ಜಿಲ್ಲಾಡಳಿತ ವತಿಯಿಂದ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 117 ನೇ ಜನ್ಮ ದಿನಾಚರಣೆ
ಮಡಿಕೇರಿ: ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 117 ನೇ ಹುಟ್ಟು ಹಬ್ಬವನ್ನು ಜಿಲ್ಲಾಡಳಿತ ವತಿಯಿಂದ ಸರಳವಾಗಿ ಶುಕ್ರವಾರ ಆಚರಿಸಲಾಯಿತು.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕರಾದ ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷರಾದ ಅನಿಲ್ ಎಚ್.ಟಿ., ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಗೌಡಂಡ ಸುಬೇದಾರ್ ತಿಮ್ಮಯ್ಯ, ಇತರರು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕರಾದ ಬಿದ್ದಂಡ ನಂಜಪ್ಪ ಅವರು ಅಮರ ಸೇನಾನಿ ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್ ‘ದೇವರ ಮನೆ’ ಇದ್ದಂತೆ, ದೇವಸ್ಥಾನವೆಂದು ಭಾವಿಸುತ್ತೇವೆ ಎಂದು ನುಡಿದರು.
ಜನರಲ್ ತಿಮ್ಮಯ್ಯ ಅವರು ಭಾರತೀಯ ಸೇನೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಭಾರತೀಯ ಸೇನೆಯನ್ನು ಬಲಿಷ್ಠಗೊಳಿಸುವಲ್ಲಿ ಶ್ರಮಿಸಿದ್ದರು ಎಂದು ಅವರು ಸ್ಮರಿಸಿದರು.
ಜನರಲ್ ತಿಮ್ಮಯ್ಯ ಅವರ ಗೌರವರಾರ್ಥ ಸೈಪ್ರಸ್ ದೇಶವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಹಾಗೆಯೇ ಇತ್ತೀಚೆಗೆ ಕೊಲ್ಕತ್ತದಲ್ಲೂ ಸಹ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ ಎಂದು ಅವರು ಸ್ಮರಿಸಿದರು.
ಜನರಲ್ ತಿಮ್ಮಯ್ಯ ಸ್ಮಾರಕ ಭವನವನ್ನು ‘ಜೈsssಸಲ್ಮೇರ್‍ನ ರಕ್ಷಣಾ ಸಂಗ್ರಹಾಲಯ’ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕಿದೆ ಎಂದು ಬಿದ್ದಂಡ ನಂಜಪ್ಪ ಅವರು ಕೋರಿದರು.
ಜನರಲ್ ತಿಮ್ಮಯ್ಯ ಅವರಂತಹ ಸೇನಾನಿ ಕಾಣುವುದು ಅಪರೂಪ. ಜನರಲ್ ತಿಮ್ಮಯ್ಯ ಅವರ ಬದುಕೇ ಒಂದು ರೀತಿ ಸೇನೆಯಾಗಿತ್ತು ಎಂದರು.
ಸನ್ನಿಸೈಡ್ ಎಂಬ ಮಡಿಕೇರಿಯಲ್ಲಿನ ಮನೆ ತಿಮ್ಮಯ್ಯ ಅವರ ಇತಿಹಾಸ ಮಾತ್ರವಲ್ಲ, ಭಾರತೀಯ ಸೇನೆಯ ಇತಿಹಾಸವನ್ನು ತಿಮ್ಮಯ್ಯ ಮೂಲಕ ತೆರೆದಿಡುವ ಮನೆಯಾಗಿದೆ. ಸನ್ನಿಸೈಡ್‍ನ ಪ್ರತೀ ಕೋಣೆಯೂ ಸೈನಿಕನ ಕಥೆ ಹೇಳುವಂತಿದೆ ಎಂದರು.
ತಿಮ್ಮಯ್ಯ ಹುಟ್ಟಿದ ಮನೆಯಾದ ಸನ್ನಿಸೈಡ್‍ನ್ನು ಅಪೂರ್ವ ವಸ್ತುಸಂಗ್ರಹಾಲಯ ಆಗಿಸಬೇಕೆಂಬ ಬಯಕೆ, ಬೇಡಿಕೆ ಅನೇಕ ದಶಕಗಳಿಂದ ಇತ್ತು. ಅದು 2021 ರ ಫೆಬ್ರವರಿ, 06 ರಂದು ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಮ್ಯೂಸಿಯಂನ್ನು ಲೋಕಾರ್ಪಣೆ ಮಾಡುವ ಮೂಲಕ ಈಡೇರಿತು ಎಂದರು.
ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ ಸ್ವಾತಂತ್ರ್ಯ ಭಾರತದ ಸೇನಾ ದಂಡನಾಯಕರಾಗಿ ಸೈನಿಕರ ನೆಚ್ಚಿನ ಸೇನಾನಿಯಾಗಿದ್ದರು ಎಂದರು.
ಜನರಲ್ ಕೆ.ಎಸ್.ತಿಮ್ಮಯ್ಯ ಅವರು 1906 ರ ಮಾರ್ಚ್, 31 ರಂದು ಕೊಡಂದೇರ ಕುಟುಂಬದ ತಿಮ್ಮಯ್ಯ ಮತ್ತು ಸೀತಮ್ಮ ದಂಪತಿಗೆ ಜನಿಸಿದರು. ಜನರಲ್ ತಿಮ್ಮಯ್ಯ ಅವರ ಮೂಲ ಹೆಸರು ಸುಬ್ಬಯ್ಯ ಆಗಿದೆ ಎಂದರು.
ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ತಿಮ್ಮಯ್ಯ ಅವರು ಕ್ರೀಡಾಕೂಟದಲ್ಲಿ ಕ್ರಿಯಾಶೀಲರಾಗಿದ್ದರು ಎಂದರು.
ಸೈನಿಕರ ನಾಡು ಎಂಬ ಕೀರ್ತಿ ಹೊಂದಿರುವ ಕೊಡಗಿನ ನೆಲದಲ್ಲಿ ತಿಮ್ಮಯ್ಯ ಮ್ಯೂಸಿಯಂ ರೂಪುಗೊಂಡಿರುವುದು ಭಾರತಕ್ಕೆ ಹೆಮ್ಮೆ. ಮ್ಯೂಸಿಯಂನಲ್ಲಿ ತಿಮ್ಮಯ್ಯ ಸೇನಾ ಜೀವನ ನೋಡಿ, ಭಾರತೀಯ ಸೇನೆಯ ಬಗ್ಗೆ ಹೆಮ್ಮೆಯ ಭಾವನೆಯೊಂದಿಗೆ ಹೊರಬರುತ್ತಿರುವಂತೆಯೇ, ಪ್ರತಿಯೊಬ್ಬ ಸಂದರ್ಶಕನ ಮನದಲ್ಲಿ ವ್ಯಕ್ತಗೊಳ್ಳುವ ಭಾವನೆ ಒಂದೇ. ಭಾರತದ ಹೆಮ್ಮೆಯ ಧೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಅವರಿಗೆ ಗೌರವದ ಸೆಲ್ಯೂಟ್ ಎಂದು ಶ್ರೀಶಾ ಹೇಳಿದರು.
ಗಿರಿ ಶ್ರೇಣಿಗಳ ನಡುವಿನ ಮಡಿಕೇರಿಯಲ್ಲಿ ಮಂಜಿನ ಮುಸುಕಿನಲ್ಲಿ ಬಾಲ್ಯ ಕಳೆದ ತಿಮ್ಮಯ್ಯ ಅವರು, ನಂತರ ಕಾಶ್ಮೀರದ ಪರ್ವತದ ಹಿಮಚ್ಚಾಧಿತ ಪ್ರದೇಶಗಳಲ್ಲಿ ತನ್ನ ಪರಾಕ್ರಮವನ್ನು ಜನರಲ್ ತಿಮ್ಮಯ್ಯ ಅವರು ತೋರಿದ್ದಾರೆ ಎಂದು ತಿಳಿಸಿದರು.
ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಶಂಕರ, ಪೊಲೀಸ್ ಉಪ ನಿರೀಕ್ಷಕರಾದ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ಇತರರು ಇದ್ದರು.
ಸೇನಾ ಸ್ಮರಣಿಕೆ ಹಸ್ತಾಂತರ: ಭಾರತೀಯ ಸೇನಾ ದಕ್ಷಿಣ ವಲಯದ ಮುಖ್ಯಸ್ಥರಾದ ಲೆಪ್ಟಿನೆಂಟ್ ಜನರಲ್ ಎ.ಕೆ.ಸಿಂಗ್ ಅವರು ಇತ್ತೀಚೆಗೆ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ ಪೂರ್ವಕವಾಗಿ ನೀಡಲಾಗಿದ್ದ ‘ಸೇನಾ ಸ್ಮರಣಿಕೆ’ಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಸಂಚಾಲಕರಾದ ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ ಅವರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಹಸ್ತಾಂತರಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network