Header Ads Widget

Responsive Advertisement

ಮಾಯಮುಡಿಯಲ್ಲಿ ಸೆ.4ರಂದು ತೊಕ್ ನಮ್ಮೆ ಮತ್ತು ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆ


ಮಾಯಮುಡಿಯಲ್ಲಿ ಸೆ.4ರಂದು ತೊಕ್ ನಮ್ಮೆ ಮತ್ತು ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆ

ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ - ಆಪಟ್ಟೀರ ಆರ್. ಅಯ್ಯಪ್ಪ

ಪೊನ್ನಂಪೇಟೆ, ಆ.28: ಮಾಯಮುಡಿಯ ಐರನ್ ಸೈಟ್ ಶೂಟರ್ಸ್ ಸಂಸ್ಥೆ ವತಿಯಿಂದ ಕೈಲ್ಪೋದ್ ಹಬ್ಬದ ಪ್ರಯುಕ್ತ  ಸಾಂಪ್ರದಾಯಿಕ ತೋಕ್ ನಮ್ಮೆ ಹಾಗೂ 3ನೇ ವರ್ಷದ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಲಿರುವ ಈ ಸ್ಪರ್ಧೆಯ ಅಗತ್ಯ ಎಲ್ಲಾ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಆಪಟ್ಟೀರ ಆರ್. ಅಯ್ಯಪ್ಪ ತಿಳಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಾಯಮುಡಿಯ ಕಾವೇರಿ ಯುವಕ ಸಂಘ, ಕಾವೇರಿ ಅಸೋಸಿಯೇಷನ್- ಕೋಲುಬಾಣೆ, ಮಾಯಾಮುಡಿಯ ಕಂಗಳತ್ ನಾಡು ಮಹಿಳಾ ಸಮಾಜ, ಗೋಣಿಕೊಪ್ಪಲಿನ ಕಾವೇರಿ, ಪೊಮ್ಮಕ್ಕಡ ಕೂಟ ಹಾಗೂ ಕೊಡಗು ಜಾವ ಯೆಜ್ ಡಿ ಮೋಟಾರ್ ಸೈಕಲ್ ಕ್ಲಬ್ ಇದರ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ರಾಜ್ಯಮಟ್ಟದ ಶೂಟಿಂಗ್ ಪೈಪೋಟಿಯಲ್ಲಿ 50ಮೀ. ಅಂತರದಲ್ಲಿ 0.22 ರೈಫಲ್ ಮೂಲಕ ಮತ್ತು 30ಮೀ. ಅಂತರದಲ್ಲಿ 12ನೇ ಬೋರ್ ಕೋವಿಯ ಮೂಲಕ ತೆಂಗಿನಕಾಯಿಗೆ ಗುಂಡು ಹೊಡೆಯುವ  ಸ್ಪರ್ಧೆಯು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ ಎಂದು ವಿವರಿಸಿದರು.

0.22 ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾಗುವ ಸ್ಪರ್ಧಿಗೆ ದಿ. ಕಾಳಪಂಡ ಬಿ. ತಿಮ್ಮಯ್ಯ ಮತ್ತು ಕೆ.ಟಿ. ಸೀತಮ್ಮ ಸ್ಮರಣಾರ್ಥ ಅವರ ಮಗ ಕೆ.ಟಿ. ಟಿಪ್ಪು ಬಿದ್ದಪ್ಪ ಪ್ರಾಯೋಜಿಸಿರುವ ರೂ.20,000 ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನದ ಸ್ಪರ್ಧಿಗೆ ದಿ. ಸಣ್ಣುವಂಡ ಸಿ. ಸುಬ್ರಮಣಿ ಸುಬ್ಬಯ್ಯ ಸ್ಮರಣಾರ್ಥ ಅವರ ಪತ್ನಿ ಕಮಲಾಕ್ಷಿ ಹಾಗೂ ಮಗ ಚಿಟ್ಟಿಯಪ್ಪ ಪ್ರಾಯೋಜಿಸಿರುವ ರೂ. 15,000 ನಗದು ಬಹುಮಾನ ಮತ್ತು ಟ್ರೋಫಿ, ತೃತೀಯ ಸ್ಥಾನದ  ಸ್ಪರ್ಧಿಗೆ ದಿ. ಹೊಟ್ಟೆಂಗಡ ಕೆ. ರಾಜು ದೇವಯ್ಯ ಹಾಗೂ ಕಾವೇರಮ್ಮ ಸ್ಮರಣಾರ್ಥ ಮಗ ಎಚ್.ಡಿ. ಬೋಪಯ್ಯ ಪ್ರಾಯೋಜಿಸಿರುವ ರೂ.10ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ಅಯ್ಯಪ್ಪ ಅವರು ಮಾಹಿತಿ ನೀಡಿದರು.

12ನೇ ಬೋರ್ ಕೋವಿಯ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾಗುವ ಸ್ಪರ್ಧಿಗೆ ಮಾಚಿಮಂಡ ಬಿ.ಗಪ್ಪಣ್ಣ ಪ್ರಾಯೋಜಿಸಿರುವ ರೂ. 20,000 ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನದಲ್ಲಿ ವಿಜೇತರಾಗುವ ಸ್ಪರ್ಧಿಗೆ ಡಾ. ಮಾತಂಡ ಆರ್. ಅಯ್ಯಪ್ಪ ಪ್ರಾಯೋಜಿಸಿರುವ ರೂ. 15,000 ನಗದು ಬಹುಮಾನ ಹಾಗೂ ಟ್ರೋಫಿ, ತೃತೀಯ  ಸ್ಥಾನದಲ್ಲಿ ವಿಜೇತರಾಗುವ ಸ್ಪರ್ಧಿಗೆ ಅಪ್ಪನೆರವಂಡ ಮನೋಜ್ ಮಂದಪ್ಪ ಪ್ರಾಯೋಜಿಸಿರುವ ರೂ.10,000 ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು  ಅಯ್ಯಪ್ಪ ತಿಳಿಸಿದ್ದಾರೆ.

ಸೆ. 4ರಂದು ಭಾನುವಾರ ಬೆಳಿಗ್ಗೆ 9.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ತೋಕ್ ನಮ್ಮೆಯನ್ನು ಉದ್ಘಾಟಿಸಲಿದ್ದಾರೆ. ಗುಜರಾತಿನಲ್ಲಿ ಆದಾಯ ತೆರಿಗೆ ಆಯುಕ್ತರಾಗಿರುವ ಕೊಡಗಿನ ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ ಶೂಟಿಂಗ್ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿರುವ ಅಯ್ಯಪ್ಪ ಅವರು, ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಮಾಚಿಮಂಡ ಬಿ.ಗಪ್ಪಣ್ಣ, ಮೈಸೂರಿನ ಬೃಂದಾವನ ಆಸ್ಪತ್ರೆಯ ನಿರ್ದೇಶಕರಾದ ಡಾ. ಮಾತಂಡ ಆರ್. ಅಯ್ಯಪ್ಪ, ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷರಾದ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ, ಮಾಜಿ ಅಧ್ಯಕ್ಷರಾದ ಕಾಳಪಂಡ ಸಿ. ಸುಧೀರ್, ಮೈಸೂರು ಬೃಂದಾವನ ಆಸ್ಪತ್ರೆಯ ನಿರ್ದೇಶಕರಾದ ಅಪ್ಪನೆರವಂಡ ಮನೋಜ್ ಮಂದಪ್ಪ, ಗೋಣಿಕೊಪ್ಪಲು ಕೊಡವ ಸಮಾಜದ ನಿರ್ದೇಶಕರಾದ ಬಲ್ಲಣ್ಣಮಾಡ ರೀಟಾ ಅಪಯ್ಯ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಅಯ್ಯಪ್ಪ ಹೇಳಿದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲಿನ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷರಾದ ಹೊಟ್ಟೆಂಗಡ ಡಿ. ಬೋಪಯ್ಯ, ಸಮಾಜ ಸೇವಕರಾದ ಹುದಿಕೇರಿಯ ಮೀದೇರಿರ ಎಂ. ನವೀನ್, ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷರಾದ ಬಾನಂಡ ಎನ್. ಪ್ರಥ್ಯು, ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚೆಪ್ಪುಡಿರ ಎಂ. ಕಿರಣ್ ಅಪ್ಪಯ್ಯ, ಮಾಜಿ ಅಧ್ಯಕ್ಷರಾದ ಎಸ್. ಎಸ್. ಸುರೇಶ್, ಹಿರಿಯ ಕಾಫಿ ಬೆಳೆಗಾರರಾದ ಧನುಗಾಲದ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಭಾರತೀಯ ರೈಲ್ವೆಯ ಉಪ ಮುಖ್ಯ ನಿರೀಕ್ಷಕರಾದ ಬೊಳ್ಳಜ್ಜೀರ ಮಯೂರ್ ಸುಬ್ಬಯ್ಯ, ಮಾಯಮುಡಿಯ ಕಂಗಳತ್ ನಾಡು ಮಹಿಳಾ ಸಮಾಜದ ಅಧ್ಯಕ್ಷರಾದ ಚೆಪ್ಪುಡಿರ ರಾಧಾ ಅಚಯ್ಯ, ಗೋಣಿಕೊಪ್ಪಲು ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಕೊಟ್ಟಂಗಡ ವಿಜು ದೇವಯ್ಯ ಮತ್ತು ಮಾಯಾಮುಡಿಯ ಕಾಫಿ ಬೆಳೆಗಾರರಾದ ಸಣ್ಣುವಂಡ ಎಸ್. ಚಿಟ್ಟಿಯಪ್ಪ ಭಾಗವಹಿಸಲಿದ್ದಾರೆ ಎಂದು ಅಯ್ಯಪ್ಪ ತಿಳಿಸಿದರು.

ಆಯೋಜನಾ ಸಮಿತಿಯ ಸಂಚಾಲಕರಾದ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ  ಮಾತನಾಡಿ, ಐರನ್ ಸೈಟ್ ಶೂಟರ್ಸ್ ವತಿಯಿಂದ ಕಳೆದ 2 ವರ್ಷಗಳಿಂದ  ಆಯೋಜಿಸಲಾಗುತ್ತಿರುವ ತೊಕ್ ನಮ್ಮೆ ಮತ್ತು ಶೂಟಿಂಗ್ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರಲ್ಲದೆ, ಪ್ರಮುಖವಾಗಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಯುವ ಶೂಟರ್ಸ್ ಗಳನ್ನು ಉತ್ತೇಜಿಸುವ  ಉದ್ದೇಶದಿಂದ ಈ ಶೂಟಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಆಯೋಜನಾ ಸಮಿತಿ ಪದಾಧಿಕಾರಿಗಳಾದ ಕುಪ್ಪಂಡ ದಿಲನ್ ಬೋಪಣ್ಣ, ಶಾಂತೆಯಂಡ ಮಧು ಮಾಚಯ್ಯ, ಕೊಂಗಂಡ ಪಂಚು ದೇವಯ್ಯ ಮತ್ತು ಕಾಳಪಾಂಡ ನರು ನರೇಂದ್ರ ಉಪಸ್ಥಿತರಿದ್ದರು.