ಮಳೆಹಾನಿ ಪ್ರದೇಶಗಳಿಗೆ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ; ಪರಿಶೀಲನೆ
ಮಡಿಕೇರಿ ಜು.06: ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಬುಧವಾರ ಮಂಗಳೂರು ರಸ್ತೆಯ ಜಿಲ್ಲಾಡಳಿತ ಭವನದ ಬಳಿ ತಡೆಗೋಡೆ ನಿರ್ಮಿಸಿರುವ ಕಾಮಗಾರಿ ವೀಕ್ಷಿಸಿದರು, ಮದೆನಾಡಿನ ಕರ್ತೋಜಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು, ಬಳಿಕ ನಗರದ ಚಾಮುಂಡೇಶ್ವರಿ ನಗರ ಹಾಗೂ ಕೊಡಗು ಗೌಡ ಸಮಾಜದ ಬಳಿ ಬರೆ ಕುಸಿದಿರುವ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಬಳಿಕ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಜಿಲ್ಲಾಡಳಿತ ಭವನದ ಬಳಿ ಮಂಗಳೂರು ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದು, ಸಮರ್ಪಕವಾಗಿಲ್ಲ. ಆದ್ದರಿಂದ ತಾಂತ್ರಿಕ ತಜ್ಞರನ್ನು ಕರೆಸಿ ತಡೆಗೋಡೆಯನ್ನು ಸರಿಪಡಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಸದ್ಯ ಈಗ ಮುಂಗಾರು ಆರಂಭವಾಗಿದೆ. ಜಿಲ್ಲೆಯಲ್ಲಿ ಇನ್ನೂ ಮಳೆಯಾಗುವುದರಿಂದ ಹೆಚ್ಚಿನ ಮುನ್ನೆಚ್ಚರ ವಹಿಸಬೇಕಿದೆ ಎಂದು ಶಾಸಕರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಮಳೆಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಲಾಗಿದೆ. ಭೂಕಂಪನ ಸಂಬಂಧಿಸಿದಂತೆ ತಜ್ಞರ ತಂಡವು ಭೇಟಿ ನೀಡಲಿದೆ. ಹಾಗೆಯೇ ಕಂದಾಯ ಸಚಿವರು ಜುಲೈ, 07 ರಂದು ಚೆಂಬು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಜನರು ಗಾಬರಿಯಾಗುವುದು ಬೇಡ ಎಂದರು.
ಮುಂಗಾರು ಸಂಬಂಧ ಮುನ್ನೆಚ್ಚರ ವಹಿಸುವ ನಿಟ್ಟಿನಲ್ಲಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾ.ಪಂ.ಮಟ್ಟದಲ್ಲಿ ಕಾರ್ಯಪಡೆ ಸಮಿತಿ ರಚಿಸಲಾಗಿದ್ದು, ಕಾರ್ಯಪಡೆಯು ಮಳೆಹಾನಿಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ನಗರದ ಚಾಮುಂಡೇಶ್ವರಿ ನಗರ ವೀಕ್ಷಿಸಿದ ಬಳಿಕ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಚಾಮುಂಡೇಶ್ವರಿ ನಗರ ವ್ಯಾಪ್ತಿಯಲ್ಲಿ ಅಪಾಯದ ಅಂಚಿನಲ್ಲಿರುವ ಕುಟುಂಬಗಳು ಕೂಡಲೇ ಸ್ಥಳಾಂತರ ಆಗಬೇಕು ಎಂದು ಮನವಿ ಮಾಡಿದರು.
‘ಈಗಾಗಲೇ ಕರ್ಣಂಗೇರಿಯಲ್ಲಿ 35, ಮದೆನಾಡು ಗ್ರಾಮದಲ್ಲಿ 80, ಜಂಬೂರು ಗ್ರಾಮದಲ್ಲಿ 383, ಬಿಳಿಗೇರಿ ಗ್ರಾಮದಲ್ಲಿ 22 ಹಾಗೂ ಗಾಳಿಬೀಡು ಗ್ರಾಮದಲ್ಲಿ 140 ಮನೆಗಳನ್ನು ಅರ್ಹರಿಗೆ ಹಸ್ತಾಂತರಿಸಲಾಗಿದೆ. ಉಳಿದಂತೆ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ(ಕೆ.ನಿಡುಗಣೆ) ನಿರ್ಮಿಸಿರುವ 76 ಮನೆಗಳ ಹಸ್ತಾಂತರಕ್ಕೆ ಬಾಕಿ ಇದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದರು.’
ಉಳಿದಂತೆ ಮಡಿಕೇರಿ ನಗರ ವ್ಯಾಪ್ತಿಯ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರ ಮತ್ತಿತರ ಕಡಿದಾದ ಪ್ರದೇಶದಲ್ಲಿ ವಾಸಿಸುವ ಜನರಿಗೆ ಮನೆ ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು. ಸದ್ಯ ಇಲ್ಲಿನ 250 ಕುಟುಂಬಗಳಿಗೆ ತಾತ್ಕಾಲಿಕ ಸ್ಥಳಾಂತರ ಮಾಡುವಂತೆ ನಗರಸಭೆಯಿಂದ ನೋಟೀಸು ನೀಡಲಾಗಿದೆ ಎಂದರು.
ಈಗಾಗಲೇ ಸರ್ಕಾರದಿಂದ ಮನೆ ನೀಡಿರುವ ಕೆಲವು ಕುಟುಂಬಗಳು ಚಾಮುಂಡೇಶ್ವರಿ ನಗರದಲ್ಲಿಯೇ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಇಂತಹ ಕುಟುಂಬಗಳು ಕೂಡಲೇ ಸ್ಥಳಾಂತರ ಆಗಬೇಕು ಎಂದು ಶಾಸಕರು ಹೇಳಿದರು.
ಇನ್ಫೋಸಿಸ್ ಸಂಸ್ಥೆಯವರು ಜಂಬೂರು ಗ್ರಾಮದಲ್ಲಿ ಮನೆ ನಿರ್ಮಿಸುತ್ತಿದ್ದು, ಅವುಗಳನ್ನು ಸಹ ಹಸ್ತಾಂತರಿಸಬೇಕಿದೆ. ಸದ್ಯ ಅಪಾಯದ ಅಂಚಿನಲ್ಲಿರುವ ಕುಟುಂಬಗಳು ಕೂಡಲೇ ಸ್ಥಳಾಂತರ ಆಗಬೇಕು ಎಂದು ಶಾಸಕರು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ನಗರಸಭಾ ಸದಸ್ಯರು ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network