Header Ads Widget

Responsive Advertisement

‘ಆಯುಷ್ಮತಿ ಕ್ಲಿನಿಕ್’ ಆರಂಭಕ್ಕೆ ಚಾಲನೆ

‘ಆಯುಷ್ಮತಿ ಕ್ಲಿನಿಕ್’ ಆರಂಭಕ್ಕೆ ಚಾಲನೆ

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ‘ಆಯುಷ್ಮತಿ ಕ್ಲಿನಿಕ್’ ಆರಂಭಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಸೋಮವಾರ ಚಾಲನೆ ನೀಡಿದರು.

ನಗರದ ಮಹದೇವ ಪೇಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಮತಿ ಕ್ಲಿನಿಕ್ ಆರಂಭಕ್ಕೆ ಚಾಲನೆ ನೀಡಿ, ಮಾತನಾಡಿದ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ‘ಆಯುಷ್ಮತಿ ಕ್ಲಿನಿಕ್’ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. 

ಮಹಿಳೆಯರು ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಜೊತೆ ಮುಕ್ತವಾಗಿ ಹಂಚಿಕೊಳ್ಳಲು ‘ಆಯುಷ್ಮತಿ ಕ್ಲಿನಿಕ್’ ಅನುಕೂಲವಾಗಿದೆ ಎಂದು ಹೇಳಿದರು.

ಮಹಿಳೆಯರ ಕುಂದುಕೊರತೆಗಳನ್ನು ಸಮಾದಾನದಿಂದ ಕೇಳಿ ಆರೋಗ್ಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಆಯುಷ್ಮತಿ ಕ್ಲಿನಿಕ್ ಒಳ್ಳೆಯದು ಎಂದು ಹೇಳಿದರು. 

ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾತನಾಡಿ ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮಹಿಳಾ ಆರೋಗ್ಯ ಸೇವೆಗಳಿಗಾಗಿ ರಾಜ್ಯಾದ್ಯಂತ 128 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆರೋಗ್ಯ ಸೇವೆಯನ್ನು ಒದಗಿಸಲು “ಆಯುಷ್ಮತಿ ಕ್ಲಿನಿಕ್” ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಈ ಕ್ಲಿನಿಕ್‍ನಲ್ಲಿ ಉಚಿತವಾಗಿ ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫೆರಲ್ ಸೇವೆಗಳು ಲಭ್ಯವಿರುತ್ತದೆ ಎಂದರು. 

ಆಯುಷ್ಮತಿ ಕ್ಲಿನಿಕ್‍ನಲ್ಲಿ ಸೋಮವಾರ ಪಿಜಿಷಿಯನ್(ಸಾಮಾನ್ಯ ರೋಗ ತಜ್ಞರು), ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ ಶಸ್ತ್ರ ಚಿಕಿತ್ಸಕ ತಜ್ಞರು, ಗುರುವಾರ ಮಕ್ಕಳ ತಜ್ಞರು, ಶುಕ್ರವಾರ ಸ್ತ್ರೀ ರೋಗ ತಜ್ಞರು ಮತ್ತು ಶನಿವಾರ ಇತರ ತಜ್ಞರಲ್ಲಿ ಕಿವಿ, ಮೂಗು, ಗಂಟಲು ತಜ್ಞರು, ನೇತ್ರ ತಜ್ಞರು, ಚರ್ಮರೋಗ ತಜ್ಞರು, ಮಾನಸಿಕ ರೋಗ ತಜ್ಞರು, ದಂತ ತಜ್ಞರು ಹಾಗೂ ಇತರ ಆರೋಗ್ಯ ತಜ್ಞರು ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಹಾಜರಿರುತ್ತಾರೆ. ನಗರ ವ್ಯಾಪ್ತಿಯ ಹಾಗೂ ಗ್ರಾಮೀಣ ವ್ಯಾಪ್ತಿಯ ಮಹಿಳೆಯರು ಈ ಕ್ಲಿನಿಕ್‍ನ ಸೇವೆ ಪಡೆಯಬಹುದು ಎಂದು ಡಾ.ಗೋಪಿನಾಥ್ ಅವರು ವಿವರಿಸಿದರು. 

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ‘ಆಯುಷ್ಮತಿ ಕ್ಲಿನಿಕ್’ ಮಹತ್ವದ ಬಗ್ಗೆ ಮಾಹಿತಿ ಪಡೆದರು. ನಗರಸಭೆ ಉಪಾಧ್ಯಕ್ಷರಾದ ಸವಿತಾ ರಾಕೇಶ್, ಸದಸ್ಯರಾದ ಕಲಾವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಇತರರು ಇದ್ದರು.