Header Ads Widget

ಸರ್ಚ್ ಕೂರ್ಗ್ ಮೀಡಿಯ

ಫೆ.03 ರಿಂದ 06 ರವರೆಗೆ ರಾಜಸೀಟಿನಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ವೈನ್ ಉತ್ಸವ


ಫೆ.03 ರಿಂದ 06 ರವರೆಗೆ ರಾಜಸೀಟಿನಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ವೈನ್ ಉತ್ಸವ

ಮಡಿಕೇರಿ ಜ.13: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಫೆಬ್ರವರಿ, 03 ರಿಂದ 06 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಅವರು ತಿಳಿಸಿದ್ದಾರೆ. 

ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 10 ರಿಂದ 12 ಸಾವಿರ ಸಂಖ್ಯೆಯ 15-20 ರೀತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಗಿಡಗಳನ್ನು ಪಾತಿಯಲ್ಲಿ ಹಾಗೂ ಕುಂದಗಳಲ್ಲಿ ನಾಟಿ ಮಾಡಲಾಗಿದ್ದು, ಪ್ರದರ್ಶನದಲ್ಲಿ ಜೋಡಿಸಲಾಗುವುದು.

ಫಲಪುಷ್ಪ ಪ್ರದರ್ಶನದ ಮುಖ್ಯ ಆರ್ಕಷಣೆಯಾಗಿ ವಿವಿಧ ಹೂಗಳಿಂದ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗುವುದು ಹಾಗೂ ಅಲಂಕಾರಿಕ ವಿವಿಧ ಹೂ ಕುಂದಗಳ ಪ್ರದರ್ಶನ, ಬೋನ್ ಸಾಯ್ ಪ್ರದರ್ಶನ, ತರಕಾರಿ ಕೆತ್ತನೆ ಪ್ರದರ್ಶಿಸಲಾಗುವುದು. 

ಫಲಪುಷ್ಪ ಪ್ರದರ್ಶನ ಜೊತೆಗೆ ವೈನ್ ಉತ್ಸವ  ಆಯೋಜಿಸಲಾಗುವುದು ವೈನ್ ಉತ್ಸವದಲ್ಲಿ ವಿವಿಧ ಹಣ್ಣುಗಳಿಂದ ತಯಾರಿಸಿದ ವೈನ್ ಜ್ಯೂಸ್‍ಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗುವುದು. ವೈನ್ ಉತ್ಸವದಲ್ಲಿ ಭಾಗವಹಿಸುವವರು ಸ್ವಂತ ಉತ್ಪಾದನಾ ಘಟಕ ಹೊಂದಿದ್ದು, ಈSSಂI ದೃಢೀಕರಣ ಪ್ರಮಾಣ ಪತ್ರ ಹೊಂದಿರಬೇಕು. ಹಾಗೂ ಆಲ್ಕೋಹಾಲ್ ಪ್ರಮಾಣವು ಅಬಕಾರಿ ಕಾಯ್ದೆಯಡಿ ನಿಗಧಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಇರಬೇಕು.

ಗಾಂಧಿ ಮೈದಾನದಲ್ಲಿ ವಿವಿಧ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ, ತೋಟಗಾರಿಕೆ, ಇತರೆ ಇಲಾಖೆಯ ವಸ್ತು ಪ್ರದರ್ಶನದ ಮಳಿಗೆ ಆಯೋಜಿಸಲಾಗುವುದು. ರೈತರು ಬೆಳೆದಿರುವ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರ ಬೆಳೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. 

ಅತ್ಯುತ್ತಮ ಹಣ್ಣು, ತರಕಾರಿ, ಮತ್ತಿತರ ಪ್ರದರ್ಶನಕ್ಕೆ ಬಹುಮಾನ ನೀಡಲಾಗುವುದು. ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂ ಜೋಡಣೆ, ಇಕೆಬಾನೆ, ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಅಧಿಕಾರಿ ಅವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರಾದ ಪ್ರಮೋದ್ ಅವರು ತಿಳಿಸಿದ್ದಾರೆ.