Header Ads Widget

Responsive Advertisement

ಇತರೆ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆ ಆಗಿರುವ ಅರ್ಜಿ; ಮರು ಪರಿಶೀಲಿಸಿ ವರದಿ ನೀಡಿ: ಡಿಸಿ

ಇತರೆ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆ ಆಗಿರುವ ಅರ್ಜಿ; ಮರು ಪರಿಶೀಲಿಸಿ ವರದಿ ನೀಡಿ: ಡಿಸಿ

ಮಡಿಕೇರಿ ಫೆ.07: ಇತರೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿ ಉಪ ವಿಭಾಗೀಯ ಮಟ್ಟದಲ್ಲಿ ಅನುಮೋದನೆಯಾಗಿರುವ ಅರ್ಜಿಗಳ ಸಂಬಂಧ ಮರು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಲಹೆ ಮಾಡಿದ್ದಾರೆ.  

     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

     ಇತರೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆ ಆಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ಮತ್ತೊಂದು ಬಾರಿ ಪರಿಶೀಲಿಸುವಂತೆ ಸಲಹೆ ಮಾಡಿದರು. 

      ಜಿಲ್ಲೆಯ ನೊಕ್ಯ ಮತ್ತು ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಸಂಬಂಧ ಗ್ರಾಮ ಅರಣ್ಯ ಸಮಿತಿ ಗಮನಕ್ಕೆ ತರುವಂತಾಗಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಅವರು ಹೇಳಿದರು. 

     ಈ ಬಗ್ಗೆ ಮೂರು ದಿನದಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. 

     ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಅವರು ನಾಗರಹೊಳೆಯ ಆಶ್ರಮ ಶಾಲೆ ಕಟ್ಟಡವು ಹಳೆಯದಾಗಿದ್ದು, ಮಳೆಗಾಲದಲ್ಲಿ ವಿದ್ಯಾರ್ಥಿಗಳು ತುಂಬಾ ತೊಂದರೆ ಪಡುತ್ತಾರೆ. 175 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಪ್ರಸ್ತುತ 70 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಬೇಕು. ಇಲ್ಲದಿದ್ದಲ್ಲಿ ಹತ್ತಿರದಲ್ಲಿ ಜಾಗ ಕೊಡಿಸಬೇಕು ಎಂದು ಅವರು ಮನವಿ ಮಾಡಿದರು.   

      ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶವಿಲ್ಲ. ಈ ಸಂಬಂಧ ಹುಲಿ ಸಂರಕ್ಷಣಾ ಯೋಜನಾ ನಿರ್ದೇಶಕರ ಜೊತೆ ಚರ್ಚಿಸುವಂತೆ ಅವರು ಸಲಹೆ ಮಾಡಿದರು. 

      ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರು ಇತರೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಸಂಬಂಧ ಗ್ರಾಮ ಅರಣ್ಯ ಸಮಿತಿ ಸಭೆಯಲ್ಲಿ ಅನುಮೋದನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯಲಾಗಿದೆಯೇ ಎಂದು ಹೇಳಿದರು. 

      ತಾ.ಪಂ.ಇಒಗಳಾದ ಶೇಖರ್, ಜಯಣ್ಣ, ಪೊನ್ನಂಪೇಟೆ ಐಟಿಡಿಪಿ ತಾಲ್ಲೂಕು ಅಧಿಕಾರಿ ಗುರುಶಾಂತಪ್ಪ, ಸೋಮವಾರಪೇಟೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಪಿಡಿಒಗಳಾದ ಶ್ಯಾಮ್(ಗುಡ್ಡೆಹೊಸೂರು), ಕಲ್ಪ ಬಿ.ಎಂ.(ನಂಜರಾಯಪಟ್ಟಣ) ಇತರರು ಇದ್ದರು.