Header Ads Widget

Responsive Advertisement

ದೇಶದಲ್ಲಿ ಆಯುರ್ವೇದದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ಆಯುರ್ವೇದ ವೃತ್ತಿಪರರಿಗೆ 'ಸ್ಮಾರ್ಟ್' (SMART) ಕಾರ್ಯಕ್ರಮ


ದೇಶದಲ್ಲಿ ಆಯುರ್ವೇದದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ಆಯುರ್ವೇದ ವೃತ್ತಿಪರರಿಗೆ 'ಸ್ಮಾರ್ಟ್' (SMART) ಕಾರ್ಯಕ್ರಮ

ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ (ಎನ್‌ ಸಿ ಐ ಎಸ್‌ ಎಂ) ಮತ್ತು ಆಯುರ್ವೇದ ವಿಜ್ಞಾನಗಳ ಕೇಂದ್ರೀಯ ಸಂಶೋಧನಾ ಮಂಡಳಿ (ಸಿ ಸಿ ಆರ್‌ ಎ ಎಸ್), ಕ್ರಮವಾಗಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸಲು ಮತ್ತು ವೈಜ್ಞಾನಿಕ ಸಂಶೋಧನೆಯನ್ನು ನಡೆಸಲು ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಡಿಯಲ್ಲಿರುವ ಎರಡು ಪ್ರಮುಖ ಸಂಸ್ಥೆಗಳಾಗಿದ್ದು, ಇವು ಆಯುರ್ವೇದ ಕಾಲೇಜುಗಳು ಮತ್ತು ಆಸ್ಪತ್ರೆಗಳ ಮೂಲಕ ಆದ್ಯತೆಯ ಆರೋಗ್ಯ ಸಂಶೋಧನಾ ಕ್ಷೇತ್ರಗಳಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸ್ಮಾರ್ಟ್' (ಬೋಧನಾ ವೃತ್ತಿಪರರಲ್ಲಿ ಆಯುರ್ವೇದ ಸಂಶೋಧನೆಯನ್ನು ಮುಖ್ಯವಾಹಿನಿಗೊಳಿಸುವುದು) ಕಾರ್ಯಕ್ರಮವನ್ನು ಆರಂಭಿಸಿವೆ.

ಈ ಕಾರ್ಯಕ್ರಮಕ್ಕೆ ಇಂದು ಎನ್‌ಸಿಐಎಸ್‌ಎಂ ಅಧ್ಯಕ್ಷ ವೈದ್ಯ ಜಯಂತ್ ದೇವ್‌ ಪೂಜಾರಿ ಮತ್ತು ಸಿಸಿಆರ್‌ಎಎಸ್ ಮಹಾನಿರ್ದೇಶಕ ಪ್ರೊ.ರಬಿನಾರಾಯಣ ಆಚಾರ್ಯ ಅವರು ಆಯುರ್ವೇದ ಮಂಡಳಿಯ ಅಧ್ಯಕ್ಷ ಪ್ರೊ.ಬಿ.ಎಸ್.ಪ್ರಸಾದ್, ಎನ್‌ಸಿಐಎಸ್‌ಎಂ ಮತ್ತು ಇತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು.

ಎನ್‌ಸಿಐಎಸ್‌ಎಂ ಅಧ್ಯಕ್ಷ ವೈದ್ಯ ಜಯಂತ್ ದೇವ್‌ ಪೂಜಾರಿ ಅವರು ಉಪಕ್ರಮವನ್ನು ಶ್ಲಾಘಿಸಿದರು. ಈ ಕಾರ್ಯಕ್ರಮವು ಆಯುರ್ವೇದದ ಕ್ಲಿನಿಕಲ್ ಸಂಶೋಧನೆಯಲ್ಲಿ  ಪರಿವರ್ತನೆ ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ನನಗೆ ವಿಶ್ವಾಸವಿದೆ. ಆಯುರ್ವೇದ ಶಿಕ್ಷಕರ ದೊಡ್ಡ ಸಮುದಾಯದ ಸಂಶೋಧನಾ ಸಾಮರ್ಥ್ಯವು ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ. ಆದ್ದರಿಂದ, 'ಸ್ಮಾರ್ಟ್' ಕಾರ್ಯಕ್ರಮವು ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆಯ ಮೇಲೆ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆ ಮತ್ತು ಇದು ರಾಷ್ಟ್ರಕ್ಕೆ ಉತ್ತಮ ಸೇವೆಯಾಗಿದೆ, ಈ ಉಪಕ್ರಮಕ್ಕಾಗಿ ನಾನು ಸಿಸಿಆರ್‌ಎಎಸ್ ಅನ್ನು ಅಭಿನಂದಿಸುತ್ತೇನೆ ಮತ್ತು ಎನ್‌ಸಿಐಎಸ್‌ಎಂ ಪರವಾಗಿ ಎಲ್ಲಾ ಬೆಂಬಲವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

'ಸ್ಮಾರ್ಟ್' ಕಾರ್ಯಕ್ರಮದ ಪ್ರಮುಖ ಅಂಶಗಳನ್ನು ವಿವರಿಸಿದ ಸಿಸಿಆರ್‌ಎಎಸ್ ಮಹಾನಿರ್ದೇಶಕ ಪ್ರೊ. ವೈದ್ಯ ರಬಿನಾರಾಯಣ ಆಚಾರ್ಯ, ಅಸ್ಥಿ ಸಂಧಿವಾತ, ಕಬ್ಬಿಣದ ಕೊರತೆಯ ರಕ್ತಹೀನತೆ ಸೇರಿದಂತೆ ಆರೋಗ್ಯ ಸಂಶೋಧನಾ ಕ್ಷೇತ್ರಗಳಲ್ಲಿ ನವೀನ ಸಂಶೋಧನೆಗಳನ್ನು ಗುರುತಿಸುವ, ಬೆಂಬಲಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ ಪ್ರಸ್ತಾವಿತ ಉಪಕ್ರಮವನ್ನು ರೂಪಿಸಲಾಗಿದೆ ಎಂದರು. ದೀರ್ಘಕಾಲದ ಬ್ರಾಂಕೈಟಿಸ್, ಡಿಸ್ಲಿಪಿಡೆಮಿಯಾ (ರಕ್ತದಲ್ಲಿನ ಕೊಬ್ಬು), ರುಮಟಾಯ್ಡ್ ಸಂಧಿವಾತ, ಬೊಜ್ಜು, ಡಯಾಬಿಟಿಸ್ ಮೆಲ್ಲಿಟಸ್, ಸೋರಿಯಾಸಿಸ್, ಸಾಮಾನ್ಯ ಖಿನ್ನತೆ, ಆಲ್ಕೊಹಾಲೇತರ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (ಎನ್‌ ಎ ಎಫ್‌ ಎಲ್‌ ಡಿ) ಇವುಗಳಲ್ಲಿ ಸೇರಿವೆ ಎಂದು ಅವರು ಹೇಳಿದರು.

ಅರ್ಹ ಆಯುರ್ವೇದ ಶೈಕ್ಷಣಿಕ ಸಂಸ್ಥೆಗಳು 10 ಜನವರಿ, 2023 ರೊಳಗೆ ಅರ್ಜಿ ಸಲ್ಲಿಸಬಹುದು. ಸಂಪರ್ಕ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಕೆ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಎಲ್ಲಾ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಎನ್‌ಸಿಐಎಸ್‌ಎಂ ಮೂಲಕ ಹಂಚಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.

ಎನ್‌ಸಿಐಎಸ್‌ಎಂ ಆಯುರ್ವೇದ ಮಂಡಳಿಯ ಅಧ್ಯಕ್ಷ ಪ್ರೊ.ಬಿ.ಎಸ್.ಪ್ರಸಾದ್ ಮಾತನಾಡಿ, ದೇಶದಾದ್ಯಂತ ಆಯುರ್ವೇದ ಕಾಲೇಜುಗಳು ಮತ್ತು ಆಸ್ಪತ್ರೆಗಳ ದೊಡ್ಡ ಜಾಲವು ಆರೋಗ್ಯ ಅಗತ್ಯತೆಗಳ ದೃಷ್ಟಿಯಿಂದ ದೇಶಕ್ಕೆ ಒಂದು ಆಸ್ತಿಯಾಗಿದೆ. ಈ ಜಾಲವು ಕಷ್ಟದ ಸಮಯದಲ್ಲಿ ಆರೋಗ್ಯ ಸೇವೆಗಳನ್ನು ನೀಡುತ್ತಿರುವುದು ಮಾತ್ರವಲ್ಲದೆ, ದೇಶದಲ್ಲಿ ಆರೋಗ್ಯ ಸಂಶೋಧನೆಯ ವಿಷಯದಲ್ಲಿ ಗಣನೀಯ ಕೊಡುಗೆ ನೀಡಿದೆ. 'ಸ್ಮಾರ್ಟ್' ಕಾರ್ಯಕ್ರಮವು ಖಂಡಿತವಾಗಿಯೂ ಆರೋಗ್ಯ ಸಂಶೋಧನೆಯ ನಿರ್ದಿಷ್ಟ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಕೈಗೊಳ್ಳಲು ಶಿಕ್ಷಕರನ್ನು ಪ್ರೇರೇಪಿಸುತ್ತದೆ ಮತ್ತು ಬೃಹತ್‌ ಡೇಟಾಬೇಸ್ ಅನ್ನು ಸೃಷ್ಟಿಸುತ್ತದೆ ಎಂದರು.