೋವಿಗಾಗಿ ಪ್ಯಾರಾಸಿಟಮೊಲಾ ಮಾತ್ರೆ ಸೇವಿಸಬೇಕು. ಗುಳ್ಳೆಗಳ ನಿವಾರಣೆಗಾಗಿ ಕಾಲಮೈನ್ ಲೋಷನ್ ಬಳಸಬೇಕು. ಬಾಯಿಯಲ್ಲಿ ಉಣ್ಣಿನಿಂದ ಆಹಾರ ಸೇವನೆ ಕಷ್ಟಕರವಾಗುವುದರಿಂದ ದ್ರವ ಪದಾರ್ಥಗಳ ಸೇವನೆ ಮಾಡಬೇಕು. ಹೆಚ್ಚಾಗಿ ಎಳನೀರು ಕುಡಿಯಬೇಕು. ಉಪ್ಪು ನೀರಿನಲ್ಲಿ ಸ್ನಾನ ಮಾಡಬೇಕು. ಲ್ಯಾವೆಂಡರ್ ಎಣ್ಣೆ ಬಳಸುವುದರಿಂದಲೂ ಹೆಚ್ಚು ಅನುಕೂಲವಾಗುತ್ತದೆ. 

ಈ ಖಾಯಿಲೆಯು ಸಾಮಾನ್ಯವಾಗಿ ಮಳೆಗಾಲದಲ್ಲಿ ಕಂಡು ಬರುವುದು ಸಹಜ. ಇದರಿಂದ ಯಾವುದೇ ಮಾರಣಾಂತಿಕ ಅಡ್ಡ ಪರಿಣಾಮಗಳು ಜಿಲ್ಲೆಯಲ್ಲಿ ಕಂಡು ಬಂದಿಲ್ಲ. ಇದುವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ಸಾರ್ವಜನಿನಕರು ಯಾವುದೇ ರೀತಿ ಆತಂಕ ಪಡದೇ ಈ ರೋಗದ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಆರ್.ವೆಂಕಟೇಶ್ ಅವರು ಕೋರಿದ್ದಾರೆ.