Header Ads Widget

ಸರ್ಚ್ ಕೂರ್ಗ್ ಮೀಡಿಯ

ಜಿ.ಪಂ.ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ(ದಿಶಾ)


ಜಿ.ಪಂ.ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ(ದಿಶಾ)

ಮುಂಗಾರು ವಿದ್ಯುತ್ ವ್ಯತ್ಯಯ ಉಂಟಾಗದಂತೆ ಗಮನಹರಿಸಿ: ಪ್ರತಾಪ್ ಸಿಂಹ

ಮಡಿಕೇರಿ ಜು.08: ಜಿಲ್ಲೆಯಲ್ಲಿ ಮುಂಗಾರು ಮುಂದುವರೆದಿದ್ದು, ಈ ಹಿನ್ನೆಲೆ ವಿದ್ಯುತ್ ಸಂಬಂಧಿಸಿದಂತೆ ಹಾನಿಯನ್ನು ಕೂಡಲೇ ಸರಿಪಡಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಗಮನಹರಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಸಂಸದರಾದ ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದ್ದಾರೆ. 

ನಗರದ ಜಿ.ಪಂ.ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ(ದಿಶಾ)ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದುವರೆಗೆ ಎಷ್ಟು ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳು ಹಾನಿಯಾಗಿವೆ ಮತ್ತಿತರ ಬಗ್ಗೆ ಮಾಹಿತಿ ಪಡೆದ ಸಂಸದರು, ಈಗಾಗಲೇ ಮುಂಗಾರು ಚುರುಕು ಪಡೆದಿರುವುದರಿಂದ ಅಗತ್ಯ ಮುನ್ನೆಚ್ಚರ ವಹಿಸಿ ಕಾರ್ಯನಿರ್ವಹಿಸುವಂತೆ ಸೆಸ್ಕ್ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. 

ಈ ಬಗ್ಗೆ ಮಾಹಿತಿ ನೀಡಿದ ಸೆಸ್ಕ್ ಇಇ ಅಶೋಕ್ ಅವರು ಇದುವರೆಗೆ 962 ವಿದ್ಯುತ್ ಕಂಬಗಳು ಹಾಗೂ 132 ವಿದ್ಯುತ್ ಪರಿವರ್ತಕ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ 1 ಸಾವಿರ ವಿದ್ಯುತ್ ಕಂಬಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 14 ಹೆಚ್ಚುವರಿ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ, 75 ಗ್ಯಾಂಗ್ ಮೆನ್‍ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅಶೋಕ್ ಅವರು ಮಾಹಿತಿ ನೀಡಿದರು.   

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಗ್ರಾಮೀಣ ಪ್ರದೇಶದವರಿಗೆ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಗಮನಹರಿಸುವಂತೆ ಸೂಚಿಸಿದರು. 

ಸಮಿತಿ ಸದಸ್ಯರೊಬ್ಬರು ಮಾತನಾಡಿ ಬಾಳೆಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ನಿರಂತರವಾಗಿದೆ. ಆದ್ದರಿಂದ ವಿದ್ಯುತ್ ಉಪ ಘಟಕ ನಿರ್ಮಾಣ ಮಾಡಿ ಸಮರ್ಪಕ ವಿದ್ಯುತ್ ಪೂರೈಕೆಗೆ ಗಮನಹರಿಸಬೇಕು ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ವಿದ್ಯುತ್ ಉಪ ಘಟಕ ಸ್ಥಾಪಿಸುವಂತಾಗಲು ಯಾರೂ ಸಹ ಜಾಗ ನೀಡಲು ಮುಂದೆ ಬರುತ್ತಿಲ್ಲ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ನೀಡಿದರೂ ಸಹ ಭೂಮಿ ನೀಡಲು ಮುಂದೆ ಬರುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾದಾಪುರ ಮತ್ತಿತರ ಕಡೆಗಳಲ್ಲಿ ಜಾಗ ನೀಡಿದರೂ ಸಹ ವಿದ್ಯುತ್ ಉಪ ಘಟಕ ನಿರ್ಮಾಣ ಮಾಡಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯ ದೇವನೂರು ಮತ್ತು ಬಾಳೆಲೆಯಲ್ಲಿ ವಿದ್ಯುತ್ ಉಪ ಘಟಕ ಸ್ಥಾಪಿಸುವ ಸಂಬಂಧ ದರ ನಿಗಧಿ ಮಾಡಿ, ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಇದನ್ನು ಪರಿಶೀಲಿಸಿ ಮತ್ತೊಮ್ಮೆ ಪ್ರಸ್ತಾವ ಕಳುಹಿಸುವಂತೆ ತಿಳಿಸಿದ್ದಾರೆ ಎಂದರು. 

ಕಾಕೋಟು ಪರಂಬು ಸೇರಿದಂತೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಧಾರಾಕಾರ ಮಳೆ ಮತ್ತು ಗಾಳಿಯಿಂದಾಗಿ ವಿದ್ಯುತ್ ಕಂಬಗಳು ವಾಲುತ್ತಿದ್ದು, ಇದನ್ನು ಸರಿಪಡಿಸುವಂತಾಗಬೇಕು ಎಂದು ಸಮಿತಿ ಸದಸ್ಯರೊಬ್ಬರು ಗಮನಸೆಳೆದರು.

ಸೆಸ್ಕ್ ವಿಭಾಗಕ್ಕೆ ಮಳೆಗಾಲದಲ್ಲಿ ಹೆಚ್ಚಿನ ಕೆಲಸಗಳು ಇರುವುದರಿಂದ ಹೆಚ್ಚಿನ ಗ್ಯಾಂಗ್‍ಮೆನ್‍ಗಳನ್ನು ನಿಯೋಜಿಸಿಕೊಳ್ಳಬೇಕು. ವರ್ಗಾವಣೆಗೊಂಡಿದ್ದಲ್ಲಿ ಬಿಡುಗಡೆ ಮಾಡಬಾರದು ಎಂದು ಶಾಸಕದ್ವಯರು ನಿರ್ದೇಶನ ನೀಡಿದರು.

ಸಾರ್ವಜನಿಕರೇ ವಿದ್ಯುತ್ ಕಂಬವನ್ನು ತೆಗೆದುಕೊಂಡು ಹೋಗಬೇಕಿರುವುದು ದುರಂತವೇ ಸರಿ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎಂಜಿನಿಯರ್‍ಗಳು ಸಾರ್ವಜನಿಕರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೇಳಿದರು. 

ಲೋಕೋಪಯೋಗಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನ ಬಳಿ ಮಂಗಳೂರು ಹೆದ್ದಾರಿಯಲ್ಲಿ ನಿರ್ಮಿಸಿರುವ ತಡೆಗೋಡೆ ಸಮರ್ಪಕವಾಗಿಲ್ಲ. ಆದ್ದರಿಂದ ಮಳೆಗಾಲದ ನಂತರ ಸಂಪೂರ್ಣ ಬಿಚ್ಚಿ ಸರಿಪಡಿಸುವಂತೆ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಈ ಬಾರಿಯ ಮಳೆಗೆ ಏನಾಗುತ್ತದೋ ತಿಳಿಯದು ಎಂದರು.  ಪಿಡಬ್ಲ್ಯುಡಿ ಎಂಜಿನಿಯರ್ ನಾಗರಾಜು ಅವರು ಜಿಲ್ಲಾಡಳಿತದ ಬಳಿ ತಡೆಗೋಡೆ ಸಂಬಂಧಿಸಿದಂತೆ ಮಾಹಿತಿ ನೀಡಿ ಮಣ್ಣಿನ ಒಳಗಡೆ ನೀರು ಹೋಗಿರುವುದರಿಂದ ತಡೆಗೋಡೆ ಉಬ್ಬಿದೆ. ಈ ಸಂಬಂಧ ತಜ್ಞರ ಜೊತೆ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದರು.  

ಮತ್ತೊಬ್ಬ ಸದಸ್ಯರು ತಿತಿಮತಿ ಹಾಗೂ ನಾಗರಹೊಳೆ ವ್ಯಾಪ್ತಿಯ ಚೈನಿಹಡ್ಲು ಮತ್ತಿತರ ಕಡೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕನಿಷ್ಠ ಸೀಮೆಎಣ್ಣೆ ಆದರೂ ಒದಗಿಸಬೇಕು ಎಂದು ಮನವಿ ಮಾಡಿದರು. 

ಈ ಬಗ್ಗೆ ನಾಗರಹೊಳೆ ಹುಲಿ ಸಂರಕ್ಷಣಾ ವಿಭಾಗದ ನಿರ್ದೇಶಕರ ಜೊತೆ ಚರ್ಚಿಸಲಾಗುವುದು ಎಂದು ಸಂಸದರಾದ ಪ್ರತಾಪ್ ಸಿಂಹ ಅವರು ಹೇಳಿದರು. 

ತಿತಿಮತಿ ಮತ್ತು ನಾಗರಹೊಳೆ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಹಲವು ಬಾರಿ ಸೂಚಿಸಲಾಗಿದೆ. ಕೂಡಲೇ ವಿದ್ಯುತ್ ಮಾರ್ಗ ಕಲ್ಪಿಸುವಂತೆ ಕೆ.ಜಿ.ಬೋಪಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಇಇ ಅಶೋಕ್ ಅವರು ಸೋಲಾರ್ ವಿದ್ಯುತ್ ದೀಪ ಅಳವಡಿಸಲಾಗಿದೆ ಎಂದರು.  

ಮಳೆಗಾದಲ್ಲಿ ಸೋಲಾರ್ ವಿದ್ಯುತ್ ನಿರ್ವಹಣೆ ಮಾಡಲು ಸಾಧ್ಯವೇ. ಹಾಡಿಯ ಗಿರಿಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗುವಂತೆ ಅಪ್ಪಚ್ಚು ರಂಜನ್ ಅವರು ಸೂಚಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಅರಣ್ಯ ಇಲಾಖೆಯವರಿಂದ ಯಾವುದೇ ರೀತಿಯ ತೊಂದರೆ ಇಲ್ಲ. ಹಾಡಿಗಳಿಗೆ ಪ್ರಥಮ ಆದ್ಯತೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು. 

ಅರಣ್ಯ ಹಕ್ಕು ಕಾಯ್ದೆಯನ್ನು ಚೆನ್ನಾಗಿ ಅಧ್ಯಯನ ಮಾಡಿ ಜಿಲ್ಲೆಯ ಎಲ್ಲಾ ಹಾಡಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೆ.ಜಿ.ಬೋಪಯ್ಯ ಅವರು ಸೂಚಿಸಿದರು. 

ಹಾಡಿಯಲ್ಲಿ ವಾಸಿಸುವ ಆದಿವಾಸಿ ಜನರಿಗೆ ಐಟಿಡಿಪಿ ಇಲಾಖೆ ವತಿಯಿಂದ ನೀಡಲಾಗುವ ಟಾರ್ಪಲ್‍ನ್ನು ವಿತರಿಸುವಂತಾಗಬೇಕು ಎಂದು ಸದಸ್ಯರೊಬ್ಬರು ಮನವಿ ಮಾಡಿದರು.  

ಈಗಾಗಲೇ ಮುಂಗಾರು ಮಳೆ ಆರಂಭವಾಗಿರುವುದರಿಂದ ಟಾರ್ಪಲ್‍ನ್ನು ವಿತರಿಸಬೇಕಿತ್ತು. ಆದರೆ ಇದುವರೆಗೆ ಏಕೆ ವಿತರಿಸಿಲ್ಲ ಎಂದು ಅಪ್ಪಚ್ಚುರಂಜನ್ ಅವರು  ಅಸಮದಾನ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಇಲಾಖೆಯ ಮುಖ್ಯಸ್ಥರ ಅನುಮತಿ ಪಡೆದು ಟಾರ್ಪಲ್ ತರಿಸಿ ವಿತರಿಸಬಹುದಾಗಿದೆ ಎಂದು ಅವರು ಹೇಳಿದರು. 

ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಆ ದಿಸೆಯಲ್ಲಿ ಕರಡಿಗೋಡು ಮತ್ತಿತರ ಭಾಗದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಲಾಗಿದೆ ಎಂದರು. 

ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಿಂದಾಗಿ ಇಬ್ಬರಿಗೆ ಗಾಯವಾಗಿದೆ. 1 ಜಾನುವಾರು ಸಾವನ್ನಪ್ಪಿದೆ. ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದೆ. ಹಲವು ಕಡೆಗಳಲ್ಲಿ ಮರ ಉರುಳಿರುವುದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಸೆಸ್ಕ್ ವ್ಯಾಪ್ತಿಯಲ್ಲಿ ಇದುವರೆಗೆ ಹೆಚ್ಚಿನ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಮನೆ ಹಾನಿ ಆಗಿದ್ದಲ್ಲಿ ಪರಿಹಾರ ವಿತರಿಸಲಾಗುತ್ತದೆ. ಕಳೆದ ನಾಲ್ಕು ದಿನಗಳಿಂದ ಆರೇಂಜ್ ಅಲರ್ಟ್ ಇದ್ದುದರಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಹಾರಂಗಿಯಲ್ಲಿ ನೀರಿನ ಒಳಹರಿವು ಹೆಚ್ಚಳ ಗಮನಿಸಿ ನದಿಗೆ ನೀರು ಬಿಡಲಾಗುತ್ತದೆ ಎಂದು ಅವರು ಹೇಳಿದರು.  

ಮನೆ ಹಾನಿಗೆ ಸಂಬಂಧಿಸಿದಂತೆ ಭಾಗಶಃ ಬದಲಾಗಿ ಸ್ಪಲ್ಪ ಸಡಿಲ ಮಾಡಿ ಮನೆಹಾನಿ ಪರಿಹಾರ ವಿತರಿಸುವಂತಾಗಬೇಕು ಎಂದು ಪ್ರತಾಪ್ ಸಿಂಹ ಅವರು ಸಲಹೆ ಮಾಡಿದರು. 

ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವಂತೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೂಚಿಸಿದರು.

ಈ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ಜಿಲ್ಲೆಯಲ್ಲಿ ಯೂರಿಯಾ ಮತ್ತು ಡಿಎಪಿ ದಾಸ್ತಾನು ಇದೆ. ಎಂಒಪಿ ಸೇರಿದಂತೆ ವಿವಿಧ ರಸಗೊಬ್ಬರವನ್ನು ಕಾಲ ಕಾಲಕ್ಕೆ ತರಿಸಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಯೂರಿಯಾ ಮತ್ತು ಎಂಒಪಿಗೆ ಹೆಚ್ಚಿನ ಬೇಡಿಕೆ ಇದೆ ಎಂದರು. 

ಮೈಸೂರಿನಲ್ಲಿ ಇತ್ತೀಚೆಗೆ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಗೆ ಸಮರ್ಪಕ ರಸಗೊಬ್ಬರ ಪೂರೈಕೆಗೆ ಕೋರಲಾಗಿದೆ ಎಂದರು.  

ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿ ಹಾಸಿಗೆಯ 100 ಕೋಟಿ ರೂ ವೆಚ್ಚದಲ್ಲಿನ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇನ್ನೂ 35 ಕೋಟಿ ರೂ. ಬಿಡುಗಡೆಗೆ ಮನವಿ ಮಾಡಿ ಆಸ್ಪತ್ರೆಗೆ ಬೇಕಿರುವ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಂತೆ ಅಪ್ಪಚ್ಚು ರಂಜನ್ ಅವರು ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಬಿ.ಸಿ.ಸತೀಶ ಜಿಲ್ಲೆಗೆ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಕೂಡಿಗೆ ಬಳಿ ಮೂರುವರೆ ಎಕರೆ ಜಾಗ ಕಾಯ್ದಿರಿಸಲಾಗಿದೆ ಎಂದು ಅವರು ಹೇಳಿದರು.

ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿ ನೀರು ಕಲ್ಪಿಸುವಂತೆ ಸೂಚಿಸಿದರು. ಗ್ರಾಮ ಒನ್ ಯೋಜನೆಯ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಸಂಸದರು ಸೂಚಿಸಿದರು. 

ಈ ಕುರಿತು ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಜಿಲ್ಲೆಯಲ್ಲಿ 116 ರಲ್ಲಿ 92 ಕಡೆಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭವಾಗಿದೆ. 24 ಕಡೆಗಳಲ್ಲಿ ಬಾಕಿ ಇದೆ ಎಂದು ಮಾಹಿತಿ ನೀಡಿದರು. 

ಕೆಲವು ಕಡೆಗಳಲ್ಲಿ ಗ್ರಾಮ ಪಂಚಾಯಿತಿಯವರೇ ಗ್ರಾಮ ಒನ್ ಸೇವೆಯನ್ನು ನಿರ್ವಹಿಸುವುದು ಒಳಿತು ಎಂದು ಶಾಸಕರಾದ ಅಪ್ಪಚ್ಚು ರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆ ನಿರ್ಮಾಣಕ್ಕೆ ತುಂಬಾ ವರ್ಷದಿಂದ ಬೇಡಿಕೆ ಇದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಕೂಟಿಯಾಲ, ಕಡಮಕಲ್ಲು-ಸುಬ್ರಹ್ಮಣ್ಯ ಹಾಗೂ ಬಿಸಿಲೆ ರಸ್ತೆ ಮಾರ್ಗ ನಿರ್ಮಿಸಬೇಕಿದೆ. ಆ ನಿಟ್ಟಿನಲ್ಲಿ 1:2  ಮಾದರಿಯಲ್ಲಿ ಅರಣ್ಯ ಇಲಾಖೆಗೆ ಭೂಮಿ ನೀಡಿ ರಸ್ತೆ ನಿರ್ಮಿಸಲು ಸಲಹೆ ಮಾಡಿದರು. ಆ ನಿಟ್ಟಿನಲ್ಲಿ ಅರಣ್ಯ ಭೂಮಿ ರಸ್ತೆ ನಿರ್ಮಾಣಕ್ಕಾಗಿ ಎಷ್ಟು ಪಡೆಯಲಾಗುತ್ತದೆ. ಅಷ್ಟು ದುಪ್ಪಟ್ಟು ಭೂಮಿಯನ್ನು ನೀಡಿ ಕಾಮಗಾರಿ ಆರಂಭಿಸಲು ಸಲಹೆ ಮಾಡಿದರು. 

ಮಳೆ ವರದಿಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾಹಿತಿ ನೀಡಿ ಜನವರಿಯಿಂದ ಇಲ್ಲಿಯವರೆಗೆ 1,131 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 951 ಮಿ.ಮೀ. ಮಳೆಯಾಗಿತ್ತು ಎಂದರು.